ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಭೇಟಿ ಮಾಡಿದ ಸಿಎಂ: ಬರ ಪರಿಹಾರ, ನರೇಗಾ ಬಾಕಿ ಅನುದಾನ ಬಿಡುಗಡೆಗೆ ಮನವಿ

Last Updated 9 ಮಾರ್ಚ್ 2019, 7:39 IST
ಅಕ್ಷರ ಗಾತ್ರ

ನವದೆಹಲಿ:ಪ್ರಕೃತಿ ವಿಕೋಪ ಪರಿಹಾರ ಹಾಗೂ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬಾಕಿ ಇರುವ ವೇತನ ಮತ್ತು ಸಾಮಗ್ರಿ ವೆಚ್ಚದ ಅನುದಾನವನ್ನು ರಾಜ್ಯಕ್ಕೆ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಧಾನ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು.

ಶನಿವಾರ ಪ್ರಧಾನಿಯನ್ನು ಭೇಟಿ ಮಾಡಿದ ಸಿಎಂ, ರಾಜ್ಯವು 2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರವಾಹ, ಭೂಕುಸಿತ ಪರಿಸ್ಥಿತಿ ಹಾಗೂ ಬರ ಪರಿಸ್ಥಿತಿಗಳೆರಡನ್ನೂ ಎದುರಿಸಿದೆ. ಕೊಡಗು ಮತ್ತು ಸಮೀಪದ ಮಲೆನಾಡು ಜಿಲ್ಲೆಗಳು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ಭೂ ಕುಸಿತದಿಂದ ತೀವ್ರ ಹಾನಿ ಸಂಭವಿಸಿದರೆ, ಇತರ ಭಾಗಗಳಲ್ಲಿ ಅಂದರೆ ರಾಜ್ಯದ 100 ತಾಲ್ಲೂಕುಗಳಲ್ಲಿ ಮಳೆಯಿಲ್ಲದೆ ಬರ ಪರಿಸ್ಥಿತಿ ತಲೆದೋರಿತ್ತು. ಇದಕ್ಕೆ ಎಸ್‍ಡಿಆರ್‍ಎಫ್, ಎನ್‍ಡಿಆರ್‍ಎಫ್ ಮಾರ್ಗಸೂಚಿಗಳ ಪ್ರಕಾರ ₹ 2434 ಕೋಟಿ ಪರಿಹಾರ ಒದಗಿಸುವಂತೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿದ್ದರೂ ಕೇಂದ್ರ ಸರ್ಕಾರ ಈ ಮೊತ್ತದ ಕೇವಲ ಶೇ.50ಕ್ಕೂ ಕಡಿಮೆ ಅಂದರೆ 949.49 ಕೋಟಿ ರೂ. ಪರಿಹಾರ ಮಂಜೂರು ಮಾಡಿದೆ ಎಂದು ವಿವರಿಸಿದರು.

ಹಿಂಗಾರಿನ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆ 188 ಮಿಮಿ ಮಳೆಯಾಗಬೇಕಾಗಿದ್ದು, ಕೇವಲ 96 ಮಿ.ಮೀ. ಮಳೆ ಬಿದ್ದಿದೆ. ಉತ್ತರ ಒಳನಾಡಿನಲ್ಲಿ ಶೇ.66ರಷ್ಟು ಮಳೆ ಕೊರತೆ ಉಂಟಾಗಿತ್ತು. ರಾಜ್ಯದ 176 ತಾಲ್ಲೂಕುಗಳಲ್ಲಿ 156 ತಾಲ್ಲೂಕುಗಳು ಬರಪೀಡಿತವೆಂದು ಘೋಷಿಸಲಾಗಿದೆ. ಇದರಲ್ಲಿ 107 ತಾಲ್ಲೂಕುಗಳನ್ನು ತೀವ್ರ ಬರಪೀಡಿತ ಹಾಗೂ 49 ತಾಲ್ಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ಗುರುತಿಸಲಾಗಿದೆ. ಹಿಂಗಾರು ಅವಧಿಯಲ್ಲಿ 11,384.47 ಕೋಟಿ ರೂ. ಮೌಲ್ಯದ ಬೆಳೆ ನಷ್ಟ ಉಂಟಾಗಿದೆ ಎಂದು ಪ್ರದಾನಿಗೆ ಮನವರಿಕೆ ಮಾಡಿದರು.

ಮುಂಗಾರು ಮತ್ತು ಹಿಂಗಾರು ಹಂಗಾಮುಗಳೆರಡರಲ್ಲಿಯೂ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಸಂಭವಿಸಿದ ನಷ್ಟು ₹ 32,335 ಕೋಟಿ ಗಳಷ್ಟಾಗಿದ್ದು, ರಾಜ್ಯದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ವಹಣೆಗೆ ರಾಜ್ಯ ಸರ್ಕಾರ ತ್ವರಿತ ಕ್ರಮಗಳನ್ನು ತೆಗೆದುಕೊಂಡಿದ್ದು, ಎಸ್‍ಡಿಆರ್‍ಎಫ್ ನಿಧಿಯಲ್ಲದೆ ರಾಜ್ಯ ಸರ್ಕಾರದಿಂದ ₹ 386 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಕುಡಿಯುವ ನೀರು, ಮೇವು ಒದಗಿಸುವ ಜತೆಗೆ ಜನರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ 8.18 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ. ಇದಕ್ಕಾಗಿ ಬಾಕಿ ಉಳಿದಿರುವ ₹ 1351 ಕೋಟಿ ವೇತನ ಹಾಗೂ ಸಾಮಗ್ರಿ ವೆಚ್ಚದ ಕೇಂದ್ರದ ಪಾಲನ್ನೂ, ಕೇಂದ್ರದಿಂದ ಅನುದಾನ ಬಿಡುಗಡೆಯನ್ನು ನಿರೀಕ್ಷಿಸಿ ರಾಜ್ಯ ಸರ್ಕಾರವೇ ಬಿಡುಗಡೆ ಮಾಡಿದೆ. ಆದ್ದರಿಂದ ಈ ಬಾಕಿ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಪ್ರಧಾನಿಯನ್ನು ಒತ್ತಾಯಿಸಿದರು.

ಇದಲ್ಲದೆ ಈಗಾಗಲೇ ಭಾರತ ಸರ್ಕಾರಕ್ಕೆ ರಾಜ್ಯವು ಪ್ರಸ್ತಾವನೆ ಸಲ್ಲಿಸಿರುವಂತೆ ಬರ ಪರಿಹಾರ ಹಾಗೂ ನಿರ್ವಹಣೆಗೆ ಎಸ್‍ಡಿಆರ್‍ಎಫ್, ಎನ್‍ಡಿಆರ್‍ಎಫ್ ಮಾರ್ಗಸೂಚಿಯನ್ವಯ ಅಗತ್ಯವಿರುವ ₹ 2064.30 ಕೋಟಿಗಳ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವಂತೆ ಪ್ರಧಾನಿಗೆ ಮನವಿ ಸಲ್ಲಿಸಿದರು.

ಸತತ ಬರಗಾಲ, ಅನಿಶ್ಚಿತ ಮಳೆಯ ಪರಿಣಾಮವಾಗಿ ಸಂಕಷ್ಟಕ್ಕೊಳಗಾಗಿರುವ ರೈತರ ನೆರವಿಗೆ ಸರ್ಕಾರಗಳು ಧಾವಿಸಬೇಕಾದ್ದು ಅತಿ ಅಗತ್ಯವಾದ್ದರಿಂದ ಕೂಡಲೇ ಈ ಅನುದಾನ ಬಿಡುಗಡೆ ಮಾಡುವಂತೆ ಅವರು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT