ರೈತರ ಆತ್ಮಹತ್ಯೆ ಪ್ರಮಾಣ ಇಳಿಕೆ

ಶನಿವಾರ, ಮೇ 25, 2019
22 °C
ಮೂರು ವರ್ಷದ ಬಳಿಕ ಸಾವಿರದ ಗಡಿಯಿಂದ ಕಳಗೆ ಇಳಿಕೆ

ರೈತರ ಆತ್ಮಹತ್ಯೆ ಪ್ರಮಾಣ ಇಳಿಕೆ

Published:
Updated:

ಬೆಂಗಳೂರು: ಕಳೆದ ವರ್ಷ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ 1,338ರಿಂದ 845ಕ್ಕೆ ಇಳಿದಿದ್ದು, ಸರ್ಕಾರ ಕೈಗೊಂಡ ಸಾಲ ಮನ್ನಾದಿಂದಲೇ ಈ ಬೆಳವಣಿಗೆ ನಡೆದಿದೆ ಎಂಬ ಮಾತು ಕೇಳಿಬಂದಿದೆ.

ಆದರೆ ಇದೆಲ್ಲ ತಪ್ಪು ಲೆಕ್ಕಾಚಾರದ ಫಲ. ಬರ ಪರಿಸ್ಥಿತಿ ಮುಂದುವರಿದಿರುವ ಇಂದಿನ ಸನ್ನಿವೇಶದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಲಾಗದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಕೃಷಿ ಇಲಾಖೆ ಮಾಹಿತಿಯಂತೆ 2014–15ನೇ ಸಾಲಿನಿಂದ ಪ್ರತಿ ವರ್ಷ ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಮಾಣ ಸಾವಿರದ ಗಡಿ ದಾಟಿತ್ತು. 2018–19ರ ಮೊದಲ ಆರು ತಿಂಗಳಲ್ಲಿ ಸಾಲ ಮನ್ನಾ ಘೋಷಣೆಯಾಗಿತ್ತು. ಆ ಅವಧಿಯಲ್ಲಿ 300 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಕೊನೆಯ ಆರು ತಿಂಗಳಲ್ಲಿ 540 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ ಅರ್ಧದ ವರ್ಷ ಬಳಿಕ ಆತ್ಮಹತ್ಯೆ ಪ್ರಮಾಣದಲ್ಲಿ ಏರಿಕೆ ಕಂಡಿದೆ.

‘ಸರ್ಕಾರ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಇಂತಹ ಲೆಕ್ಕಾಚಾರ ನೀಡುವಲ್ಲಿ ಸಫಲವಾಗಿದೆ. ಬರ ಪರಿಸ್ಥಿತಿಯಿಂದ ರೈತರು ಕಂಗೆಟ್ಟಿರುವಾಗ ಆತ್ಮಹತ್ಯೆ ಪ್ರಮಾಣ ಕಡಿಮೆಯಾಗಲು ಸಾಧ್ಯವಿಲ್ಲ’ ಎಂದು ಇನ್‌ಸ್ಟಿಟ್ಯೂಟ್‌ ಆಫ್‌ ಸೋಷಿಯಲ್‌ ಆಂಡ್‌ ಎಕನಾಮಿಕ್‌ ಚೇಂಜ್‌ ಸಂಸ್ಥೆ ಅತಿಥಿ ಪ್ರಾಧ್ಯಾಪಕ ಆರ್‌.ಎಸ್‌.ದೇಶಪಾಂಡೆ ಪ್ರತಿಕ್ರಿಯಿಸಿದರು.

ನ್ಯಾಷನಲ್‌ ಕ್ರೈಂ ರೆಕಾರ್ಡ್‌ ಬ್ಯೂರೊ ನೀಡುವ ಮಾಹಿತಿಯಿಂದ ಮಾತ್ರ ರೈತರ ಆತ್ಮಹತ್ಯೆಯ ನಿಜವಾದ ಲೆಕ್ಕ ಸಿಗಬಹುದು. ಸಾಲ ಮನ್ನಾ ವಿಚಾರ ಪ್ರಮುಖ ಚುನಾವಣಾ ವಿಚಾರವಾಗಿರುವುದರಿಂದ ಸರ್ಕಾರ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿಟ್ಟು ಕಡಿಮೆ ಆತ್ಮಹತ್ಯೆ ಆಗಿರುವಂತೆ ಬಿಂಬಿಸುತ್ತಿದೆ ಎಂದು ಅವರು ವಿಶ್ಲೇಷಿಸಿದರು.

‘ಸಾಲ ಮನ್ನಾಕ್ಕೂ, ಆತ್ಮಹತ್ಯೆ ಪ್ರಮಾಣ ಇಳಿಯುವುದಕ್ಕೂ ಸಂಬಂಧ ಕಲ್ಪಿಸಲು ಸಾಧ್ಯವಿಲ್ಲ. ರೈತರ ಸ್ಥಿತಿ ಇಂದು ಮತ್ತಷ್ಟು ಬಿಗಡಾಯಿಸಿದೆ. ಹಲವರು ತಮ್ಮ ಜಾನುವಾರುಗಳನ್ನೇ ಮಾರಾಟ ಮಾಡಬೇಕಾಗಿ ಬಂದಿದೆ. ಬೆಳೆಗೆ ಬೆಂಬಲ ಬೆಲೆ ನೀಡುವುದು ಸಾಲಮನ್ನಾಕ್ಕಿಂತ ಉತ್ತಮ’ ಎನ್ನುತ್ತಾರೆ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಅಮೃತಾ ಟಿ.ಜೋಷಿ.

ಆತ್ಮವಿಶ್ವಾಸ ತುಂಬುವ ಸರ್ಕಾರದ ಪ್ರಯತ್ನದಿಂದಾಗಿ ಈ ಬೆಳವಣಿಗೆ ನಡೆದಿದೆ ಎಂದು ಕೃಷಿ ಇಲಾಖೆ ನಿರ್ದೇಶಕ ಬಿ.ವೈ. ಶ್ರೀನಿವಾಸ್‌ ತಿಳಿಸಿದರು.

ಬರ ಪರಿಸ್ಥಿತಿಗೆ ಶಾಶ್ವತ ಪರಿಹಾರ ಕ್ರಮ ಕೈಗೊಂಡರೆ ಮಾತ್ರ ರೈತರ ಸ್ಥಿತಿ ಸುಧಾರಣೆಯಾದೀತು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !