ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ದಾನಿಗಳ ನೆರವು

ಜಿಲ್ಲಾ ಸಮ್ಮೇಳನಾಧ್ಯಕ್ಷರಾಗಿ ಕಲ್ಕುಳಿ ವಿಠಲ ಹೆಗ್ಡೆ ಆಯ್ಕೆ; ಸರ್ಕಾರದ ಮುನಿಸು
Last Updated 7 ಜನವರಿ 2020, 19:45 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ ವಿವಾದವು ತಾರಕಕ್ಕೇರಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವು ಈಗ ಸಾಹಿತಿಗಳು, ಸಾಹಿತ್ಯಾಸಕ್ತರು, ದಾನಿಗಳ ನೆರವು ಪಡೆದು ಸಮ್ಮೇಳನ ಆಯೋಜನೆಗೆ ಮುಂದಾಗಿದೆ.

ಸಂಘಟಕರಿಂದ ಬ್ಯಾಂಕ್‌ ಖಾತೆ ವಿವರ ಪಡೆದು ಈಗಾಗಲೇ ಕೆಲವರು ಹಣ ಜಮೆ ಮಾಡಿದ್ದಾರೆ. ಕೆಲ ಸ್ಥಳೀಯರು, ದಾನಿಗಳು, ಸಾಹಿತಿಗಳು, ಸಾಹಿತ್ಯಾಸಕ್ತರೂ ನೆರವು ನೀಡಲು ಮುಂದಾಗಿದ್ದಾರೆ.

‘ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್‌, ಲೇಖಕ ಕೆ.ಪಿ. ಸುರೇಶ್‌ ಮೊದಲಾದವರು ನೆರವು ನೀಡುವುದಾಗಿ ಫೋನ್‌ನಲ್ಲಿ ತಿಳಿಸಿದ್ದಾರೆ. ಕೆಲವರು ಬ್ಯಾಂಕ್‌ ಖಾತೆ ವಿವರ ಪಡೆದುಕೊಂಡಿದ್ದಾರೆ. ಆರೇಳು ಲಕ್ಷ ಹಣದ ಮಿತಿಯಲ್ಲಿ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ’ ಎಂದು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಕುಂದೂರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಅನುಮತಿ ನೀಡುವಂತೆ ಪೊಲೀಸ್‌ ಇಲಾಖೆಗೆ ಕೋರಿದ್ದೇವೆ. ಇನ್ನು ಅನುಮತಿ ಸಿಕ್ಕಿಲ್ಲ. ವಿವಾದ ಬದಿಗಿಟ್ಟು ಕನ್ನಡದ ಕೆಲಸಕ್ಕೆ ಸ್ಪಂದಿಸುವ ಮನಸ್ಸು ತೋರಬೇಕು’ ಎಂದು ಕೋರಿದರು.

ಸಾಹಿತಿ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ‘ಫೇಸ್‌ಬುಕ್’ ಖಾತೆಯಲ್ಲಿ, ಚಿಕ್ಕಮಗಳೂರಿನ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಧನ ಸಹಾಯ ಮಾಡಲಿಚ್ಚಿಸುವವರು ...ಇಂಥ ಖಾತೆಗೆ ಹಣ ಕಳಿಸಬಹುದು ಎಂದು ಪೋಸ್ಟ್‌ ಹಾಕಿದ್ದಾರೆ.

ಬಿ.ಟಿ. ಲಲಿತಾ ನಾಯಕ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಸಮ್ಮೇಳನಕ್ಕೆ ಅನುದಾನ ಮಂಜೂರು ಮಾಡದಿರುವುದು ಅನ್ಯಾಯ. ಅನುದಾನ ತಡೆ ಹಿಡಿಯುವುದಕ್ಕೆ ಸಚಿವ ಸಿ.ಟಿ. ರವಿ ಅವರಿಗೆ ಹಕ್ಕಿಲ್ಲ. ಕಾರ್ಯಕಾರಿಣಿ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡಿರುತ್ತದೆ. ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ಅವರ ನಿಲುವೂ ಸರಿಯಿಲ್ಲ. ಸಮ್ಮೇಳನಕ್ಕೆ ನಾನೂ ಧನಸಹಾಯ ನೀಡುತ್ತೇನೆ’ ಎಂದರು.

ಸಾಂಸ್ಕೃತಿಕ ಸ್ವಾಯತ್ತೆಗೆ ದಕ್ಕೆ; ಅನುಚಿತ ನಡೆ

ಕಲ್ಕುಳಿ ವಿಠಲ ಹೆಗ್ಡೆ ಅವರ ಆಯ್ಕೆ ಕುರಿತು ಎದ್ದಿರುವ ವಿವಾದಕ್ಕೆ ಸಾಂಸ್ಕೃತಿಕ ಕಾರಣಗಳ ಬದಲು ಪ‍ಕ್ಷ ರಾಜಕಾರಣದ ಅನುಚಿತ ಮಧ್ಯಪ್ರವೇಶ ಕಾರಣವಾಗಿದೆ ಎಂದು ಸಾಹಿತಿಗಳಾದ ಚಂದ್ರಶೇಖರ ಪಾಟೀಲ ಮತ್ತು ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ಇದು ಕೇವಲ ಒಬ್ಬ ಅಧ್ಯಕ್ಷರ ಮತ್ತು ಒಂದು ಸಮ್ಮೇ ಳನದ ವಿಷಯವಾಗುವುದರ ಬದಲು ಸಾಂಸ್ಕೃತಿಕ ಸ್ವಾಯ ತ್ತತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಕಾರ್ಯಕಾರಿ ಸಮಿತಿಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಿದ ಕ್ರಮವನ್ನು ಸಂಬಂಧಿಸಿದ ವ್ಯಕ್ತಿಯ ಜೊತೆ ಭಿನ್ನಾಭಿಪ್ರಾಯಗಳಿದ್ದರೂ ಮಾನ್ಯ ಮಾಡುವುದು ಪ್ರಜಾಪ್ರಭುತ್ವ ನೈತಿಕತೆ ಎಂಬುದನ್ನು ಸಂಸ್ಕೃತಿ ಸಚಿವರು, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮನಗಾಣಬೇಕು. ಅದರ ಬದಲು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ಕೊಡಬೇಡಿ ಎಂದು ಸಚಿವರು ಸೂಚಿಸುವುದು, ಅದನ್ನು ಸಾಹಿತ್ಯ ಪರಿಷತ್‌ ಅಧ್ಯಕ್ಷರು ಮರುಮಾತಿಲ್ಲದೆ ಒಪ್ಪುವುದು ಸಾಂಸ್ಕೃತಿಕ ಸ್ವಾಯತ್ತತೆ ಮತ್ತು ಪ್ರಜಾಸತ್ತಾತ್ಮಕ ನೀತಿ ನಿಲುವುಗಳಿಗೆ ವಿರುದ್ಧವಾದ ನಡೆಯಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಾಡು ನುಡಿಗೆ ಬಗೆದ ದ್ರೋಹ

‘ತಮ್ಮ ಪಕ್ಷದ ರಾಜಕೀಯ ಸಿದ್ಧಾಂತ ಒಪ್ಪದಿರುವವರು ಅಧ್ಯಕ್ಷರಾಗಿರುವ ಕಾರಣಕ್ಕೆ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ನಿರಾಕರಿಸಿರುವ ಸಚಿವ ಸಿ.ಟಿ. ರವಿ ನಿರ್ಧಾರ ಕನ್ನಡ ನಾಡು–ನುಡಿಗೆ ಬಗೆದ ದ್ರೋಹ. ಕನ್ನಡ ಸಾಹಿತ್ಯ ಪರಿಷತ್ತಿನನ ಸ್ವಾಯತತ್ತೆಯನ್ನು ಗೌರವಿಸುವುದು ಸರ್ಕಾರದ ಕರ್ತವ್ಯ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

***

ನಕ್ಸಲ್‌ ಸಂಪರ್ಕ ಇದ್ದವರು ಸಾಹಿತ್ಯ ವೇದಿಕೆಯಲ್ಲಿ ಕೂರಲು ಅರ್ಹರಲ್ಲ. ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ನಾನು ಪಾಲ್ಗೊಳ್ಳುವುದಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಸ್ವಾಯತ್ತ ಸಂಸ್ಥೆಯಾಗಿದ್ದು, ಗೊಂದಲಕ್ಕೆ ಅವಕಾಶವಾಗದಂತೆ ಜಾಗ್ರತೆ ವಹಿಸಬೇಕು.
–ಶೋಭಾ ಕರಂದ್ಲಾಜೆ, ಸಂಸದೆ


ಕಲ್ಕುಳಿ ವಿಠಲ್ ಹೆಗ್ಡೆ ಅವರನ್ನು ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿರುವುದನ್ನು ನಕ್ಸಲ್ ವಿರೋಧಿ ಹೋರಾಟ ಸಮಿತಿ ವಿರೋಧಿಸುತ್ತದೆ. ಸಮಿತಿ ವತಿಯಿಂದ ಶೃಂಗೇರಿ ಚಲೋಗೆ ಕರೆ ನೀಡಲಾಗಿದ್ದು, ಅಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ.
–ಗಜೇಂದ್ರ ಗೊರಸುಕೊಡಿಗೆ, ಸಂಚಾಲಕ, ನಕ್ಸಲ್ ವಿರೋಧಿ ಹೋರಾಟ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT