ಗುರುವಾರ , ಜುಲೈ 16, 2020
24 °C
ರಾಜ್ಯದ ವಿದ್ಯುತ್‌ ನಿರ್ವಹಣೆ ಕ್ರಮ ಅತ್ಯುತ್ತಮ

ಎಚ್ಚರ, ಇದು ಖಾಸಗೀಕರಣ ಯತ್ನ: ಡಿ.ಕೆ. ಶಿವಕುಮಾರ

ಎಂ.ಜಿ.ಬಾಲಕೃಷ್ಣ Updated:

ಅಕ್ಷರ ಗಾತ್ರ : | |

ವಿದ್ಯುತ್ ವಿತರಣೆ ಕ್ಷೇತ್ರದಲ್ಲಿ ಹಲವು ಬದಲಾವಣೆ ತರುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ 2003ರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಈ ಬಗ್ಗೆ ಚರ್ಚೆಯೂ ಆರಂಭವಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸುಮಾರು ನಾಲ್ಕೂವರೆ ವರ್ಷಗಳ ಕಾಲ ಇಂಧನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್‌ ಅವರು ಕಾಯ್ದೆ ತಿದ್ದುಪಡಿಯ ಬಗ್ಗೆ ಮಾತನಾಡಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ವಿದ್ಯುತ್‌ ತಿದ್ದುಪಡಿ ಕಾಯ್ದೆಯ ಪರಿಣಾಮ ಏನಾಗಬಹುದು?

ಈ ತಿದ್ದುಪಡಿಗೆ ನನ್ನ ಸಂಪೂರ್ಣ ವಿರೋಧ ಇದೆ. ಇದು ಖಾಸಗೀಕರಣದ ಪ್ರಯತ್ನವಲ್ಲದೆ ಬೇರೇನೂ ಅಲ್ಲ. ಕರ್ನಾಟಕ ರಾಜ್ಯಕ್ಕೆ ವಿದ್ಯುತ್‌ನ ಸಮರ್ಥ ನಿರ್ವ ಹಣೆಯ ಸಾಮರ್ಥ್ಯ ಇದೆ. ಹಾಗಾಗಿ, ಈಗ ಪ್ರಸ್ತಾಪಿಸಲಾಗಿರುವ ತಿದ್ದುಪಡಿಯನ್ನು ಯಾವುದೇ ಕಾರಣಕ್ಕೂ ಒಪ್ಪಲೇಬಾರದು. ತಿದ್ದುಪಡಿಯು ಜಾರಿಗೆ ಬಂದರೆ ಕೆಲವೇ ಕೆಲವು ವ್ಯಕ್ತಿಗಳ ನಿಯಂತ್ರಣಕ್ಕೆ ವಿದ್ಯುತ್‌ ಕ್ಷೇತ್ರ ಒಳಪಡುತ್ತದೆ. ವಿದ್ಯುತ್‌ ದರ ನಿಗದಿಯೂ ಅವರ ಇಚ್ಛೆಯಂತೆಯೇ ನಡೆದು, ದರ ಅಧಿಕವಾಗುತ್ತದೆ. ಈಗ ಸರ್ಕಾರ ಎಲ್ಲವನ್ನೂ ನಿಯಂತ್ರಣದಲ್ಲಿ ಇಟ್ಟುಕೊಂಡಿದೆ. ಅಧಿಕಾರಿಗಳೆಲ್ಲ ಹೆದರಿಕೊಂಡು ಕೆಲಸ ಮಾಡುತ್ತಾರೆ. ಆಮೇಲೆ ಯಾರು ಕೇಳ್ತಾರೆ? ಇಂದು ಪ್ರತಿಯೊಂದು ಹಳ್ಳಿಯಲ್ಲೂ ಜಾಲ ಇದೆಯಲ್ಲಾ? ನಾವು ನಮ್ಮ ಉದ್ಯೋಗಿಗಳಿಗೆ ಉತ್ತಮ ಸಂಬಳ ಕೊಡುತ್ತಿದ್ದೇವೆ. ಅವರೂ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ವಿದ್ಯುತ್ ಕ್ಷೇತ್ರದ ಇತಿಹಾಸ ಬಹಳ ಉತ್ತಮವಾಗಿದೆ. ಕಲ್ಲಿದ್ದಲು ಪೂರೈಕೆಯಲ್ಲಿ ಗೊಂದಲ ಸೃಷ್ಟಿಯಾಗಿದ್ದು ಬಿಟ್ಟರೆ ರಾಜ್ಯದ ವಿದ್ಯುತ್ ಕ್ಷೇತ್ರ ಬಹಳ ಚೆನ್ನಾಗಿದೆ. ಕಾಯ್ದೆ ತಿದ್ದುಪಡಿಯಿಂದ ಈ ವ್ಯವಸ್ಥೆಗೆ ಧಕ್ಕೆ ಉಂಟಾಗುವುದು ನಿಶ್ಚಿತ.

* ವಿದ್ಯುತ್ ವಿಷಯ ರಾಜ್ಯಪಟ್ಟಿಯಲ್ಲಿ ಇದೆಯಲ್ಲವೇ?

ವಿದ್ಯುತ್‌ ಕ್ಷೇತ್ರದಲ್ಲಿ ಕೇಂದ್ರವು ಮಾರ್ಗದರ್ಶನ ನೀಡಬಹುದೇ ಹೊರತು ಹೀಗೆಯೇ ಮಾಡಬೇಕು ಎಂದು ಹೇರಿಕೆ ಮಾಡಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಇಂತಹದ್ದಕ್ಕೆ ಅವಕಾಶ ಕೊಡುತ್ತಲೇ ಇರಲಿಲ್ಲ. ಈಗಿನ ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯನ್ನೇ ಮರೆತಂತಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆ, ಕಾರ್ಮಿಕ ಕಾಯ್ದೆ, ಇದೀಗ ವಿದ್ಯುತ್ ಕಾಯ್ದೆಗಳನ್ನು ಅದು ಒತ್ತಾಯಪೂರ್ವಕವಾಗಿ ಹೇರುತ್ತಿದೆ. ಇದನ್ನು ವಿರೋಧಿಸುವ ಶಕ್ತಿ ಈಗಿನ ರಾಜ್ಯ ಸರ್ಕಾರಕ್ಕೆ ಇಲ್ಲವಾಗಿದೆ.

* ಹೊಸ ವ್ಯವಸ್ಥೆಯಲ್ಲಿ ವಿದ್ಯುತ್ ಸಬ್ಸಿಡಿ ಸ್ಥಗಿತಗೊಳ್ಳುತ್ತಿಲ್ಲ ಅಲ್ಲವೇ?

ರಾಜ್ಯದಲ್ಲಿ ಇಂದು ₹ 10 ಸಾವಿರ ಕೋಟಿಯಷ್ಟು ವಿದ್ಯುತ್ ಸಬ್ಸಿಡಿ ನೀಡಲಾಗುತ್ತಿದೆ. ರೈತರು ಮತ್ತು ವಿದ್ಯುತ್ ಬಳಕೆದಾರರಲ್ಲಿ ವಿದ್ಯುತ್‌ ಅನ್ನು ಹೊಣೆಗಾರಿಕೆಯಿಂದ ಬಳಸುವ ಬಗ್ಗೆ ಅರಿವು ಮೂಡಿಸಬೇಕಿದೆ. ಎಲ್ಲರನ್ನೂ ಒಂದೇ ತರಹ ಪರಿಗಣಿಸಲು ಸಾಧ್ಯವಿಲ್ಲ. ಕೆಲವರು 50 ಪಂಪ್‌ಸೆಟ್‌, 60 ಪಂಪ್‌ಸೆಟ್ ಇಟ್ಟುಕೊಂಡಿದ್ದಾರೆ. 10 ಎಚ್‌ಪಿಗೆ ಒಪ್ಪಿಗೆ ಪಡೆದುಕೊಂಡು 100 ಎಚ್‌ಪಿ ಹಾಕಿದವರೂ ಇದ್ದಾರೆ. ಅದನ್ನೆಲ್ಲ ನಿಯಂತ್ರಿಸಬೇಕು. ನಮ್ಮ ರೈತರಿಗೆ ವಿದ್ಯುತ್‌ನ ಬೆಲೆ ಏನು ಎಂಬುದು ಅರಿವಾಗಬೇಕು. ಈ ಅರಿವು ಮೂಡಿಸುವ ಕೆಲಸ ಮಾಡಲಿ.

* ನಿಮ್ಮ ಸರ್ಕಾರ ಇದ್ದಾಗಲೇ ರೈತರ ಪಂಪ್‌ಸೆಟ್‌ಗೆ ಮೀಟರ್ ಹಾಕಲು ಹೊರಟಿದ್ದಿರಿ. ಈಗ ವಿರೋಧ ಏಕೆ?

ನಾವು ಮೀಟರ್ ಹಾಕಲು ಹೊರಟಿರಲಿಲ್ಲ. ವಿದ್ಯುತ್ ಬೆಲೆಯ ಬಗ್ಗೆ ಅರಿವು ಮೂಡಿಸಬೇಕು ಎಂದಷ್ಟೇ ನಾವು ಹೊರಟಿದ್ದು. ₹ 50 ಸಾವಿರ, ₹ 60 ಸಾವಿರ ಮೌಲ್ಯದ ವಿದ್ಯುತ್ ಬಳಸುವ ರೈತರಿಗೆ ಅದರ ಬೆಲೆ ಗೊತ್ತಾಗಬೇಕು ಎಂಬ ಕಾರಣಕ್ಕೆ ಒಂದು ಪ್ರಯೋಗಕ್ಕೆ ಹೊರಟಿದ್ದಷ್ಟೇ. ನಾನು ಇಂಧನ ಸಚಿವನಾಗಿದ್ದಾಗ ರಾಜ್ಯದಲ್ಲಿ ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಹಲವು ಸುಧಾರಣೆ ತಂದಿದ್ದೆ. 125 ತಾಲ್ಲೂಕುಗಳಲ್ಲಿ 25ರಿಂದ 40 ಮೆಗಾವಾಟ್‌ನ ಸೌರ ವಿದ್ಯುತ್, ಪವನ ವಿದ್ಯುತ್ ಘಟಕಗಳನ್ನು ಸ್ಥಾಪಿಸುವ ಕ್ರಮ ಕೈಗೊಂಡು ವಿದ್ಯುತ್‌ ಪ್ರಸರಣದಲ್ಲಾಗುತ್ತಿದ್ದ ನಷ್ಟವನ್ನು ತಪ್ಪಿಸಿದ್ದೇನೆ. ನಾನು ಅಧಿಕಾರ ವಹಿಸಿ ಕೊಂಡಾಗ ಎಷ್ಟು ವಿದ್ಯುತ್‌ ಉತ್ಪಾದನೆಯಾಗುತ್ತಿತ್ತು, ಬಳಿಕ ಎಷ್ಟು ಉತ್ಪಾದನೆಯಾಗಿದೆ ಎಂಬುದಕ್ಕೆ ದಾಖಲೆ ಇದೆ. ರಾಜ್ಯದ ಬೇಡಿಕೆಗೂ ಮಿಕ್ಕಿ ವಿದ್ಯುತ್‌ ಉತ್ಪಾದನೆ ಆಗುವಂತೆ ಮಾಡಿದೆ. ಅದನ್ನು ಕೇಂದ್ರ ಸರ್ಕಾರವೂ ಗುರುತಿಸಿ ಪ್ರಶಂಸಿಸಿದೆ. ಜಗತ್ತಿನ ಅತಿ ದೊಡ್ಡ ಸೌರ ವಿದ್ಯುತ್ ಘಟಕವನ್ನು ರೈತರ ಒಂದು ಎಕರೆ ಜಮೀನನ್ನೂ ಖರೀದಿಸದೆ ಸ್ಥಾಪಿಸಿದ್ದೇವೆ. ವಿದ್ಯುತ್‌ ವಿಚಾರದಲ್ಲಿ ನಾವು ಇಡೀ ದೇಶಕ್ಕೆ ಮಾದರಿಯಾಗಿದ್ದೇವೆ.

* ದೆಹಲಿಯಲ್ಲಿ ವಿದ್ಯುತ್‌ ಪ್ರಸರಣವನ್ನು ಖಾಸಗಿಯವರು ನಿರ್ವಹಿಸುತ್ತಿದ್ದಾರಲ್ಲ?

ಅಲ್ಲಿ ವಿದ್ಯುತ್ ದರ ಜಾಸ್ತಿಯಾಗಿದೆ. ನಮ್ಮ ಕೆಪಿಟಿಸಿಎಲ್‌ ಮತ್ತು ವಿದ್ಯುತ್‌ ಕಂಪನಿಗಳ ಕಾರ್ಯನಿರ್ವಹಣೆಯನ್ನು ಯಾವ ರಾಜ್ಯವೂ ಹಿಂದಿಕ್ಕಲು ಸಾಧ್ಯವಿಲ್ಲ. ನಮ್ಮಲ್ಲಿ ಅತ್ಯುತ್ತಮ ಅಧಿಕಾರಿಗಳು, ಎಂಜಿನಿಯರ್‌ಗಳು, ಲೈನ್‌ಮನ್‌ಗಳು ಇದ್ದಾರೆ.

* ಕೇಂದ್ರ ಸರ್ಕಾರದ ಈಗಿನ ನಡೆಯನ್ನು ಹೇಗೆ ವಿಶ್ಲೇಷಿಸುತ್ತೀರಿ?

ನಮ್ಮ ರಾಜ್ಯದಲ್ಲಿ ವಿದ್ಯುತ್‌ ವಲಯದ ಖಾಸಗೀಕರಣದ ಅಗತ್ಯವೇ ಇಲ್ಲ. ನನಗೂ ಹಿಂದೆ ಇದೇ ಒತ್ತಾಯ ಬಂದಿತ್ತು. ನಾನು ಆಗ ಕೇಂದ್ರದ ನಡೆಯನ್ನು ವಿರೋಧಿಸಿದ್ದೆ. ನಾನು ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆ. ಈಗಿನ ಸರ್ಕಾರ ಕೂಡಾ ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಭಾವಿಸಿದ್ದೇನೆ.‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು