ಬುಧವಾರ, ಜೂನ್ 3, 2020
27 °C

ಕೊರೊನಾ ಸೋಂಕಿನ ವಿರುದ್ಧ ಧೈರ್ಯದಿಂದ ಹೋರಾಡಿ: ಟೆಕಿಯ ಹೋರಾಟ ಗಾಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಮೆರಿಕದಿಂದ ಬಂದಿದ್ದ 50 ವರ್ಷದ ಟೆಕಿ ವೆಂಕಟ್ ರಾಘವ್ ಕೋವಿಡ್‌ ಕಾಯಿಲೆಗೆ ಒಳಗಾದ ಹಿನ್ನೆಲೆಯಲ್ಲಿ ಮಾ.9ರಂದು ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆಯನ್ನು ‍ಪಡೆದುಕೊಂಡಿದ್ದರು. ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಅವರು, ಮನೆಯಲ್ಲಿಯೇ ಪ್ರತ್ಯೇಕವಾಗಿ ಇದ್ದಾರೆ. ಈ ಅವಧಿಯಲ್ಲಿ ಸೋಂಕನ್ನು ಜಯಿಸಿ ಬಂದ ಬಗೆಯನ್ನು ಅವರು ಹಂಚಿಕೊಂಡಿದ್ದಾರೆ. 

ರಾಜರಾಜೇಶ್ವರಿ ನಗರದ ನಿವಾಸಿಯಾಗಿರುವ ಅವರು ನಾಲ್ಕನೇ ರೋಗಿಯಾಗಿದ್ದರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರಲ್ಲಿ ಮೊದಲಿಗರು. 

‘ಮಾರ್ಚ್ ಮೊದಲ ವಾರ ಅಮೆರಿಕಕ್ಕೆ ಹೊರಟೆ. ಹಲವು ವಿಮಾನ ನಿಲ್ದಾಣಗಳು ಲಾಕ್‍ಡೌನ್‌ ಆಗಿದ್ದರಿಂದ ಇಟಲಿ ಮತ್ತು ಚೀನಾದವರೂ ಅಮೆರಿಕ ಮಾರ್ಗವಾಗಿಯೇ ಪ್ರಯಾಣಿಸುತ್ತಿದ್ದರು. ಈ ವೇಳೆ ಸಾರ್ವಜನಿಕ ಶೌಚಾಲಯ, ಬಯೋಮೆಟ್ರಿಕ್ ಬಳಕೆ ಮಾಡಬೇಕಾಯಿತು. ಅದರಿಂದ ನನಗೆ ಕೊರೊನಾ ಸೋಂಕು ತಗುಲಿರುವ ಸಾಧ್ಯತೆ ಇದೆ. ಪ್ರಯಾಣದ ವೇಳೆ ಸೋಂಕಿತರ ಸಂಪರ್ಕದಿಂದಲೂ ತಗುಲಿರಬಹುದು. ನನಗೆ ಈ ರೋಗ ಹೇಗೆ ಬಂದಿತು ಎಂಬ ನಿಖರ ಕಾರಣ ತಿಳಿದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.  

‘ಮಾ.2ರಂದು ಅಮೆರಿಕಕ್ಕೆ ತಲುಪಿದೆ. ಮಾ.6ರಂದು ಜ್ವರ ಕಾಣಿಸಿಕೊಂಡಿತು. ಪ್ರಯಾಣ ಮಾಡಿದ್ದರಿಂದ ಜ್ವರ ಬಂದಿರಬಹುದು ಎಂದು ಭಾವಿಸಿ, ಕೆಲ ಮಾತ್ರೆಗಳನ್ನು ತೆಗೆದುಕೊಂಡೆ. ಜ್ವರದ ಜೊತೆಯಲ್ಲಿ ಶೀತವು ಹೆಚ್ಚಾಗಿದ್ದರಿಂದ ನನ್ನ ಪ್ರವಾಸವನ್ನು ಮುಂದೂಡಿ, ಬೆಂಗಳೂರಿಗೆ ವಾಪಸ್ ಬಂದೆ. ವಿಮಾನ ನಿಲ್ದಾಣದ ವೈದ್ಯರಿಗೆ ಆರೋಗ್ಯ ಸಮಸ್ಯೆ ಬಗ್ಗೆ ಮಾಹಿತಿ ನೀಡಿದೆ. ಆ ಸಂದರ್ಭದಲ್ಲಿ ವಿಮಾನ ನಿಲ್ದಾಣದ ವೈದ್ಯರ ಬಳಿ ಕೊರೊನಾ ವೈರಸ್ ಪರೀಕ್ಷಿಸುವ ಯಾವುದೇ ವೈದ್ಯಕೀಯ ಉಪಕರಣಗಳು ಇರಲಿಲ್ಲ. ಹಾಗಾಗಿ ನನಗೆ ಅಲ್ಲಿ ನಡೆಸಿದ ಪರೀಕ್ಷೆಯಲ್ಲಿ ಸೋಂಕು ತಗುಲಿಲ್ಲ ಎಂಬ ವರದಿ ನೀಡಿದರು’ ಎಂದು ವಿವರಿಸಿದರು. 

‘ಮನೆಗೆ ಬಂದವನು ಪತ್ನಿಗೆ ಈ ವಿಷಯ ತಿಳಿಸಿ, ಕುಟುಂಬದ ಸದಸ್ಯರಿಂದ ಅಂತರ ಕಾಯ್ದುಕೊಂಡೆ. ಸಮೀಪದ ಕ್ಲಿನಿಕ್‌ಗೆ ತೆರಳಿ, ಈ ಬಗ್ಗೆ ವೈದ್ಯರಲ್ಲಿ ಆತಂಕ ವ್ಯಕ್ತಪಡಿಸಿದೆ. ಅವರು  ಭೀತಿಯಿಂದಲೇ ತಮ್ಮ ಬಳಿ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುವ ಸೌಲಭ್ಯಗಳಿಲ್ಲ ಎಂದು ತಿಳಿಸಿ, ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಗೆ ತೆರಳಲು ಸೂಚಿಸಿದರು’ ಎಂದರು. 

‘ನನ್ನ ಗಂಟಲಿನ ದ್ರವ ಮತ್ತು ರಕ್ತದ ಮಾದರಿಯನ್ನು ಪಡೆದು, ಪ್ರಯೋಗಾಲಯದಿಂದ ವರದಿ ಬರುವವರೆಗೂ ಪ್ರತ್ಯೇಕವಾಗಿರುವಂತೆ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯ ವೈದ್ಯರು ಸೂಚಿಸಿದರು. ಮಾ.10ರಂದು ಮಧ್ಯಾಹ್ನ ಆಸ್ಪತ್ರೆಯ ವೈದ್ಯೆ ಡಾ.ಪದ್ಮಾ ಅವರು ಕರೆ ಮಾಡಿ,  ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದರು. ಆಸ್ಪತ್ರೆಯಿಂದ ಬಂದ ಆ್ಯಂಬುಲೆನ್ಸ್‌ನಲ್ಲಿ ತೆರಳಿ, ಐಸೋಲೇಶನ್ ವಾರ್ಡಿನಲ್ಲಿ ದಾಖಲಾದೆ.

ಎರಡು ವಾರದ ಬಳಿಕ ಚೇತರಿಕೆ: ಸೋಂಕು ತಗುಲಿದ್ದರಿಂದ ಆಸ್ಪತ್ರೆ ಸಿಬ್ಬಂದಿ ಸಹಜವಾಗಿಯೇ  ಆತಂಕಕ್ಕೊಳಗಾಗಿದ್ದರು. ನನಗೆ ಪದೇ ಪದೇ ಜ್ವರ ಬರುತ್ತಿತ್ತು. ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸುತ್ತಿದ್ದರು. ವೈದ್ಯರ ನಿರಂತರ ಆರೈಕೆ ಪರಿಣಾಮ ಜ್ವರ ಕಡಿಮೆಯಾಯಿತು. ಎರಡು ವಾರಗಳ ನಂತರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿತು’ ಎಂದು ತಿಳಿಸಿದರು.

‘ನಾನು ಆಸ್ಪತ್ರೆಯಲ್ಲಿದ್ದ ಅವಧಿಯಲ್ಲಿ ಅಕ್ಕ ಪಕ್ಕದ ಮನೆಯವರು ಭಯಭೀತರಾಗಿ, ಅಂತರ ಕಾಯ್ದುಕೊಂಡಿದ್ದರು ಎನ್ನುವುದು ತಿಳಿಯಿತು. ಈ ಅವಧಿಯಲ್ಲಿ ಮಗಳಿಗೆ ಪಿಯುಸಿ ಪರೀಕ್ಷೆಯಿತ್ತು. ಕಾಲೇಜಿನವರು ಅನುಮತಿ ನೀಡುವ ಜತೆಗೆ ಸರ್ಕಾರದ ಸೂಚನೆ ಅನುಸಾರ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಿದ್ದರು. ಸರ್ಕಾರಕ್ಕೆ  ಎಷ್ಟು ಧನ್ಯವಾದ ಹೇಳಿದರೂ ಸಾಲದು. ನಾನು ಸರ್ಕಾರಕ್ಕೆ ತೆರಿಗೆ ಕಟ್ಟಿದ್ದು, ಸಾರ್ಥಕವಾಯಿತು. ಭಯದಿಂದ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು. ಬದಲಾಗಿ ಧೈರ್ಯವಾಗಿ ಸೋಂಕಿನ ವಿರುದ್ಧ ಹೋರಾಡಬೇಕು’ ಎಂದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು