ಸೋಮವಾರ, ಆಗಸ್ಟ್ 2, 2021
28 °C

ಮಗನ ಶವ ಪಡೆಯಲು ಐದು ದಿನ ಪರದಾಡಿದ ತಂದೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಡುವಾಗ ಎರಡನೇ ಮಹಡಿಯಿಂದ ಬಿದ್ದು ಮೃತಪಟ್ಟ ಹೆಬ್ಬಾಳದ ಏಳು ವರ್ಷದ ಬಾಲಕನ ಶವವನ್ನು ಗುರುವಾರ ಪೋಷಕರ ವಶಕ್ಕೆ ಒಪ್ಪಿಸಲಾಗಿದೆ.

ಕೋವಿಡ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದ ಬಳಿಕ ಬಾಲಕನ ಶವವನ್ನು ಪೋಷಕರಿಗೆ ಒಪ್ಪಿಸಲಾಯಿತು ಎಂದು ಹೆಬ್ಬಾಳ ಪೊಲೀಸರು ತಿಳಿಸಿದ್ದಾರೆ. ಮಗನ ಶವವನ್ನು ಪಡೆದು ಗೌರವದಿಂದ ಅಂತ್ಯಸಂಸ್ಕಾರ ನೆರವೇರಿಸಲು ಆತನ ತಂದೆ ಐದು ದಿನಗಳಿಂದ ಪರದಾಡಿದ್ದರು. ಇದಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಿದ್ದರು.

ಏಳು ವರ್ಷದ ಅಬ್ರಾರ್‌ ಅಹಮದ್‌ ಹೆಬ್ಬಾಳದ ತನ್ನ ಮನೆಯಲ್ಲಿ ಜುಲೈ 2ರಂದು ಸಂಜೆ ಆಡುವಾಗ ತಡೆ ಕಂಬಿಯಿಂದ ಜಾರಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ. ಪೇಂಟರ್‌ ಕೆಲಸ ಮಾಡುವ ಆತನ ತಂದೆ ಅಸ್ಲಂ ಪಾಷಾ, ಮಗನನ್ನು ಉಳಿಸಿಕೊಳ್ಳಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಾಡಿ ಸಾಕಾಗಿದ್ದರು ಎನ್ನಲಾಗಿದೆ.

ನಿಮ್ಹಾನ್ಸ್‌, ಡಾ. ಬಿ.ಆರ್‌. ಅಂಬೇಡ್ಕರ್‌ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ ಒಯ್ಯಲಾಗಿತ್ತು. ಆದರೆ, ಹಾಸಿಗೆ ಖಾಲಿ ಇಲ್ಲ ಎಂದು ವಾಪಸ್‌ ಕಳುಹಿಸಲಾಗಿತ್ತು. ಕೊನೆಗೆ ರಾತ್ರಿ 11 ಗಂಟೆ ಸುಮಾರಿಗೆ ವಿಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆಗೆ ಸ್ಪಂದಿಸಿದೆ ಅಬ್ರಾರ್‌ ಭಾನುವಾರ ಬೆಳಗಿನ ಜಾವ ಮೃತಪಟ್ಟ. ಆಸ್ಪತ್ರೆಗೆ ಭೇಟಿ ನೀಡಿದ್ದ ಹೆಬ್ಬಾಳ ಪೊಲೀಸರು ಮರಣೋತ್ತರ ಪರೀಕ್ಷೆ ಕಡ್ಡಾಯ. ಅದಕ್ಕೆ ಮುನ್ನ ಕೋವಿಡ್‌ ಪರೀಕ್ಷೆ ಆಗಬೇಕು ಎಂದಿದ್ದರು. ಬಾಲಕನ ದೇಹವನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲು ಪೋಷಕರು ಬಯಸಿದ್ದರು. ಅಲ್ಲಿ ಶೈತ್ಯಾಗಾರದ ವ್ಯವಸ್ಥೆ ಇಲ್ಲದ್ದರಿಂದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು.

ಗಂಟಲು ದ್ರವ ಪರೀಕ್ಷೆ ನಡೆಸಿದ ಬಳಿಕವಷ್ಟೆ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಬೇಕು ಎಂಬುದು ಸರ್ಕಾರದ ಆದೇಶ. ಮಗನ ಚಿಕಿತ್ಸೆಗೆ ₹ 90 ಸಾವಿರ ಖರ್ಚು ಮಾಡಿ ಸುಸ್ತಾಗಿದ್ದ ತಂದೆ ಶೈತ್ಯಾಗಾರಕ್ಕೂ ದಿನಕ್ಕೆ ₹ 4 ಸಾವಿರ ವ್ಯಯಿಸಿದ್ದಾರೆ. ನೆರೆಹೊರೆಯವರು ಅಲ್ಪಸ್ವಲ್ಪ ಹಣಕಾಸು ನೆರವು ನೀಡಿದ್ದಾರೆ.

‘ಕೆಲವು ದಿನಗಳಿಂದ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಕ್ಕಿದ್ದೇನೆ. ಈಗ ಬರಿಗೈಯಲ್ಲಿ ಕುಳಿತಿದ್ದೇನೆ’ ಎಂದು ಅಸ್ಲಂ ಪಾಷಾ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು