ಬುಧವಾರ, ಜನವರಿ 22, 2020
28 °C
ಕರಾವಳಿ ಜನರ ಗೋಳು l ಮುಂಗಾರಿನಲ್ಲಿ ತಪ್ಪದ ಕಣ್ಣೀರು l ಕೋಟಿ ಕೋಟಿ ಲೂಟಿ

ಒಳನೋಟ| ಪ್ರತಿವರ್ಷ ಕಡಲಿಗೆ ಕಲ್ಲು..!

ಪ್ರಕಾಶ ಕುಗ್ವೆ Updated:

ಅಕ್ಷರ ಗಾತ್ರ : | |

prajavani

ಮಂಗಳೂರು: ಕಡಲ್ಕೊರೆತ ಪ್ರಕೃತಿ ಸಹಜ ಪ್ರಕ್ರಿಯೆ. ಇದು ಮೀನುಗಾರರಿಗೆ ದುಃಖ, ಜನಪ್ರತಿನಿಧಿಗಳಿಗೆ ಖುಷಿ. ಮನೆ, ಮಠ ಕಳೆದುಕೊಳ್ಳುವ ಆತಂಕ ಮೀನುಗಾರರದ್ದು, ತಮ್ಮ ಹಿಂಬಾಲಕ ಗುತ್ತಿಗೆದಾರರಿಗೆ ‘ಕಲ್ಲು ಹಾಕುವ’ ಕೆಲಸ ಕೊಟ್ಟು, ಪಾಲು ಪಡೆದುಕೊಳ್ಳುವ ತವಕ ರಾಜಕಾರಣಿಗಳದ್ದು.

ಕಡಲಿಗೆ ಗೋಡೆ ಕಟ್ಟುವ ಕಥೆಗಳಿಗೆ ಕೊನೆ ಮೊದಲೆಂಬುದಿಲ್ಲ. ಪ್ರತಿ ಮಳೆಗಾಲದಲ್ಲೂ ಕಡಲತೀರದ ಜನರು ಕೂಗು ಎಬ್ಬಿಸುತ್ತಾರೆ. ಇದೇ ಕೂಗಿಗೆ ಕಾದು ಕುಳಿತವರಂತೆ ಜನಪ್ರತಿನಿಧಿಗಳು ಅವರ ಬಳಿಗೆ ಓಡೋಡಿ ಹೋಗುತ್ತಾರೆ. ತಾತ್ಕಾಲಿಕ ಕ್ರಮಗಳು ಆರಂಭವಾಗುತ್ತವೆ. ಒಂದಿಷ್ಟು ಬಂಡೆ ಕಲ್ಲುಗಳ ರಾಶಿ ಕಡಲಿಗೆ ಸುರಿದು ತಡೆಗೋಡೆ ಎನ್ನುತ್ತಾರೆ. ಕ್ಷಣಮಾತ್ರದಲ್ಲಿ ತಡೆಗೋಡೆ ಕಡಲ ಒಡಲ ಸೇರಿಕೊಳ್ಳುತ್ತದೆ. ಇದರಾಚೆ ಶಾಶ್ವತ ಪರಿಹಾರ ಕ್ರಮಗಳು ಮರೀಚಿಕೆಯಾಗಿಯೇ ಉಳಿದಿವೆ.

ಇದನ್ನೂ ಓದಿ: ಒಳನೋಟ| ‘ತೀರ’ದ ಬವಣೆ...

ಕಲ್ಲು ಹಾಕುವುದು ಹೇಗೆ?: ಪ್ರಾಕೃತಿಕ ವಿಕೋಪ ಪರಿಹಾರ ಕಾರ್ಯಾಚರಣೆಯಡಿ ಸಮುದ್ರಕ್ಕೆ ಕಲ್ಲು ಹಾಕಲಾಗುತ್ತದೆ. ಹಾಗಾಗಿ, ಇದಕ್ಕೆ ಟೆಂಡರ್ ಕರೆಯುವುದು ಕಡಿಮೆ. ರಾಜಕೀಯ ನಾಯಕರ ಆಪ್ತರಿಗೆ ಕಲ್ಲು ಹಾಕುವ ಗುತ್ತಿಗೆ ಸಿಗುತ್ತದೆ. ಇನ್ನು ಕೆಲವು ಗುತ್ತಿಗೆದಾರರಂತೂ 1 ಲೋಡ್ ಕಲ್ಲು ಸುರಿದು 10 ಲೋಡ್ ಲೆಕ್ಕ ತೋರಿಸಿದ್ದೂ ಇದೆ. ಹಾಕಿದ ಕಲ್ಲುಗಳು ಕೆಲವೇ ದಿನಗಳಲ್ಲಿ ಸಮುದ್ರದ ಒಡಲು ಸೇರುವುದರಿಂದ ಅಲ್ಲಿಗೆ ಕಾರ್ಯಾಚರಣೆ ಸಮಾಪ್ತಿಗೊಳ್ಳುತ್ತದೆ.

ಸರ್ಕಾರಗಳು ಬದಲಾದಂತೆ ಕಡಲ್ಕೊರೆತ ತಡೆ ಕಾರ್ಯತಂತ್ರಗಳೂ ಬದಲಾಗುತ್ತಲೇ ಬಂದಿವೆ. ಕಾಂಕ್ರೀಟ್‌ ತಡೆಗೋಡೆ, ಕಲ್ಲು, ಮರಳು ಚೀಲಗಳನ್ನು ಹಾಕುವುದಂತೂ ದಶಕಗಳಿಂದಲೂ ನಡೆದಿದೆ. ಭರಪೂರ ಭರವಸೆಗಳು ಹರಿದಿವೆ. ಲೆಕ್ಕವಿಲ್ಲದಷ್ಟು ಸಮೀಕ್ಷೆಗಳು ಆಗಿವೆ. ಸುರಿದ ಅನುದಾನಕ್ಕೆ ಲೆಕ್ಕವಿಲ್ಲ. ತಂತ್ರಜ್ಞಾನದ ಹೆಸರಿನಲ್ಲಿ ಸಚಿವರು, ಶಾಸಕರು ನಾನಾ ದೇಶಗಳ ಪ್ರವಾಸ ತಿರುಗಿದ್ದಾರೆ. ಈಗ ಡೆನ್ಮಾರ್ಕ್‌, ಸ್ವಿಸ್‌ ತಂತ್ರಜ್ಞಾನದ ಹೊಸ ಕಥೆಗಳೂ ಕೇಳಿ ಬರುತ್ತಿವೆ.

ಇದನ್ನೂ ಓದಿ: ಒಳನೋಟ| ಅಲೆಗಳ ಉಬ್ಬರ ತಡೆದರೆ ಕಡಲ್ಕೊರೆತ ನಿವಾರಣೆ

ಕಡಲ್ಕೊರೆತದ ಶಾಶ್ವತ ಪರಿಹಾರಕ್ಕಾಗಿ ಹಲವು ಹೋರಾಟಗಳು ನಡೆದಿವೆ. ಹೋರಾಟ ಸಮಿತಿಯೂ ರಚನೆಯಾಗಿತ್ತು. ಈ ಸಮಿತಿ ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳನ್ನು ಭೇಟಿ ಮಾಡಿ ಸತತ ಮನವಿ ಸಲ್ಲಿಸುತ್ತಲೇ ಬಂದ ಪರಿಣಾಮ ಬ್ರೇಕ್ ವಾಟರ್ ಮಾದರಿಗಳು ಅಲ್ಲಲ್ಲಿ ನಿರ್ಮಾಣಗೊಂಡಿವೆ.

ತಜ್ಞರಲ್ಲೂ ಅಜ್ಞಾನ!: ‘ನಾವು ಒಂದು ದಿಕ್ಕಿಗೆ ಕಲ್ಲು ಹಾಕಲು ಹೇಳಿದರೆ ಅವರು ಇನ್ನೊಂದು ದಿಕ್ಕಿಗೆ ಹಾಕುತ್ತಾರೆ. ನಾವು ಎಂಟು ಮೀಟರ್ ಎತ್ತರಕ್ಕೆ ಅಲೆಗಳು ಅಪ್ಪಳಿಸುತ್ತವೆ ಎಂದರೆ ಅವರು ನಾಲ್ಕು ಮೀಟರ್ ಕಲ್ಲು ಹಾಕಿದರೆ ಸಾಕು ಎನ್ನುತ್ತಾರೆ. ನಾವು ಪ್ರತಿನಿತ್ಯ ಸಮುದ್ರದಲ್ಲೇ ಇರುವ ಜನ, ಅಲ್ಲಿನ ಸಣ್ಣ ಚಲನೆಯೂ ನಮಗೆ ಅರ್ಥವಾಗುತ್ತದೆ. ಇದನ್ನು ಸರ್ಕಾರದ ಇಲಾಖೆಗಳ ತಜ್ಞರಿಗೆ ಅರ್ಥ ಮಾಡಿಸುವುದು ಹೇಗೆ?’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಮರವಂತೆ ಮೀನುಗಾರರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಮೋಹನ ಖಾರ್ವಿ.

ಮರಳು ಗಣಿಗಾರಿಕೆಗೆ ನಂಟು: ‘ಕಡಲ್ಕೊರೆತ ಸಮಸ್ಯೆ ಕೆಲವು ವರ್ಷಗಳಿಂದೀಚಿಗೆ ತೀವ್ರಗೊಳ್ಳಲು ನದಿಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಮರಳು ಗಣಿಗಾರಿಕೆಯೇ ಮುಖ್ಯ ಕಾರಣ. ಮರಳು ಗಣಿಗಾರಿಕೆಯನ್ನು ನಿಲ್ಲಿಸಿ ಕಡಲ್ಕೊರೆತವನ್ನು ತಡೆಯಬೇಕೇ ಹೊರತು ಸಮುದ್ರ ಆರ್ಭಟಿಸಿ ನಂತರ ಕಲ್ಲು ಹಾಕಿದರೆ ಯಾವುದೇ ಪ್ರಯೋಜನ ಇಲ್ಲ. ಕನಿಷ್ಠ ಎರಡು ವರ್ಷ ನದಿಗಳಲ್ಲಿ ನಡೆಯುವ ಮರಳು ಗಣಿಗಾರಿಕೆಗೆ ನಿಷೇಧ ಹೇರಿದರೆ ಕಡಲ್ಕೊರೆತ  ನಿಲ್ಲುತ್ತದೆ’ ಎಂಬುದು ಪರಿಸರ ತಜ್ಞರ ಅಭಿಪ್ರಾಯ.

ಸಮುದ್ರದ ಅಂಚಿನವರೆಗೂ ನಗರಗಳು ಬೆಳೆದಿರುವುದರಿಂದಲೂ ಕಡಲ್ಕೊರೆತ ನಿರಂತರವಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ತೀರಗಳಲ್ಲಿ ಜನವಸತಿ ಅಧಿಕ ಇರುವುದರಿಂದ ಅವುಗಳನ್ನು ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಅದರಲ್ಲೂ ದಕ್ಷಿಣ ಕನ್ನಡದ ಉಳ್ಳಾಲವನ್ನು ಕರ್ನಾಟಕದಲ್ಲೇ ಅತ್ಯಂತ ಅಪಾಯದಲ್ಲಿರುವ ತೀರ ಎಂದು ಕೇಂದ್ರ ಜಲ ನಿಗಮ ಗುರುತಿಸಿದೆ.

ಇದನ್ನೂ ಓದಿ: 

‘ಉಳ್ಳಾಲದಲ್ಲಿ ಬ್ರೇಕ್ ವಾಟರ್ ನಿರ್ಮಾಣಗೊಂಡಿದೆ. ಹಾಗಾಗಿ, ಈ ಮಳೆಗಾಲದಲ್ಲಿ ಭೀಕರ ಪರಿಣಾಮ ಎದುರಾಗಿಲ್ಲ. ಆದರೆ, ಅನತಿ ದೂರದ ಸೋಮೇಶ್ವರ, ಉಚ್ಚಿಲ ಭಾಗಗಳಲ್ಲಿ ಈ ವರ್ಷ ಕಲಡ್ಕೊರೆತ ಕಾಣಿಸಿಕೊಂಡಿದೆ’ ಎನ್ನುತ್ತಾರೆ ಮೀನುಗಾರರು. ‘ಬ್ರೇಕ್ ವಾಟರ್ ಕೂಡ ಈಗ ನಮಗೆ ಶಾಶ್ವತ ಪರಿಹಾರ ಕ್ರಮವಾಗಿ ಕಾಣುತ್ತಿಲ್ಲ. ಮುಂದೇನು ಎಂಬುದನ್ನು ಸರ್ಕಾರವೇ ಹೇಳಬೇಕು’ ಎಂಬ ಮನವಿ ಮೀನುಗಾರರದ್ದು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು