ಭಾನುವಾರ, ಆಗಸ್ಟ್ 1, 2021
26 °C
ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಜೆಪಿ ಶಾಸಕ ಮುರುಗೇಶ್‌ ನಿರಾಣಿ ಹೇಳಿಕೆ

ಕೋವಿಡ್‌ ಉಪಕರಣ ಖರೀದಿ ಅಕ್ರಮ: ನಿರಾಣಿ ಪೆನ್‌ಡ್ರೈವ್‌ ‘ಸಾಕ್ಷಿ’?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿಯ ಹಿರಿಯ ಶಾಸಕ ಮುರುಗೇಶ್‌ ನಿರಾಣಿ ಅವರು ‘ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು, ಅದಕ್ಕೆ ದಾಖಲೆಗಳಿವೆ’ ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಸಭೆಯೊಂದರಲ್ಲಿ ಹೇಳಿಕೆ ನೀಡಿರುವುದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ನಿರಾಣಿ ಅವರು ಲೆಕ್ಕಪತ್ರ ಸಮಿತಿ ಸಭೆಯಲ್ಲಿ ನೀಡಿರುವ ಹೇಳಿಕೆಯು ನಡಾವಳಿಯಲ್ಲಿ ದಾಖಲಾಗಿದ್ದು, ಅದನ್ನು ಸೋರಿಕೆ ಮಾಡಲಾಗಿದೆ. ಆ ಬಳಿಕ ನಡೆದ ಲೆಕ್ಕಪತ್ರ ಸಮಿತಿ ಸಭೆಗಳಿಗೆ ನಿರಾಣಿ ಹಾಜರಾಗಿಲ್ಲ.

ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಗೆ ನಿರಾಣಿ ನೀಡಿದ ಹೇಳಿಕೆ ಹೀಗಿದೆ– ‘ಬಿಜಾಪುರದಿಂದ ಬರುವಾಗ ನನ್ನೊಂದಿಗೆ ಒಬ್ಬ ಅಧಿಕಾರಿ ಇದ್ದರು. ಸುಮಾರು 125 ಪುಟಗಳ ಡಾಕ್ಯುಮೆಂಟ್ಸ್‌ಗಳನ್ನು ಪೆನ್‌ಡ್ರೈವ್‌ನಲ್ಲಿ ಇಟ್ಟುಕೊಂಡಿದ್ದರು. ಅದನ್ನು ನಾನು ತಮಗೆ ಕಳಿಸಿಕೊಡುತ್ತೇನೆ(ಎಚ್‌.ಕೆ.ಪಾಟೀಲ). ಅದರಲ್ಲಿ  ಖರೀದಿ ಮಾಡಿರುವ ಪಿಪಿಇ ಕಿಟ್‌ಗಳು, ಲೋಕಲ್‌ ಸ್ಯಾನಿಟೈಸರ್‌, ₹70–80 ಬೆಲೆ ಬಾಳುವ ಬಕೆಟ್‌ಗೆ‌ ₹500 ರ ದರದಲ್ಲಿ ಬಿಲ್‌ ಮಾಡಲಾಗಿದೆ. ಅಷ್ಟೇ ಅಲ್ಲ, ₹30 ಬೆಲೆ ಬಾಳುವ ಉಪಕರಣಗಳಿಗೆ ₹3,000 ದರದ ಬಿಲ್‌ ಹಾಕಲಾಗಿದೆ. ಇವುಗಳಿಗೆಲ್ಲ ಪ್ರೂಫ್‌ ಅವರಲ್ಲಿದೆ. ಅವು ಪೆನ್‌ಡ್ರೈವ್‌ನಲ್ಲಿದ್ದು, ಅದನ್ನು ಡೌನ್‌ ಲೋಡ್‌ ಮಾಡಲು ಸಾಧ್ಯವಾಗಿಲ್ಲ. ಇಲ್ಲವೆಂದರೆ ಆ ದಾಖಲೆಗಳ ಪ್ರಿಂಟ್‌ ಔಟ್‌ ನಾನು ಸಲ್ಲಿಸುತ್ತಿದ್ದೆ’ ಎಂದಿದ್ದಾರೆ.

‘ಆ ದಾಖಲೆಗಳಿರುವ ಪೆನ್‌ಡ್ರೈವ್‌ ಯಾವ ಅಧಿಕಾರಿಗಳ ಬಳಿ ಇದೆ, ಅದನ್ನು ನಮಗೆ ಕೊಡಿಸಿ’ ಎಂದು ಕಾಂಗ್ರೆಸ್‌ನ ಘಟಾನುಘಟಿ ನಾಯಕರು ನಿರಾಣಿ ಅವರ ಬೆನ್ನು ಬಿದ್ದಿದ್ದಾರೆ. ಪೆನ್‌ಡ್ರೈವ್‌ ಪಡೆಯುವಲ್ಲಿ ಸಫಲವಾಗಿಲ್ಲ’ ಎಂದು ಮೂಲಗಳು ಹೇಳಿವೆ.

ತಾವು ನೀಡಿದ ಹೇಳಿಕೆಯು ಸರ್ಕಾರಕ್ಕೆ ಆಪತ್ತು ತರುತ್ತದೆ ಎಂಬ ಅರಿವು ಮೂಡುತ್ತಿದ್ದಂತೆ ಅವರು ಎಚ್ಚೆತ್ತುಕೊಂಡಿದ್ದು, ತಾವು ಆ ರೀತಿ ಹೇಳಿಕೆಯನ್ನೇ ನೀಡಿಲ್ಲ ಎಂದಿದ್ದಾರೆ. ಇದು ಯಡಿಯೂರಪ್ಪ ಅವರ ಗಮನಕ್ಕೆ ಬಂದಿದ್ದು, ನಿರಾಣಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಹಿರಿಯ ನಾಯಕ ಎಚ್‌.ಕೆ.ಪಾಟೀಲ ಮತ್ತು ಇತರರು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಸಾವಿರಾರು ಕೋಟಿ ಅವ್ಯವಹಾರ ನಡೆದಿದೆ ಎಂದು ಹೇಳುತ್ತಲೇ ಬಂದಿದ್ದರೂ, ಅದನ್ನು ಸಾಬೀತುಪಡಿಸುವ ನಿಖರವಾದ ದಾಖಲೆ ಪತ್ರಗಳೂ ಅವರಿಗೆ ಲಭಿಸಿರಲಿಲ್ಲ. ಹೀಗಾಗಿ ಆರೋಪಗಳಿಗಷ್ಟೇ ಅವರು ಸೀಮಿತವಾಗಿದ್ದಾರೆ ಎಂದು ಹೇಳಲಾಗಿದೆ.

ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ನಿರಾಣಿ ನೀಡಿರುವ ಹೇಳಿಕೆ ಕಾಂಗ್ರೆಸ್ ನಾಯಕರಿಗೆ ವರವಾಗಿ ಪರಿಣಮಿಸಿದ್ದು, ನಿರಾಣಿ ಹೇಳಿಕೆ ನಿಜವೇ ಆಗಿದ್ದರೆ, ಅದು ಸರ್ಕಾರದ ವಿರುದ್ಧ ಪ್ರಬಲ ಅಸ್ತ್ರವಾಗಲಿದೆ. ಕಾಂಗ್ರೆಸ್‌ನಲ್ಲೂ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಮತ್ತು ಎಚ್‌.ಕೆ.ಪಾಟೀಲ ಅವರು ಯಡಿಯೂರಪ್ಪ ಸರ್ಕಾರದ ವಿರುದ್ಧ ಸಂಘಟಿತ ಹೋರಾಟದ ಬದಲಿಗೆ ಪ್ರತ್ಯೇಕ ಹೋರಾಟದ ಹಾದಿ ಹಿಡಿದಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಸಚಿವ ಸ್ಥಾನ ಸಿಗದೇ ಹತಾಶರಾಗಿರುವ ಮುರುಗೇಶ್‌ ನಿರಾಣಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಹೂಡಿರುವ ತಂತ್ರವೂ ಆಗಿರಬಹುದು ಎಂದು ಬಿಜೆಪಿಯ ಮೂಲಗಳು ಹೇಳಿವೆ. 

ನನ್ನ ಬಳಿ ಪೆನ್‌ಡ್ರೈವ್‌ ಇಲ್ಲ

ಪೆನ್‌ಡ್ರೈವ್‌ ಸಂಗತಿ ಮುನ್ನೆಲೆಗೆ ಬರುತ್ತಿದ್ದಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಮುರುಗೇಶ ನಿರಾಣಿ, ‘ಕೋವಿಡ್‌–19 ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೆ ದಾಖಲೆಗಳಿರುವ ಯಾವುದೇ ಪೆನ್‌ಡ್ರೈನ್‌ ನನ್ನ ಬಳಿ ಇಲ್ಲ’ ಎಂದು ಹೇಳಿದ್ದಾರೆ.

‘125 ಪುಟಗಳ ದಾಖಲೆಗಳ ಪೆನ್‌ಡ್ರೈವ್‌ ನನ್ನ ಬಳಿ ಇದೆ ಎಂದು ಸಾಮಾಜಿಕ ಜಾಲತಾಣಗಳು, ವೆಬ್‌ಪೋರ್ಟಲ್‌ ಮತ್ತು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ನಿರಾಧಾರ’ ಎಂದೂ ನಿರಾಣಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು