ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌ ಚುನಾವಣೆ: ಮೇಲ್ಮನೆ ಟಿಕೆಟ್‌ಗೆ‌ ಪೈಪೋಟಿ

ಮುನಿರತ್ನ, ಪ್ರತಾಪಗೌಡರಿಂದಲೂ ಬೇಡಿಕೆ
Last Updated 12 ಜೂನ್ 2020, 21:30 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಮುನಿರತ್ನ ಮತ್ತು ಪ್ರತಾಪಗೌಡ ಪಾಟೀಲ ಅವರೂ ವಿಧಾನಪರಿಷತ್‌ ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದಾರೆ.

ಈಗಾಗಲೇ ಎಂ.ಟಿ.ಬಿ.ನಾಗರಾಜ್‌, ಆರ್‌.ಶಂಕರ್‌ ಮತ್ತು ಎಚ್‌.ವಿಶ್ವನಾಥ್‌ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ವರಿಷ್ಠರ ಮೇಲೆ ಒತ್ತಡ ಹೇರುತ್ತಿರುವ ಬೆನ್ನಲ್ಲೇ, ಈ ಇಬ್ಬರ ಬೇಡಿಕೆ ಮುಖ್ಯಮಂತ್ರಿಗೆ ಹೊಸ ತಲೆನೋವು ತಂದಿದೆ ಎಂದು ಮೂಲಗಳು ತಿಳಿಸಿವೆ.

‘ಕಾಂಗ್ರೆಸ್ ತೊರೆಯುವ ಸಂದರ್ಭದಲ್ಲಿ ಸಚಿವರನ್ನಾಗಿ ಮಾಡುವುದಾಗಿ ಮಾತು ನೀಡಲಾಗಿತ್ತು. ಆದರೆ, ತಮ್ಮ ವಿರುದ್ಧ ಇರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ಬಿಜೆಪಿ ಕಾರ್ಯಕರ್ತರು ಹಿಂದೇಟು ಹಾಕುತ್ತಿರುವುದರಿಂದ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗದೇ, ಉಪಚುನಾವಣೆಗೆ ಕಾಲವೇ ಕೂಡಿ ಬಂದಿಲ್ಲ ಎಂದು ಅವರು ಯಡಿಯೂರಪ್ಪ ಮುಂದೆ ತಮ್ಮ ಅಹವಾಲು ತೋಡಿಕೊಂಡಿದ್ದಾರೆ‘ ಎಂದು ಮೂಲಗಳು ಹೇಳಿವೆ.

‘ಆದ್ದರಿಂದ ವಿಧಾನಪರಿಷತ್ ಪ್ರವೇಶಕ್ಕೆ ಅವಕಾಶ ನೀಡಿ ಸಚಿವರನ್ನಾಗಿ ಮಾಡಬೇಕು. ಉಪಚುನಾವಣೆ ಎದುರಾದರೆ ಪರಿಷತ್ತಿಗೆ ರಾಜೀನಾಮೆ ನೀಡಿ ಚುನಾವಣೆ ಎದುರಿಸುತ್ತೇವೆ ಎಂದು ಮುಖ್ಯಮಂತ್ರಿಯವರಿಗೆ ತಿಳಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

ನೆ.ಲ.ನರೇಂದ್ರಬಾಬು ಒತ್ತಡ: ಮಹಾಲಕ್ಷ್ಮೀಪುರ ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆಗೆ ವೇಳೆ ಬಿಜೆಪಿ ಸೇರ್ಪಡೆ ಆಗಿದ್ದ ನೆ.ಲ.ನರೇಂದ್ರ ಬಾಬು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಕಲಾವಿದರ ಕೋಟಾದಲ್ಲಿ ವಿಧಾನಪರಿಷತ್ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

‘ಉಪಚುನಾವಣೆಯಲ್ಲಿ ಕ್ಷೇತ್ರವನ್ನು ಗೋಪಾಲಯ್ಯ ಅವರಿಗೆ ಬಿಟ್ಟುಕೊಡಲಾಯಿತು. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿಯೂ ಕೆಲಸ ಮಾಡುತ್ತಿದ್ದೇನೆ. ಕಲಾವಿದನೂ ಆಗಿರುವುದರಿಂದ ನನ್ನನ್ನು ಪರಿಗಣಿಸಬೇಕು’ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಅಲ್ಲದೆ, ಸುನೀಲ್‌ ಪುರಾಣಿಕ್‌, ಲಹರಿ ವೇಲು ಅವರೂ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

‘ವಿಶ್ವನಾಥ್‌, ಎಂಟಿಬಿಗೆ ಟಿಕೆಟ್‌ ಭರವಸೆ ನೀಡಿರಲಿಲ್ಲ’
ಮಂಡ್ಯ: ‘ವಿಧಾನ ಪರಿಷತ್‌ ಚುನಾವಣೆಯಲ್ಲೂ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರು, ಪಕ್ಷಕ್ಕೆ ಸಹಾಯ ಮಾಡಿದ ಮುಖಂಡರಿಗೆ ಟಿಕೆಟ್‌ ನೀಡಲು ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಶುಕ್ರವಾರ ಇಲ್ಲಿ ಹೇಳಿದರು.

‘ಉಪಚುನಾವಣೆಯಲ್ಲಿ ಆರ್‌.ಶಂಕರ್‌ ಸ್ಪರ್ಧೆ ಮಾಡಿರಲಿಲ್ಲ. ಆಗ ಅವರಿಗೆ ಪರಿಷತ್‌ನ ಟಿಕೆಟ್‌ ನೀಡುವ ಭರವಸೆ ನೀಡಲಾಗಿತ್ತು. ಹೀಗಾಗಿ, ಅವರಿಗೆ ಟಿಕೆಟ್‌ ದೊರೆಯಲಿದೆ. ಆದರೆ, ಎಚ್‌.ವಿಶ್ವನಾಥ್‌, ಎಂಟಿಬಿ ನಾಗರಾಜ್‌ ಅವರಿಗೆ ಟಿಕೆಟ್‌ ಕೊಡುವ ಭರವಸೆ ನೀಡಿರಲಿಲ್ಲ’ ಎಂದರು.

‘ಉಪಚುನಾವಣೆಯಲ್ಲಿ ಸೋತವರೆಲ್ಲರೂ ಟಿಕೆಟ್‌ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಅವರ ಒತ್ತಾಯವನ್ನು ಪಕ್ಷದ ವರಿಷ್ಠರು ಯಾವ ರೀತಿ ಪರಿಗಣಿಸುತ್ತಾರೆ ಎಂಬುದನ್ನು ನೋಡಬೇಕಿದೆ. ಸಿ.ಪಿ.ಯೋಗೇಶ್ವರ್‌ ಅವರಿಗೆ ಪಕ್ಷದ ಮೇಲೆ ಯಾವುದೇ ಅಸಮಾಧಾನ ಇಲ್ಲ’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT