ಬುಧವಾರ, ಆಗಸ್ಟ್ 4, 2021
20 °C
ಸುಳ್ಯ ತಾಲ್ಲೂಕಿನ ಕೊಲ್ಲಮೊಗರು– ಕಲ್ಮಕಾರು

ಲೈಫ್‌ಡೌನ್ ಕಥೆಗಳು| ಪುಷ್ಪಗಿರಿ ತಪ್ಪಲಲ್ಲಿ ಸಂಪರ್ಕವೇ ಸವಾಲು

ಹರ್ಷವರ್ಧನ ಪಿ.ಆರ್. Updated:

ಅಕ್ಷರ ಗಾತ್ರ : | |

ಮಂಗಳೂರು: ‘ತಂದೆ ಸಾಯುವ ಹೊತ್ತಿಗೆ ಅವರ ಬಾಯಿಗೆ ನೀರು ಬಿಡುವ ಬದಲು, ನಾನು ಹೋಗಿ ಮೊಬೈಲ್‌ ಟವರ್‌ ಜನರೇಟರ್‌ಗೆ ಡೀಸೆಲ್‌ ಹಾಕಿದ್ದೇನೆ...’ 

ಹೀಗೆಂದವರು ಪರಿಸರ ಸೂಕ್ಷ್ಮ ವಲಯದಲ್ಲಿ ಬರುವ ಪುಷ್ಪಗಿರಿ ಬೆಟ್ಟದ ತಪ್ಪಲಿನ ಕಲ್ಮಕಾರು ನಿವಾಸಿ ಚಂದ್ರಶೇಖರ್‌. ‘ಪ್ರಜಾವಾಣಿ’ ಜತೆಗೆ ಮಾತಿಗಿಳಿದಾಗ ನೋವು, ಅಸಹನೆ, ಆಕ್ರೋಶ, ವ್ಯಂಗ್ಯ, ಅಸಹಾಯಕತೆ, ಗ್ರಾಮದ ಜನರ ಹೋರಾಟ ಎಲ್ಲವೂ ಅವರ ಕಣ್ಣಂಚಿನಲ್ಲಿ ಮೂಡಿ ಬಂದಿತ್ತು. ಆಗಲೇ ಆರಂಭವಾಗಿರುವ ಮುಂಗಾರು ಮಳೆ ಎಲ್ಲವನ್ನೂ ತೊಯ್ಯುವಂತೆ ಧಾರಾಕಾರ ಸುರಿಯುತ್ತಲೇ ಇತ್ತು.

‘ತಂದೆ ಸತ್ತ ಸುದ್ದಿಯನ್ನು ಎಲ್ಲರ ಮನೆಗೆ ಹೋಗಿ ಹೇಳುವುದಕ್ಕಂತೂ ಇಲ್ಲಿ ಸಾಧ್ಯವೇ ಇಲ್ಲ. ಏಕೆಂದರೆ, ಇಲ್ಲಿನ ಒಳರಸ್ತೆ, ಸೇತುವೆಗಳೆಲ್ಲ ಅಷ್ಟೊಂದು ಅಧ್ವಾನವಾಗಿವೆ. ಹೀಗಾಗಿ, ಮೊದಲು ಹೋಗಿ ಟವರ್ ಜನರೇಟರ್‌ಗೆ ಡೀಸೆಲ್ ಹಾಕಿ, ಕರೆ ಮಾಡಿ ತಿಳಿಸಿದೆ. ಊರಿನ ಜನ ಎಷ್ಟೋ ಬಾರಿ ಹೀಗೆ ಡೀಸೆಲ್ ಹಾಕಿದ್ದಾರೆ’ ಎಂದರು.

‘ಇಲ್ಲಿ ಎರಡು ಮೊಬೈಲ್ ಟವರ್‌ಗಳಿವೆ. ಅವೆರಡೂ 2ಜಿಯೇ. ನಮ್ಮೂರಲ್ಲಿ ಕರೆಂಟ್‌ ಇರುವುದಕ್ಕಿಂತ ಇಲ್ಲದಿರುವುದೇ ಹೆಚ್ಚು. ಕರೆಂಟ್‌ ಹೋದ್ರೆ ನೆಟ್‌ವರ್ಕ್‌ ಸ್ತಬ್ಧ. ಅಲ್ಲಿಗೆ ಊರಿನ ಸಂಪರ್ಕವೇ ಕಡಿದಂತೆ’ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಣಿಕಂಠ ಕಟ್ಟ ದನಿಗೂಡಿಸಿದರು.

ನೆಟ್‌ವರ್ಕ್ ಸಮಸ್ಯೆಯಿಂದ ದೈನಂದಿನ ಬದುಕು ಅಸಹನೀಯವಾಗಿಬಿಡುತ್ತದೆ. ಅಷ್ಟೇ ಅಲ್ಲ, ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಬೇಕಾದ ಅರ್ಜಿ ಸಲ್ಲಿಕೆ, ಕಚೇರಿಯ ಇತರ ಕೆಲಸಗಳು ಎಲ್ಲವೂ ವಾರಗಟ್ಟಲೆ ವಿಳಂಬವಾಗಿಬಿಡುವುದು ಇಲ್ಲಿ ಹೊಸದೇನಲ್ಲ.  

ಲಾಕ್‌ಡೌನ್ ಸಂದರ್ಭದಲ್ಲಿ ಪಡಿತರ ಪಡೆಯಲೂ ಜನರಿಗೆ ಕಷ್ಟವಾಯಿತು. ಮೊಬೈಲ್ ಒಟಿಪಿ ಸಿಗದೇ ಸಮಸ್ಯೆ ಉಂಟಾಗಿತ್ತು. ಕೊನೆಗೆ, ಗ್ರಾಮ ಪಂಚಾಯಿತಿ ವೈಫೈ ಮೂಲಕ ವ್ಯವಸ್ಥೆ ಮಾಡಿತ್ತು. ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಸೌರಶಕ್ತಿ ವಿದ್ಯುತ್ ಇದ್ದು, ಒಎಫ್‌ಸಿ ಸಂಪರ್ಕ ಇದೆ. ಹೀಗಾಗಿ, ಪ್ರಮುಖ ಕಾರ್ಯಗಳಿಗೆ ಇದೇ ಆಸರೆ. 

ಸುಳ್ಯ ತಾಲ್ಲೂಕು ಕೇಂದ್ರದಿಂದ 50 ಕಿ.ಮೀ. ದೂರದಲ್ಲಿರುವ ಪುಷ್ಪಗಿರಿ ವನ್ಯಜೀವಿ ತಾಣಕ್ಕೆ ಅಂಟಿ ಕೊಂಡಂತಿರುವ ಗ್ರಾಮ ಪಂಚಾಯಿತಿ ಕೊಲ್ಲಮೊಗರು. ಇದು ಕೊಲ್ಲಮೊಗರು ಮತ್ತು ಕಲ್ಮಕಾರು ಎಂಬ ಕಂದಾಯ ಹಳ್ಳಿಗಳು ಹಾಗೂ ಸಂತೆಡ್ಕ ಮತ್ತು ಗಡಿಕಲ್ಲು ಜನವಸತಿ ಪ್ರದೇಶಗಳನ್ನು ಒಳಗೊಂಡಿದೆ. ಈ ಗ್ರಾಮ ಪಂಚಾಯಿತಿಯ ಒಟ್ಟು ವ್ಯಾಪ್ತಿ 7,940.18 ಎಕರೆ ಇದೆ. ಈ ಪೈಕಿ 5,666.79 ಎಕರೆ ಸಂರಕ್ಷಿತಾರಣ್ಯ. ಶೇಕಡ 71.36 ರಷ್ಟಿದೆ. ಉಳಿದದ್ದು ಜನವಸತಿ. ಅದರಲ್ಲೂ ಬಫರ್ ಜೋನ್ ವ್ಯಾಪ್ತಿ.

ಸಂಪರ್ಕವೇ ದೂರ: ‘ನಮ್ಮ ಪ್ರತಿ ಚಟುವಟಿಕೆಗೂ ‘ಸಂಪರ್ಕ’ವೇ ಸವಾಲು. ರಸ್ತೆ ಸಂಪರ್ಕ, ನೆಟ್‌ವರ್ಕ್ ಸಂಪರ್ಕ, ಸೇತುವೆ ಸಂಪರ್ಕ... ಹೀಗೆ ನಾವು ‘ಸಂಪರ್ಕ’ ವಂಚಿತರು’ ಎಂದು ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ಟಿ.ಎನ್. ಸತೀಶ್ ವಿವರಿಸಿದರು.

ಸುಬ್ರಹ್ಮಣ್ಯ–ಸುಳ್ಯ ರಸ್ತೆಯ ನಡುಗಲ್ಲಿನಿಂದ ಕೊಲ್ಲಮೊಗರು, ಕಲ್ಮಕಾರಿಗೆ (14 ಕಿ.ಮೀ.) ಸಂಪರ್ಕ ಕಲ್ಪಿಸುವ ರಸ್ತೆಯೊಂದು ಸುಸ್ಥಿತಿಯಲ್ಲಿದೆ. ಉಳಿದಂತೆ ಒಳರಸ್ತೆಗಳು ಕೆಟ್ಟು ಹೋಗಿವೆ. ಸಣ್ಣ ಸಣ್ಣ ಸೇತುವೆಗಳಿದ್ದು, ಅಪಾಯದಲ್ಲಿವೆ.

ಅಭಯ ನೀಡುವವರಿಗಿಲ್ಲ ಆಶ್ರಯ: ಕಲ್ಮಕಾರಿನಲ್ಲಿ ಬಲಕ್ಕಿರುವ ಕಿರಿದಾದ ಸೇತುವೆಯನ್ನು ಹಾದು, ಸಣ್ಣದಾದ ಮಣ್ಣಿನ ಕೆಸರುಮಯ ರಸ್ತೆಯಲ್ಲಿ ಸುಮಾರು ನಾಲ್ಕು ಕಿ.ಮೀ. ಏರುತ್ತಾ ಹೋದರೆ ಸಿಗುವುದೇ ಗುಳಿಕ್ಕಾನ. ಸಂರಕ್ಷಿತಾರಣ್ಯಕ್ಕೆ ಹೊಂದಿಕೊಂಡೇ ಇರುವ ಹಳ್ಳಿ ಇದು. 2018ರಲ್ಲಿ ಭಾರಿ ಜಲಸ್ಫೋಟದಿಂದ ಬಿರುಕು ಬಿಟ್ಟ ಸ್ಥಳ. ಇಲ್ಲಿನ 9 ಕುಟುಂಬಗಳು ಇನ್ನೂ ಪುನರ್ವಸತಿಯ ನಿರೀಕ್ಷೆಯಲ್ಲಿವೆ. ಈ ಪೈಕಿ ಎಂಟು ಕುಟುಂಬಗಳು ಭೂತದ ಪಾತ್ರಧಾರಿಗಳಾಗಿದ್ದು, ನಾಡಿಗೆ ಅಭಯ ನೀಡುವ ಇವರ ಬದುಕೇ ಅಭದ್ರ.

‘ಇದು ವಾಸಯೋಗ್ಯ ಸ್ಥಳವಲ್ಲ ಎಂದು ತಜ್ಞರು ವರದಿ ನೀಡಿದ್ದಾರೆ. ಇವರ ಪುನರ್ವಸತಿಗಾಗಿ ಸಮೀಪದ ಪದ್ನಡ್ಕದಲ್ಲಿ ಜಾಗ ಗುರುತಿಸಿದ್ದೆವು. ಆದರೆ, ಅರಣ್ಯ ಇಲಾಖೆಯವರು ಅದನ್ನು ‘ಡೀಮ್ಡ್ ಫಾರೆಸ್ಟ್’ ಎನ್ನುತ್ತಿದ್ದಾರೆ. ಇವರ ಬದುಕು ಅರಣ್ಯರೋದನವಾಗಿದೆ’ ಎಂದರು ಟಿ.ಎನ್. ಸತೀಶ್.

‘ಪ್ರತಿ ಮಳೆಗಾಲದಲ್ಲೂ ನಮಗೆ ಭಯವಾಗುತ್ತದೆ. ನಮ್ಮನ್ನು ಶಾಲೆಗೆ, ಖಾಲಿ ಕಟ್ಟಡಕ್ಕೆ ಕರೆದೊಯ್ದು ಬಿಡುತ್ತಾರೆ. ಅಲ್ಲೇ ದಿನ ಕಳೆಯಬೇಕು. ಜೀವನವೇ ದುಸ್ತರವಾಗಿದೆ’ ಎಂದು ದಿವ್ಯಾ ಉಮೇಶ್ ಗುಳಿಕ್ಕಾನ ಅಳಲು ತೋಡಿಕೊಂಡರು. ‘ಆದಷ್ಟು ಬೇಗ ಪುನರ್ವಸತಿ ಕಲ್ಪಿಸಿ’ ಎಂದು ದೇಯಿ ಕೈ ಮುಗಿದರು.

‘ಗ್ರಾಮದಲ್ಲಿ ಎಸ್ಸೆಸ್ಸೆಲ್ಸಿ ತನಕ ಶಾಲೆ ಇದೆ. ಬಳಿಕ ಬೇರೆ ಊರಿಗೆ ಹೋಗಬೇಕು. ಬಸ್‌ ಸಂಪರ್ಕವೇ ಕಷ್ಟ. ಬಸ್‌ ಇಳಿದು ನಾಲ್ಕು ಕಿ.ಮೀ. ನಡೆದುಕೊಂಡೇ ಬರಬೇಕು. ಮಳೆಗಾಲದ ಸ್ಥಿತಿ ಹೇಳತೀರದು. ರಸ್ತೆಯಲ್ಲೇ ಒರತೆ ಬಂದು ಕೆಸರು ತುಂಬಿರುತ್ತದೆ. ಆ ಕೆಸರಲ್ಲೇ ಕಾಲೆಳೆದುಕೊಂಡು ಹೋಗಬೇಕು’ ಎಂದು ಸುಬ್ರಹ್ಮಣ್ಯ ದಲ್ಲಿ ಬಿ.ಎ. ಓದುತ್ತಿರುವ ದೀಪಕ್ ಕಷ್ಟ ತೋಡಿಕೊಂಡರು.

ಸರ್ವೆ ಸಂಖ್ಯೆ 107: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 981 ಮನೆಗಳಿದ್ದು, ಸರ್ವೆ ಸಂಖ್ಯೆ 107ರಲ್ಲಿ ಸುಮಾರು 50 ಮನೆಗಳಿವೆ. ಈ ಕುಟುಂಬಗಳು ಇಂದಿಗೂ ಹಕ್ಕುಪತ್ರಕ್ಕಾಗಿ ಹೋರಾಡುತ್ತಿವೆ. ಗ್ರಾಮ ಪಂಚಾಯಿತಿಯ ಘನತ್ಯಾಜ್ಯ ವಿಲೇವಾರಿಗೂ ಅರಣ್ಯ ಇಲಾಖೆಯ ನಿರಾಕ್ಷೇಪಣೆ ಪತ್ರ ಸಿಕ್ಕಿಲ್ಲವಂತೆ.

ಆನ್‌ಲೈನ್ ಭಯ: ‘ಲಾಕ್‌ಡೌನ್‌ ಇದ್ದಾಗ, ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗೆ ಸಂಪರ್ಕವೇ ಸಿಗಲಿಲ್ಲ. ಮುಂದೆ ಸರ್ಕಾರ ಆನ್‌ಲೈನ್ ತರಗತಿ ಆರಂಭಿಸಿದರೆ, ನಮ್ಮೂರಿನ ಮಕ್ಕಳ ಗತಿ ಎಂಥದ್ದು’ ಎಂದು ಪೋಷಕರು ಆತಂಕದಿಂದ ಪ್ರಶ್ನಿಸುತ್ತಾರೆ. 

‘ನಾಗರಿಕ ಸೇವೆ ಸೇರಬೇಕು ಎಂದು ಕೋಚಿಂಗ್‌ಗೆ ಸೇರಿದ್ದೇನೆ. ಅವರು ಆನ್‌ಲೈನ್‌ ತರಗತಿ ಮಾಡುತ್ತಿದ್ದು, ನೆಟ್‌ವರ್ಕ್ ಸಿಗುತ್ತಿಲ್ಲ. ಪಂಚಾಯಿತಿಯವರು ವೈಫೈ ಬಳಸಲು ಅವಕಾಶ ನೀಡಿದ ಕಾರಣ ಬಚಾವ್’ ಎಂದು ಗ್ರಾಮ ಪಂಚಾಯಿತಿ ವರಾಂಡದಲ್ಲಿ ಮೊಬೈಲ್ ಮೂಲಕ ಕೋಚಿಂಗ್‌ ಪಡೆಯುತ್ತಿದ್ದ ವಿದ್ಯಾರ್ಥಿನಿ ಸೃಜನಾ ತಿಳಿಸಿದರು.

ಆಧುನಿಕ ಸೌಲಭ್ಯಗಳ ಕೊರತೆಯಿಂದ ಗ್ರಾಮ ಹಿಂದುಳಿದಿದ್ದರೂ, 4 ಸಾವಿರ ಮಿ.ಮೀ.ಗೂ ಅಧಿಕ ಮಳೆ ಬೀಳುವ ಇಲ್ಲಿನ ಬೆಟ್ಟದ ಮೇಲೇಳುವ ಮೋಡ, ದಟ್ಟೈಸಿದ ಹಸಿರು, ನೀರ ನಿನಾದ, ಜನರ ಆತ್ಮೀಯತೆಯು ಕಣ್ಮನ ಸೆಳೆಯುತ್ತವೆ. ‘ಕಸ್ತೂರಿ ರಂಗನ್‌ ವರದಿ’ ವಿರುದ್ಧ ಆಗಾಗ ಹೋರಾಟ ನಡೆಯುತ್ತಲೇ ಇರುತ್ತದೆ. 

‘ನಿಜವಾಗಿಯೂ ಸುಸ್ಥಿರ ಅಭಿವೃದ್ಧಿ ಯಾವುದು?’ ಎಂದು ಪ್ರಶ್ನಿಸಿದರು ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಸೃಜನಾ.

ಆನೆ ಕಾಟವೂ ಇದೆ...

‘ಕಾಡಿನಿಂದ ಆನೆಗಳು ಅಡ್ಡಾಡುತ್ತಾ ಬಂದು ನಮ್ಮ ಹೊಲ, ತೋಟಗಳನ್ನು ನಾಶ ಪಡಿಸುತ್ತವೆ. ಅದಕ್ಕಾಗಿ, ಅರಣ್ಯ ಇಲಾಖೆ ಸಿಮೆಂಟ್‌ ರಚನೆಗಳಿಂದ ತಡೆಯನ್ನು ನಿರ್ಮಿಸಿದೆ. ಆದರೂ, ಕೆಲವೊಮ್ಮೆ ಹಾನಿ ಖಚಿತ’ ಎಂದು ಕಲ್ಮಕಾರಿನ ಭರತ್, ಸೋಮಶೇಖರ್ ತಿಳಿಸಿದರು.

ಕೊಲ್ಲಮೊಗರು– ಕಲ್ಮಕಾರು ರಸ್ತೆಯು ಕಡಮ್ಮಕಲ್ಲ್‌ನ ಖಾಸಗಿ ರಬ್ಬರ್‌ ಎಸ್ಟೇಟ್ ಗೇಟಿಗೆ ಅಂತ್ಯಗೊಳ್ಳುತ್ತದೆ. ‘ಹೊರ ಜನರಿಗೆ ಪ್ರವೇಶ ಇಲ್ಲ’ ಎಂದು ಎಸ್ಟೇಟ್ ಗೇಟ್‌ ಮುಂದೆ ಫಲಕ ಹಾಕಲಾಗಿದೆ. ಎಸ್ಟೇಟ್‌ನೊಳಗೆ ಮಡಿಕೇರಿ, ತಮಿಳುನಾಡು, ಉತ್ತರ ಭಾರತದ ಸುಮಾರು 60 ಕುಟುಂಬಗಳು ಇವೆ. ಉಳಿದವರಿಗೆ ಪ್ರವೇಶ ನಿಷೇಧಿಸಿದೆ. ಹಾಗಾಗಿ, ಹಿಂದಿರುಗಿ ಹೋಗುವುದೊಂದೇ ದಾರಿ.

12 ಕಿ.ಮೀ. ದೂರಕ್ಕೆ 100 ಕಿ.ಮೀ. ದಾರಿ

ಕಲ್ಮಕಾರಿನಿಂದ ಮುಂದೆ ಕೊಡಗು ಜಿಲ್ಲಾ ವ್ಯಾಪ್ತಿಯಾಗಿದ್ದು, ಕಡಮ್ಮಕಲ್ಲ್‌ನಲ್ಲಿ ಖಾಸಗಿ ಕಂಪನಿಯ ಬೃಹತ್ ರಬ್ಬರ್ ಎಸ್ಟೇಟ್ ಇದೆ. ಈ ಎಸ್ಟೇಟ್ ಮತ್ತು ಕಲ್ಮಕಾರು ಗ್ರಾಮದ ನಡುವಿನ ಪ್ರದೇಶದಲ್ಲಿ ಸುಮಾರು 20 ಕುಟುಂಬಗಳಿವೆ. ಈ ಪ್ರದೇಶವು ಕೊಡಗು ಜಿಲ್ಲೆಗೆ ಸೇರಿದೆ.

‘ಕಡಮ್ಮಕಲ್ಲ್‌ನಿಂದ ಗಾಳಿಬೀಡು ಮೂಲಕ ಮಡಿಕೇರಿಗೆ ಕೇವಲ 12 ಕಿ.ಮೀ. ದೂರ. ಆದರೆ, ಈ ರಸ್ತೆಯನ್ನು ಅರಣ್ಯ ಇಲಾಖೆ ಮುಚ್ಚಿದ್ದು, ನಾವು ಪಡಿತರಕ್ಕೂ ಸುಳ್ಯ, ಸಂಪಾಜೆ–ಮಡಿಕೇರಿ ರಸ್ತೆ ಮೂಲಕ 100 ಕಿ.ಮೀ. ಸುತ್ತಬೇಕಾಗಿದೆ’ ಎನ್ನುತ್ತಾರೆ ಇಲ್ಲಿನ ನಿವಾಸಿ ಸೈಯದ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು