ಭಾನುವಾರ, ಜುಲೈ 25, 2021
21 °C

ಅಕ್ಕರೆಯಿಂದ ಪುಸ್ತಕ ಹಂಚಿದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಾಕ್‌ಡೌನ್‌ ವೇಳೆ ವಿವಿಧ ಸಂಘ ಸಂಸ್ಥೆಗಳು ಜನರಿಗೆ ಅಕ್ಕಿ, ಧವಸಧಾನ್ಯಗಳನ್ನು ಹಂಚಿದ್ದನ್ನು ಕೇಳಿದ್ದೇವೆ. ಆದರೆ, ಈ ಸಂಘಟನೆ ಅಕ್ಕಿಯ ಬದಲು ಜನರಿಗೆ ಅಕ್ಕರೆಯಿಂದ ಕನ್ನಡ ಪುಸ್ತಕಗಳನ್ನು ಉಚಿತವಾಗಿ ಹಂಚಿದೆ.

ಕೊರೊನಾ ಬಿಕ್ಕಟ್ಟಿನ ಕಾಲದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಘಟಕದ ಸದಸ್ಯರು ಮಾಸ್ಕ್‌ ಧರಿಸಿ ಮನೆ ಮನೆಗೆ ತೆರಳಿ ಕನ್ನಡದ ಕಂಪು ಪಸರಿಸಿದ್ದಾರೆ. ಶೆಟ್ಟಿಹಳ್ಳಿ, ಚಿಕ್ಕಬಾಣಾವಾರ, ಹೆಗ್ಗನಹಳ್ಳಿ, ಲಗ್ಗೆರೆ, ಮಲ್ಲಸಂದ್ರ, ಬಾಗಲಗುಂಟೆ ಹಾಗೂ ದಾಸರಹಳ್ಳಿ ಪ್ರದೇಶಗಳಲ್ಲಿ ಮನೆಮನೆಗೆ ತೆರಳಿ ಕನ್ನಡ ಪುಸ್ತಕ ತಲುಪಿಸಿದ್ದಾರೆ. ವಿಶ್ವ ಪುಸ್ತಕ ದಿನಾಚರಣೆ ಪ್ರಯುಕ್ತ ದಾಸರಹಳ್ಳಿಯ ಬೈಲಪ್ಪ ವೃತ್ತವೊಂದರಲ್ಲೇ ಎರಡೂವರೆ ಸಾವಿರ ಪುಸ್ತಕಗಳನ್ನು ಹಂಚಿದ್ದಾರೆ.

‘ಅಕ್ಕಿ ಹಂಚಲು ನೂರಾರು ಮಂದಿ ಇದ್ದಾರೆ. ಪುಸ್ತಕ ಹಂಚುವವರು ಯಾರಿದ್ದಾರೆ ಹೇಳಿ. ಹಾಗಾಗಿ ನಾವು ಲಾಕ್‌ಡೌನ್‌ ಅವಧಿಯನ್ನು ಜನರಲ್ಲಿ ಕನ್ನಡಾಭಿಮಾನ ಮೂಡಿಸಲು ಬಳಸಿಕೊಂಡಿದ್ದೇವೆ’ ಎಂದು ಘಟಕದ ಅಧ್ಯಕ್ಷ ವೈ.ಬಿ.ಎಚ್‌.ಜಯದೇವ ‘ಪ್ರಜಾವಾಣಿ’ಗೆ ತಿಳಿಸಿದರು.  ‌

‘ನಾಡಿನ ನಾಯಕರ ಜೀವನ ಚರಿತ್ರೆಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ  ಹಾಘೂ ರಾಷ್ಟ್ರಕವಿಗಳ ಕೃತಿಗಳು, ಖ್ಯಾತ ಕಾದಂಬರಿಗಳು, ಮಕ್ಕಳಿಗಾಗಿ ನೀತಿಕಥೆಗಳು ಸೇರಿದಂತೆ ಒಟ್ಟು 8ಸಾವಿರಕ್ಕೂ ಅಧಿಕ ಕೃತಿಗಳನ್ನು ಎರಡು ತಿಂಗಳಲ್ಲಿ ಜನರಿಗೆ ನೀಡಿದ್ದೇವೆ. ಲಾಕ್‌ಡೌನ್‌ ಅವಧಿಯಲ್ಲಿ ಜನ ಮನೆಯಲ್ಲೇ ಇದ್ದಿದ್ದರಿಂದ ಖಂಡಿತಾ ಇವುಗಳನ್ನು ಓದುತ್ತಾರೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಜಯದೇವ್‌, ಬಯಲಿನೊಳಗೆ, ಕಲ್ಲರಳಿ ಹೂವಾಗಿ, ಚಿತ್ರಾಂಜಲಿ, ನಾ ಒಲಿದಂತೆ ಹಾಡುವೆ, ಕನ್ನಡ ಝೇಂಕಾರ, ಕನ್ನಡ ಐಸಿರಿ, ಕನ್ನಡ ಡಿಂಡಿಮ... ಮುಂತಾದ ಕೃತಿಗಳ ಲೇಖಕರೂ ಹೌದು. ಅವರ ಅವಧಿಯಲ್ಲಿ ಘಟಕವು ಶಾಲೆಗಳಲ್ಲಿ ಕನ್ನಡ, ಮನೆಯ ಹಜಾರದಲ್ಲಿ‌ ಕನ್ನಡ ವಿಚಾರ, ಕವಿಗಳ ಮನೆಯಂಗಳದಲ್ಲಿ ಕವಿ ಕಾವ್ಯ ಕಾರ್ಯಕ್ರಮ, ಕಮ್ಮಟ, ಕವಿಗೋಷ್ಠಿ, ದತ್ತಿ ಉಪನ್ಯಾಸ, ವಿಚಾರಸಂಕಿರಣಗಳನ್ನೂ ಏರ್ಪಡಿಸಿದೆ. ‘ಪರಭಾಷಿಕರಿಗೆ ಕನ್ನಡ ಕಲಿಕೆ ಅಭಿಯಾನ’ದ ಮೂಲಕ ನೂರಾರು ಮಂದಿಗೆ ಕನ್ನಡದ ಕಲಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು