ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜಾಮುದ್ದೀನ್ ಆತಂಕ: ರಾಜ್ಯದಲ್ಲಿ 40 ಮಂದಿ ಕ್ವಾರಂಟೈನ್: 12 ಜನರಿಗೆ ಇಲ್ಲ ಸೋಂಕು

Last Updated 1 ಏಪ್ರಿಲ್ 2020, 5:38 IST
ಅಕ್ಷರ ಗಾತ್ರ

ಬೆಂಗಳೂರು: ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ತಬ್ಲೀಗ್‌ ಜಮಾತ್‌ ಕೇಂದ್ರ ಕಚೇರಿಯಲ್ಲಿ ಮಾ.13 ರಿಂದ ಮಾ.15ರವರೆಗೆ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ 300ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಕೋವಿಡ್‌–19ರಿಂದಾಗಿ ಕೊನೆಯುಸಿರೆಳೆದಿದ್ದ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ 60 ವರ್ಷದ ವ್ಯಕ್ತಿಯೂ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿದ್ದವರ ಪೈಕಿ 40 ಜನರನ್ನು ಪತ್ತೆ ಮಾಡಿ ಕ್ವಾರಂಟೈನ್‌ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್‌ ಮಾಡಿದ್ದಾರೆ.

ಪತ್ತೆಯಾಗಿರುವವರ ಪೈಕಿ ಈಗಾಗಲೇ ಹಲವರ ಪರೀಕ್ಷೆ ನಡೆಸಲಾಗಿದ್ದು, 12 ಜನರಿಗೆ ಕೋವಿಡ್‌–19 ಪರೀಕ್ಷೆಯಲ್ಲಿ ನೆಗೆಟಿವ್‌ ವರದಿಯಾಗಿದೆ.

'ಪ್ರಾರ್ಥನೆಯಲ್ಲಿ ಭಾಗವಹಿಸಿದ ಇಂಡೋನೇಷ್ಯಾ ಹಾಗೂ ಮಲೇಶಿಯಾದ 62 ಪ್ರಜೆಗಳು ಕರ್ನಾಟಕಕ್ಕೆ ಬಂದ ಮಾಹಿತಿ‌ ಲಭಿಸಿದೆ. ಇದರಲ್ಲಿ 12 ಜನರನ್ನ ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗುತ್ತಿದೆ. ತಮ್ಮ ದೇಶಕ್ಕೆ ಹಿಂತಿರುಗದೆ ಇಲ್ಲೇ ಉಳಿದಿರುವವರನ್ನು ಗೃಹ ಇಲಾಖೆ ಹಾಗೂ ಆರೋಗ್ಯ ಇಲಾಖೆ ಕಾರ್ಯಾಚರಣೆ ನಡೆಸಿ, ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗುವುದು' ಎಂದು ಟ್ವೀಟರ್ ಮೂಲಕ ಮಾಹಿತಿ ನೀಡಿದ್ದಾರೆ.

ಅಲಾಮಿ ಮರ್ಕಜ್‌ ಬಂಗ್ಲೇವಾಲಿ ಎಂಬ ಮಸೀದಿನಿಜಾಮುದ್ದೀನ್‌ನಲ್ಲಿದೆ. ಜತೆಗೆ, ಸುಮಾರು 2000 ಜನರಿಗೆ ವಾಸ್ತವ್ಯದ ವ್ಯವಸ್ಥೆ ಇರುವ ಕೇಂದ್ರವೂ ಇಲ್ಲಿ ಇದೆ. ರಾಜ್ಯದಿಂದ ಇಲ್ಲಿಗೆ ಹೋಗಿದ್ದ 78 ಮಂದಿಯನ್ನು ಈಗಾಗಲೇ ಗುರುತಿಸಿ, ಪ್ರತ್ಯೇಕ ನಿಗಾ ಕೇಂದ್ರದಲ್ಲಿ ಇಡಲಾಗಿದೆ ಎಂದು ಆರೋಗ್ಯ ಇಲಾಖೆಯ ಮಂಗಳವಾರ ಮಾಹಿತಿ ನೀಡಿತ್ತು.

ದೆಹಲಿಯ ಬಂಗ್ಲೇವಾಲಿಯಿಂದ ಸಾವಿರಕ್ಕೂ ಹೆಚ್ಚು ಜನರನ್ನು ಮಂಗಳವಾರ ಆಸ್ಪತ್ರೆಗಳಿಗೆ ಹಾಗೂ ವಿವಿಧ ಸ್ಥಳಗಳಲ್ಲಿ ಕ್ವಾರಂಟೈನ್‌ ಮಾಡಿ ಪರೀಕ್ಷೆ ನಡೆಸಲಾಗುತ್ತಿದೆ. ಇದೇ ಸಭೆಯಲ್ಲಿ ಭಾಗಿಯಾಗಿದ್ದ ಏಳು ಮಂದಿ ಸೋಂಕಿಗೆ ಒಳಗಾಗಿ ತೆಲಂಗಾಣದಲ್ಲಿ ಮೃತಪಟ್ಟಿರುವುದು ವರದಿಯಾಗಿದೆ. ದೆಹಲಿಯಲ್ಲಿ ಕ್ವಾರಂಟೈನ್‌ನಲ್ಲಿರುವವರ ಪೈಕಿ 24 ಜನರಲ್ಲಿ ಸೋಂಕು ದೃಢಪಟ್ಟಿದೆ.

ರಾಜ್ಯದಿಂದ ಅಲ್ಲಿಗೆ ಹೋದವರಲ್ಲಿ ಹೆಚ್ಚಿನವರು ಬೆಂಗಳೂರು, ಬೀದರ್, ಕಲಬುರ್ಗಿ ಹಾಗೂ ಬಳ್ಳಾರಿಯವರಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ನಿಗಾ ವಹಿಸಲು ರಾಜ್ಯಮಟ್ಟದ ವಿಶೇಷ ತಂಡ ರಚಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಆ ಕಾರ್ಯಕ್ರಮಕ್ಕೆ ಆಸ್ಟ್ರೇಲಿಯಾ, ಸಿಂಗಪುರ, ದುಬೈ, ಸೌದಿ ಅರೇಬಿಯಾ, ಇಂಡೋನೇಷ್ಯಾ ಸೇರಿದಂತೆ ಹಲವು ದೇಶಗಳಿಂದ ಪ್ರವಾಸಿಗರು ಬಂದಿದ್ದರು. ವಿವಿಧ ರಾಜ್ಯಗಳಿಂದಲೂ ಬಂದ ಭಕ್ತರು, ಒಂದೆಡೆ ಸೇರಿ ಪ್ರಾರ್ಥನೆ ಸಲ್ಲಿಸಿದ್ದರು. ಅನ್ಯ ರಾಜ್ಯಗಳ ಕೆಲವರಿಗೆ ಸೋಂಕು ತಗುಲಿರುವುದು ಈಗಾಗಲೇ ದೃಢಪಟ್ಟಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ರಾಜ್ಯದಲ್ಲಿ ಮಂಗಳವಾರ ಒಂದೇ ದಿನ 13 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಸೋಂಕಿತರ ಸಂಖ್ಯೆ ಒಂದೇ ತಿಂಗಳಲ್ಲಿ 100 ದಾಟಿದೆ. ಬೆಂಗಳೂರಿನಲ್ಲಿ ಮಾ.9ರಂದು ಕಾಣಿಸಿಕೊಂಡಿದ್ದ ಈ ಸೋಂಕು, ಒಂದೇ ತಿಂಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳನ್ನು ವ್ಯಾಪಿಸಿಕೊಂಡಿದೆ. ಈ ಅವಧಿಯಲ್ಲಿ ಸೋಂಕಿಗೆ ಮೂವರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT