ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ ಕೋಶ ‘ಡಿಜಿಟಲ್‌ ಇಮೇಜಿಂಗ್‌’!

ರೋಗ ಖಚಿತಪಡಿಸಲು ಡಿಜಿಟಲ್‌ ತಂತ್ರಜ್ಞಾನದ ನೆರವು
Last Updated 3 ಮೇ 2019, 20:25 IST
ಅಕ್ಷರ ಗಾತ್ರ

ಬೆಂಗಳೂರು: ಕ್ಯಾನ್ಸರ್‌ ಕೋಶಗಳ ಗಾಜಿನ ಸ್ಲೈಡ್‌ಗಳ ಯುಗ ಮುಗಿಯುತ್ತಾ ಬಂದಿದೆ. ಈಗ ಕ್ಯಾನ್ಸರ್‌ ಕೋಶಗಳ ‘ಡಿಜಿಟಲ್‌ ಇಮೇಜಿಂಗ್‌’ ಯುಗ ಆರಂಭವಾಗಿದೆ.

ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಡಿಜಿಟಲ್‌ ತಂತ್ರಜ್ಞಾನ ಬಳಕೆಯಿಂದ ಹಣ, ಸಮಯ ಉಳಿತಾಯವಾಗಲಿದೆ. ರೋಗಿಯು ಕ್ಯಾನ್ಸರ್‌ ಪೀಡಿತ ಹೌದೋ ಅಲ್ಲವೋ ಎಂಬುದನ್ನು ಕೆಲವೇ ಗಂಟೆಗಳಲ್ಲಿ ಖಚಿತವಾಗಿ ಹೇಳಬಹುದು.

ದೇಶದ ಯಾವುದೇ ಸಣ್ಣ ಪಟ್ಟಣವೊಂದರ ವ್ಯಕ್ತಿಯೊಬ್ಬ ಕ್ಯಾನ್ಸರ್‌ ಕಾಯಿಲೆಯ ಸಂದೇಹದಿಂದ ದೇಹದ ಕೋಶವನ್ನು ಪರೀಕ್ಷೆಗೆ ಒಳಪಡಿಸಿದರೆ, ಕೋಶದ ಸ್ಯಾಂಪಲ್‌ ಆನ್ನು ವಿಶ್ವದ ಅತಿರಥ ಮಹಾರಥ ತಜ್ಞರು ಏಕಕಾಲದಲ್ಲಿ ಪರಿಶೀಲಿಸಿ ಅದು ಕ್ಯಾನ್ಸರ್‌ ಕೋಶ ಹೌದೋ ಅಲ್ಲವೋ ಎಂಬ ನಿರ್ಧಾರಕ್ಕೆ ಬರಬಹುದು. ಕೆಲವೇ ಗಂಟೆಗಳಲ್ಲಿ ಅಭಿಪ್ರಾಯ ಪಡೆಯುವುದರಿಂದ, ಬೇಗನೇ ಚಿಕಿತ್ಸೆ ಆರಂಭಿಸಲು ಸಾಧ್ಯ.

ಈ ಹೊಸ ತಂತ್ರಜ್ಞಾನವನ್ನು ಡಿಜಿಟಲ್‌ ರೋಗ ಪತ್ತೆ ಪರಿಹಾರ (ಡಿಜಿಟಲ್‌ ಪೆಥಾಲಜಿ ಸಲ್ಯುಷನ್‌) ಎನ್ನಲಾಗುತ್ತದೆ. ಇದು ಕೃತಕ ಬುದ್ಧಿಮತ್ತೆ ಆಧಾರಿತ ಡಿಜಿಟಲ್‌ ತಂತ್ರಜ್ಞಾನ. ಇದನ್ನು ಭಾರತದಲ್ಲಿ ಬಳಸಲು ಅಮೆರಿಕದ ಫುಡ್‌ ಅಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಷನ್‌ (ಎಫ್‌ಡಿಎ) ಒಪ್ಪಿಗೆ ನೀಡಿದೆ.

ಸದ್ಯಕ್ಕೆ ಚಾಲ್ತಿಯಲ್ಲಿರುವ ವಿಧಾನವೆಂದರೆ, ವೈದ್ಯರು ಸೂಚಿಸಿದ ಪ್ರಯೋಗಾಲಯದಲ್ಲಿ ರೋಗಿ ಜೀವಕೋಶಗಳನ್ನು ನೀಡಿ ಕ್ಯಾನ್ಸರ್‌ ಹೌದೊ ಅಲ್ಲವೋ ಎಂಬುದನ್ನು ಪತ್ತೆ ನಡೆಸಲಾಗುತ್ತಿದೆ. ಸಾಕಷ್ಟು ಸಂದರ್ಭದಲ್ಲಿ ಒಂದೇ ಸಲಕ್ಕೆ ಕ್ಯಾನ್ಸರ್‌ ಇದೆಯೋ ಇಲ್ಲವೋ ಎಂಬ ನಿರ್ಧಾರಕ್ಕೆ ಬರಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಇಬ್ಬರು ಅಥವಾ ಮೂವರು ತಜ್ಞರ ಖಚಿತ ಅಭಿಪ್ರಾಯ ಪಡೆಯಲು ಕೋಶವನ್ನು ಹೊಂದಿದ ಗಾಜಿನ ಸ್ಲೈಡ್‌ಗಳನ್ನು ಕಳಿಸಲಾಗುತ್ತದೆ.

‘ಡಿಜಿಟಲ್‌ ಪೆಥಾಲಜಿ ಸಲ್ಯುಷನ್‌’ ಹಾಲಿ ಇರುವ ಪದ್ಧತಿಗಿಂತ ಸಂಪೂರ್ಣ ಭಿನ್ನವಾದುದು. ಉದಾಹರಣೆಗೆ; ಚನ್ನಪಟ್ಟಣದಲ್ಲಿ ರೋಗಿಯೊಬ್ಬನ ದೇಹದ ಕೋಶವನ್ನು ಪ್ರಯೋಗಾಲಯದಲ್ಲಿ ಪರಿಶೀಲಿಸಿದ ಬಳಿಕ ಗಾಜಿನ ಸ್ಲೈಡ್‌ ಅನ್ನು ಡಿಜಿಟಲ್ ರೂಪಕ್ಕೆ (ಡಿಜಿಟಲ್‌ ಇಮೇಜ್‌) ಪರಿವರ್ತಿಸಲಾಗುತ್ತದೆ. ಇದನ್ನು ಮೆಡಿಕಲ್‌ ಗ್ರೇಡ್‌ ಮಾನಿಟರ್‌ನಲ್ಲಿ ವೀಕ್ಷಿಸಬಹುದು. ಡಿಜಿಟಲ್‌ ಇಮೇಜ್ ಆಧರಿಸಿ ಟಿಪ್ಪಣಿ ಮಾಡುವುದು, ಸಂಗ್ರಹಿಸುವುದು, ಹಂಚಿಕೊಳ್ಳುವುದು ಮತ್ತು ನೆಟ್‌ವರ್ಕ್‌ ಕಾರ್ಯಗಳಿಗೆ ಇದನ್ನು ಬಳಸಬಹುದಾಗಿದೆ. ಡಿಜಿಟಲ್‌ ಇಮೇಜ್‌ ಮೂಲಕ ಕ್ಯಾನ್ಸರ್‌ ಕೋಶ ಹೌದೋ ಅಲ್ಲವೋ ಎಂಬುದನ್ನು ಬೆಂಗಳೂರು, ಮುಂಬೈ, ದೆಹಲಿ ಅಥವಾ ವಿದೇಶಗಳಲ್ಲಿರುವ ತಜ್ಞರು ಏಕಕಾಲದಲ್ಲಿ ಪರಿಶೀಲಿಸಿ ಖಚಿತ ಅಭಿಪ್ರಾಯ ನೀಡಬಹುದು.

ಈ ತಂತ್ರಜ್ಞಾನವನ್ನು ಫಿಲಿಪ್ಸ್‌ ಕಂಪನಿ ಅಭಿವೃದ್ಧಿಪಡಿಸಿದ್ದು, ಎಚ್‌ಸಿಜಿ ಕ್ಯಾನ್ಸರ್‌ ಆಸ್ಪತ್ರೆ ದೇಶದಲ್ಲೇ ಮೊದಲ ಬಾರಿಗೆ ಅಳವಡಿಸಿಕೊಂಡಿದೆ. ಎಚ್‌ಸಿಜಿ ಅಲ್ಲದೇ, ಇತರ ಆಸ್ಪತ್ರೆಗಳೂ ಇದರ ಸೌಲಭ್ಯಗಳನ್ನು ಬಳಸಿಕೊಳ್ಳಬಹುದಾಗಿದೆ. ದೇಶದ ಎಲ್ಲ ಪಟ್ಟಣಗಳಲ್ಲೂ ತಜ್ಞರ ಜಾಲವನ್ನು ರೂಪಿಸಲು ಉದ್ದೇಶಿಸಲಾಗಿದೆ ಎಂದು ಎಚ್‌ಸಿಜಿ ಕ್ಯಾನ್ಸರ್‌ ಆಸ್ಪತ್ರೆಯ ಅಧ್ಯಕ್ಷ ಡಾ.ಬಿ.ಎಸ್‌.ಅಜಯ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸುದೀರ್ಘಾವಧಿ ರಕ್ಷಣೆ ಸಾಧ್ಯ
ಗಾಜಿನ ಸ್ಲೈಡ್‌ಗಳನ್ನು ಬಹಳ ಕಾಲ ರಕ್ಷಿಸಿಡುವುದು ಕಷ್ಟ. ಡಿಜಿಟಲ್‌ ಇಮೇಜ್‌ ಅನ್ನು ಸುದೀರ್ಘಾವಧಿ ರಕ್ಷಿಸಿಡಬಹುದು. ರೋಗಿಯಲ್ಲಿ ಕ್ಯಾನ್ಸರ್‌ ವಿವಿಧ ಘಟ್ಟಗಳನ್ನು ತಲುಪಿದಾಗ ಚಿಕಿತ್ಸೆಗೆ ಡಿಜಿಟಲ್‌ ಇಮೇಜ್‌ ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT