ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಸಿಬಿ ಕಾರ್ಯಾಚರಣೆ: 60 ಬಾಂಗ್ಲಾ ಅಕ್ರಮ ವಲಸಿಗರ ಸೆರೆ

Last Updated 26 ಅಕ್ಟೋಬರ್ 2019, 19:31 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ವಲಸಿಗರನ್ನು ಗುರುತಿಸಲು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಸಿಆರ್‌) ನಿಯಮ ಜಾರಿಗೊಳಿಸಲು ರಾಜ್ಯದಲ್ಲೂ ಸಿದ್ಧತೆ ನಡೆಯುತ್ತಿರುವ ಮಧ್ಯೆಯೇ, ವಿಶೇಷ ಕಾರ್ಯಾಚರಣೆ ನಡೆಸಿದ ಕೇಂದ್ರ ಅಪರಾಧ ದಳ (ಸಿಸಿಬಿ) ಪೊಲೀಸರು 60 ಬಾಂಗ್ಲಾ ಅಕ್ರಮ ವಲಸಿಗರನ್ನು ಬಂಧಿಸಿದ್ದಾರೆ.

ನಗರದ ರಾಮಮೂರ್ತಿ ನಗರ, ಬೆಳ್ಳಂದೂರು, ಮಾರತ್‌ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವಿದೇಶಿಯರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಅನಧಿಕೃತವಾಗಿ ವಾಸಿಸುತ್ತಿದ್ದ 29 ಪುರುಷರು, 22 ಮಹಿಳೆಯರು ಮತ್ತು 9 ಹುಡುಗಿಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಎಲ್ಲರೂ ಬಾಂಗ್ಲಾ ಅಕ್ರಮ ವಲಸಿಗರು ಎನ್ನುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ರಾಮಮೂರ್ತಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಕಲ್ಕೆರೆ ಗ್ರಾಮದಲ್ಲಿ ಸಣ್ಣ ಗುಡಿಸಲುಗಳಲ್ಲಿ ಬಾಂಗ್ಲಾ ಅಕ್ರಮ ವಲಸಿಗರು ನೆಲೆಸಿದ್ದರು. ತಮ್ಮ ಎರಡು ಎಕರೆ ಜಾಗವನ್ನು ತಿಂಗಳ ಬಾಡಿಗೆಗೆ ಅಕ್ರಮ ವಲಸಿಗರಿಗೆ ಮಾಲೀಕರು ನೀಡಿದ್ದರು. ಈ ಜಾಗದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ, ಸಂಸ್ಕರಿಸುವ ಘಟಕವೂ ಇದೆ. ಈ ಪ್ರದೇಶಕ್ಕೆ ನಗರ ಪೊಲೀಸ್‌ ಕಮಿಷನರ್ ಭಾಸ್ಕರ್‌ ರಾವ್‌ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಭಾಸ್ಕರ್‌ ರಾವ್‌, ‘ಬಂಧಿತರು ಗುತ್ತಿಗೆ ಆಧಾರದ ಮೇಲೆ ಕಸ ಆಯುವುದು, ಪೌರ ಕಾರ್ಮಿಕರಾಗಿ ಕೆಲಸ ಮಾಡುವುದು ಕಂಡುಬಂದಿದೆ. ಬಂಧಿತ ಬಾಲಕಿಯರನ್ನು ಹಾಗೂ ಮಕ್ಕಳನ್ನು ನಿರಾಶ್ರಿತ ಕೇಂದ್ರಕ್ಕೆ ಕಳುಹಿಸಲಾಗಿದೆ. ಪುರುಷರನ್ನು ಠಾಣೆಯಲ್ಲಿ ಇರಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ’ ಎಂದರು.

‘ಬಂಧಿತ ಅಕ್ರಮ ವಲಸಿಗರನ್ನು ಬಾಂಗ್ಲಾ ಗಡಿಗೆ ಕರೆದುಕೊಂಡು ಹೋಗಿ ಬಿಡುತ್ತೇವೆ. ದೆಹಲಿಯಲ್ಲಿರುವ ಬಾಂಗ್ಲಾದೇಶ ರಾಯಭಾರಿ ಕಚೇರಿಯನ್ನೂ ಸಂಪರ್ಕಿಸಿ ಗಡಿ ಭದ್ರತಾ ಪಡೆ ನೇತೃತ್ವದಲ್ಲಿ ರೈಲಿನ ಮೂಲಕ ಬಾಂಗ್ಲಾ ಮೂಲದವರನ್ನು ವಾಪಸ್ ಕಳುಹಿಸಿ ಕೊಡುತ್ತೇವೆ‌. ಬಾಂಗ್ಲಾದವರನ್ನು ಕರೆದುಕೊಂಡು ಬಂದವರ ಬೆನ್ನು ಹತ್ತುವುದು ನಮ್ಮ ಉದ್ದೇಶವಾಗಿದೆ’ ಎಂದರು.

‘ಗುಪ್ತಚರ ಇಲಾಖೆ ಹಾಗೂ ರಾಷ್ಟ್ರೀಯ ತನಿಖಾ ದಳದ ಮಾಹಿತಿ ಆಧರಿಸಿ ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದೆ. ಬಾಂಗ್ಲಾ ವಲಸಿಗರು ಭಯೋತ್ಪಾದಕರಿಗೆ ಸಹಕರಿಸಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ’ ಎಂದರು.‌

ಎಫ್‌ಆರ್‌ಆರ್‌ಓ ಮೂಲಕ ವಾಪಸ್‌: ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು ಪತ್ತೆಹಚ್ಚಿ, ಅವರನ್ನು ಅವರವರ ದೇಶಗಳಿಗೆ ಮರಳಿ ಕಳುಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.ವಿದ್ಯಾರ್ಥಿ ವೀಸಾ, ಪ್ರವಾಸಿ ವೀಸಾದಲ್ಲಿ ಬಂದು, ಅವಧಿ ಮುಗಿದರೂ ವಾಪಸು ಹೋಗದೆ ಅಕ್ರಮವಾಗಿ ನೆಲೆಸಿದ್ದ ಆಫ್ರಿಕಾ ದೇಶದ ಏಳು ಮಂದಿಯನ್ನು ಇತ್ತೀಚೆಗೆ ಬಂಧಿಸಲಾಗಿದ್ದು, ಅವರನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಓ) ಮೂಲಕ ವಾಪಸ್‌ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ.

ನೆಲಮಂಗಲದಲ್ಲಿ ಬಂಧನ ಕೇಂದ್ರ: ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಗಡಿಪಾರು ಮಾಡುವವರೆಗೂ ನೆಲಮಂಗಲ ಸಮೀಪ ಇಡುವ ಉದ್ದೇಶದಿಂದ ವಿದೇಶೀಯರ ಬಂಧನ ಕೇಂದ್ರಕ್ಕೆ ಚಾಲನೆ ನೀಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ನೆಲಮಂಗಲ ಹತ್ತಿರದ ಸೊಂಡೆಕೊಪ್ಪದಲ್ಲಿದ್ದ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾರ್ಥಿಗಳ ವಸತಿ ನಿಲಯವನ್ನು ಈ ಕೇಂದ್ರವಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ.

*
ಅಕ್ರಮ ವಲಸಿಗರಿಗೆ ಆಶ್ರಯ ನೀಡಿದವರ ಮೇಲೂ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಬಾಡಿಗೆಗೆ ಕೊಡುವ ಮೊದಲು ಮಾಲೀಕರು, ದಾಖಲೆ ಪರಿಶೀಲಿಸಬೇಕು.
-ಭಾಸ್ಕರ್‌ ರಾವ್, ಬೆಂಗಳೂರು ಪೊಲೀಸ್‌ ಕಮಿಷನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT