ಸೋಮವಾರ, ಜುಲೈ 13, 2020
29 °C
ಏಕವಚನದಲ್ಲಿ ನಿಂದನೆ: ರಮೇಶ ಸಂಗಾ

ಲಂಚಕ್ಕೆ ಶಾಸಕನ ಬೇಡಿಕೆ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ತಮ್ಮ ಆಪ್ತ ಸಹಾಯಕರ ಮೂಲಕ ಪದೇ ಪದೇ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಯಾದ ನನ್ನನ್ನೂ ಸೇರಿದಂತೆ ಹಲವು ಅಧಿಕಾರಿಗಳಿಗೆ ಏಕವಚನದಲ್ಲಿ ನಿಂದಿಸಿದ್ದಾರೆ. ಅವರಿಗೆ ಹಣ ನೀಡದಿದ್ದಕ್ಕೆ ನನ್ನನ್ನು ವರ್ಗಾವಣೆ ಮಾಡಿಸಲು ಸಚಿವರಿಗೆ ಪತ್ರ ಬರೆದಿದ್ದಾರೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (ಬಿಸಿಎಂ) ಜಿಲ್ಲಾ ಅಧಿಕಾರಿ ರಮೇಶ ಸಂಗಾ ಆರೋಪ ಮಾಡಿದ್ದಾರೆ.

‘ಆರು ತಿಂಗಳ ಹಿಂದೆಯಷ್ಟೇ ಇಲಾಖೆ ಅಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಹಣ ಕೊಡುವಂತೆ ಹಲವು ಬಾರಿ ಫೋನ್‌ ಮಾಡಿಸಿದ್ದಾರೆ. ಆದರೆ, ನಾನು ಹಣ ನೀಡಿಲ್ಲ. ಅದೇ ದ್ವೇಷದಿಂದ ಮನೆಗೆ ಕರೆಸಿಕೊಂಡು ಏಕವಚನದಲ್ಲಿ ನಿಂದಿಸಿದ್ದರು. ಕೋವಿಡ್‌–19 ತಡೆಗಟ್ಟಲು ಜಿಲ್ಲಾಧಿಕಾರಿ ರಚಿಸಿರುವ ಮೂರು ಸಮಿತಿಗಳಲ್ಲಿ ಕೆಲಸ ಮಾಡುತ್ತಿದ್ದೇನೆ.  ಪ್ರತಿ ಬಾರಿ ಕೆಲಸಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೂ ಮೌಖಿಕ ದೂರು ನೀಡಿದ್ದೇನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಂಗಾ ಆರೋಪದಲ್ಲಿ ಹುರುಳಿಲ್ಲ’

‘ಬಿಸಿಎಂ ಜಿಲ್ಲಾ ಅಧಿಕಾರಿ ರಮೇಶ ಸಂಗಾ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ’ ಎಂದು ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಪ್ರತಿಕ್ರಿಯಿಸಿದರು.

‘ನಾನು –ಅವರು ಭೇಟಿಯೇ ಆಗಿಲ್ಲ. ಕರೆಯನ್ನೂ ಮಾಡಿಲ್ಲ. ಹಿಂದೊಮ್ಮೆ ಆಟೊ ಚಾಲಕರಿಗೆ ಕಿಟ್‌ ಕೊಡುವುದು ವಿಳಂಬವಾದ ಸಂದರ್ಭದಲ್ಲಿ ಏಕೆ ವಿಳಂಬವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದೆ. ನಾನು ಅವರಿಗೆ ಹಣ ಕೇಳಿದ್ದರೆ, ಏಕ ವಚನದಲ್ಲಿ ನಿಂದಿಸಿದ್ದರೆ ಅದಕ್ಕೆ ದಾಖಲೆ ಕೊಡಲಿ’ ಎಂದು ಸವಾಲು ಹಾಕಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು