ಮಂಗಳವಾರ, ಆಗಸ್ಟ್ 3, 2021
28 °C
ಪರಿಹಾರ ಮೊತ್ತ ಸೇರಿ ₹8 ಸಾವಿರ ಕೋಟಿ ಬೊಕ್ಕಸಕ್ಕೆ

ನಕಲಿ ಇ-ವೇ ಬಿಲ್ ಪತ್ತೆ ಹಚ್ಚಿ ದಂಡ ವಿಧಿಸಿ: ಸಿ.ಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಇ-ವೇ ಬಿಲ್ ದುರ್ಬಳಕೆ ಪತ್ತೆ ಹಚ್ಚಿ ದಂಡ ವಿಧಿಸಬೇಕು. ಜೊತೆಗೆ, ಅಕ್ರಮವಾಗಿ ಸರಕು ಸಾಗಿಸುವ ಸಾರಿಗೆ ಕಂಪನಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದರು.

ಅಲ್ಲದೆ, ₹ 40 ಲಕ್ಷಕ್ಕೂ ಹೆಚ್ಚಿನ ವ್ಯವಹಾರ ನಡೆಸುವ ಡೀಲರುಗಳು ಮತ್ತು ದೊಡ್ಡ ನಗರಗಳಲ್ಲಿ ತಿಂಗಳಿಗೆ ₹ 20 ಲಕ್ಷಕ್ಕೂ ಹೆಚ್ಚು ಬಾಡಿಗೆ ಸಂಗ್ರಹಿಸುವ ವಾಣಿಜ್ಯ ಸಂಕೀರ್ಣಗಳ ಸಮೀಕ್ಷೆ ನಡೆಸುವಂತೆಯೂ ಅವರು ನಿರ್ದೇಶನ ನೀಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ, ರಾಜ್ಯದ ತೆರಿಗೆ ಸಂಗ್ರಹ ಸ್ಥಿತಿಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

‘ನಕಲಿ ಇ-ವೇ ಬಿಲ್ ಗಳ ಬಳಕೆ, ಸರಕು ಸಾಗಿಸಲು ಸಮಯಾವಕಾಶದ ದುರ್ಬಳಕೆ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳುವ ಉದ್ದೇಶದಿಂದ ರಸ್ತೆ ಜಾಗೃತ ತಂಡಗಳನ್ನು 77ರಿಂದ 116ಕ್ಕೆ ಹೆಚ್ಚಿಸಲಾಗಿದೆ. ಈ ತಂಡಗಳು 2.89 ಲಕ್ಷ ಸರಕು ವಾಹನಗಳು ಹಾಗೂ 7.46 ಲಕ್ಷ ಇ-ವೇ ಬಿಲ್‌ ಪರಿಶೀಲಿಸಿ, ಸುಮಾರು 300 ಅಕ್ರಮಗಳನ್ನು ಪತ್ತೆ ಮಾಡಿವೆ. ತೆರಿಗೆ ಮತ್ತು ದಂಡ ಸೇರಿ ಒಟ್ಟು ₹ 6.21 ಕೋಟಿ ಸಂಗ್ರಹಿಸಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಕೇಂದ್ರದಿಂದ 2019-20ನೇ ಸಾಲಿನ ಡಿಸೆಂಬರ್‌ನಿಂದ ಫೆಬ್ರುವರಿ ತಿಂಗಳವರೆಗಿನ ಜಿಎಸ್‌ಟಿ (ಸರಕು ಸೇವಾ ತೆರಿಗೆ) ಪರಿಹಾರ ಮೊತ್ತ ₹ 4314.13 ಕೋಟಿ ಬಿಡುಗಡೆಯಾಗಿದೆ. ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಸಂಗ್ರಹದಲ್ಲಿಯೂ ಏರಿಕೆ ಉಂಟಾಗಿದೆ’ ಎಂದೂ ಅಧಿಕಾರಿಗಳು ಮಾಹಿತಿ ನೀಡಿದರು.

‘ಪ್ರಸಕ್ತ ಸಾಲಿನಲ್ಲಿ (2020–21) ಏಪ್ರಿಲ್‌ನಿಂದ ಈವರೆಗೆ ಪರಿಹಾರ ಮೊತ್ತವೂ ಸೇರಿ ಈವರೆಗೆ ₹ 8,000 ಕೋಟಿ ತೆರಿಗೆ ಸಂಗ್ರಹವಾಗಿದೆ’ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತ ಎಂ.ಎಸ್‌. ಶ್ರೀಕರ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು