ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನವಿಗೆ ಕಿವಿಗೊಡದ ‘ಕ್ಲಿನಿಕ್’ಗಳು

ವೈದ್ಯರಿಗೂ ಸೋಂಕಿನ ಭೀತಿ ಹಿನ್ನೆಲೆ l ಸಾಮಾನ್ಯ ಅನಾರೋಗ್ಯ ಸಮಸ್ಯೆಗಳಿಗೂ ಚಿಕಿತ್ಸೆ ಕಷ್ಟ
Last Updated 5 ಏಪ್ರಿಲ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಮುಚ್ಚಲ್ಪಟ್ಟಿರುವ ಕ್ಲಿನಿಕ್‌ಗಳನ್ನು ಪುನಃ ಆರಂಭಿಸಿ, ಜನರಿಗೆ ಸೇವೆ ನೀಡಬೇಕು ಎಂದು ಸರ್ಕಾರ ಮನವಿ ಮಾಡಿದರೂ ವೈದ್ಯರು ಮಾತ್ರ ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಹಿಂದೇಟು ಹಾಕುತ್ತಿದ್ದಾರೆ.

ಸೋಂಕಿತರಿಗೆ ಚಿಕಿತ್ಸೆ ನೀಡಲು 50 ಆಸ್ಪತ್ರೆಗಳನ್ನು ಕೋವಿಡ್‌–19 ಪ್ರಥಮ ಆದ್ಯತಾ ಆಸ್ಪತ್ರೆಗಳೆಂದು ಗುರುತಿಸಲಾಗಿದೆ. ವಿವಿಧ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿಯೂ ಪ್ರತ್ಯೇಕ ವಾರ್ಡ್‌ಗಳನ್ನು ನಿರ್ಮಿಸಿ, ಹಾಸಿಗೆಗಳನ್ನು ಮೀಸಲಿಡಲಾಗಿದೆ. ಕೊರೊನಾ ಹೊರತಾಗಿ ಉಳಿದ ಚಿಕಿತ್ಸೆಗಳು ತುರ್ತಾಗಿ ಅಗತ್ಯವಿದ್ದಲ್ಲಿ ಮಾತ್ರ ರೋಗಿಗಳನ್ನ ದಾಖಲಿಸಿಕೊಳ್ಳಲಾಗುತ್ತಿದೆ. ಕೆಲ ಆಸ್ಪತ್ರೆಗಳು ಈಗಾಗಲೇ ಹೊರರೋಗಿ ವಿಭಾಗಗಳನ್ನು ಸ್ಥಗಿತ ಮಾಡಿ, ಚಿಕಿತ್ಸೆ ಮುಂದೂಡುವಂತೆ ಮನವಿ ಮಾಡಿವೆ. ಕ್ಲಿನಿಕ್‌ಗಳು ಬಾಗಿಲು ಮುಚ್ಚಿರುವ ಪರಿಣಾಮ ಜ್ವರ, ಕೆಮ್ಮ ಸೇರಿದಂತೆ ಸಾಮಾನ್ಯ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಹಾಗೂ ವಯೋಸಹಜ ಕಾಯಿಲೆಗಳೆಗೆ ಒಳಗಾದವರು ಮನೆಯಲ್ಲಿಯೇ ಬಳಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 31 ಫಿವರ್ ಕ್ಲಿನಿಕ್‌ಗಳನ್ನು ಆರಂಭಿಸಿದರೂ ಜನತೆ ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ತಮಗೂ ಸೋಂಕು ತಗುಲಬಹುದೆಂಬ ಭಯವೇ ಇದಕ್ಕೆ ಮುಖ್ಯ ಕಾರಣ. ಇದರಿಂದಾಗಿ ಔಷಧಿ ಮಳಿಗೆಗಳಿಂದ ಮಾತ್ರೆಗಳನ್ನು ಪಡೆದು, ಚಿಕಿತ್ಸೆ ಮುಂದೂಡುತ್ತಿದ್ದಾರೆ. ವೈದ್ಯರು ಟೆಲಿ ಮೆಡಿಸಿನ್ ವ್ಯವಸ್ಥೆಯಡಿ ಸೇವೆ ಸಲ್ಲಿಸುತ್ತಿದ್ದರೂ ಜನತೆ ಆ ವ್ಯವಸ್ಥೆಗೆ ಸಮರ್ಪಕವಾಗಿ ಹೊಂದಿಕೊಳ್ಳದ ಪರಿಣಾಮ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದಂತಾಗಿದೆ.

ಟೆಲಿ ಮೆಡಿಸಿನ್ ವ್ಯವಸ್ಥೆ: ‘ಕ್ಲಿನಿಕ್‌ಗಳನ್ನು ನಡೆಸುತ್ತಿರುವ ಬಹುತೇಕರಿಗೆ ವಯಸ್ಸಾಗಿದೆ. ಅವರಿಗೂ ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳು ಇವೆ. ಇಂತಹವರು ಈ ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಅವರು ಕೂಡ ಮನುಷ್ಯರೇ ಆಗಿರುವುದರಿಂದ ಕೊರೊನಾ ಸೋಂಕಿನ ಭೀತಿ ಇರಲಿದೆ. ಇನ್ನುಳಿದ ವೈದ್ಯರು ಕ್ಲಿನಿಕ್‌ಗಳನ್ನು ಆರಂಭಿಸಿ, ಸೇವೆ ನೀಡುತ್ತಿದ್ದಾರೆ. ಅನಾರೋಗ್ಯ ಸಮಸ್ಯೆಗೆ ಒಳಗಾದವರೂ ಸಾರಿಗೆ ಸೇರಿದಂತೆ ವಿವಿಧ ಸೌಲಭ್ಯಗಳು ಇಲ್ಲದ ಪರಿಣಾಮ ಬರುತ್ತಿಲ್ಲ’ ಎಂದು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಪ್ರಧಾನ ಕಾರ್ಯದರ್ಶಿ ಡಾ.ಎಸ್. ಶ್ರೀನಿವಾಸ್ ಅವರು ತಿಳಿಸಿದರು.

ಕ್ಲಿನಿಕ್‌ಗಳನ್ನು ಆರಂಭಿಸುವಂತೆ ನಮ್ಮ ಸದಸ್ಯರಿಗೆ ಸುತ್ತೋಲೆ ಹೊರಡಿಸಿದ್ದೇವೆ. ಬಹುತೇಕರು ಕ್ಲಿನಿಕ್‌ಗಳನ್ನು ಆರಂಭಿಸಿದ್ದಾರೆ. 60 ವರ್ಷ ಮೇಲ್ಪಟ್ಟ ಕೆಲ ವೈದ್ಯರು ಹಿಂದೇಟು ಹಾಕುತ್ತಿದ್ದಾರೆ

- ಡಾ.ಎಸ್. ಶ್ರೀನಿವಾಸ್,ಐಎಂಎ ಪ್ರಧಾನ ಕಾರ್ಯದರ್ಶಿ

‘ಸುರಕ್ಷಾ ಸಾಧನದೊಂದಿಗೆ ಸೇವೆ ಕಷ್ಟ’

‘ದಿನವಿಡೀ ಮುಖಗವಸು, ಕೈಗವಸು ಮುಂತಾದ ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪ್‌ಮೆಂಟ್ (ಪಿಪಿಇ) ಧರಿಸಿ, ಸೇವೆ ನೀಡಲು ಸಾಧ್ಯವಿಲ್ಲ. ಅದನ್ನು ಧರಿಸದಿದ್ದರೆ ನಮಗೂ ಸೋಂಕು ತಗಲುವ ಆತಂಕ ಇರುತ್ತದೆ. ಇದರಿಂದಾಗಿ ಸೇವೆ ನೀಡುವುದು ಕಷ್ಟವಾಗಿದೆ’ ಎಂದು ಕ್ಲಿನಿಕ್‌ ಒಂದರ ವೈದ್ಯರು ತಿಳಿಸಿದರು.

‘ಚಿಕಿತ್ಸೆಗೆ ಬರುವವರಲ್ಲಿ ಕೆಲವರು ತಮ್ಮ ಪ್ರಯಾಣದ ಇತಿಹಾಸವನ್ನು ಬಹಿರಂಗಪಡಿಸುವುದಿಲ್ಲ. ಒಂದು ವೇಳೆ ಯಾರಿಗಾದರೂ ಸೋಂಕು ಇದ್ದಲ್ಲಿ ಅದು ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಇರುತ್ತದೆ’ ಎಂದರು.

‘ಖಾಸಗಿ ಆಸ್ಪತ್ರೆ ಬಂದ್‌ ಮಾಡಿದರೆ ಪರವಾನಗಿ ರದ್ದು’

ರಾಯಚೂರು: ‘ಲಾಕ್‌ಡೌನ್‌ ಅವಧಿಯಲ್ಲಿ ಖಾಸಗಿ ಆಸ್ಪತ್ರೆಗಳು ಬಂದ್‌ ಆಗಿರುವುದು ಕಂಡು ಬಂದಲ್ಲಿ, ಅವುಗಳ ಪರವಾನಗಿ ರದ್ದುಪಡಿಸಲಾಗುವುದು’ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.

‘ಖಾಸಗಿ ಆಸ್ಪತ್ರೆಗಳು ತೆರೆದಿರಬೇಕು ಮತ್ತು ವೈದ್ಯರು ಎಂದಿನಂತೆ ಕಾರ್ಯ ನಿರ್ವಹಿಸಬೇಕು. ಸೇವೆ ಬಂದ್‌ ಮಾಡಿದ್ದಲ್ಲಿ ಪ್ರಕರಣ ದಾಖಲಿಸಿ, ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳ್ಳುವಂತೆ ಆಯಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT