ಗುರುವಾರ , ಜೂನ್ 24, 2021
27 °C

ಪೊಲೀಸರೆದುರೇ ವಿಜಯ್ ಮುಖಕ್ಕೆ ಗುದ್ದಿದ ಕಿಟ್ಟಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯ್–ಕಿಟ್ಟಿ ಠಾಣೆ ಬಳಿ ವಾಗ್ವಾದ

ಬೆಂಗಳೂರು: ದುನಿಯಾ ವಿಜಯ್ ಹಾಗೂ ಪಾನಿಪೂರಿ ಕಿಟ್ಟಿಯ ಸಹಚರರು ಹೈಗ್ರೌಂಡ್ಸ್ ಠಾಣೆ ಎದುರೇ ಕೈ–ಕೈ ಮಿಲಾಯಿಸಿದ್ದರಿಂದ ಶನಿವಾರ ರಾತ್ರಿಯಿಡೀ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಮಾರುತಿ ಮೇಲೆ ಹಲ್ಲೆ ನಡೆದ ವಿಚಾರ ತಿಳಿದು ಕಿಟ್ಟಿಯ ಸ್ನೇಹಿತರು ಹಾಗೂ ಅವರ ಬಳಿ ಜಿಮ್‌ನಲ್ಲಿ ತರಬೇತಿ ಪಡೆಯುತ್ತಿದ್ದ ನೂರಕ್ಕೂ ಹೆಚ್ಚು ಮಂದಿ ಠಾಣೆಯ ಎದುರು ಜಮಾಯಿಸಿದರು. ವಿಜಯ್ ಅಲ್ಲಿಗೆ ಬರುತ್ತಿದ್ದಂತೆಯೇ ಎಲ್ಲರೂ ಕಾರನ್ನು ಸುತ್ತುವರಿದು ದಾಳಿಗೆ ಮುಂದಾದರು.

ಕಿಟ್ಟಿ ಬೆಂಬಲಿಗರು ಕಾರಿನ ಮಿರರ್ ಮುರಿದು, ಗಾಜು ಒಡೆಯಲು ಕಲ್ಲುಗಳನ್ನೂ ಎತ್ತಿಕೊಂಡಿದ್ದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು. ಏಕಾಏಕಿ ಠಾಣೆಯಿಂದ ಹೊರಗೆ ಓಡಿ ಬಂದ ಕಿಟ್ಟಿ, ವಿಜಯ್‌ ಮುಖಕ್ಕೆ ತಲೆಯಿಂದ ಗುದ್ದಿದರು. ಇದರಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಯಿತು. ಆಗ ಪೊಲೀಸರು ಲಾಠಿ ಬೀಸಿ ಗುಂಪು ಚದುರಿಸಿದರು. ಬಳಿಕ ವಿಜಯ್ ಹಾಗೂ ಮಾರುತಿ ಹೊರತುಪಡಿಸಿ ಎಲ್ಲರನ್ನೂ ಠಾಣೆ ಆವರಣದಿಂದ ಹೊರಗೆ ಕಳುಹಿಸಿದರು.

ನಸುಕಿನವರೆಗೂ ಠಾಣೆ ಬಳಿ ಇದೇ ಪರಿಸ್ಥಿತಿ ಇತ್ತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಒಂದು ಕೆಎಸ್‌ಆರ್‌ಪಿ ತುಕಡಿಯನ್ನೂ ನಿಯೋಜಿಸಿದ್ದರು. ವಿಜಯ್ ಜತೆ ಅವರ 12 ವರ್ಷದ ಮಗ ಸಾಮ್ರಾಟ್ ಕೂಡ ಇಡೀ ರಾತ್ರಿ ಠಾಣೆಯಲ್ಲೇ ಕಳೆದ.

ಪ್ರಸಾದ್‌ನೇ ಸೂತ್ರಧಾರ: ‘ವಿಜಯ್‌ಗೆ ಮೊದಲು ನಾನೇ ಜಿಮ್ ಟ್ರೈನರ್ ಆಗಿದ್ದೆ. ಕ್ಷುಲ್ಲಕ ಕಾರಣಕ್ಕೆ ಮನಸ್ತಾಪವಾಗಿ ಹತ್ತು ತಿಂಗಳಿನಿಂದ ನಾವಿಬ್ಬರೂ ಪರಸ್ಪರ ಮಾತನಾಡುತ್ತಿರಲಿಲ್ಲ. ಆನಂತರದ ದಿನಗಳಿಂದ ವಿಜಯ್, ಪ್ರಕಾಶ್‌ನಗರದಲ್ಲಿ ಜಿಮ್ ಕೇಂದ್ರ ನಡೆಸುತ್ತಿರುವ ಪ್ರಸಾದ್‌ ಬಳಿಯೇ ತರಬೇತಿ ಪಡೆಯುತ್ತಿದ್ದಾನೆ. ಆತನ ಮಾತು ಕೇಳಿ ವಿಜಯ್ ನನ್ನ ವಿರುದ್ಧ ತಿರುಗಿಬಿದ್ದಿದ್ದಾನೆ’ ಎಂದು ಕಿಟ್ಟಿ ದೂರಿದರು.

‘ಮೊದಲು ನಾನು ಹಾಗೂ ಪ್ರಸಾದ್ ಪಾಲುದಾರಿಕೆಯಲ್ಲಿ ಜಿಮ್ ನಡೆಸುತ್ತಿದ್ದೆವು. ವ್ಯವಹಾರದಲ್ಲಿ ವೈಮನಸ್ಸು ಉಂಟಾಗಿ, ಐದು ವರ್ಷಗಳ ಹಿಂದೆಯೇ ಆತನಿಂದ ದೂರ ಹೋದೆ. ಬಸವೇಶ್ವರನಗರದಲ್ಲಿ ನನ್ನ ಜಿಮ್ ಕೇಂದ್ರವಿದ್ದು, ಹಲವು ಸ್ಟಾರ್ ನಟರು ನಮ್ಮಲ್ಲೇ ದೈಹಿಕ ಕಸರತ್ತು ನಡೆಸುತ್ತಾರೆ. ಅವರಿಗೆಲ್ಲ ಮಾರುತಿಯೇ ತರಬೇತುದಾರ. ಈ ಬೆಳವಣಿಗೆ ಸಹಿಸದೆ ಪ್ರಸಾದ್‌, ಹೀಗೆ ಮಾಡಿಸುತ್ತಿದ್ದಾನೆ’ ಎಂದರು.

‘ಮಾರುತಿಯನ್ನು ಕಾರಿನಲ್ಲಿ ಅಪಹರಿಸಿ ಸುಮಾರು ಒಂದೂವರೆ ತಾಸು ಸುತ್ತಾಡಿಸಿದ್ದಾರೆ. ಕೈ ಹಾಗೂ ರಿಂಗ್‌ಗಳಿಂದ ಮುಖಕ್ಕೆ ಗುದ್ದಿದ್ದಾರೆ. ಬಳಿಕ ಆತನನ್ನು ರಾಜರಾಜೇಶ್ವರಿನಗರ ಹೆಬ್ಬಾಗಿಲ ಬಳಿ ಕರೆದೊಯ್ದಿರುವ ಅವರು, ‘ವಿಜಯ್‌ಗೆ ಬೈದಿದ್ದಕ್ಕೆ ಅವರ ಅಭಿಮಾನಿಗಳು ನನಗೆ ಹೊಡೆದರು. ಆಗ ವಿಜಯ್ ಅವರೇ ನನ್ನನ್ನು ರಕ್ಷಿಸಿ ಮನೆಗೆ ಕಳುಹಿಸಿದರು’ ಎಂದು ಹೇಳಿಸಿ ವಿಡಿಯೊ ಮಾಡಿಕೊಂಡಿದ್ದಾರೆ. ಹಲ್ಲೆ ನಡೆಸಿದ ವಿಷಯ ಬಹಿರಂಗಪಡಿಸಿದರೆ ನಿನ್ನನ್ನು ಹಾಗೂ ಕಿಟ್ಟಿಯನ್ನು ಜೀವಂತವಾಗಿ ಬಿಡುವುದಿಲ್ಲ ಎಂದೂ ಬೆದರಿಸಿ ಠಾಣೆಗೆ ಕರೆದುಕೊಂಡು ಬಂದಿದ್ದಾರೆ’ ಎಂದು ಆರೋಪಿಸಿದರು.

ಪ್ರತಿದೂರು: ‘ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಕಾರಿಗೆ ಹಾನಿ ಮಾಡಿರುವ ಕಿಟ್ಟಿ ಹಾಗೂ ಸಹಚರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ವಿಜಯ್ ಪ್ರತಿದೂರು ಕೊಟ್ಟಿದ್ದಾರೆ. ಪೊಲೀಸರು ಅದನ್ನು ಎನ್‌ಸಿಆರ್ (ಸಾಮಾನ್ಯ ಪ್ರಕರಣ) ಮಾಡಿದ್ದಾರೆ.

ಜಡ್ಜ್ ಬೈಯ್ತಾರೆ, ನಾಚಿಕೆ ಆಗುತ್ತೆ: ವಿಜಯ್ ಅಳಲು

‘ಅವಕಾಶ ಸಿಕ್ಕಾಗಲೆಲ್ಲ ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ. ಪದೇ ಪದೇ ಜಡ್ಜ್ ಮುಂದೆ ಹೋಗಿ ಕೈ ಕಟ್ಟಿ ನಿಲ್ಲಲು ಬೇಸರವಾಗುತ್ತದೆ. ಅವರು ಬೈದಾಗ ನಾಚಿಕೆ ಆಗುತ್ತದೆ. ಇಂಥ ರಂಪಾಟಗಳಿಂದ ದೂರ ಉಳಿದರೂ, ಎದುರಾಳಿಗಳು ಸುಮ್ಮನೆ ಬಿಡುತ್ತಿಲ್ಲ’ ಎಂದು ವಿಜಯ್ ಹೇಳಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಕಾರ್ಯಕ್ರಮಕ್ಕೆ ನನ್ನ ಮಗ ಸಾಮ್ರಾಟ್ ಕೂಡ ಬಂದಿದ್ದ. ಆತನನ್ನು ಮಾತನಾಡಿಸಿದ ಮಾರುತಿ ಹಾಗೂ ಆತನ ಸಹಚರರು, ‘ಏನೋ ಈ ವಯಸ್ಸಿಗೇ ಮೆರೀತಿದಿಯಾ. ‘ಕುಸ್ತಿ’ ಅಂತ ಸಿನಿಮಾ ಮಾಡಿದ ಮಾತ್ರಕ್ಕೆ ನೀನು–ನಿಮ್ಮಪ್ಪ ಪೈಲ್ವಾನ್‌ಗಳಾ? ಇಬ್ಬರಿಗೂ ಒಂದು ಗತಿ ಕಾಣಿಸುತ್ತೇವೆ’ ಎಂದು ಹೆದರಿಸಿದರು. ಅದನ್ನು ಮಗ ನನ್ನ ಬಳಿ ಬಂದು ಹೇಳಿದ.’

‘ಆ ಮಾತುಗಳನ್ನು ಕೇಳಿಸಿಕೊಂಡು ಕೆರಳಿದ ನನ್ನ ಸ್ನೇಹಿತರು ಹಾಗೂ ಅಭಿಮಾನಿಗಳು, ಮಾರುತಿಗೆ ಹೊಡೆಯಲಾರಂಭಿಸಿದರು. ನಾನೇ ಆತನನ್ನು ರಕ್ಷಿಸಿ ಕಾರಿನಲ್ಲಿ ಮನೆಗೆ ಕರೆದುಕೊಂಡು ಹೋಗಿದ್ದೆ. ಕಿಟ್ಟಿ ನನಗೆ 20 ವರ್ಷಗಳ ಸ್ನೇಹಿತ. ಕೆಲದಿನಗಳಿಂದ ದೋಸ್ತಿಯಲ್ಲಿ ಬಿರುಕು ಉಂಟಾಗಿದೆ. ಆತನ ಮೇಲಿನ ಸಿಟ್ಟನ್ನು ಈ ಸಣ್ಣ ಹುಡುಗನ ಮೇಲೆ ಯಾಕೆ ತೀರಿಸಿಕೊಳ್ಳಲಿ’ ಎಂದರು.

ವಿಜಯ್ ವಿರುದ್ಧ ಸಾಲು ಸಾಲು ಪ್ರಕರಣ..

* ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಿಜಯ್ ಪತ್ನಿ ನಾಗರತ್ನ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ದೂರು ಕೊಟ್ಟಿದ್ದರು.

* ನಿರ್ಮಾಪಕ ಜಯಣ್ಣ ಅವರಿಗೆ ಜೀವ ಬೆದರಿಕೆ ಹಾಕಿದರೆಂದು ಸಿಸಿಬಿ ಪೊಲೀಸರು ವಿಜಯ್ ಅವರನ್ನು ವಿಚಾರಣೆ ನಡೆಸಿದ್ದರು.

* ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ವಿಜಯ್ ಅವರನ್ನು ಬಂಧಿಸಿದ್ದರು.

* ‘ಮಾಸ್ತಿಗುಡಿ’ ಚಿತ್ರದ ನಿರ್ಮಾಪಕ ಸುಂದರ್ ಗೌಡ ಅವರ ಬಂಧನಕ್ಕೆ ತೆರಳಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಆರೋಪಿ ಪರಾರಿಯಾಗಲು ಸಹಕರಿಸಿದ್ದ ಆರೋಪದಡಿ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದರು.

ಪೂರ್ವಾಪರ ಸಂಗ್ರಹಿಸಿದ ಪೊಲೀಸರು

‘ವಿಜಯ್ ಹಾಗೂ ಅವರ ಸಹಚರರು ಪದೇ ಪದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹೀಗಾಗಿ, ಅವರ ಹಾಗೂ ಪಾನಿಪೂರಿ ಕಿಟ್ಟಿಯ ಸಹಚರರ ಪೂರ್ವಾಪರ ಸಂಗ್ರಹಿಸಲು ಸಿಬ್ಬಂದಿಗೆ ಸೂಚಿಸಿದ್ದೇನೆ. ಶನಿವಾರ ರಾತ್ರಿ ನಡೆದ ಗಲಾಟೆಗೆ ಪ್ರತೀಕಾರವಾಗಿ ಕಿಟ್ಟಿ ಗ್ಯಾಂಗ್ ಭವಿಷ್ಯದಲ್ಲಿ ದಾಳಿ ನಡೆಸಬಹುದು. ಇಂಥ ಗ್ಯಾಂಗ್ ವಾರ್‌ಗಳಿಗೆ ಕಡಿವಾಣ ಹಾಕಲು ಈಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ’ ಎಂದು ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು