ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರ ಸೂರಿಗೆ ಸಾವಿರ ಕೋಟಿ; ಡಿ.ಸಿ ಖಾತೆಗೆ ಮೂರು ದಿನಗಳಲ್ಲಿ ಹಣ

ಪೂರ್ಣ ನಾಶವಾದ ಮನೆಗಳ ಮರು ನಿರ್ಮಾಣ
Last Updated 18 ಸೆಪ್ಟೆಂಬರ್ 2019, 20:27 IST
ಅಕ್ಷರ ಗಾತ್ರ

ಬೆಂಗಳೂರು: ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಂಪೂರ್ಣ ನಾಶವಾಗಿರುವ ಮನೆಗಳ ನಿರ್ಮಾಣಕ್ಕಾಗಿ ತಕ್ಷಣವೇ ₹1,000 ಕೋಟಿ ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಈ ಹಣವನ್ನು ಇನ್ನು ಎರಡು– ಮೂರು ದಿನಗಳಲ್ಲಿ ಜಿಲ್ಲಾಧಿಕಾರಿಗಳ ಖಾತೆಗೆ ಜಮೆ ಮಾಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸಂಪುಟ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಪೂರ್ಣ ನಾಶವಾಗಿರುವ ಒಂದು ಮನೆ ನಿರ್ಮಾಣಕ್ಕೆ ₹5 ಲಕ್ಷ ನೀಡಲಾಗುವುದು. ಹಿಂದೆ ಮನೆ ಹೊಂದಿರುವುದಕ್ಕೆ ದಾಖಲೆಗಳನ್ನು ಈಗಾಗಲೇ ಸಲ್ಲಿಸಿರುವವರಿಗೆ ಮನೆಗೆ ಪಾಯ ಹಾಕಿಸಲು ತಕ್ಷಣವೇ ₹1ಲಕ್ಷ ಮೊದಲ ಕಂತಿನಲ್ಲಿ ವಿತರಿಸಲಾಗುವುದು. ಭಾಗಶಃ ಹಾನಿಯಾದ ಮನೆಗಳಿಗೆ ತಲಾ ₹25 ಸಾವಿರ ನೀಡಲಾಗುವುದು. ಸುಮಾರು 30 ಸಾವಿರದಿಂದ 40 ಸಾವಿರ ಮನೆಗಳು ಸಂಪೂರ್ಣ ನಾಶ ಆಗಿದೆ ಎಂದು ಅಂದಾಜು ಮಾಡಲಾಗಿದೆ. ಶೇ 50 ರಷ್ಟು ಮನೆಗಳ ದಾಖಲೆ ಸಿಕ್ಕಿದೆ ಎಂದರು.

ನೆರೆ ಪೀಡಿತ ಪ್ರದೇಶದಲ್ಲಿ ಹಾನಿಯಾಗಿರುವ ರಸ್ತೆಗಳು ಮತ್ತು ಸೇತುವೆಗಳನ್ನು ಸರಿಪಡಿಸಲು ಲೋಕೋಪಯೋಗಿ ಇಲಾಖೆಯಿಂದ ₹500 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಮಾಧುಸ್ವಾಮಿ ಹೇಳಿದರು.

ಈ ಉದ್ದೇಶಕ್ಕೆ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಮೀಸಲಾದ ಅನುದಾನವನ್ನು ಬಳಸುವುದಿಲ್ಲ. ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಾಲೋನಿಯಲ್ಲಿ ನಾಶವಾಗಿರುವ ಮನೆಗಳ ನಿರ್ಮಾಣಕ್ಕೆ ಪರಿಶಿಷ್ಟ ವರ್ಗದ ಅನುದಾನದಲ್ಲಿ ಬಳಕೆಯಾಗದೇ ಉಳಿದಿರುವ ಹಣವನ್ನು ಬಳಸಿಕೊಳ್ಳಲಾಗುವುದು. ಅವರ ಕಾಲೋನಿಗಳ ಅಭಿವೃದ್ಧಿಗಾಗಿಯೇ ಬಳಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ತಡೆ ಹಿಡಿದಿದ್ದ ಕಾಮಗಾರಿಗೆ ಅನುಮೋದನೆ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಶಾಸಕರ ಕ್ಷೇತ್ರಗಳಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿದ್ದ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗೆ (ಅಪೆಂಡಿಕ್ಸ್‌ ಸಿ) ತಡೆ ನೀಡಿದ್ದರು. ಬಹಳಷ್ಟುಕಾಮಗಾರಿಗಳಿಗೆ ಟೆಂಡರ್‌ ಆಗಿ ಕಾಮಗಾರಿಯೂ ಆರಂಭವಾಗಿತ್ತು. ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದವು. ಈ ಹಿನ್ನೆಲೆಯಲ್ಲಿ ಶಾಸಕರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಕಾಮಗಾರಿ ಮುಂದುವರಿಸಲು ಕೋರಿದ್ದರು.

ನಿಯಮ ಉಲ್ಲಂಘನೆ ಆಗದ ಮತ್ತು ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಮುಂದುವರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಕಾಮಗಾರಿಗೆ ₹1500 ಕೋಟಿ ಬಿಡುಗಡೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಮಾಧುಸ್ವಾಮಿ ಹೇಳಿದರು.

ಕಾರಾಗೃಹ ಸಿಬ್ಬಂದಿಗೂ ವೇತನ ಹೆಚ್ಚಳ

ಅಗ್ನಿಶಾಮಕ ತುರ್ತುಸೇವೆ, ಕಾರಾಗೃಹ ಸಿಬ್ಬಂದಿಗೂ ಔರಾದಕರ ಶಿಫಾರಸಿನಂತೆ ವೇತನ ಪರಿಷ್ಕರಣೆ ಮಾಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಸಂಬಂಧ ತಕ್ಷಣವೇ ಆದೇಶ ಹೊರಡಿಸಲಾಗುವುದು. ಇತ್ತೀಚೆಗೆ ಪೊಲೀಸರಿಗೆ ಮಾತ್ರ ವೇತನ ಪರಿಷ್ಕರಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್‌ ಸಿಬ್ಬಂದಿ ವೇತನ ಪರಿಷ್ಕರಣೆ ಸಂಬಂಧ ಹೊರಡಿಸಿದ್ದ ಸುತ್ತೋಲೆಗೆ ತಡೆ ನೀಡಲಾಗಿತ್ತು. ಅಗ್ನಿಶಾಮಕ ಮತ್ತು ಕಾರಾಗೃಹ ಸಿಬ್ಬಂದಿಗೆ ಪರಿಷ್ಕೃತ ವೇತನವನ್ನು ಪೂರ್ವಾನ್ವಯವಾಗಿ ನೀಡಲು ನಿರ್ಧರಿಸಲಾಗಿದೆ.

ಜಿಲ್ಲಾ ಆಸ್ಪತ್ರೆ: ಕ್ಯಾನ್ಸರ್‌ ತಪಾಸಣಾ ಘಟಕ

ಮಂಗಳೂರು, ಮೈಸೂರು, ವಿಜಯಪುರ,ಚಿತ್ರದುರ್ಗ, ದಾವಣಗೆರೆ, ಬಾಗಲಕೋಟೆ, ಚಿಕ್ಕಮಗಳೂರು, ಹಾವೇರಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗಳಲ್ಲಿ ತಲಾ 1 ಕೋಟಿ ವೆಚ್ಚದಲ್ಲಿ ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್‌ಗಳನ್ನು ಪತ್ತೆ ಮಾಡುವ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಮಾಧುಸ್ವಾಮಿ ಹೇಳಿದರು.

ಅತ್ಯಾಧುನಿಕ ಮ್ಯಾಮೊಗ್ರಫಿ ಮತ್ತು ಪ್ಯಾಪ್‌ಸ್ಮಿಯರ್ ಸ್ಕ್ಯಾನಿಂಗ್‌ ಯಂತ್ರಗಳ ಮೂಲಕ ಕ್ಯಾನ್ಸರ್‌ ಪತ್ತೆ ಮಾಡಲಾಗುವುದು ಎಂದರು.
ಕಲಬುರ್ಗಿಯ ಜಯದೇವ ಹೃದ್ರೋಗ ಸಂಸ್ಥೆಯನ್ನು ₹150 ಕೋಟಿ ವೆಚ್ಚದಲ್ಲಿ 300 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲಾಗುವುದು ಎಂದರು.

ಅ.14 ರಿಂದ ಅಧಿವೇಶನ

ಅಕ್ಟೋಬರ್‌ 14 ರಿಂದ 26 ರವರೆಗೆ ನಡೆಯಲಿರುವ ಅಧಿವೇಶನದಲ್ಲಿ ಈ ಹಿಂದೆ ಎಚ್‌.ಡಿ.ಕುಮಾರಸ್ವಾಮಿ ಮಂಡಿಸಿದ್ದ ಬಜೆಟ್‌ಗೆ ಒಪ್ಪಿಗೆ ಪಡೆಯಲಾಗುವುದು ಎಂದು ಮಾಧುಸ್ವಾಮಿ ತಿಳಿಸಿದರು.

ಬೆಳಗಾವಿ ಜಿಲ್ಲೆ ನೆರೆ ಪೀಡಿತವಾಗಿರುವುದರಿಂದ ಅಧಿಕಾರಿಗಳು ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಲ್ಲಿ ಅಧಿವೇಶನ ನಡೆಸುವುದರಿಂದ ಅವರ ಕಾರ್ಯಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ. ವಿರೋಧ ಪಕ್ಷಗಳಿಗೆ ಹೆದರಿ ಬೆಂಗಳೂರಿನಲ್ಲಿ ನಡೆಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

‘ಬೆಳಗಾವಿಯಾಗಲಿ, ಬೆಂಗಳೂರಾಗಲಿ ಅದೇ ಶಾಸಕರನ್ನು ಎದುರಿಸಬೇಕು. ವಿರೋಧ ಪಕ್ಷದವರನ್ನು ಎದುರಿಸಲು ನಾವು ಸಿದ್ಧರಿದ್ದೇವೆ’ ಎಂದು ಹೇಳಿದರು.
**

ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

* ಬಯಲುಸೀಮೆ ಅಭಿವೃದ್ಧಿ ಮಂಡಳಿ ವತಿಯಿಂದ ಈ ವ್ಯಾಪ್ತಿಯ 97 ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹1ಕೋಟಿ ನೀಡಲಾಗುವುದು. ಕ್ರಿಯಾಯೋಜನೆ ಸಲ್ಲಿಸುವ ಕ್ಷೇತ್ರಗಳಿಗೆ ಹಣ ಬಿಡುಗಡೆ. ಇದಕ್ಕಾಗಿ ₹97 ಕೋಟಿ ನಿಗದಿ.

* ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನಿಂದ ₹ 456 ಕೋಟಿ ಸಾಲ ಪಡೆದು ಹೊಸಪೇಟೆಯ ವಿಜಯನಗರ ಕಾಲದ ಹಳೇ ನಾಲೆಗಳ ಆಧುನೀಕರಣ.

* ಬೆಳಗಾವಿ ಜಿಲ್ಲೆ ಹಿಂಡಲಗಾ ಹೋಬಳಿಯ 21 ಗ್ರಾಮಗಳಲ್ಲಿ ಕುಡಿಯುವ ನೀರು ಸೌಲಭ್ಯಕ್ಕೆ ₹322.22 ಕೋಟಿ ಅನುದಾನ ನೀಡಲು ಆಡಳಿತಾತ್ಮಕ ಅನುಮೋದನೆ.

* ಮಾರ್ಕಂಡೇಯ ನದಿಯಿಂದ 0.162 ಟಿಎಂಸಿ ನೀರನ್ನು ಏತ ನೀರಾವರಿ ಮೂಲಕ ಬಹುಗ್ರಾಮ ಯೋಜನೆಯಡಿ ಪೂರೈಕೆ ಮಾಡಲು ₹143 ಕೋಟಿ ವೆಚ್ಚದ ವಿಸ್ತೃತ ಯೋಜನಾ ವರದಿ ತಯಾರಿಸಲು ಒಪ್ಪಿಗೆ.

* ಎಲ್ಲ ಜಿಲ್ಲೆಗಳಲ್ಲೂ ಪೋಷಣೆ ಯೋಜನೆ ಅನುಷ್ಠಾನಕ್ಕೆ ₹ 9 ಕೋಟಿ ನೀಡಲು ಒಪ್ಪಿಗೆ

* ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸೇವಾ ನಿಯಮಗಳಿಗೆ ಒಪ್ಪಿಗೆ

* ಅಗರ ಎಸ್‌ಟಿಪಿಯಿಂದ ಹೆಚ್ಚುವರಿ 35 ಎಂಎಲ್‌ಡಿ ನೀರನ್ನು ಸಂಸ್ಕರಣೆ ಮಾಡಿ ಕೆ.ಸಿ.ವ್ಯಾಲಿಗೆ ಹರಿಸಲು ₹30 ಕೋಟಿ ಯೋಜನೆಗೆ ಅನುಮೋದನೆ.

* ಸಚಿವಾಲಯದ ಬೇರೆ,ಬೇರೆ ಇಲಾಖೆಗಳ ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್‌ಗಳ ನಿರ್ವಹಣೆ ವ್ಯವಸ್ಥೆಯ ₹9.55 ಕೋಟಿ ಟೆಂಡರ್‌ಗೆ ಅನುಮತಿ.

* ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಕೋಡಾಳುವಿನ 28 ಜನವಸತಿ ಬಹುಗ್ರಾಮ ಯೋಜನೆಯಡಿ ₹57.28 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ.

* ರಾಜ್ಯ ಮಾನವ ಹಕ್ಕುಗಳ ಆಯೋಗದ ಒಬ್ಬ ಸದಸ್ಯರ ಕಚೇರಿಯನ್ನು ಧಾರವಾಡಕ್ಕೆ ಸ್ಥಳಾಂತರಿಸುವ ನಿರ್ಧಾರ ಕೈಬಿಟ್ಟಿರುವ ಸರ್ಕಾರ ಆಯೋಗ ಪೂರ್ಣ ಪ್ರಮಾಣದಲ್ಲಿ ಬೆಂಗಳೂರಿನಲ್ಲೇ ಕಾರ್ಯ ನಿರ್ವಹಿಸಲು ಅವಕಾಶ ನೀಡಿದೆ.

**

ಕಾಫಿ ಮತ್ತು ಇತರ ಸಂಬಾರ ಪದಾರ್ಥಗಳ ಬೆಳೆಗಳಿಗೆ ಆಗಿರುವ ನಷ್ಟ ಭರಿಸಲು ಪ್ರತ್ಯೇಕ ಪ್ಯಾಕೇಜ್‌ ಮಾಡಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇವೆ
– ಜೆ.ಸಿ.ಮಾಧುಸ್ವಾಮಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT