ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಅಧಿಕಾರಕ್ಕೆ ಕತ್ತರಿ?

ಕಾಂಗ್ರೆಸ್‌ ಪ್ರಮುಖರ ಸಭೆ ಇಂದು; ಅಧ್ಯಕ್ಷರ ಬದಲಾವಣೆಗೂ ಚರ್ಚೆ
Last Updated 25 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಮೈತ್ರಿ ಸರ್ಕಾರ ಪತನದ ನಂತರ ಕಾಂಗ್ರೆಸ್ ನಾಯಕರು ಪಕ್ಷ ಸಂಘಟನೆಯತ್ತ ಮುಖಮಾಡಿದ್ದು, ಸೋಮವಾರ ಮಹತ್ವದ ಸಭೆ ನಡೆಸಲಿದ್ದಾರೆ.ವಿರೋಧ ಪಕ್ಷದ ನಾಯಕನ ನೇಮಕ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಚರ್ಚೆಯಾಗಲಿದೆ.

ಹಿರಿಯ ಮುಖಂಡ ಗುಲಾಂನಬಿ ಆಜಾದ್, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ರಾಜ್ಯದ ಪ್ರಮುಖ ನಾಯಕರ ಸಭೆ ನಡೆಯಲಿದೆ.

ಮೈತ್ರಿ ಸರ್ಕಾರ ಪತನದ ನಂತರ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದ್ದು, ಸಿದ್ದರಾಮಯ್ಯ, ಶಾಸಕಾಂಗ ಪಕ್ಷದ ನಾಯಕರಾಗಿ ಮುಂದುವರಿದಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಸಮನ್ವಯಸಮಿತಿ ಅಧ್ಯಕ್ಷರಾಗಿದ್ದರು. ಸರ್ಕಾರ ಬದಲಾದ ನಂತರ ಅಧಿಕೃತವಾಗಿ ವಿರೋಧ ಪಕ್ಷದ ನಾಯಕನನ್ನು ಕಾಂಗ್ರೆಸ್ ಆಯ್ಕೆ ಮಾಡಿಲ್ಲ.

ಹಿಂದಿನ ಆಡಳಿತದ ಸಂದರ್ಭಗಳಲ್ಲಿ ಶಾಸಕಾಂಗ ಪಕ್ಷದ ನಾಯಕರೇ ವಿರೋಧ ಪಕ್ಷದ ನಾಯಕರಾಗಿ ಕೆಲಸ ನಿರ್ವಹಿಸಿದ್ದು, ಅದರಂತೆ ಈಗಲೂ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ರಾಜ್ಯದಲ್ಲಿ ಪಕ್ಷ ಅಧಿಕಾರ ಕಳೆದುಕೊಂಡಿದ್ದು, ಪ್ರಮುಖ ನಾಯಕರಿಗೆ ಅಧಿಕಾರ ಹಂಚಿಕೆ ಮಾಡುವ ಪ್ರಯತ್ನ ನಡೆದಿರುವುದರಿಂದ ಅವರ ಅಧಿಕಾರ ಸ್ಥಾನಪಲ್ಲಟ ಆಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಪಕ್ಷ ಸಂಘಟಿಸುವ ಮೂಲಕ ಮುಂದಿನ ಉಪಚುನಾವಣೆ ಹಾಗೂ ಸಾರ್ವತ್ರಿಕ ಚುನಾವಣೆಗೆ ಸಜ್ಜಾಗಬೇಕಿದೆ. ಈ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಒಬ್ಬರಿಗೆ ನೀಡಬೇಕೆ? ಅಥವಾ ಇಬ್ಬರಿಗೆ ಹಂಚಿಕೆ ಮಾಡಬೇಕೆ? ಎಂಬ ಕುರಿತು ಕೇಂದ್ರ ನಾಯಕರು ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಹೊರಗಿಟ್ಟು, ಅವರ ಬೆಂಬಲಿಗರಿಗೆ ಅವಕಾಶ ನೀಡಿ ಪಕ್ಷ ಸಂಘಟಿಸಬಹುದೆ?,ಪಕ್ಷದಲ್ಲಿ ಕೇಂದ್ರ ಮಟ್ಟದಲ್ಲಿ ಅವಕಾಶ ನೀಡಬಹುದೆ? ಇದರಿಂದ ಪಕ್ಷದ ಮೇಲೆ ಆಗುವ ಪರಿಣಾಮಗಳ ಕುರಿತು ಪ್ರಮುಖವಾಗಿ ಚರ್ಚೆಯಾಗಲಿವೆ ಎಂದು ಮೂಲಗಳು ತಿಳಿಸಿವೆ.

ಅಧ್ಯಕ್ಷರ ಬದಲಾವಣೆ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಕೆಲವರು ಪಟ್ಟು ಹಿಡಿಯಲಿದ್ದಾರೆ. ದಿನೇಶ್ ಗುಂಡೂರಾವ್ ಅಧ್ಯಕ್ಷರಾದ ನಂತರ ಪಕ್ಷದ ಚಟುವಟಿಕೆಗಳು ವಿಸ್ತರಿಸಿಲ್ಲ. ಕೆಲವೇ ನಾಯಕರಿಗೆ ಸೀಮಿತರಾಗಿದ್ದು, ಎಲ್ಲರನ್ನೂ ಜತೆಯಾಗಿ ತೆಗೆದುಕೊಂಡು ಹೋಗುತ್ತಿಲ್ಲ. ಸಿದ್ದರಾಮಯ್ಯ ಹೇಳಿದಂತೆ ನಡೆದುಕೊಳ್ಳುತ್ತಿರುವುದು ಹಲವರಿಗೆ ಬೇಸರ ತರಿಸಿದ್ದು, ಬದಲಾವಣೆಗೆ ಪ್ರಮುಖ ನಾಯಕರೇ ಒತ್ತಾಯಿಸಲಿದ್ದಾರೆ ಎನ್ನಲಾಗಿದೆ. ಈ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಹೆಸರು ಕೇಳಿಬಂದಿದೆ.

ಸಭೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಬಳಿ ಚರ್ಚಿಸಿದ ನಂತರ ನಿರ್ಧಾರ ಕೈಗೊಳ್ಳಲಾಗುತ್ತದೆ.

ಕಾರು, ಮನೆ ಬೇಕಿದ್ದವರು ಅಧಿಕಾರಕ್ಕೇರಲಿ: ಶಿವಕುಮಾರ್

‘ವಿಪಕ್ಷ ಸ್ಥಾನವೂ ಸೇರಿದಂತೆ ಯಾವ ಅಧಿಕಾರವೂ ಬೇಡ. ಯಾರಿಗೆ ತುರ್ತಾಗಿ ಅಗತ್ಯವಿದೆ, ಯಾರಿಗೆಲ್ಲ ಕಾರು, ಮನೆ ಬೇಕು ಅವರು ಪಡೆದುಕೊಳ್ಳಲಿ’ ಎಂದು ಶಾಸಕ ಡಿ.ಕೆ.ಶಿವಕುಮಾರ್ ಕುಟುಕಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹೆಸರು ಕೇಳಿಬಂದಿರುವ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

‘ನನಗೆ ಶಾಶ್ವತವಾಗಿ ಮನೆ ಇದೆ. ಅಧಿಕಾರ ಬೇಕೆಂದು ಬೇಡಿಕೆ ಸಲ್ಲಿಸಿಲ್ಲ. ಯಾರಿಗೆ ಅಗತ್ಯವಿದೆ ಅಂತಹವರು ತೆಗೆದುಕೊಳ್ಳಲಿ’ ಎಂದು ಸಿದ್ದರಾಮಯ್ಯ ಹೆಸರು ಹೇಳದೆ ಪರೋಕ್ಷವಾಗಿ ಕಾಲೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT