ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

55 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಸೋಂಕು ಪರೀಕ್ಷೆ

ಮೇ ಅಂತ್ಯಕ್ಕೆ 60 ಲ್ಯಾಬ್‌– ಸ್ಥಾಪನೆ ಹೊಣೆ ನಿಮ್ಹಾನ್ಸ್‌ಗೆ
Last Updated 20 ಏಪ್ರಿಲ್ 2020, 16:59 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌–19ಗೆ ರಾಜ್ಯದಲ್ಲಿ ಮೃತಪಟ್ಟವರು 55ರಿಂದ 80 ವರ್ಷದೊಳಗಿನವರಾಗಿದ್ದು, ಹಿರಿಯ ನಾಗರಿಕರನ್ನು ಉಳಿಸಿಕೊಳ್ಳಲೇಬೇಕು ಎಂಬ ಕಾರಣಕ್ಕೆ 55 ವರ್ಷ ಮೇಲ್ಪಟ್ಟ ಎಲ್ಲರನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

‘55 ವರ್ಷ ಮೇಲ್ಪಟ್ಟವರು ಸಣ್ಣ ಆಯಾಸ ಇದ್ದರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ನಿಗದಿತ ಆಸ್ಪತ್ರೆಗೆ ಬರಬೇಕು. ಇದುವರೆಗೆ ಮೃತಪಟ್ಟ ಹೆಚ್ಚಿನವರು ಕೊನೆಯ ಹಂತದಲ್ಲಿ ಆಸ್ಪತ್ರೆಗೆ ಬಂದವರು. ಅಂತಹ ಪರಿಸ್ಥಿತಿಯಲ್ಲಿ ಅವರನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ’ ಎಂದು ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ಶೇ 7.7ರಷ್ಟು (57.91 ಲಕ್ಷ) ಜನರಿದ್ದಾರೆ. ಮನೆಯಲ್ಲಿ ಅಂತರ ಕಾಯ್ದುಕೊಂಡು ಅವರನ್ನು ಇರಿಸುವುದರ ಜತೆಗೆ ಕೋವಿಡ್‌ ಪಿಡುಗು ಸಂಪೂರ್ಣ ನಿವಾರಣೆ ಆಗುವವರೆಗೆ ಹಿರಿಯ ನಾಗರಿಕರು ಅದರಲ್ಲೂ ಮುಖ್ಯವಾಗಿ ಶ್ವಾಸಕೋಶ, ಮೂತ್ರಪಿಂಡ, ಹೃದಯ, ಕ್ಯಾನ್ಸರ್‌, ಎಚ್‌ಐವಿ, ಅಧಿಕ ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳಿಂದ ಬಳಲುತ್ತಿರುವವರನ್ನು ರಕ್ಷಿಸುವ ಹೊಣೆ ಎಲ್ಲರ ಮೇಲಿದೆ’ ಎಂದರು.

ಪರೀಕ್ಷೆ ತ್ವರಿತ: ‘ಪ್ರಯೋಗಾಲಯ ಪರೀಕ್ಷೆ ನಡೆಯುತ್ತಿಲ್ಲ ಎಂಬ ಆರೋ‍ಪ‍ ಸರಿಯಲ್ಲ. ರಾಜ್ಯದಲ್ಲಿ ಸರಾಸರಿ 59.21 ಪರೀಕ್ಷೆಗೆ ಒಂದು ಪಾಸಿಟಿವ್ ಫಲಿತಾಂಶ ಬರುತ್ತಿದೆ. ಸದ್ಯ ದಿನಕ್ಕೆ 2 ಸಾವಿರಕ್ಕಿಂತಲೂ ಅಧಿಕ ಮಾದರಿಗಳ ಪರೀಕ್ಷೆ ನಡೆಯುತ್ತಿದೆ. ಈ ತಿಂಗಳ ಅಂತ್ಯಕ್ಕೆ ರಾಜ್ಯದಲ್ಲಿ ಇನ್ನೂ 10 ಪ್ರಯೋಗಾಲಯಗಳು ಹಾಗೂ ಮೇ ಅಂತ್ಯದ ವೇಳೆಗೆ 60 ಪ್ರಯೋಗಾಲಯಗಳು ಸ್ಥಾಪನೆಗೊಳ್ಳಲಿವೆ. ಈ ಎಲ್ಲ ಪ್ರಯೋಗಾಲಯಗಳ ಸ್ಥಾಪನೆಯ ಮೇಲ್ವಿಚಾರಣೆಯನ್ನು ನಿಮ್ಹಾನ್ಸ್‌ ವಹಿಸಲಿದೆ’ ಎಂದು ಸಚಿವ ಸುಧಾಕರ್ ಹೇಳಿದರು.‌

‘ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಜಿಲ್ಲಾ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳ ಜತೆಗೆ ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯಗಳ ಸೌಲಭ್ಯಗಳನ್ನೂ ಬಳಸಿಕೊಂಡು ಪ್ರುಯೋಗಾಲಯ ಸ್ಥಾಪಿಸಲಾಗುವುದು. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರತಿದಿನ ಪರೀಕ್ಷೆ ನಡೆಸುವ ಪ್ರಮಾಣ ದೊಡ್ಡ ಮಟ್ಟದಲ್ಲಿ ಹೆಚ್ಚಲಿದೆ’ ಎಂದರು.‌

ತ್ವರಿತ ಕಿಟ್‌ನಿಂದ ನಿಖರ ಫಲಿತಾಂಶ ಇಲ್ಲ‌

‘ತ್ವರಿತ ಪರೀಕ್ಷಾ ಕಿಟ್‌ ಬಗ್ಗೆ ದೊಡ್ಡ ಆಸಕ್ತಿ ಬೇಡ. ಅದು ನಿಖರ ಫಲಿತಾಂಶ ನೀಡುವುದಿಲ್ಲ. ಕೋವಿಡ್‌ ಬಂದು ಗುಣಮುಖರಾದವರನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸುವಾಗ ಇದನ್ನು ಬಳಸಬಹುದು. ಪಿಸಿಆರ್ ಪರೀಕ್ಷೆಯಷ್ಟೇ ಶೇ 100ರಷ್ಟು ನಿಖರ ಮಾಹಿತಿ ನೀಡಲು ಸಾಧ್ಯ. ಹೀಗಿದ್ದರೂ ರಾಜ್ಯ 1.25 ಲಕ್ಷ ತ್ವರಿತ ಪರೀಕ್ಷಾ ಕಿಟ್ ತರಿಸಿಕೊಳ್ಳಲಿದ್ದು, ಈಗಾಗಲೇ 50 ಸಾವಿರ ಬಂದಿದೆ. ಕೆಂಪು ವಲಯಗಳಲ್ಲಿ ಜನರನ್ನು ಸಾಮೂಹಿಕವಾಗಿ ಪರೀಕ್ಷೆಗೆ ಒಳಪಡಿಸುವುದಕ್ಕೆ ಇದನ್ನು ಬಳಸಲಾಗುವುದು’ ಎಂದು ಡಾ.ಸುಧಾಕರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT