ಬುಧವಾರ, ಸೆಪ್ಟೆಂಬರ್ 18, 2019
28 °C
ಚಂದ್ರಯಾನ–2 ಯಶಸ್ವಿಯಾಗಿ ಚಂದ್ರನ ಕಕ್ಷೆಗೆ–ಇನ್ನು 17 ದಿನ ಮಹತ್ವದ ಘಟ್ಟ

ಸೆ.7: ಚಂದ್ರನ ದಕ್ಷಿಣ ಅಂಗಳಕ್ಕೆ ವಿಕ್ರಂ ಲ್ಯಾಂಡರ್

Published:
Updated:

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದ ಶೋಧನೆಗಾಗಿ ಜುಲೈ 22ರಂದು ಹೊರಟಿರುವ ‘ಚಂದ್ರಯಾನ–2’ ಬಾಹ್ಯಾಕಾಶ ನೌಕೆ ಮಂಗಳವಾರ ಬೆಳಿಗ್ಗೆ 9.30ಕ್ಕೆ ಯಶಸ್ವಿಯಾಗಿ ಭೂ ಕಕ್ಷೆಯಿಂದ ಚಂದ್ರನ ಕಕ್ಷೆಗೆ ಸೇರಿಕೊಂಡಿದ್ದು, ಸೆ‍ಪ್ಟೆಂಬರ್‌ 7ರಂದು ನಸುಕಿನ 1.55ಕ್ಕೆ ಚಂದ್ರನ ನೆಲದಲ್ಲಿ ಇಳಿಯಲಿದೆ.

‘ಇನ್ನು 17 ದಿನ ಬಹಳ ಮಹತ್ವದ ಘಟ್ಟಗಳಿಗೆ ಸಾಕ್ಷಿಯಾಗುತ್ತದೆ. ಸೆ.2ರಂದು ಚಂದ್ರನಿಂದ 100 ಕಿ.ಮೀ. ಎತ್ತರದ ಕಕ್ಷೆಗೆ ಬರಲಿರುವ ನೌಕೆಯಲ್ಲಿನ ಆರ್ಬಿಟರ್‌ನಿಂದ ಲ್ಯಾಂಡರ್‌ ಬೇರ್ಪಡಲಿದೆ. ಮುಂದಿನ ಐದು ದಿನಗಳಂತೂ ಉಸಿರು ಬಿಗಿಹಿಡಿಯುವ ರೀತಿಯಲ್ಲಿ ಘಟನೆಗಳು ನಡೆಯಲಿದ್ದು, ಸೆ.7ರಂದು ಲ್ಯಾಂಡರ್‌ ಚಂದ್ರನ ನೆಲ ಸ್ಪರ್ಶಿಸಲಿದೆ’ ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್‌ ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘90 ಡಿಗ್ರಿ ಲಂಬವಾದ ಕಕ್ಷೆಯಲ್ಲಿ ನೌಕೆಯನ್ನು ನೆಲೆಗೊಳಿಸಿ, ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವುದು ಬಹಳ ಸವಾಲಿನ ಕೆಲಸ. ಇದೇ ಕಾರಣಕ್ಕೆ ಜಗತ್ತಿನ ಯಾವ ರಾಷ್ಟ್ರವೂ ಇಂತಹ ಪ್ರಯತ್ನಕ್ಕೆ ಕೈಹಾಕಿಲ್ಲ. ಚಂದ್ರಯಾನ–2 ಈ ಸಾಧನೆ ಮಾಡಲಿದ್ದು, ಲ್ಯಾಂಡರ್‌ ಮತ್ತು ರೋವರ್‌ 14 ದಿನಗಳ ಕಾಲ ಚಂದ್ರನಲ್ಲಿನ ನೀರು, ಖನಿಜ, ಕಂಪನ, ಮೇಲ್ವೈ ಲಕ್ಷಣ ಸಹಿತ ಹಲವು ವಿಷಯಗಳಲ್ಲಿ ಶೋಧನೆ ನಡೆಸಿ ಭೂಮಿಗೆ ಮಾಹಿತಿ ರವಾನಿಸಲಿದೆ’ ಎಂದು ಅವರು ವಿವರಿಸಿದರು.

‘ಚಂದ್ರಯಾನ 2 ಉಡಾವಣೆ ಒಂದು ವಾರ ವಿಳಂಬವಾಗಿದ್ದರಿಂದ ಯಾವ ತೊಂದರೆಯೂ ಆಗಿಲ್ಲ. ಸದ್ಯಕ್ಕೆ ಎಲ್ಲವೂ ಯೋಜನಾಬದ್ಧವಾಗಿ ಸಾಗಿದೆ. ಮುಂದಿನ ಹಂತ ಬಹಳ ನಿರ್ಣಾಯಕ. ಲ್ಯಾಂಡರ್‌ ಅನ್ನು ಸುರಕ್ಷಿತವಾಗಿ ಚಂದ್ರನ ಸಮತಟ್ಟಾದ ನೆಲದಲ್ಲಿ ಇಳಿಸುವುದು ಬಹಳ ದೊಡ್ಡ ಸವಾಲು. ಅದನ್ನು ಸಾಧಿಸುವ ತನಕ ಆತಂಕ ಇದ್ದೇ ಇದೆ’ ಎಂದರು.

ಇದನ್ನೂ ಓದಿ: ಚಂದ್ರನ ದಕ್ಷಿಣ ಧ್ರುವ; ವಿಜ್ಞಾನಿಗಳ ಪಾಲಿನ ಕುತೂಹಲದ ಗಣಿ

ನಾಲ್ಕು ಬಾರಿ ಶಕ್ತಿವರ್ಧನೆ: ‘ಇದೀಗ ಚಂದ್ರನ ಕಕ್ಷೆಗೆ ಸೇರಿರುವ ಚಂದ್ರಯಾನ 2 ಬಾಹ್ಯಾಕಾಶ ನೌಕೆಯನ್ನು ನಾಲ್ಕು ಬಾರಿ ಶಕ್ತಿವರ್ಧನೆಗೊಳಿಸುವ (ಬರ್ನಿಂಗ್‌) ಮೂಲಕ ಚಂದ್ರನ ಸಮೀಪಕ್ಕೆ ಕಳುಹಿಸಲಾಗುತ್ತದೆ. ಆ.21, 28, 30 ಮತ್ತು ಸೆ.1ರಂದು ಈ ಪ್ರಕ್ರಿಯೆಗಳು ನಡೆಯುತ್ತವೆ. ಹೀಗೆ ಮಾಡಿದಾಗ ಸೆ.2ರ ವೇಳೆಗೆ ನೌಕೆ ಚಂದ್ರನಿಂದ 100 ಕಿ.ಮೀ.ದೂರದ ಕಕ್ಷೆಗೆ ಬಂದು ಸೇರುತ್ತದೆ. ಆ ಹಂತದಲ್ಲಿ ಅದು 37 ಕಿ.ಮೀ.ನಿಂದ 97 ಕಿ.ಮೀ. ದೂರದಲ್ಲಿ ಚಂದ್ರನಿಗೆ 90 ಡಿಗ್ರಿ ಲಂಬವಾಗಿ ಸುತ್ತುತ್ತಿರುತ್ತದೆ. ಬಳಿಕ ಆರ್ಬಿಟರ್‌ನಿಂದ ಲ್ಯಾಂಡರ್‌ ಬೇರ್ಪಡಿಸಿ ಸುರಕ್ಷಿತವಾಗಿ ಚಂದ್ರನ ನೆಲ ಸೇರಿಸುವ ಪ್ರಕ್ರಿಯೆ ಸ್ವಯಂಚಾಲಿತವಾಗಿ ನಡೆಯಲಿದೆ. ಇದೆಲ್ಲವೂ ಇದುವರೆಗೆ ಮಾಡದೆ ಇರುವ ಪ್ರಯೋಗವಾಗಿರುವುದರಿಂದ ಯಶಸ್ಸಿನ ಬಗ್ಗೆ ಈಗಲೇ ಹೇಳಲಾಗದು, ಆದರೂ ವಿಶ್ವಾಸ ಇದೆ’ ಎಂದು ಶಿವನ್ ವಿವರಿಸಿದರು.

* ಚಂದ್ರಯಾನ 2 ನಡೆಸುವ ಶೋಧನೆ ಬಹು ದೀರ್ಘ ಕಾಲದ ಸಂಶೋಧನೆಗಳಿಗೆ ನಾಂದಿ ಹಾಡಲಿದೆ. ಚಂದ್ರನಲ್ಲಿನ ವಸತಿ ಕಲ್ಪನೆಗೂ ತಳಹದಿಯಾಗಬಹುದು

–ಕೆ.ಶಿವನ್‌, ಇಸ್ರೊ ಅಧ್ಯಕ್ಷ

* ಚಂದ್ರಯಾನ–2

ಭೂಮಿಯಿಂದ 170ರಿಂದ 39,120 ಕಿ.ಮೀ.ದೂರದ ಚಂದ್ರಯಾನ–2 ಕಕ್ಷೆ

ಜುಲೈ 22: ಶ್ರೀಹರಿಕೋಟಾದ ಸತೀಶ್‌ ಧವನ್‌ ಕೇಂದ್ರದಿಂದ ಚಂದ್ರಯಾನ–2 ಹೊತ್ತ ಜಿಎಸ್‌ಎಲ್‌ವಿ ಎಂಕೆ 3 ರಾಕೆಟ್‌ ಉಡಾವಣೆ

ಆಗಸ್ಟ್‌ 20: ಭೂ ಕಕ್ಷೆಯಿಂದ ಚಂದ್ರನ ಕಕ್ಷೆಯತ್ತ ನಿರ್ಗಮನ

ಸೆ.2: ಚಂದ್ರನಿಂದ 100 ಕಿ.ಮೀ.ಎತ್ತರದ ಕಕ್ಷೆಯಲ್ಲಿ ಆರ್ಬಿಟರ್‌ನಿಂದ ಪ್ರತ್ಯೇಕಗೊಳ್ಳಲಿರುವ ಲ್ಯಾಂಡರ್‌

ಸೆ.7: ಚಂದ್ರನ ದಕ್ಷಿಣ ಅಂಗಳಕ್ಕೆ ಲ್ಯಾಂಡರ್‌

5 ಗಂಟೆಯೊಳಗೆ ಲ್ಯಾಂಡರ್‌ನಿಂದ ರೋವರ್‌ ಹೊರಕ್ಕೆ

14 ದಿನ: 500 ಮೀಟರ್‌ನಷ್ಟು ದೂರ ಚಲಿಸುವ ರೋವರ್‌ನಿಂದ ಹಲವು ಸಂಶೋಧನೆ

ಲ್ಯಾಂಡರ್‌ನಿಂದಲೂ ಹಲವು ಚಿತ್ರ ರವಾನೆ

ಲ್ಯಾಂಡರ್‌– ರೋವರ್‌ ಕಳುಹಿಸುವ ಚಿತ್ರಗಳು 1 ಸೆಕೆಂಡ್‌ನಲ್ಲಿ ಭೂಮಿಗೆ

ಒಂದು ವರ್ಷ: ಚಂದ್ರನ ಸುತ್ತ ಸುತ್ತಲಿರುವ ಆರ್ಬಿಟರ್‌

Post Comments (+)