ಬುಧವಾರ, ಜುಲೈ 28, 2021
24 °C
ಮಿಲಿಟರಿ ಆಸ್ಪತ್ರೆಯವರಿಂದಲೂ ಸಮ್ಮತಿ

ಕೊರೊನಾ: ತಾಲ್ಲೂಕು ಆಸ್ಪತ್ರೆಗಳಲ್ಲೂ ಸಿದ್ಧತೆ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಲಾಕ್‌ಡೌನ್‌ ಸಡಿಲಿಕೆಯಿಂದಾಗಿ ಮುಂದಿನ ದಿನಗಳಲ್ಲಿ ಕೊರೊನಾ ಸೋಂಕು ದೃಢಪಡುವ ಪ್ರಕರಣಗಳ ಸಂಖ್ಯೆ ಹೆಚ್ಚಾದಲ್ಲಿ ಅದನ್ನು ನಿರ್ವಹಿಸುವುದಕ್ಕಾಗಿ ಜಿಲ್ಲಾಡಳಿತದಿಂದ ತಾಲ್ಲೂಕು ಕೇಂದ್ರಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತ್ಯೇಕ ವಾರ್ಡ್‌ಗಳನ್ನು ರೂಪಿಸಲಾಗಿದ್ದು, ಅಲ್ಲಿ 30 ಹಾಸಿಗೆಗಳ ವ್ಯವಸ್ಥೆಯಾಗಿದೆ.

ಪ್ರಸ್ತುತ, ಕೋವಿಡ್–19 ಸೋಂಕು ಕಾಣಿಸಿಕೊಂಡವರನ್ನು ಜಿಲ್ಲಾ ಕೇಂದ್ರದಲ್ಲಿರುವ ಬಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರಕರಣಗಳು ಹೆಚ್ಚುವ ಸಾಧ್ಯತೆ ಕುರಿತು ತಜ್ಞರು ವರದಿ ನೀಡಿರುವುದರಿಂದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಸೂಚನೆ ಮೇರೆಗೆ ಜಿಲ್ಲೆಯಲ್ಲಿ ಸಿದ್ಧತೆ ನಡೆದಿದೆ. ಎಲ್ಲ 9 ತಾಲ್ಲೂಕು ಆಸ್ಪತ್ರೆಗಳಲ್ಲೂ ಚಿಕಿತ್ಸೆಗೆ ಬೇಕಾದ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಬಿಮ್ಸ್‌ ಮೇಲಿನ ಅವಲಂಬನೆಯನ್ನು ಕೊಂಚ ತಗ್ಗಿಸುವ ಉದ್ದೇಶ ಹೊಂದಲಾಗಿದೆ.

ಹೆಚ್ಚುವರಿಯಾಗಿ 180

ಬಿಮ್ಸ್‌ನಲ್ಲಿ 240 ಹಾಸಿಗೆಗಳ ಸಾಮರ್ಥ್ಯದ ವಾರ್ಡ್‌ ಅನ್ನು ಕೋವಿಡ್‌–19 ಸೋಂಕಿತರ ಚಿಕಿತ್ಸೆಗೆ ನಿಗದಿಪಡಿಸಲಾಗಿದೆ. ಶನಿವಾರದವರೆಗೆ ಜಿಲ್ಲೆಯಲ್ಲಿ 297 ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು. ಇವರಲ್ಲಿ 219 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 85 ಸಕ್ರಿಯ ಪ್ರಕರಣಗಳಿವೆ. ಅಂದರೆ, ಇಷ್ಟು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದಲ್ಲದೇ, ಇನ್ನೂ ಹೆಚ್ಚುವರಿಯಾಗಿ 180 ಹಾಸಿಗೆಗಳ ವ್ಯವಸ್ಥೆಗೆ ಯೋಜನೆ ಹಾಕಿಕೊಳ್ಳಲಾಗಿದೆ. ಅಂತರ ಕಾಯ್ದುಕೊಂಡು ಹಾಸಿಗೆಗಳನ್ನು ಹಾಕಬೇಕಿರುವುದರಿಂದ, ಇತರ ವಾರ್ಡ್‌ಗಳಿಗೆ ಹೋಲಿಸಿದರೆ ಕೊರೊನಾ ವಾರ್ಡ್‌ಗೆ ಹೆಚ್ಚಿನ ಸ್ಥಳಾವಕಾಶ ಬೇಕಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

‘ಎಲ್ಲ 9 ತಾಲ್ಲೂಕು ಆಸ್ಪತ್ರೆಗಳಲ್ಲಿ ಪ್ರಸ್ತುತ 30 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಇದನ್ನು ಶೀಘ್ರದಲ್ಲೇ 50ಕ್ಕೆ ಹೆಚ್ಚಿಸಲಾಗುವುದು. ಸೋಂಕಿತರಿಗೆ ನೀಡಬೇಕಾದ ಚಿಕಿತ್ಸೆ ಕುರಿತು ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ. ಈ ವಾರ್ಡ್‌ಗಳಿಗೆ ಸಿಬ್ಬಂದಿಯ ಕೊರತೆ ಇಲ್ಲ. ಪ್ರತ್ಯೇಕವಾಗಿ ವಾರ್ಡ್‌ ಮಾಡಿದ್ದು, ಇತರ ಸಾಮಾನ್ಯ ರೋಗಿಗಳ ಚಿಕಿತ್ಸೆಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು.  ಅಗತ್ಯ ಔಷಧಿಗಳಿಗೂ ವ್ಯವಸ್ಥೆಯಾಗಿದೆ. ಗಂಭೀರವಾದ ಸಮಸ್ಯೆಗಳಿದ್ದವರನ್ನು ಬಿಮ್ಸ್‌ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುವುದು’ ಎಂದು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ. ಮುನ್ಯಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ಪರಿಕರಗಳು ಲಭ್ಯ ಇವೆ

‘ಇದಲ್ಲದೇ, ಬೆಳಗಾವಿ ನಗರದಲ್ಲಿರುವ ಮಿಲಿಟರಿ ಆಸ್ಪತ್ರೆಯಲ್ಲೂ 150 ಹಾಸಿಗೆಗಳ ಆಸ್ಪತ್ರೆ ಲಭ್ಯವಾಗಲಿದೆ. ಜಿಲ್ಲಾಧಿಕಾರಿ ಆ ಆಸ್ಪತ್ರೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಒಪ್ಪಿಗೆಯೂ ದೊರೆತಿದೆ. ಅಲ್ಲಿ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಿದ್ದಲ್ಲಿ ಅದಕ್ಕೆ ತಕ್ಕಂತೆ ಚಿಕಿತ್ಸೆ ಒದಗಿಸುವುದಕ್ಕೆ ಬೇಕಾದ ಎಲ್ಲ ಪೂರ್ವ ಸಿದ್ಧತೆ ನಡೆದಿದೆ. ವೈದ್ಯಕೀಯ ಸಿಬ್ಬಂದಿಗೆ ನೀಡುವ ಪಿಪಿಇ (ವೈಯಕ್ತಿಕ ಸುರಕ್ಷಾ ಕವಚ), ಎನ್‌–95 ಮುಖಗವಸು (ಮಾಸ್ಕ್‌) ಮೊದಲಾದ ಅಗತ್ಯ ಪರಿಕರಗಳನ್ನು ಸರ್ಕಾರದಿಂದ ಹಂತ ಹಂತವಾಗಿ ಪೂರೈಸಲಾಗುತ್ತಿದೆ. ಯಾವುದೇ ಕೊರತೆ ಇಲ್ಲ’ ಎಂದು ಮಾಹಿತಿ ನೀಡಿದರು.

ಜಿಲ್ಲೆಗೆ 2,8750 ಎನ್‌–95 ಮಾಸ್ಕ್‌ಗಳು ಪೂರೈಕೆ ಆಗಿದ್ದವು. ಈ ಪೈಕಿ 23,995 ಬಳಕೆಯಾಗಿವೆ. 4,755 ಬಾಕಿ ಇವೆ. ಅಂತೆಯೇ, 31,990 ಪಿಪಿಇ ಕಿಟ್‌ಗಳಲ್ಲಿ 17,926 ಬಳಸಲಾಗಿದೆ. 14,064 ಕಿಟ್‌ಗಳು ಸದ್ಯಕ್ಕೆ ಉಳಿದಿವೆ. 2,70,500 ಮಾಸ್ಕ್‌ (ಟ್ರಿಪಲ್‌ ಲೇಯರ್‌)ಗಳು ಬಂದಿದ್ದವು. ಇವುಗಳಲ್ಲಿ 2,32,800 ಅನ್ನು ಉಪಯೋಗಿಸಲಾಗಿದೆ. 37,700 ಲಭ್ಯ ಇವೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು