ಸೋಮವಾರ, ಆಗಸ್ಟ್ 2, 2021
24 °C
ಉನ್ನತಮಟ್ಟದ ಸಭೆ ನಡೆಸಿದ ಡಿಸಿಎಂ ಅಶ್ವತ್ಥನಾರಾಯಣ

ಕೋವಿಡ್ ಕೇರ್‌ ಕೇಂದ್ರಗಳಲ್ಲಿ 20 ಸಾವಿರ ಹಾಸಿಗೆ ಮತ್ತು ಐಸಿಯು: ಸರ್ಕಾರ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

CN Ashwath Narayan

ಬೆಂಗಳೂರು: ಕೋವಿಡ್- 19 ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲಿಯೇ ಎದುರಾಗುವ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರುವ ರಾಜ್ಯ ಸರ್ಕಾರ, ನಗರದ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿನ ಬೆಡ್‌ಗಳ ಪ್ರಮಾಣವನ್ನು 20 ಸಾವಿರದವರೆಗೂ ಹೆಚ್ಚಿಸಲು ನಿರ್ದರಿಸಿದೆ.

ಇಲ್ಲಿ  ಸೋಮವಾರ ಉನ್ನತ ಮಟ್ಟದ ಸಭೆ ನಡೆಸಿದ ಕೋವಿಡ್‌ ಕೇರ್‌ ಕೇಂದ್ರಗಳ (ಸಿಸಿಸಿ) ಉಸ್ತುವಾರಿಯೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಈಗಾಗಲೇ ನಮ್ಮಲ್ಲಿ 1,250 ಹಾಸಿಗೆ ಗಳು ಲಭ್ಯ ಇವೆ. ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರವನ್ನು ಜಗತ್ತಿನಲ್ಲಿಯೇ ಅತಿದೊಡ್ಡ ಕೋವಿಡ್ ಕೇಂದ್ರವನ್ನಾಗಿ ಸಿದ್ಧಪಡಿಸಲಾಗಿದೆ. ಇಲ್ಲಿ 3-4ದಿನಗಳಲ್ಲಿ 10,100 ಹಾಸಿಗೆಗಳು ಸಿಗಲಿವೆ. ವಾರದಲ್ಲಿ ಒಟ್ಟಾರೆ 20 ಸಾವಿರ ಹಾಸಿಗೆ ಲಭ್ಯವಾಗಲಿವೆ. ಇನ್ನೂ ಅಗತ್ಯಬಿದ್ದರೆ ತಿಂಗಳಾಂತ್ಯದ ವೇಳೆಗೆ ಬೆಡ್‌ಗಳ ಸಂಖ್ಯೆಯನ್ನು30 ಸಾವಿರಕ್ಕೆ ಹೆಚ್ಚಿಸುವ ಉದ್ದೇಶ ಇದೆʼ ಎಂದು ತಿಳಿಸಿದರು. 

ಕಂದಾಯ ಸಚಿವ ಆರ್. ಅಶೋಕ ಸೇರಿದಂತೆ ನಗರದ ಕೆಲವು ಶಾಸಕರು, ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ಡಿಸಿಎಂ, ಕೋವಿಡ್ ಕೇರ್ ಕೇಂದ್ರಗಳಲ್ಲಿ ತಲಾ ಹತ್ತು ಹಾಸಿಗೆಗಳ ತುರ್ತು ನಿಗಾ ಘಟಕಗಳನ್ನು ಸ್ಥಾಪಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ: 

ಸದ್ಯಕ್ಕೆ ನಮ್ಮಲ್ಲಿರುವ ಹಾಸಿಗೆ ಗಳಲ್ಲಿ 2,250 ಹಾಸಿಗೆಗಳು ಬಳಕೆಯಾಗುತ್ತಿವೆ. ಕೆಲ ರೋಗಿಗಳು ಗುಣಮುಖರಾಗಿ ಮನೆಗೆ ಹೋಗುತ್ತಿರುವುದರಿಂದ ಹಣಾಸಿಗೆಗಳು ಖಾಲಿ ಕೂಡ ಆಗುತ್ತಿವೆ. ಅಲ್ಲದೆ, ಮನೆಯಲ್ಲೇ ಚಿಕಿತ್ಸೆ ಪಡೆಯುವ ವ್ಯವಸ್ಥೆ ಜಾರಿ ಮಾಡಲಾಗಿದೆ. ಅಪಾರ್ಟ್‌ಮೆಂಟ್‌ ಗಳಲ್ಲಿ ಇರುವ ಕ್ಲಬ್ ಹೌಸ್‌ಗಳನ್ನು ಬಳಕೆ ಮಾಡಿಕೊಂಡು ಅಲ್ಲಿಯೂ ನಮಗೆ ಕೋವಿಡ್‌ ಕೇರ್‌ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶ ಇದೆ. ಇದಕ್ಕೆ ಅಪಾರ್ಟ್‌ಮೆಂಟ್‌ಗಳ ಸಂಘಗಳ ಪ್ರತಿನಿಧಿಗಳು ಒಪ್ಪಿದ್ದಾರೆ ಎಂದು ಅವರು ತಿಳಿಸಿದರು.

ಸದ್ಯಕ್ಕೆ ಬೆಂಗಳೂರಿನಲ್ಲಿ ನಾಲ್ಕು ಕೋವಿಡ್ ಕೇರ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಆ ಪೈಕಿ ಜಿಕೆವಿಕೆಯಲ್ಲಿ 770, ಹಜ್ ಭವನದಲ್ಲಿ 432, ರವಿಶಂಕರ್ ಗುರೂಜಿ ಆಶ್ರಮದಲ್ಲಿ 176, ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ 64 ಹಾಸಿಗೆಗಳು ಸಿದ್ಧ ಇವೆ. ಜಿಕೆವಿಕೆ ಕ್ಯಾಂಪಸ್ಸಿನಲ್ಲಿರುವ ತೋಟಗಾರಿಕೆ ವಿಭಾಗದಲ್ಲಿ 450 ಹಾಸಿಗೆ ಗಳಿಗೆ ಹೆಚ್ಚುವರಿಯಾಗಿ ವ್ಯವಸ್ಥೆ ಮಾಡಲಾಗಿದೆ. ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ 250 ಹಾಸಿಗೆಗಳು ಈಗಾಗಲೇ ಸಿದ್ಧ ಇವೆ, ಜತೆಗೆ ಬೆಂಗಳೂರು ವಿವಿಯ ಬಾಲಕಿಯರ ಹಾಸ್ಟೆಲ್ಲಿನಲ್ಲಿ 200 ಹಾಸಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.

ಮಂಗಳವಾರದಿಂದ ಸಮರ್ಥ ಭಾರತ ಸ್ವಯಂ ಸೇವಕರು: ಕೋವಿಡ್ ಕೇರ್ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ನರ್ಸ್ ಗಳು ಮತ್ತಿತರೆ ಸಿಬ್ಬಂದಿಗೆ ನೆರವಾಗಲು ಮಂಗಳವಾರದಿಂದಲೇ ಸಮರ್ಥ ಭಾರತ ಸಂಘಟನೆಯ ಸ್ವಯಂ ಸೇವಕರು ಲಭ್ಯವಾಗಲಿದ್ದಾರೆ. ಮೊದಲಿಗೆ ಇವರು ಜಿಕೆವಿಕೆಯ ಕೇಂದ್ರದಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಅಲ್ಲಿ ಅಗತ್ಯವಾಗಿ ಮಾಡಬೇಕಿರುವ ವೈದ್ಯಕೀಯೇತರ ಎಲ್ಲ ಕೆಲಸಗಳನ್ನು ಈ ಸ್ವಯಂ ಸೇವಕರು ಮಾಡಲಿದ್ದಾರೆ. ಇವರ ಜತೆಗೆ ಪ್ರತಿ ಕೇಂದ್ರಕ್ಕೂ ಒಬ್ಬೊಬ್ಬ ವ್ಯವಸ್ಥಾಪಕರನ್ನು ನಿಯೋಜಿಸಲಾಗುವುದು ಹಾಗೂ ಎಲ್ಲ ಕಡೆ ಕೋವಿಡ್ ಮಾರ್ಷಲ್ ಗಳನ್ನು ನೇಮಿಸಲಾಗುತ್ತಿದೆ. ಹೌಸ್ ಕೀಪಿಂಗ್ ಸಿಬ್ಬಂದಿಯೂ ಇರುತ್ತಾರೆ. ಎರಡು ಆಂಬುಲೆನ್ಸ್ ಗಳನ್ನು ಸದಾ ಕೇಂದ್ರಗಳಲ್ಲಿ ಇರುವಂತೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ವಿವರಿಸಿದರು.

ಗುಣಮಟ್ಟದ ಆಹಾರ: ಕೋವಿಡ್ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳಿಗೆ ಉತ್ತಮ ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡಲಾಗುತ್ತಿದೆ. ಹಜ್ ಭವನದಲ್ಲಿ ಸಮಸ್ಯೆಯಾಗಿತ್ತು. ಅದನ್ನು ಸರಿಪಡಿಸಲಾಗಿದೆ. ಈ ಕ್ಷಣದಿಂದ ಎಲ್ಲೆಡೆಗೂ ಉತ್ತಮ ಆಹಾರವನ್ನು ಪೂರೈಕೆ ಮಾಡುವುದರ ಜತೆಗೆ ವೈದ್ಯಕೀಯ ಸಿಬ್ಬಂದಿಗೆ ಹಣ್ಣು ನೀಡುವ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಡಿಸಿಎಂ ಹೇಳಿದರು.  ಕೋವಿಡ್‌ ಕೇಂದ್ರಗಳಿಗೆ ಆಹಾರ ಸರಬರಾಜು ಮಾಡುತ್ತಿರುವ ಇಸ್ಕಾನ್ ಸಂಸ್ಥೆಯ ಪ್ರತಿನಿಧಿಗಳು ಕೂಡ ಈ ಸಭೆಯಲ್ಲಿ ಹಾಜರಿದ್ದರು. ಗುಣಮಟ್ಟದ ಜತೆಗೆ ಕೊಡುತ್ತಿರುವ ಆಹಾರದ ಪ್ರಮಾಣವನ್ನು ಹೆಚ್ಚು ಮಾಡಬೇಕೆಂದೂ ಡಿಸಿಎಂ ಅವರಿಗೆ ಸೂಚಿಸಿದರು.

ಶಾಸಕರಾದ ರವಿ ಸುಬ್ರಹ್ಮಣ್ಯ, ವೈ.ಎ.ನಾರಾಯಣಸ್ವಾಮಿ, ಲೆಹರ್‌ಸಿಂಗ್‌, ಕೋವಿಡ್ ಕೇರ್ ಕೇಂದ್ರಗಳ ಉಸ್ತುವಾರಿ ಅಧಿಕಾರಿ ರಾಜೇಂದ್ರ ಕುಮಾರ್ ಕಟಾರಿಯಾ, ಬಿಬಿಎಂಪಿ ಜಂಟಿ ಆಯುಕ್ತ ಸರ್ಫೋಜ್‌ ಖಾನ್, ಆರ್‌ಎಸ್‌ಎಸ್‌ನ ದಕ್ಷಿಣ ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ, ಸಮರ್ಥ ಭಾರತ ಸಂಸ್ಥೆಯ ಶ್ರೀಧರ ಸೇರಿದಂತೆ ಇತರರು ಸಭೆಯಲ್ಲಿ ಹಾಜರಿದ್ದರು.

ಆರೋಗ್ಯ ಇಲಾಖೆ ನಿದೇಶಕರಿಗೆ ತರಾಟೆ

ಕೋವಿಡ್ ಕೇರ್ ಕೇಂದ್ರಗಳಲ್ಲಿ ಐಸಿಯು ವ್ಯವಸ್ಥೆ ಮಾಡುವುದು ಕಷ್ಟ ಎಂದ ಆರೋಗ್ಯ ಇಲಾಖೆ ನಿರ್ದೇಶಕ ಓಂಪ್ರಕಾಶ್ ಪಾಟೀಲ ಅವರಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತರಾಟೆಗೆ ತೆಗೆದುಕೊಂಡ ಪ್ರಸಂಗ ಸಭೆಯಲ್ಲಿ ನಡೆಯಿತು.

ನಗರದಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿರುವ ಕೋವಿಡ್ ಕೇಂದ್ರಗಳಲ್ಲಿ ಮತ್ತು ಹೊಸದಾಗಿ ತೆರೆಯುವ ಕೇಂದ್ರಗಳಲ್ಲಿ ತುರ್ತು ಚಿಕಿತ್ಸಾ ಘಟಕಗಳನ್ನು ತೆರೆಯುವುದು ಕಷ್ಟ. ಬೇಕಾದರೆ ಅಂತಹ ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಬಹುದು ಎಂದಾಗ ಉಪ ಮುಖ್ಯಮಂತ್ರಿ ಸಿಟ್ಟಾದರು. ಹಾಲಿ ಆಸ್ಪತ್ರೆಗೆ ಸ್ಥಳಾಂತರಿಸುವುದು ವಿಳಂಬವಾದಾಗ ರೋಗಿಗಳಿಗೆ ಅನಾನುಕೂಲ ಆಗಬಾರದು ಎನ್ನುವ ಕಾರಣಕ್ಕೆ ಐಸಿಯು ವ್ಯವಸ್ಥೆ ಕೋವಿಡ್ ಕೇಂದ್ರಗಳಲ್ಲಿಯೂ ಇರಲಿ ಎಂದು ಹೇಳುತ್ತಿರುವುದು. ಇದಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು. ನಿಮ್ಮಿಂದ ಮಾಡಲಾಗದಿದ್ದರೆ ಬೇರೆಯವರಿಂದ ಮಾಡಿಸುತ್ತೇವೆ. ಪ್ರತಿ ಕೇಂದ್ರದಲ್ಲಿಯೂ ಕೊನೆಪಕ್ಷ 10 ಐಸಿಯುಗಳನ್ನಾದರೂ ಮಾಡಲೇಬೇಕು ಎಂದು ತಾಕೀತು ಮಾಡಿದರು. ಇದಕ್ಕೆ ಶಾಸಕ ವೈ.ಎ. ನಾರಾಯಣಸ್ವಾಮಿ ಮುಂತಾದವರು ದನಿಗೂಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು