ಬುಧವಾರ, ಏಪ್ರಿಲ್ 21, 2021
23 °C

ಕೊರೊನಾ: ಉಚಿತ ತಪಾಸಣೆಗೆ 11 ಸಂಚಾರಿ ವಾಹನ, ಬಿಬಿಎಂಪಿ ವೈದ್ಯರ ತಂಡ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಆರೋಗ್ಯ ತಪಾಸಣೆ ನಡೆಸಲು  11 ಸಂಚಾರಿ ತಪಾಸಣಾ ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ.

ಭಾರತೀಯ ಜೈನ್ ಸಂಘಟನ್, ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್, ಜಿತೋ ಸಂಘಟನೆಗಳ ನೆರವಿನಿಂದ ವ್ಯವಸ್ಥೆ ಮಾಡಿರುವ ಈ ವಾಹನಗಳಿಗೆ , ಮೇಯರ್ ಗೌತಮ್ ಕುಮಾರ್ ಪಾಲಿಕೆ ಕೇಂದ್ರ ಕಛೇರಿ ಆವರಣದಲ್ಲಿ ಚಾಲನೆ ನೀಡಿದರು. 
ಬಳಿಕ ಮಾತನಾಡಿದ ಮೇಯರ್, 'ಕೋವಿಡ್-19 ತಡೆಗಟ್ಟುವ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಈಗಾಗಲೇ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ತಪಾಸಣೆ ನಡೆಸುವ ಉದ್ದೇಶದಿಂದ ಈಗಾಗಲೇ ಪಾಲಿಕೆ ವತಿಯಿಂದ 7 ಸಂಚಾರಿ ತಪಾಸಣಾ ವಾಹನಗಳನ್ನು ನಿಯೋಜಿಸಲಾಗಿದೆ. ಅದಲ್ಲದೆ ಹಲವಾರು ಸಂಘ-ಸಂಸ್ಥೆಗಳು ಸೇವಾ ಮನೋಭಾವದಿಂದ ಮುಂದೆ ಬಂದು ಹಲವಾರು ಸೇವೆಗಳನ್ನು ಮಾಡುತ್ತಿವೆ. ಇದೀಗ ಭಾರತೀಯ ಜೈನ್ ಸಂಘಟನ್ ಪಾಲಿಕೆ ಸಹಯೋಗದೊಂದಿಗೆ 11 ಸಂಚಾರಿ ತಪಾಸಣಾ ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ' ಎಂದು ತಿಳಿಸಿದರು.

'ಪಾಲಿಕೆ ವ್ಯಾಪ್ತಿಯಲ್ಲಿ ಅತ್ಯವಶ್ಯಕವಿರುವ ಪ್ರದೇಶಗಳಾದ ಕಟ್ಟಡ ಕಾರ್ಮಿಕರ ಪ್ರದೇಶ, ಕೊಳಗೇರಿ ಪ್ರದೇಶ, ಪೌರಕಾರ್ಮಿಕರ ಕಾಲೋನಿಗಳಲ್ಲಿ ತಪಾಸಣೆ ನಡೆಸಲು ವೈದ್ಯರ ತಂಡವನ್ನು ನಿಯೋಜನೆ ಮಾಡಿ, ಅದಕ್ಕಾಗಿ ಸಂಚಾರಿ ವಾಹನಗಳನ್ನು ನಿಯೋಜನೆ ಮಾಡಲಾಗಿದೆ. ಅದರಂತೆ ಭಾರತೀಯ ಜೈನ್ ಸಂಘಟನೆಯು ಲಾಕ್‌ಡೌನ್ ಮುಗಿಯುವವರೆಗೆ (ಮೇ 3 ರವರೆಗೆ) ಉಚಿತವಾಗಿ ವಾಹನಗಳು ಹಾಗೂ ಅಗತ್ಯ ಔಷಧಿಗಳ ವ್ಯವಸ್ಥೆ ಕಲ್ಪಿಸಲಿದ್ದು, ಪಾಲಿಕೆ ವತಿಯಿಂದ ವೈದ್ಯರನ್ನು ನಿಯೋಜನೆ ಮಾಡಲಾಗಿದೆ. ಪ್ರತಿ ವಾಹನದಲ್ಲೂ 3 ವೈದ್ಯರು (ಸೈಕಿಯಾಟ್ರಿಸ್ಟ್(ಮನೋರೋಗ ತಜ್ಞ), ಇಬ್ಬರು ಬೆಂಗಳೂರು ಮೆಡಿಕಲ್ ಕಾಲೇಜು ಇಂಟರ್ನಿ ವೈದ್ಯರು)
ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಪಾಲಿಕೆ ವತಿಯಿಂದ ಈಗಾಗಲೇ “ಬಿಬಿಎಂಪಿ ಟೆಲಿ ಹೆಲ್ತ್” ಲೈನ್ 07447118949ಗೆ ಚಾಲನೆ ನೀಡಿದ್ದು, ಅದರಂತೆ ಈ ಸಂಚಾರಿ ತಪಾಸಣಾ ಸೇವೆಯನ್ನು ಲಿಂಕ್ ಮಾಡಿಕೊಂಡು ಕಾರ್ಯನಿರ್ವಹಿಸಲು ಮೇಯರ್ ಮುಖ್ಯ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.ಈ ವೇಳೆ ಉಪಮೇಯರ್ ರಾಮಮೋಹನ ರಾಜು, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ, ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್) ಡಾ. ನಿರ್ಮಲಾ ಬುಗ್ಗಿ, ಭಾರತೀಯ ಜೈನ್ ಸಂಘಟನ್‌ನ ಬೆಂಗಳುರು ಅಧ್ಯಕ್ಷರು ವಿನೋದ್ ಪೊರ್ವಾಲ್, ಉಪಾಧ್ಯಕ್ಷರು ಸುರೇಶ್ ಧೋಕೆ ಹಾಗೂ ಇತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು