ಭಾನುವಾರ, ಆಗಸ್ಟ್ 25, 2019
24 °C
ಪ್ರಧಾನಿ ಮೋದಿ ಕನಸಿಗೆ ಪೂರಕವಾಗಿ ಹೆಚ್ಚುವರಿ ಮನೆ l ರಾಜ್ಯದಲ್ಲಿ ಬೆಳೆ ಸಮೀಕ್ಷೆ

ಹೆಚ್ಚುವರಿ 1 ಲಕ್ಷ ಮನೆಗಳ ನಿರ್ಮಾಣ

Published:
Updated:
Prajavani

ಬೆಂಗಳೂರು: ಸೂರಿಲ್ಲದ ಪ್ರತಿ ಕುಟುಂಬಕ್ಕೂ ಮನೆ ಕಟ್ಟಿಸಿಕೊಡಬೇಕು ಎಂಬ ಪ್ರಧಾನಿ ಮೋದಿಯವರ ಕನಸಿಗೆ ಪೂರಕವಾಗಿ ರಾಜ್ಯದಲ್ಲಿ ಹೆಚ್ಚುವರಿಯಾಗಿ 1 ಲಕ್ಷ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಸಿ.ಎಂ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ವಿಧಾನಸೌಧದಲ್ಲಿ ಗುರುವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಸಭೆ ನಡೆಸಿ, ಮುಂದಿನ ಮೂರು–ನಾಲ್ಕು ವರ್ಷಗಳಲ್ಲಿ ಎಲ್ಲ ಬಡವರಿಗೂ ಮನೆಗಳನ್ನು ನಿರ್ಮಿಸಿಕೊಡಲು ಸಂಕಲ್ಪ ಮಾಡಿದ್ದೇವೆ ಎಂದರು.

ಈಗಾಗಲೇ ಒಂದು ಲಕ್ಷ ಮನೆಗಳ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗಿದೆ. ಇನ್ನೂ ಒಂದು ಲಕ್ಷ ಮನೆಗಳು ಸೇರಿ ಒಟ್ಟು ಎರಡು ಲಕ್ಷ ಮನೆಗಳನ್ನು ನಿರ್ಮಿಸಲಾಗುವುದು. ಇದಕ್ಕಾಗಿ ರಾಜ್ಯದಲ್ಲಿ ಒಂದು ಸಾವಿರ ಎಕರೆ ಭೂಮಿಯನ್ನು ಗುರುತಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ಬೆಳೆ ಸಮೀಕ್ಷೆ: ರಾಜ್ಯದಲ್ಲಿ ಮಳೆಯ ಕೊರತೆ ಮತ್ತು ಬರದಿಂದಾಗಿ ಬೆಳೆ ನಷ್ಟವಾಗಿರುವುದನ್ನು ಅಂದಾಜು ಮಾಡಲು ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ. ಇದಕ್ಕಾಗಿ ಗ್ರಾಮಾಂತರ ಪ್ರದೇಶದ ಯುವಕ– ಯುವತಿಯರನ್ನು ಬಳಸಿಕೊಳ್ಳಲಾಗಿದೆ. ಇದರಿಂದ ಬೆಳೆ ವಿಮೆಯ ಮೂಲಕ ಪರಿಹಾರ ನೀಡಲು ಸಹಾಯವಾಗುತ್ತದೆ ಎಂದು ಹೇಳಿದರು.

ಕರ್ತವ್ಯಕ್ಕೆ ತಡ ತರಾಟೆ ತೆಗೆದುಕೊಂಡ ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗುರುವಾರ ಬೆಳಿಗ್ಗೆ ವಿಧಾನಸೌಧದ ನೆಲಮಹಡಿಯಲ್ಲಿರುವ ಸ್ವೀಕೃತಿ ಮತ್ತು ರವಾನೆ ಶಾಖೆಗೆ ದಿಢೀರ್‌ ಭೇಟಿ ನೀಡಿ ಕಡಿಮೆ ಸಂಖ್ಯೆಯಲ್ಲಿದ್ದ ಸಿಬ್ಬಂದಿಗೆ ಅಚ್ಚರಿ ಮೂಡಿಸಿದರು.

ಬೆಳಿಗ್ಗೆ 10.45 ಆಗಿದ್ದರೂ ಬಹುತೇಕ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೇ ಇರುವುದಕ್ಕೆ ಅವರು ತರಾಟೆ ತೆಗೆದುಕೊಂಡರು.

‘ಇನ್ನು ಮುಂದೆ ಯಾರೇ ತಡವಾಗಿ ಬಂದರೂ ಸಹಿಸಲು ಸಾಧ್ಯವಿಲ್ಲ. ಅಶಿಸ್ತಿನಿಂದ ವರ್ತಿಸುವವರ ವಿರುದ್ಧ ಶಿಸ್ತು ಕ್ತಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ’ ಎಂದೂ ಯಡಿಯೂರಪ್ಪ ಹೇಳಿದರು.

ಈ ಹಿಂದಿನ ಸರ್ಕಾರಗಳಲ್ಲಿ ಮುಖ್ಯಮಂತ್ರಿಯಿಂದ ಹಿಡಿದು ಬಹುತೇಕ ಎಲ್ಲ ಸಚಿವರು ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡುವುದು ಅಪರೂಪವಾಗಿತ್ತು. ಇದರಿಂದ ವಿಧಾನಸೌಧದ ಸಚಿವಾಲಯದಲ್ಲಿ ಸಿಬ್ಬಂದಿ ಮುತುವರ್ಜಿ ವಹಿಸಿ ಕೆಲಸ ಮಾಡುವುದು ಕಡಿಮೆ ಆಗಿದೆ. ಕೆಲವರು ತಡವಾಗಿ ಬಂದರೆ, ಇನ್ನು ಕೆಲವರು ಬಯೋಮೆಟ್ರಿಕ್‌ ಹಾಜರಿ ಹಾಕಿ, ಕೆಲಸ ಮಾಡದೇ ಬೇರೆಡೆ ಹೋಗುತ್ತಿದ್ದರು ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಎಲ್ಲ ಸಚಿವರು ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡಿದರೆ, ಸಿಬ್ಬಂದಿಯಲ್ಲೂ ಶಿಸ್ತು ಮೂಡುತ್ತದೆ. ತಮ್ಮ ಮನೆಗಳಲ್ಲಿ ಕೆಲಸ ಮಾಡಿದರೆ, ಆಡಳಿತದಲ್ಲಿ ಬಿಗಿ ಇರುವುದಿಲ್ಲ ಎಂದು ಸಿಬ್ಬಂದಿಯೊಬ್ಬರು ಹೇಳಿದರು.

ಋಣ ಪರಿಹಾರ ಕಾಯ್ದೆ ಜಾರಿಗೆ ಕ್ರಮ
ರಾಷ್ಟ್ರಪತಿಯವರ ಅಂಕಿತ ಪಡೆದಿರುವ ಋಣ ಪರಿಹಾರ ಕಾಯ್ದೆಯ ಜಾರಿ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಧಿಕಾರಿಗಳ ಜತೆ ಸಭೆ ನಡೆಸಿದರು.

ಕಾಯ್ದೆಯ ಕಡತವನ್ನು ತರಿಸಿಕೊಂಡು ಯಾರಿಗೆಲ್ಲ ಕಾಯ್ದೆ ಅನ್ವಯವಾಗುತ್ತದೆ ಮತ್ತು ಜನರಿಗೆ ಮಾಹಿತಿ ನೀಡುವ ಸಂಬಂಧ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿ ಪಡೆದಿರುವುದಾಗಿ ಯಡಿಯೂರಪ್ಪ ತಿಳಿಸಿದರು.

Post Comments (+)