ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೈ ಮಹದೇಶ್ವರಸ್ವಾಮಿ ರಥಕ್ಕೆ ನಾಣ್ಯ,ಧಾನ್ಯ ಎಸೆಯುವಂತಿಲ್ಲ: ಆಡಳಿತಾಧಿಕಾರಿ ಆದೇಶ

ಮಹದೇಶ್ವರ ಬೆಟ್ಟ: ನೂತನ ನಿಯಮ ಜಾರಿಗೊಳಿಸಿದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ
Last Updated 27 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ (ಚಾಮರಾಜನಗರ ಜಿಲ್ಲೆ): ಪ್ರಸಿದ್ಧ ಯಾತ್ರಾ ಸ್ಥಳವಾದ ಮಹದೇಶ್ವರ ಬೆಟ್ಟದಲ್ಲಿ ಪ್ರತಿ ದಿನ ರಾತ್ರಿ ಏಳು ಗಂಟೆಗೆ ನಡೆಯುವ ಚಿನ್ನದ ರಥೋತ್ಸವದ ಸಂದರ್ಭದಲ್ಲಿ, ಇನ್ನು ಮುಂದೆ ಭಕ್ತರು ತೇರಿಗೆ ನಾಣ್ಯ, ದವಸ ಧಾನ್ಯಗಳನ್ನು ಎಸೆಯುವಂತಿಲ್ಲ.

ಗುರುವಾರದಿಂದ ಜಾರಿಗೆ ಬರುವಂತೆ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಹೊಸ ನಿಯಮಗಳನ್ನು ರೂಪಿಸಿದೆ. ಹರಕೆ ರೂಪದಲ್ಲಿ ರಥಕ್ಕೆ ಎಸೆಯಲು ತರುವ ಧಾನ್ಯ ಹಾಗೂ ನಾಣ್ಯಗಳನ್ನು ಭಕ್ತರು ಇನ್ನು ಮುಂದೆ ನಿಗದಿತ ಸ್ಥಳದಲ್ಲಿಯೇ ಹಾಕಬೇಕು.

ಮೊದಲ ದಿನವೇ ಒಂದು ಕ್ವಿಂಟಲ್‌ನಷ್ಟು ದವಸ ಧಾನ್ಯ ಸಂಗ್ರಹವಾಗಿದೆ. ₹ 10 ಸಾವಿರದಷ್ಟು ಮೌಲ್ಯದ ನಾಣ್ಯ ಹಾಗೂ ನೋಟುಗಳು ಸಂಗ್ರಹವಾಗಿವೆ. ಧಾನ್ಯಗಳನ್ನು ದಾಸೋಹದ ಉದ್ದೇಶಕ್ಕೆ ಬಳಸಿದರೆ, ನಾಣ್ಯಗಳನ್ನು ಹುಂಡಿಗೆ ಹಾಕಲಾಗಿದೆ.

ಪ್ರತಿದಿನ ಚಿನ್ನದ ತೇರು ನೋಡುವುದಕ್ಕಾಗಿಯೇ ಬೆಟ್ಟಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ದೇವಸ್ಥಾನದ ಸುತ್ತ ತೇರು ಸಾಗುತ್ತಿರುವಾಗ ಭಕ್ತರು ತಮ್ಮ ಹೊಲಗದ್ದೆಯಲ್ಲಿ ಬೆಳೆದ ಬೆಳೆಯನ್ನು (ಅಕ್ಕಿ, ಹುರುಳಿ, ರಾಗಿ, ಬೇಳೆ, ಕಡಲೆಕಾಯಿ) ರಥದತ್ತ ಎಸೆದು ಹರಕೆ ತೀರಿಸುತ್ತಾರೆ. ಅದೇ ರೀತಿ ನಾಣ್ಯಗಳನ್ನು ಭಕ್ತಿಯಿಂದ ಎಸೆಯುವವರೂ ಇದ್ದಾರೆ. ಇನ್ನೂ ಕೆಲವರು ತಮ್ಮ ಮೊದಲ ಸಂಬಳವನ್ನು ಕಾಣಿಕೆ ರೂಪದಲ್ಲಿ ರಥಕ್ಕೆ ಅರ್ಪಿಸುತ್ತಾರೆ.

ಏನು ಕಾರಣ?: ‘ಎಸೆದ ನಾಣ್ಯಗಳನ್ನು ದೇವರ ಪ್ರಸಾದ ಎಂದು ನಂಬಿ ಅದನ್ನು ಹೆಕ್ಕುವುದಕ್ಕಾಗಿ ಮಹಿಳೆಯರು, ಮಕ್ಕಳೆ
ನ್ನದೆ ಭಕ್ತರು ಮುಗಿಬೀಳುತ್ತಾರೆ. ಇದರಿಂದ ಅನಾಹುತ ಸಂಭವಿಸುವ ಅಪಾಯ ಇದೆ. ಜೊತೆಗೆ ನೂಕುನುಗ್ಗಲು ಉಂಟಾಗುತ್ತದೆ. ರಥದ ಸಂಚಾರಕ್ಕೂ ತಡೆಯಾಗುತ್ತದೆ. ಅಕ್ಕಿ, ಬೇಳೆಕಾಳು ಹಾಗೂ ಇನ್ನಿತರ ಧಾನ್ಯಗಳನ್ನು ಎಸೆಯುವುದರಿಂದ ನೂರಾರು ಕೆಜಿಗಳಷ್ಟು ಆಹಾರ ಪದಾರ್ಥ ಹಾಳಾಗುತ್ತಿತ್ತು. ಇದನ್ನು ಮನಗಂಡು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ತಿಳಿಸಿದರು.

‘ನಾಣ್ಯವನ್ನು ಎಸೆಯುವುದರಿಂದ ಚಿನ್ನದ ರಥಕ್ಕೆ ಅದರಲ್ಲೂ ವಿಶೇಷವಾಗಿ ಮಹದೇಶ್ವರ ಸ್ವಾಮಿಯ ಚಿನ್ನದ ಮೂರ್ತಿಗೆ ಹಾನಿಯಾಗುತ್ತಿತ್ತು’ ಎಂದರು.

‘ಗುರುವಾರ ಸಂಜೆ ಆರು ಗಂಟೆಯಿಂದ ಧ್ವನಿವರ್ಧಕದ ಮೂಲಕ ಭಕ್ತರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿದ್ದೆವು. ರಥದ ಮುಂದೆ ವಾಹನವೊಂದರಲ್ಲಿ ಹಣ ಹಾಗೂ ದವಸ ಧಾನ್ಯ ಹಾಕಲು ಪಾತ್ರೆಗಳನ್ನಿಟ್ಟು, ಅದರಲ್ಲಿ ಹರಕೆ ವಸ್ತುಗಳನ್ನು ಹಾಕುವಂತೆ ಸೂಚಿಸಿ
ದ್ದೆವು.ಭಕ್ತರು ಮನವಿಗೆ ಸ್ಪಂದಿಸಿದ್ದಾರೆ. ಮೊದಲ ದಿನವೇ ಈ ಪ್ರಯತ್ನ ಶೇ 90ರಷ್ಟು ಯಶಸ್ವಿಯಾಗಿದೆ’ ಎಂದು ಜಯವಿಭವ ಸ್ವಾಮಿ ಮಾಹಿತಿ ನೀಡಿದರು.

‘ಸಂಗ್ರಹವಾಗುವ ದವಸ ಧಾನ್ಯಗಳು ಉತ್ತಮ ಗುಣಮಟ್ಟದ್ದಾದರೆ ದಾಸೋಹಕ್ಕೆ ಉಪಯೋಗಿಸುತ್ತೇವೆ. ಇಲ್ಲದಿದ್ದರೆ ದೇವಾಲಯದ ಆನೆಗೆ ಬಳಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT