ಬುಧವಾರ, ಆಗಸ್ಟ್ 21, 2019
27 °C

ವಿದ್ಯುತ್ ಸಂಪರ್ಕ ನೀಡಲು ಸತಾಯಿಸಿದರೆ ಪರಿಸ್ಥಿತಿ ನೆಟ್ಟಗಿರಲ್ಲ: ಮುಖ್ಯಮಂತ್ರಿ

Published:
Updated:

ಬೆಂಗಳೂರು: ರಾಜ್ಯದಲ್ಲಿ ಭೀಕರ ಬರಗಾಲ ಇದ್ದು, ಗಂಗಾಕಲ್ಯಾಣ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ನೀಡಲು ಇಂಧನ ಇಲಾಖೆ ಆಧಿಕಾರಿಗಳು, ಸಿಬ್ಬಂದಿ ಸತಾಯಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದರು.

ವಿಧಾನಸೌಧದಲ್ಲಿ ಶುಕ್ರವಾರ ಬರ ಪರಿಸ್ಥಿತಿ ತಿಳಿಯಲು ಕರೆದಿದ್ದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು,  ಜಿಲ್ಲಾ ಪಂಚಾಯಿತಿಗಳ ಸಿಇಒಗಳ ಸಭೆಯಲ್ಲಿ ಅವರು ಮಾತನಾಡಿದರು.

ಅಧಿಕಾರಿಗಳು ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದರೆ ಶಾಸಕರಿಂದ ಬರುವ ಯಾವ ಒತ್ತಡಗಳಿಗೂ ಸೊಪ್ಪು ಹಾಕುವುದಿಲ್ಲ. ಅಧಿಕಾರಿಗಳಿಗೆ ನನ್ನ ಸಂಪೂರ್ಣ ಬೆಂಬಲ ಇರುತ್ತದೆ ಎಂದರು.

ಮುಖ್ಯ ಕಾರ್ಯದರ್ಶಿ ಅವರು ತಿಂಗಳಿಗೆ ಒಮ್ಮೆ ಒಂದು ಜಿಲ್ಲೆಗೆ ಹೋಗಿ ಅಲ್ಲಿನ ಪರಿಸ್ಥಿತಿ ತಿಳಿದುಕೊಳ್ಳಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗಳು ತಿಂಗಳಿಗೆ ಎರಡು ಬಾರಿ ಜಿಲ್ಲೆಗೆ ಭೇಟಿ ನೀಡಬೇಕು. ಕಾನೂನಿನ ನೆಪ ಹೇಳಿ ಜನರ ಕೆಲಸ ಮಾಡದೆ ಇರಬಾರದು. ಜನರ ಕೆಲಸ ಅವರು ಇರುವ ಸ್ಥಳದಲ್ಲೇ ಆಗುವಂತಿರಬೇಕು. ಹೀಗಿದ್ದಾಗ ಜನರು ತಮ್ಮ ಕೆಲಸಕ್ಕಾಗಿ ಜಿಲ್ಲಾ ಕೇಂದ್ರ, ಬೆಂಗಳೂರಿಗೆ ಅಲೆದಾಡುವುದು ತಪ್ಪುತ್ತದೆ. ಸರ್ಕಾರ ಇಂತಹ ಆಡಳಿತ ನಿರೀಕ್ಷಿಸುತ್ತದೆ ಎಂದು ಹೇಳಿದರು.

ಜಿಲ್ಲಾಧಿಕಾರಿಗಳು ಆಗಾಗ ಸರ್ಕಾರಿ ಹಾಸ್ಟೆಲ್ ಗಳಿಗೆ ತೆರಳಿ ಅಲ್ಲಿನ ಪರಿಸ್ಥಿತಿ ತಿಳಿದುಕೊಳ್ಳಬೇಕು ಎಂದು ಸೂಚಿಸಿದ ಯಡಿಯೂರಪ್ಪ ಅವರು‌,  ಮೃತ ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ತೆಗೆಯಬೇಕು ಎಂದರು.

ಶೇ 42ರಷ್ಟು ಮಳೆ ಕೊರತೆ

ರಾಜ್ಯದಲ್ಲಿ ಶೇ 42ರಷ್ಟು ಮಳೆ ಕೊರತೆ ಇದೆ. ಮುಂಗಾರು ಪ್ತವೇಶ ವಿಳಂಬವಾಗಿದೆ.  ಶೇ 18ರಷ್ಟು ಮುಂಗಾರು ಮಳೆ ಕೊರತೆ ಇದೆ. ಮಲೆನಾಡಿನಲ್ಲಿ ಶೇ 32ರಷ್ಟು ಮಳೆ ಕೊರತೆ ಇದೆ.  ಕಳೆದ ಹಿಂಗಾರಿನಲ್ಲಿ 156 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇತ್ತು. 11,384 ಕೋಟಿ ಬೆಳೆ ಹಾನಿ ಆಗಿದೆ. ಇಂತಹ ಸಥಿತಿಯಲ್ಲಿ ನೀರು ಪೂರೈಕೆ,  ಮೇವು ಪೂರೈಕೆಗೆ ವಿಶೇಷ ಗಮನ ಹರಿಸಬೇಕು ಎಂದು ಆಧಿಕಾರಿಗಳಿಗೆ ಸೂಚಿಸಿದರು.

Post Comments (+)