ಭಾನುವಾರ, ಮೇ 9, 2021
22 °C
ಐದು ಕುಟುಂಬಗಳನ್ನು ಸ್ಥಳಾಂತರಿಸಿದ ಬಿಬಿಎಂಪಿ

ಪಾಯ ಕುಸಿತ; ಎರಡು ಅಂತಸ್ತಿನ ಕಟ್ಟಡಕ್ಕೆ ಧಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸುಬ್ರಹ್ಮಣ್ಯನಗರ ಸಮೀಪದ ಸಂಗೊಳ್ಳಿರಾಯಣ್ಣ ಉದ್ಯಾನ ಬಳಿ ಖಾಲಿ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ತೋಡಲಾಗಿದ್ದ ಪಾಯ ಕುಸಿದಿದ್ದು, ಅದರ ಪಕ್ಕದಲ್ಲೇ ಇರುವ ಎರಡು ಅಂತಸ್ತಿನ ಕಟ್ಟಡದ ಪಾಯಕ್ಕೂ ಧಕ್ಕೆ ಉಂಟಾಗಿದೆ.

‘ಕಟ್ಟಡದ ಪಾಯದ ಶೇ 10ರಷ್ಟು ಭಾಗ ಕುಸಿದಿದೆ. ಇಡೀ ಕಟ್ಟಡ ಕುಸಿದು ಬೀಳುವ ಸಾಧ್ಯತೆ ಇದೆ. ಕಟ್ಟಡದಲ್ಲಿ ವಾಸವಿದ್ದ ಐದು ಕುಟುಂಬಗಳನ್ನು ಮುಂಜಾಗ್ರತಾ ಕ್ರಮವಾಗಿ ಬೇರೆಡೆ ಸ್ಥಳಾಂತರಿಸಲಾಗಿದೆ’ ಎಂದು ಸುಬ್ರಹ್ಮಣ್ಯನಗರ ವಾರ್ಡ್‌ ಕಾರ್ಪೊರೇಟರ್ ಎಚ್‌.ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜೇಶ್ವರಿ ಎಂಬುವರಿಗೆ ಸೇರಿದ್ದ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಪಾಯ ತೋಡಲಾಗುತ್ತಿದೆ. ಅದೇ ಜಾಗಕ್ಕೆ ಹೊಂದಿಕೊಂಡು ಪ್ರದೀಪ್‌ ಎಂಬುವರಿಗೆ ಸೇರಿದ್ದ ಎರಡು ಅಂತಸ್ತಿನ ಕಟ್ಟಡವಿದೆ’ ಎಂದರು.

‘‍ಪಾಯ ತೋಡುವುದಕ್ಕೂ ಮುನ್ನ ಎರಡೂ ಜಾಗಗಳ ನಡುವೆ ಗೋಡೆ ನಿರ್ಮಿಸುವ ಮಾತುಕತೆ ಆಗಿತ್ತು. ರಾಜೇಶ್ವರಿ ಅವರು ಗೋಡೆ ನಿರ್ಮಿಸದೆ ಪಾಯ ತೋಡಿಸಿದ್ದರು. ಈಗ ಪಾಯದ ಮಣ್ಣು ಕುಸಿದು ಬಿದ್ದಿದೆ. ಅದರ ಜೊತೆಗೆಯೇ ಕಟ್ಟಡದ ಪಾಯದ ಭಾಗವೂ ಕ್ರಮೇಣ ಕುಸಿಯಲಾರಂಭಿಸಿದೆ’ ಎಂದು ಮಂಜುನಾಥ್ ವಿವರಿಸಿದರು.

‘ಬಿಬಿಎಂಪಿ ಎಂಜಿನಿಯರ್‌ಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಪರಿಶೀಲಿಸುತ್ತಿದ್ದಾರೆ’ ಎಂದರು. 

ಸ್ಥಳೀಯರಲ್ಲೂ ಆತಂಕ: ಎರಡು ಅಂತಸ್ತಿನ ಕಟ್ಟಡದ ಅಕ್ಕ–ಪಕ್ಕದಲ್ಲೂ ಮನೆಗಳಿವೆ. ಅಲ್ಲಿ ವಾಸಿಸುವ ನಿವಾಸಿಗಳಿಗೂ ಆತಂಕ ಶುರುವಾಗಿದೆ. ಕಟ್ಟಡ ಕುಸಿದು ತಮ್ಮ ಮನೆಯ ಮೇಲೆ ಬಿದ್ದರೆ ಏನು ಮಾಡುವುದೆಂದು ಹೆದರುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು