ಶುಕ್ರವಾರ, ಜೂಲೈ 10, 2020
24 °C

6 ಲಕ್ಷ ಜನರ ಪರೀಕ್ಷೆ ಪೂರ್ಣ: ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಕೊರೊನಾ ವೈರಸ್‌ ಸೋಂಕು ಪತ್ತೆ ಹಚ್ಚುವಲ್ಲಿ ಸಹಕಾರಿಯಾಗುವ ಕೋವಿಡ್‌ ತಪಾಸಣಾ ಪರೀಕ್ಷೆಯಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಸೋಮವಾರ ತಿಳಿಸಿದರು.

ನಗರದ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಆರಂಭಗೊಂಡ ಕೋವಿಡ್ ಪರೀಕ್ಷಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಆನ್‌ಲೈನ್‌ ಮೂಲಕ ಮಾತನಾಡಿದ ಸಚಿವರು, ‘ಕನ್ನಡ ನಾಡಿನ 6 ಕೋಟಿ ಜನರಲ್ಲಿ ಈಗಾಗಲೇ 6 ಲಕ್ಷ ಜನರ ಗಂಟಲುದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆ ಪೂರ್ಣಗೊಳಿಸಲಾಗಿದೆ’ ಎಂದು ಹೇಳಿದರು.

‘ಫೆಬ್ರುವರಿ ತಿಂಗಳಲ್ಲಿ ರಾಜ್ಯದಲ್ಲಿ ಕೇವಲ 2 ಲ್ಯಾಬ್‌ಗಳು ಮಾತ್ರ ಕೋವಿಡ್ ತಪಾಸಣೆ ನಡೆಸುತ್ತಿದ್ದವು. ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನಲ್ಲಿ ಆರಂಭಗೊಂಡ ಲ್ಯಾಬ್ ರಾಜ್ಯದ 79ನೇಯದ್ದು. ಮೊದಲು ಐಸಿಎಂಆರ್ ಮಾರ್ಗದರ್ಶನ ನೀಡುತ್ತಿತ್ತು. ಇದೀಗ ನಿಮ್ಹಾನ್ಸ್ ನೋಡಲ್ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸುತ್ತಿದೆ’ ಎಂದರು.

‘ಮೂರು ತಿಂಗಳ ಹಿಂದೆಯೇ ರಾಜ್ಯದಲ್ಲಿರುವ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷಾ ಲ್ಯಾಬ್ ಆರಂಭಿಸುವಂತೆ ನಿರ್ಣಯಿಸಲಾಗಿತ್ತು. ಜೆಎಸ್‌ಎಸ್‌ ಕಾಲೇಜು ಇದೀಗ ಅದನ್ನು ಕಾರ್ಯರೂಪಕ್ಕೆ ತಂದಿದೆ. ಇದರಿಂದ ಹೆಚ್ಚೆಚ್ಚು ತಪಾಸಣೆ ನಡೆಯಲಿದೆ. ಸೋಂಕಿತರನ್ನು ಪತ್ತೆ ಹಚ್ಚಿ, ಸೋಂಕು ನಿಯಂತ್ರಣಕ್ಕೆ ಸಮರೋಪಾದಿ ಕೆಲಸ ಮಾಡಲು ಸಹಕಾರಿಯಾಗಲಿದೆ’ ಎಂದು ಸುಧಾಕರ್ ತಿಳಿಸಿದರು.

ಕೋವಿಡ್ ಪರೀಕ್ಷಾ ಕೇಂದ್ರಕ್ಕೆ ಆನ್‌ಲೈನ್‌ ಮೂಲಕವೇ ಚಾಲನೆ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ‘ಪರೀಕ್ಷೆಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಜೆಎಸ್‌ಎಸ್‌ ಉಳಿದವರಿಗೆ ಮಾದರಿಯಾಗಲಿ. ಕೋವಿಡ್–19 ನಿಯಂತ್ರಣಕ್ಕೆ ಖಾಸಗಿಯವರು ಕೈ ಜೋಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದು ಹೇಳಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಕೇಂದ್ರ–ರಾಜ್ಯ ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸುತ್ತಿವೆ. ಆತ್ಮವಿಶ್ವಾಸ ತುಂಬುವಂತಹ ಕೆಲಸವನ್ನು ಮಾಡುತ್ತಿವೆ. ಜನರು ಆತಂಕಕ್ಕೊಳಗಾಗುವುದು ಬೇಡ. ಕೋವಿಡ್ ಲಕ್ಷಣ ಕಂಡು ಬಂದೊಡನೆ ತಪಾಸಣೆಗೊಳಗಾಗಿ’ ಎಂದು ಜನ ಸಮುದಾಯಕ್ಕೆ ಮನವಿ ಮಾಡಿದರು.

‘ಮೈಸೂರಿನಲ್ಲಿ ಸಮುದಾಯಕ್ಕೆ ಸೋಂಕು ಹರಡುತ್ತಿದೆ ಎಂಬ ಆತಂಕ ಹೆಚ್ಚಿದೆ. ಈ ಹೊತ್ತಲ್ಲಿ ಮತ್ತೊಂದು ಪ್ರಯೋಗಾಲಯ ಆರಂಭವಾಗಿದ್ದು, ಒಳ್ಳೆಯ ಬೆಳವಣಿಗೆ’ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ಶಾಸಕ ಎಲ್.ನಾಗೇಂದ್ರ ಮಾತನಾಡಿದರು. ವೈದ್ಯಕೀಯ ಕಾಲೇಜಿನ ಸಿಬ್ಬಂದಿ, ಜೆಎಸ್‌ಎಸ್‌ ವಿದ್ಯಾಪೀಠದ ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು