Covid-19 Karnataka Update | 99 ಹೊಸ ಪ್ರಕರಣ, 530 ಮಂದಿ ಸೋಂಕಿನಿಂದ ಗುಣಮುಖ

ಬೆಂಗಳೂರು: ಕೊರೊನಾ ವೈರಸ್ ಸೋಂಕಿಗೆ ರಾಜ್ಯದ ವಿವಿಧೆಡೆ ಮೇ 17ರ ಸಂಜೆ 5ರಿಂದ ಮೇ 18ರ ಸಂಜೆ 5ರವರೆಗೆ ಒಟ್ಟು 99 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,246ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಇದುವರೆಗೆ 530 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 37 ಜನರು ಮೃತಪಟ್ಟಿದ್ದಾರೆ. ಪ್ರಸ್ತುತ 678 ಸೋಂಕಿತರು ರಾಜ್ಯದ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ 23 ಮಂದಿಗೆ ಸೋಂಕು ದೃಢಪಟ್ಟಿದೆ. ಹಾಸನದ 4 ಜನರು, ರಾಯಚೂರಿನಲ್ಲಿ 6 ಮಂದಿ, ಕಲಬುರ್ಗಿಯ 10, ಕೊಪ್ಪಳ 3, ವಿಜಯಪುರ 5, ಗದಗ 5, ಬಳ್ಳಾರಿ, ಉಡುಪಿ, ದಾವಣಗೆರೆ, ಬೀದರ್, ಕೊಡಗು ಹಾಗೂ ಮೈಸೂರಿನಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಉತ್ತರ ಕನ್ನಡದ 9 ಮಂದಿ, ಯಾದಗಿರಿ 6, ಬೆಳಗಾವಿ 2, ದಕ್ಷಿಣ ಕನ್ನಡದಲ್ಲಿ 2 ಹಾಗೂ ಮಂಡ್ಯದಲ್ಲಿ 17 ಜನರಿಗೆ ಸೋಂಕು ತಗುಲಿದೆ.
ಸಂಜೆಯ ಪತ್ರಿಕಾ ಪ್ರಕಟಣೆ 18/05/2020.@CMofKarnataka @BSYBJP @DVSadanandGowda @SureshAngadi_ @sriramulubjp @drashwathcn @BSBommai @mla_sudhakar @iaspankajpandey @Tejasvi_Surya @BBMP_MAYOR @BBMPCOMM @CCBBangalore @BlrCityPolice @KarnatakaVarthe @PIBBengaluru @KarFireDept pic.twitter.com/6iKyvF5SjK
— K'taka Health Dept (@DHFWKA) May 18, 2020
ಬೆಳಗಾವಿ: ಮತ್ತಿಬ್ಬರಿಗೆ ಕೋವಿಡ್–19
ಬೆಳಗಾವಿಯಲ್ಲಿ ಹೊಸದಾಗಿ ಇಬ್ಬರಿಗೆ ಕೋವಿಡ್–19 ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 110ಕ್ಕೆ ಏರಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರೋಗಿ ಸಂಖ್ಯೆ 1226 ಆಗಿರುವ 34 ವರ್ಷದ ವ್ಯಕ್ತಿ ರೋಗಿ ಸಂಖ್ಯೆ 575ರ ದ್ವಿತೀಯ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಇನ್ನೊಬ್ಬರು 23 ವರ್ಷದ ಮಹಿಳೆ (ರೋಗಿ ಸಂಖ್ಯೆ 1227) ಮಹಾರಾಷ್ಟ್ರದ ಮುಂಬೈ ಪ್ರಯಾಣದ ಹಿನ್ನೆಲೆ ಉಳ್ಳವರಾಗಿದ್ದಾರೆ. ಇವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂಬೈನಿಂದ ಬಂದ ಐವರಿಗೆ ಕೋವಿಡ್ ಸೋಂಕು
ವಿಜಯಪುರ: ಮುಂಬೈನಿಂದ ನಗರಕ್ಕೆ ಆಗಮಿಸಿದ್ದ ಐವರಿಗೆ ಕೋವಿಡ್ ಸೋಂಕು ದೃಢವಾಗಿದೆ.
10 ವರ್ಷದ ಬಾಲಕಿ ಸೇರಿದಂತೆ 19 ವರ್ಷದ ಯುವತಿ, 20 ಮತ್ತು 22 ವರ್ಷ ವಯಸ್ಸಿನ ಇಬ್ಬರು ಯುವಕರು ಹಾಗೂ 45 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದೆ.
ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 59ಕ್ಕೆ ಏರಿಕೆಯಾಗಿದೆ. ಈಗಾಗಲೇ ಮೂವರು ಮೃತಪಟ್ಟಿದ್ಸಾರೆ. 37ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಆರು ತಿಂಗಳ ಮಗು ಸೇರಿ ಆರು ಜನರಿಗೆ ಕೋವಿಡ್
ಕಲಬುರ್ಗಿ: ಜಿಲ್ಲೆಯಲ್ಲಿ ಕೋವಿಡ್–19 ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಆರು ತಿಂಗಳ ಹೆಣ್ಣು ಮಗು ಸೇರಿ ಮತ್ತೆ ಆರು ಜನರಿಗೆ ಸೋಂಕು ಇರುವುದು ದೃಢಪಟ್ಟಿವೆ. ಇವರೆಲ್ಲರೂ ಮಹಾರಾಷ್ಟ್ರದಿಂದ ಇತ್ತೀಚೆಗೆ ವಾಪಸಾದವರು.
24 ವರ್ಷದ ಮಹಿಳೆ, 22 ವರ್ಷದ ಯುವತಿ, 24 ವರ್ಷದ ಮಹಿಳೆ, 29 ವರ್ಷದ ಯುವಕ, 27 ವರ್ಷದ ಮಹಿಳೆ ಹಾಗೂ ಆರು ತಿಂಗಳ ಮಗುವಿಗೆ ಸೋಂಕು ತಗುಲಿದೆ. ರೋಗಿ ಸಂಖ್ಯೆ 1187ರ 24 ವರ್ಷದ ಮಹಿಳೆ ಯಾದಗಿರಿ ಜಿಲ್ಲೆಯವರು. ಅವರು ಕಲಬುರ್ಗಿಯ ಕ್ವಾರಂಟೈನ್ ಕೇಂದ್ರದಲ್ಲಿ ಇರುವುದರಿಂದ ಕಲಬುರ್ಗಿಯ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ.
ಅಷ್ಟೂ ಜನ ಇತ್ತೀಚೆಗೆ ಮುಂಬೈನಿಂದ ರೈಲು ಹಾಗೂ ಬಸ್‌ಗಳ ಮೂಲಕ ಜಿಲ್ಲೆಗೆ ಬಂದಿದ್ದರು.
ರಾಯಚೂರಿನಲ್ಲೂ ಕೊರೊನಾ 6 ಪಾಜಿಟಿವ್
ರಾಯಚೂರು ಜಿಲ್ಲೆ ಕೂಡಾ ಹಸಿರಿನಿಂದ ಕಿತ್ತಳೆ ವಲಯಕ್ಕೆ ತಿರುಗಿದ್ದು, 6 ಮಂದಿ ವಲಸೆ ಕಾರ್ಮಿಕರಲ್ಲಿ ಕೊರೊನಾ ಸೋಂಕು ದೃಢವಾಗಿದೆ.
ರಾಯಚೂರಿನ ಯರಮರಸ್ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಿದ್ದ ನಾಲ್ಕು ಮಂದಿಗೆ ಹಾಗೂ ದೇವದುರ್ಗ ತಾಲ್ಲೂಕಿನ ಮಸರಕಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಉಳಿಸಿದ್ದ ಕಾರ್ಮಿಕರಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಎಲ್ಲರೂ ವಲಸೆ ಹೋಗಿ ಬಂದಿದ್ದ ಕಾರ್ಮಿಕರಾಗಿದ್ದು, ಐದು ಮಂದಿ ಮುಂಬೈ ಹಾಗೂ ಒಬ್ಬರು ಸೋಲ್ಲಾಪುರದಿಂದ ಮೇ 13 ರಂದು ಬಂದಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ವಿವರ ನೀಡಿದರು.
ಭಾನುವಾರ ಸಂಜೆ ಪ್ರಯೋಗಾಲಯ ವರದಿ ತಲುಪಿವೆ. ಸೋಂಕು ದೃಢವಾದವರನ್ನು ರಾತ್ರಿಯೆ ಒಪೆಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದರು.
ಯಾದಗಿರಿ: ಜಿಲ್ಲೆಯಲ್ಲಿ ಮತ್ತೆ 5 ಜನರಿಗೆ ಕೋವಿಡ್-19 ದೃಢ
ಯಾದಗಿರಿಯಲ್ಲಿ ಸೋಮವಾರ ಮಹಿಳೆ ಸೇರಿದಂತೆ ಮತ್ತೆ ಐದು ಜನರಿಗೆ ಕೋವಿಡ್-19 ದೃಢಪಟ್ಟಿದ್ದು, ಇದರಿಂದ ಸೋಂಕಿತರ ಸಂಖ್ಯೆ 10ಕ್ಕೆ ಏರಿದೆ.
25 ವರ್ಷದ ಮಹಿಳೆ (ಪಿ-1188), 25 ವರ್ಷದ ಪುರುಷ (ಪಿ-1189), 30 ವರ್ಷದ ಪುರುಷ (ಪಿ-1190), 15 ವರ್ಷದ ಯುವಕ (ಪಿ-1191) ಮತ್ತು 30 ವರ್ಷದ ಪುರುಷ (ಪಿ-1192) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇವರೆಲ್ಲರೂ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಮುಂಬೈನಿಂದ ಜಿಲ್ಲೆಗೆ ಆಗಮಿಸಿದ್ದರು. ಯಾದಗಿರಿಯ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಅವಲೋಕನೆಗಾಗಿ ಇರಿಸಲಾಗಿದೆ.
ಯುವಕನಿಗೆ ಕೊರೊನಾ ವೈರಸ್ ಸೋಂಕು
ದಾವಣಗೆರೆ: ಎರಡು ವಾರದ ಹಿಂದೆ ಮಹಾರಾಷ್ಟ್ರದ ಸೊಲ್ಲಾಪುರದಿಂದ ಬಂದು ಹೋಂ ಕ್ವಾರಂಟೈನ್ನಲ್ಲಿದ್ದ ಯುವಕನಲ್ಲಿ (ಪಿ. 1186) ಕೊರೊನಾ ವೈರಸ್ ಸೋಂಕು ಇರುವುದು ಸೋಮವಾರ ದೃಢಪಟ್ಟಿದೆ.
ಹೊನ್ನಾಳಿ ತಾಲ್ಲೂಕಿನ 24 ವರ್ಷದ ಈ ಯುವಕ ಮೇ 2ರಂದು ಊರಿಗೆ ಮರಳಿದ್ದರು.
ಜಿಲ್ಲೆಯಲ್ಲಿ ಈವರೆಗೆ 90 ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಗುಣಮುಖರಾಗಿದ್ದಾರೆ. ನಾಲ್ವರು ಮೃತಪಟ್ಟಿದ್ದಾರೆ. 84 ಪ್ರಕರಣಗಳು ಸಕ್ರಿಯವಾಗಿವೆ.
ಹಸಿರು ವಲಯದ ಕೊಡಗಿಗೆ ಆತಂಕ
ಮಡಿಕೇರಿ: ಹಸಿರು ವಲಯದ ಕೊಡಗಿನಲ್ಲಿ ಮತ್ತೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕಾಫಿ ಕಣಿವೆಯಲ್ಲಿ ಮತ್ತೆ ಆತಂಕ ಎದುರಾಗಿದೆ.
ಮುಂಬೈನಿಂದ ಕೊಡಗಿಗೆ ಬಂದಿದ್ದ ಮಹಿಳೆಗೆ ಸೋಂಕು (ಪಿ.1224) ಕಾಣಿಸಿಕೊಂಡಿದ್ದು, ಮುಂಬೈನಿಂದ ಮಂಗಳೂರು ಮೂಲಕ ಮೇ 16ರಂದು ಕೊಡಗಿಗೆ ಬಂದಿದ್ದರು. ಸಂಪಾಜೆ ಗೇಟ್‌ನಲ್ಲೇ ಅವರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸಿ ಆಂಬುಲೆನ್ಸ್ ಮೂಲಕ ನೇರವಾಗಿ ಮಡಿಕೇರಿಯ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಆಕೆಯ ಗಂಟಲು ದ್ರವದ ಮಾದರಿಯನ್ನು ಮೈಸೂರಿನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದ್ದು ಸೋಂಕು ತಗುಲಿರುವುದು ಪತ್ತೆಯಾಗಿದೆ.
ಆಕೆ ಮಂಗಳೂರಿನಿಂದ ಸಂಪಾಜೆ ಗೇಟ್ ತನಕ ಕ್ಯಾಬ್‌ನಲ್ಲಿ ಬಂದಿದ್ದರು. ಹೀಗಾಗಿ, ಕ್ಯಾಬ್ ಚಾಲಕ ಹಾಗೂ ಮಂಗಳೂರಿನಲ್ಲಿ ಆಕೆ ಯಾರನ್ನು ಸಂಪರ್ಕಿಸಿದ್ದರು ಎಂಬುದನ್ನು ಜಿಲ್ಲಾಡಳಿತ ಪತ್ತೆ ಹಚ್ಚಲು ಮುಂದಾಗಿದೆ. ಸಂಪಾಜೆ ಗೇಟ್‌ನಲ್ಲಿದ್ದ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೂ ಆತಂಕ ಎದುರಾಗಿದೆ.
ಉಳಿದಂತೆ, ಇಂದು ಬೆಂಗಳೂರಿನಲ್ಲಿ 18, ಮಂಡ್ಯದಲ್ಲಿ 17, ಉತ್ತರಕನ್ನಡದಲ್ಲಿ 8, ಗದಗದಲ್ಲಿ ತಲಾ 5, ಹಾಸನದಲ್ಲಿ 4, ಕೊಪ್ಪಳದಲ್ಲಿ 3, ಬಳ್ಳಾರಿ, ಬೀದರ್, ಮೈಸೂರಿನಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.