ಶನಿವಾರ, ಏಪ್ರಿಲ್ 4, 2020
19 °C
ಪತ್ರ

ಕೊರೊನಾ ವೈರಸ್ ಸೋಂಕಿತ ಪತಿಗೆ ಚಿಕಿತ್ಸೆ: ದಿಟ್ಟ ಮಹಿಳೆಯ ಮಾದರಿ ಕಥನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್‌ ಸೋಂಕು –ಸಾಂಕೇತಿಕ ಚಿತ್ರ

ಕರ್ನಾಟಕದಲ್ಲಿ ದಾಖಲಾಗಿರುವ ಕೊರೊನಾ ವೈರಸ್‌ ಸೋಂಕಿತ ಪ್ರಕರಣಗಳ ಪೈಕಿ, 8ನೇ ಪ್ರಕರಣದ ವ್ಯಕ್ತಿಯ ಪತ್ನಿ ಬರೆದಿರುವ ಪತ್ರ ಇಲ್ಲಿದೆ. ಪ್ರಯಾಣದಿಂದ ಪತಿ ಮನೆಗೆ ಬರುತ್ತಿದ್ದಂತೆ ಪ್ರತ್ಯೇಕ ಕೋಣೆಯಲ್ಲಿ ಇದ್ದದ್ದು, ಆರೋಗ್ಯ ಇಲಾಖೆಯಿಂದ ಪರೀಕ್ಷೆ, ಸೋಂಕು ದೃಢಪಟ್ಟಿದ್ದು, ಮಾನಸಿಕವಾಗಿ ಅನುಭವಿಸಿದ ಹಿಂಸೆ, ಪ್ರತ್ಯೇಕವಾಗಿಟ್ಟು ಪತಿಯ ಚಿಕಿತ್ಸೆ, ಕುಟುಂಬದವರೆಲ್ಲ ಮನೆಯಿಂದ ಹೊರಗೆ ಬಾರದ ಸ್ಥಿತಿ ಹಾಗೂ ಸರ್ಕಾರದ ಅಧಿಕಾರಿಗಳು, ವೈದ್ಯರು ನೀಡಿದ ಸಹಕಾರ, ಎಲ್ಲವನ್ನೂ ದಾಖಲಿಸಿದ್ದಾರೆ. 

"ಅಂದು ಮಾರ್ಚ್‌ 8, ಭಾನುವಾರ ಬೆಳಿಗ್ಗೆ. ನನ್ನ ಪತಿ ಪ್ರಯಾಣದಿಂದ ಜ್ವರದೊಂದಿಗೆ ಮನೆಗೆ ವಾಪಾಸಾಗಿದ್ದರು. ಅವರು ತಾನಾಗಿಯೇ ಮನೆಯ ಮೊದಲ ಮಹಡಿಯಲ್ಲಿ ಪ್ರತ್ಯೇಕವಾಗಿ ಇರಲು ಪ್ರಾರಂಭಿಸಿದರು. ಅದು ಒಳ್ಳೆಯ ಗಾಳಿ, ಬೆಳಕು ಇರುವ ಜಾಗ. ಅಲ್ಲಿಗೆ ನಾನು ಮಾತ್ರ ಹೋಗಿ ಊಟ–ತಿಂಡಿ, ನೀರು, ಇಲ್ಲವೇ ಔಷಧಿಗಳನ್ನು ಕೊಡುತ್ತಿದ್ದೆ. ಅವರಿಂದ ನಾನು ಆದಷ್ಟು ದೂರದಲ್ಲಿಯೇ ಇರುತ್ತಿದ್ದೆ ಹಾಗೂ ಅದೇ ದಿನ, ಭಾನುವಾರ ಸಂಜೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಪತಿಯ ಪ್ರಯಾಣದ ಪೂರ್ಣ ಮಾಹಿತಿ ಪಡೆದು, ಆರೋಗ್ಯದ ಸ್ಥಿತಿಯ ಕುರಿತು ವಿಚಾರಿಸಿದರು. ಪರೀಕ್ಷೆಗಾಗಿ ಗಂಟಲು ದ್ರವದ ಮಾದರಿ ಪಡೆದರು. ಅಲ್ಲಿಂದ ನಾವು ಮನೆಗೆ ಮರಳುತ್ತಿದ್ದಂತೆ ಪತಿ ಮತ್ತೆ ಪ್ರತ್ಯೇಕಗೊಂಡರು.  

ಮಾರ್ಚ್‌ 9, ಸೋಮವಾರ ಮಧ್ಯಾಹ್ನದ ವೇಳೆಗೆ ಅವರಿಗೆ ವೈರಸ್‌ ಸೋಂಕು ಯಥೇಚ್ಛವಾಗಿರುವುದು ತಿಳಿಯಿತು. ಆರೋಗ್ಯ ಇಲಾಖೆಯಿಂದ ಕರೆ ಬಂತು, ಅವರೇ ಆ್ಯಂಬ್ಯುಲೆನ್ಸ್‌ ಕಳಿಸಿದ್ದರು ಹಾಗೂ ಅದರಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋದರು. ಈಗಲೂ ಅವರು ಆಸ್ಪತ್ರೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲಿ ಅವರನ್ನು ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ. 

ನನ್ನ ಪತಿ ಸೇರಿದಂತೆ ಕುಟುಂಬದ ಎಲ್ಲರಿಗೂ ತೀವ್ರವಾದ ಹತಾಶೆ ಮತ್ತು ಸಂಕಟದ ಅನುಭವ. ಅಕ್ಕಪಕ್ಕದ ಮನೆಯವರು ಭಯ ಭೀತರಾಗಿದ್ದರು ಹಾಗೂ ನಾವು ಅಸ್ಪೃಷ್ಯರು ಎಂಬಂತಹ ಭಾವನೆ ಬರುವಂತೆ ನಡೆದುಕೊಳ್ಳುತ್ತಿದ್ದುದು; ಮಾನಸಿಕವಗಿ ಸಹಿಸುವುದೇ ಕಷ್ಟವಾಗಿತ್ತು. 

ಮಕ್ಕಳಂತೂ ಹೊರಗೆ ಹೋಗಲಾಗದೆ ತುಂಬಾ ಹತಾಶೆ ಅನುಭವಿಸಿದರು. ಆದರೂ ಪುಸ್ತಕ ಮತ್ತು ಟಿವಿಯಿಂದ ಹೇಗೋ ಕಾಲ ದೂಡಿತು. ಈ ಕಠಿಣ ಪರಿಸ್ಥಿತಿಯಲ್ಲಿ ನಮ್ಮ ಕುಟುಂಬ ಮತ್ತು ನನ್ನ ಪತಿಗೆ ಶಕ್ತಿ ತುಂಬುವ ಸಲುವಾಗಿ ನಾವು ಧ್ಯಾನ ಮಾಡಲು ಶುರು ಮಾಡಿದೆವು. 

ಮೊದಲ ದಿನದಿಂದಲೇ ನಮ್ಮ ಮನೆಯ ಕೆಲಸದವರು ಮತ್ತು ಗಿಡಗಳನ್ನು ನಿರ್ವಹಿಸುವವರಿಗೆ, ನಾನು ತಿಳಿಸುವವರೆಗೂ ಕೆಲಸಕ್ಕೆ ಬರದಂತೆ ಹೇಳಿದೆ. ನಮ್ಮ ಎಲ್ಲ ಕೆಲಸಗಳನ್ನೂ ನಾವೇ ಮಾಡಿಕೊಳ್ಳುತ್ತಿದ್ದೇವೆ. 

ಪ್ರತಿಯೊಂದು ಹಂತದಲ್ಲಿಯೂ ನನ್ನ ಪತಿಯ ಕಂಪನಿ ಸಹ ನಿರಂತರವಾಗಿ ಬೆಂಬಲ ನೀಡುತ್ತಿದೆ.

ಸರ್ಕಾರ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ವೈದ್ಯರು, ಎಲ್ಲರೂ ನನಗೆ ಮತ್ತು ನನ್ನ ಕುಟುಂಬದ ಪಾಲಿಗೆ ದೇವರಂತಾಗಿದ್ದಾರೆ. ನನ್ನ ಪತಿಯನ್ನು ಬೇರೊಂದು ಜಾಗದಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡುತ್ತಿದ್ದುದು ಹಾಗೂ ನಾನು ಕುಟುಂಬದೊಂದಿಗೆ ಮನೆಯಲ್ಲಿದ್ದಾಗ ಆ ಎಲ್ಲರೂ ತುಂಬ ಸಹಾಯ ಮಾಡಿದರು. ನನ್ನ ಮಗಳು ಅವಳ ಪರೀಕ್ಷೆಗಳನ್ನು ಬರೆಯುತ್ತಾಳೆ ಎಂದು ನಾವು ಯಾರೂ ಸಹ ಊಹಿಸಿರಲಿಲ್ಲ. ಆದರೆ, ಅವರು ಅದನ್ನು ಸಾಧ್ಯವಾಗಿಸಿದರು. ಮಗಳು ಪರೀಕ್ಷೆ ಬರೆದಳು ಮತ್ತು ಬರೆಯುತ್ತಿದ್ದಾಳೆ. ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಈವರೆಗೂ ನಮ್ಮ ಗುರುತನ್ನು ಗೌಪ್ಯವಾಗಿಟ್ಟಿರುವುದಕ್ಕೆ ಆಭಾರಿಯಾಗಿದ್ದೇನೆ.

ನನ್ನ ಅತ್ತೆ ಮತ್ತು ಮಗ ದೀರ್ಘಕಾಲದ ಅಸ್ತಮಾ ಪೀಡಿತರಾಗಿದ್ದು, ಆರೋಗ್ಯ ಇಲಾಖೆ ನಮ್ಮೆಲ್ಲರನ್ನೂ ಪರೀಕ್ಷೆಗೆ ಒಳಪಡಿಸಿತು. ಪರೀಕ್ಷೆಯಲ್ಲಿ ನಾವೆಲ್ಲರೂ ಸೋಂಕಿಗೆ ನೆಗೆಟಿವ್‌ ಆಗಿರುವುದು ತಿಳಿಯಿತು. ಆದರೆ, ನಾವು ಈಗ ಮನೆಯಲ್ಲಿಯೇ ಉಳಿದಿದ್ದೇವೆ. ಆದರೂ ನಾನು ವೈದ್ಯರು ಮತ್ತು ಮನಃಶಾಶ್ತ್ರಜ್ಞರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ನಾನು ಆತಂಕದಲ್ಲಿ ಪದೇ ಪದೇ ಅವರಿಗೆ ಕರೆ ಮಾಡಿದರೂ, ಅವರು ಯಾವತ್ತಿಗೂ ಬೇಸರ ವ್ಯಕ್ತಪಡಿಸಿಲ್ಲ. ಕರೆ ಸ್ವೀಕರಿಸಲು ಸಾಧ್ಯವಾಗದಿದ್ದಾಗ ಸ್ವಲ್ಪ ಸಮಯದಲ್ಲಿ ಅವರೇ ಕರೆ ಮಾಡುತ್ತಾರೆ. 

ಹಿನ್ನೆಲೆಯಲ್ಲಿ ಶ್ರಮಿಸುತ್ತಿರುವ ಆ ಎಲ್ಲ ಮಹಾನ್‌ ವ್ಯಕ್ತಿಗಳಿಗೆ ಹೇಗೆ ಧನ್ಯವಾದ ಅರ್ಪಿಸಬೇಕೋ ನನಗೆ ತಿಳಿಯುತ್ತಿಲ್ಲ. ನಾನು ಅಂತರಾಳದಿಂದ ಅವರಿಗೆಲ್ಲ ಒಳಿತನ್ನು ಬಯಸುತ್ತೇನೆ. ಹಾಗೇ, ಅವರಿಗೆಲ್ಲ ಯಥೇಚ್ಛವಾಗಿ ಸಂತೋಷ, ಆರೋಗ್ಯ ಸಿಗಲಿ ಎಂದು ಕೋರುತ್ತೇನೆ. ಅವರೆಲ್ಲರೂ ವಿಶ್ರಮಿಸದೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ..." 
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು