ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕೆ ₹982 ಕೋಟಿ ಬಾಕಿ ಉಳಿಸಿದ ರೆಸಾರ್ಟ್‌ನಲ್ಲೇ ‘ಕೈ’ ವಾಸ್ತವ್ಯ: ವಾಕ್ಸಮರ

Last Updated 19 ಜನವರಿ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರಕ್ಕೆ ₹982 ಕೋಟಿ ಉಳಿಸಿಕೊಂಡ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಕಾಂಗ್ರೆಸ್‌ ಶಾಸಕರು ವಾಸ್ತವ್ಯ ಹೂಡಿರುವ ವಿಚಾರ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ.

‘ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಶಾನಮಂಗಲ, ಬಿಲ್ಲಕೆಂಪನಹಳ್ಳಿ ಮತ್ತು ಬಾಣಂದೂರು ಗ್ರಾಮಗಳಲ್ಲಿ ಚಾಮುಂಡೇಶ್ವರಿ ಬ್ಯುಲ್ಡ್ ಟೆಕ್ ಕಂಪನಿ ಒತ್ತುವರಿ ಮಾಡಿರುವ ಜಮೀನಿಗೆ ಸರ್ಕಾರ ನಿಗದಿಪಡಿಸಿರುವ ₹ 982 ಕೋಟಿ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಆದರೂ, ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ’ ಎಂದು ಜೆಡಿಎಸ್‌ ಶಾಸಕ ಎ.ಟಿ.ರಾಮಸ್ವಾಮಿ ಅವರು ಬೆಳಗಾವಿ ಅಧಿವೇಶನದಲ್ಲಿ ಚಾಟಿ ಬೀಸಿದ್ದರು.

‘ಚಾಮುಂಡೇಶ್ವರಿ ಬ್ಯುಲ್ಡ್‌ಟೆಕ್ ಸಂಸ್ಥೆ ಈಗಲ್ ಟನ್ ಪ್ರಾಜೆಕ್ಟ್‌ಗಾಗಿ 106 ಎಕರೆ 12 ಗುಂಟೆ ಜಮೀನು ಒತ್ತುವರಿ ಮಾಡಿಕೊಂಡಿದ್ದು, ಇದರಲ್ಲಿ 20 ಎಕರೆ 33 ಗುಂಟೆ ಜಮೀನನ್ನು ಸರ್ಕಾರ ವಶಕ್ಕೆ ಪಡೆದಿದೆ. ಬಾಕಿ ಉಳಿದಿರುವ 77 ಎಕರೆ 19 ಗುಂಟೆ ಜಮೀನಿಗೆ ₹ 982 ಕೋಟಿ ಮೌಲ್ಯ ನಿಗದಿಪಡಿಸಲಾಗಿದೆ. ಸರ್ಕಾರದ ನಿರ್ಧಾರದಂತೆ ಆದಷ್ಟು ಶೀಘ್ರ ಹಣ ಪಾವತಿಸಲು ಸೂಚಿಸಲಾಗುವುದು’ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಪ್ರತಿಕ್ರಿಯಿಸಿದ್ದರು. ‘ಈ ಪ್ರಕರಣ ಹೈಕೋರ್ಟ್‍ನಲ್ಲಿ ವಿಚಾರಣೆ ಬಾಕಿ ಇದ್ದು, ಯಾವುದೇ ತಡೆಯಾಜ್ಞೆ ಇಲ್ಲ. ಸರ್ಕಾರದಿಂದ ಯಾವುದೇ ಲೋಪ ಆಗಿಲ್ಲ’ ಎಂದು ಸಮರ್ಥಿಸಿಕೊಂಡಿದ್ದರು.

‘ಸರ್ಕಾರಕ್ಕೆ ಅಗಾಧ ಮೊತ್ತ ಬಾಕಿ ಉಳಿಸಿಕೊಂಡ ರೆಸಾರ್ಟ್‌ನಲ್ಲೇ ಕಾಂಗ್ರೆಸ್‌ ನಾಯಕರು ವಾಸ್ತವ್ಯ ಹೂಡಿದ್ದಾರೆ. ವಾಪಸ್‌ ಬರುವ ವೇಳೆ ಮರ್ಯಾದಾ ಪುರುಷೋತ್ತಮ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಹಾಗೂ ದಿನೇಶ್‌ ಗುಂಡೂರಾವ್‌ ವಸೂಲಿ ಮಾಡಿಕೊಂಡು ಬರಲಿ. ಅದನ್ನು ರೈತರ ಸಾಲ ಮನ್ನಾಕ್ಕೆ ಬಳಸಬಹುದು’ ಎಂದು ಬಿಜೆಪಿ ಕರ್ನಾಟಕ ಟ್ವೀಟ್‌ ಮಾಡಿದೆ.

ಬಾಕಿಗೂ ವಾಸ್ತವ್ಯಕ್ಕೂ ಸಂಬಂಧ ಇಲ್ಲ: ‘ಈಗಲ್‌ಟನ್‌ ರೆಸಾರ್ಟ್‌ ಬಾಕಿ ಉಳಿಸಿಕೊಂಡಿರುವುದಕ್ಕೂ ಕಾಂಗ್ರೆಸ್‌ ಶಾಸಕರ ವಾಸ್ತವ್ಯಕ್ಕೂ ಸಂಬಂಧ ಇಲ್ಲ’ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

‘ರೆಸಾರ್ಟ್‌ನ ಬಾಕಿ ಪಾವತಿ ಬಗ್ಗೆ ಆರಂಭದಲ್ಲಿ ಧ್ವನಿ ಎತ್ತಿದ್ದೇ ನಾನು. ಬಾಕಿ ವಸೂಲಿಗೆ ಕಾನೂನು ಪ್ರಕ್ರಿಯೆ ನಡೆದಿದೆ. ಬೆಂಗಳೂರಿಗೆ ಹತ್ತಿರದಲ್ಲಿದೆ ಎಂಬ ಕಾರಣಕ್ಕೆ ಆ ರೆಸಾರ್ಟ್‌ಗೆ ಹೋಗಿದ್ದೇವೆ’ ಎಂದು ಅವರು ಸ್ಪಷ್ಟಪಡಿಸಿದರು.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT