ಸೋಮವಾರ, ನವೆಂಬರ್ 30, 2020
22 °C

ನವದುರ್ಗೆಯರ ವೈಭವದ ಶೋಭಾಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮಂಗಳೂರು ದಸರಾದ ಅಂಗವಾಗಿ ನಗರದ ಕುದ್ರೋಳಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ನವ ದುರ್ಗೆಯರ ಶೋಭಾಯಾತ್ರೆ ಮಂಗಳವಾರ ಸಂಜೆ ವಿಜೃಂಭಣೆಯಿಂದ ಆರಂಭವಾಯಿತು.

ಕ್ಷೇತ್ರದ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರು ಶಾರದಾ ಮಾತೆ ಹಾಗೂ ಗಣಪತಿ ಮಾತೆಯ ವಿಗ್ರಹಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಒಂದೊಂದೇ ವಿಗ್ರಹಗಳನ್ನು ಮೆರವಣಿಗೆ ಮೂಲಕ ಶೋಭಾಯಾತ್ರೆಯ ಅಲಂಕೃತ ವಾಹನಗಳಿಗೆ ತರಲಾಯಿತು. ಈ ಬಾರಿಯ ಮೆರವಣಿಗೆಯಲ್ಲಿ ಮಾರ್ಪಾಡು ಮಾಡಲಾಗಿದ್ದು, ಮೊದಲು ಗಣಪತಿ ವಿಗ್ರಹ, ನಂತರ ನಾರಾಯಣ ಗುರುಗಳ ಭಾವಚಿತ್ರ, ಬಳಿಕ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿದಾತ್ರಿ ಮತ್ತು ಆದಿಶಕ್ತಿಯರ ಮೂರ್ತಿಗಳು, ಕೊನೆಗೆ ಶಾರದಾ ಮಾತೆ ವಿಗ್ರಹಗಳನ್ನು ಇಟ್ಟು ಮೆರವಣಿಗೆ ಆರಂಭಿಸಲಾಯಿತು.

ರಸ್ತೆಯ ಇಕ್ಕೆಲಗಳಲ್ಲಿಯೂ ಸಾವಿರಾರು ಜನರು ನಿಂತಿದ್ದು, ಶೋಭಾಯಾತ್ರೆಗೆ ಸಾಕ್ಷಿಯಾದರು. ತ್ರಿಶೂರು ಕೊಡೆಗಳನ್ನು ಹಿಡಿದ ಜನರು ಮೆರವಣಿಗೆಯ ಎರಡೂ ಬದಿಗಳಲ್ಲಿ ಸಾಲಾಗಿ ತೆರಳಿದರು. ಶೋಭಾಯಾತ್ರೆ ತೆರಳುವ ಮಾರ್ಗದುದ್ದಕ್ಕೂ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

ಶೋಭಾಯಾತ್ರೆಯು ಸುಮಾರು 9 ಕಿ.ಮೀ. ಕ್ರಮಿಸಿ, ಬುಧವಾರ ಬೆಳಿಗ್ಗೆ ಕುದ್ರೋಳಿ ಕ್ಷೇತ್ರದ ಪುಷ್ಕರಣಿಯಲ್ಲಿ ನವ ದುರ್ಗೆಯರ ಮೂರ್ತಿಗಳ ವಿಸರ್ಜನೆ ನಡೆಯಲಿದೆ.

ಪಂಜಿನ ಕವಾಯತು ರೋಮಾಂಚನ

ಮೈಸೂರು: ದಸರಾ ಉತ್ಸವದ ಅಂಗವಾಗಿ ಬನ್ನಿಮಂಟಪದ ಮೈದಾನದಲ್ಲಿ ಮಂಗಳವಾರ ರಾತ್ರಿ ಏರ್ಪಡಿಸಿದ್ದ ಪಂಜಿನ ಕವಾಯತು ಕಾರ್ಯಕ್ರಮ ನೋಡುಗರ ಮನಸೂರೆಗೊಂಡಿತು.

ರಾಜಸ್ಥಾನದ ಜಬಲ್ಪುರದ ‘ಡೇರ್‌ ಡೆವಿಲ್ಸ್‌’ ಮಿಲಿಟರಿ ತಂಡದವರು ಮೋಟರ್‌ ಬೈಕ್‌ಗಳಲ್ಲಿ ವಿವಿಧ ಕಸರತ್ತು ಪ್ರದರ್ಶಿಸಿದರು. ಹಾಸನದಲ್ಲಿ ತರಬೇತಿ ನಿರತರಾಗಿರುವ 300 ಪೊಲೀಸ್‌ ಪ್ರಶಿಕ್ಷಣಾರ್ಥಿಗಳು ಆಕರ್ಷಕ ಪಂಜಿನ ಕವಾಯತು ನಡೆಸಿದರು. ಸಂಗೀತದ ತಾಳಕ್ಕೆ ತಕ್ಕಂತೆ ಬೆಂಕಿಯೊಂದಿಗೆ ಸರಸವಾಡಿದರು. ಸಂಜೆ 7 ರಿಂದ ನಡೆದ ವರ್ಣರಂಜಿತ ಕಾರ್ಯಕ್ರಮದೊಂದಿಗೆ ದಸರಾ ಉತ್ಸವಕ್ಕೆ ತೆರೆಬಿತ್ತು. ಸುಮಾರು 32 ಸಾವಿರ ಮಂದಿ ಈ ಸಾಹಸಕ್ಕೆ ಸಾಕ್ಷಿಯಾದರು. ರಾಜ್ಯಪಾಲ ವಜೂಭಾಯಿ ವಾಲಾ ಅವರು ಗೌರವ ವಂದನೆ ಸ್ವೀಕರಿಸಿದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಸಿ.ಟಿ.ರವಿ, ವಿ.ಸೋಮಣ್ಣ ಕಾರ್ಯಕ್ರಮ ವೀಕ್ಷಿಸಿದರು.

ಮಡಿಕೇರಿ: ಆಕರ್ಷಕ ಮೆರವಣಿಗೆ

ಮಡಿಕೇರಿ: ‘ಮಂಜಿನ ನಗರಿ’ ಮಡಿಕೇರಿಯಲ್ಲಿ ಮಂಗಳವಾರ ರಾತ್ರಿ ನಡೆದ ದಶಮಂಟಪಗಳ ಶೋಭಾಯಾತ್ರೆ ಗಮನ ಸೆಳೆಯಿತು. ಮೈಸೂರಿನಲ್ಲಿ ಜಂಬೂ ಸವಾರಿ ಮುಕ್ತಾಯವಾಗುತ್ತಿದ್ದಂತೆಯೇ ಇಲ್ಲಿಯ ಶೋಭಾಯಾತ್ರೆ ಸಂಭ್ರಮ ಕಳೆಗಟ್ಟಿತು.

ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಅಪಾರ ಸಂಖ್ಯೆಯ ಪ್ರವಾಸಿಗರು ಇದಕ್ಕೆ ಸಾಕ್ಷಿಯಾದರು. ಪೌರಾಣಿಕ ಕಥಾ ರೂಪಕಗಳ ಪ್ರದರ್ಶನ ದಸರಾ ಸಡಗರವನ್ನು ಹೆಚ್ಚಿಸಿತು. ಅಬ್ಬರದ ಡಿ.ಜೆ ಸಂಗೀತಕ್ಕೆ ಯುವಕ–ಯುವತಿಯರು ಹೆಜ್ಜೆ ಹಾಕಿ ಸಂತಸಪಟ್ಟರು.

ನಗರದ ಪೇಟೆ ಶ್ರೀರಾಮ ಮಂದಿರ ಸಮಿತಿ ಮಂಟಪದ ಶೋಭಾಯಾತ್ರೆ ಮೊದಲು ಆರಂಭಗೊಂಡಿತು. ಕಾಲೇಜು ರಸ್ತೆಯಿಂದ ಗಾಂಧಿ ಮೈದಾನ
ದತ್ತ ಜನಸ್ತೋಮದ ನಡುವೆ ಸಾಗಿತು. ಶ್ರೀರಾಮ ಮಂದಿರದ ‘ಅರ್ಧನಾರೀಶ್ವರ’ ಕಥೆ ಪ್ರದರ್ಶನವು ಮನ ಸೆಳೆಯಿತು. ಉಳಿದ ಮಂಟಪಗಳು, ‘ಪಂಚಮುಖಿ ಆಂಜನೇಯ ಮಹಿಮೆ’, ‘ನರಸಿಂಹನಿಂದ ಹಿರಣ್ಯ ಕಶಿಪು ವಧೆ’, ‘ಶಿವನಿಂದ ತ್ರಿ‍ಪುರಾಸುರನ ಸಂಹಾರ’, ‘ಭ್ರಮರಾಂಬಿಕೆಯಿಂದ ಅರುಣಾಸುರ ವಧೆ’, ‘ಉಗ್ರ ನರಸಿಂಹ’ ಕಥಾ ರೂಪಕ ಪ್ರಸ್ತುತ ಪಡಿಸಿದವು.

ಮಳೆ ಅಡ್ಡಿ: ಅತ್ತ ಗೋಣಿಕೊಪ್ಪಲಿನಲ್ಲಿ ದಸರಾ ಜನೋತ್ಸವದ ಪ್ರಯುಕ್ತ ಆಯೋಜಿಸಿದ್ದ ಸ್ತಬ್ಧಚಿತ್ರಗಳ ಮೆರವಣಿಗೆಗೆ ಮಳೆ ಅಡ್ಡಿ ಪಡಿಸಿತು. ಭಾರಿ ಮಳೆಯಿಂದ ಮೆರವಣಿಗೆಯೂ ವಿಳಂಬವಾಗಿ ಆರಂಭಗೊಂಡಿತು.

ಮರದ ಕೊಂಬೆ ಬಿದ್ದು ವ್ಯಕ್ತಿಗೆ ಗಾಯ

ಮೈಸೂರು: ಜನರ ಭಾರ ತಾಳದೇ, ಇಲ್ಲಿನ ಸಯ್ಯಾಜಿರಾವ್ ರಸ್ತೆಯಲ್ಲಿನ ಮರದ ಕೊಂಬೆಯೊಂದು ಮುರಿದು ಬಿದ್ದು, ಪ್ರಕಾಶ್‌ ಎಂಬುವವರು ಗಾಯಗೊಂಡಿದ್ದಾರೆ.

ಜಂಬೂಸವಾರಿ ವೀಕ್ಷಣೆಗೆಂದು ಹಲವರು ಮರವೇರಿ ಕುಳಿತಿದ್ದರು. ಭಾರ ಹೆಚ್ಚಾಗುತ್ತಲೇ ಕೊಂಬೆ ಮುರಿದಿದೆ. ಈ ವೇಳೆ ಕೆಲ ಯುವಕರು ಜಿಗಿದು ಪಾರಾಗಿದ್ದಾರೆ. ಕೆಳಗೆ ಹಾಕಿದ್ದ ಶಾಮಿಯಾನ ಅಡಿ ಇದ್ದ ಪ್ರಕಾಶ್‌ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು