ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಪ್ರಧಾನಿಯಾಗಿದ್ದಾಗ ಶಾಂತಿ ಇತ್ತು: ದೇವೇಗೌಡ

ಮೊಮ್ಮಕ್ಕಳ ಜತೆ ಮಧು ಬಂಗಾರಪ್ಪನನ್ನೂ ಗೆಲ್ಲಿಸುವೆ: ಭರವಸೆ
Last Updated 17 ಮಾರ್ಚ್ 2019, 20:14 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಕಾಶ್ಮೀರದಲ್ಲಿ ಶಾಂತಿ ಹಾಗೂ ನೆರೆಯ ದೇಶಗಳೊಂದಿಗೆ ಸೌಹಾರ್ದ ಸಂಬಂಧ ಸಾಧ್ಯವಾಗಿದ್ದರೆ ಅದು ದೇವೇಗೌಡ ಪ್ರಧಾನಿಯಾಗಿದ್ದ ಕಾಲದಲ್ಲಿ ಮಾತ್ರ’ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು.

ಇಲ್ಲಿನ ಲಗಾನ್ ಕಲ್ಯಾಣ ಮಂದಿರದಲ್ಲಿ ಜಿಲ್ಲಾ ಜೆಡಿಎಸ್‌ನಿಂದ ಭಾನುವಾರ ಏರ್ಪಡಿಸಿದ್ದ ಪಕ್ಷದ ಚುನಾಯಿತ ಪ್ರತಿನಿಧಿಗಳ, ಮುಖಂಡರ ಮತ್ತು ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘13 ಪಕ್ಷಗಳ ಜತೆ ಸೇರಿ ಸರ್ಕಾರ ನಡೆಸಿದವನು ಈ ಬಡ ರೈತನ ಮಗ. ನಾನು 10 ತಿಂಗಳು ಪ್ರಧಾನಿ ಆದಾಗ ದೇಶದಲ್ಲಿ ಯಾವ ದುರ್ಘಟನೆಯೂ ನಡೆದಿಲ್ಲ. ಯಾವ ವಿಮಾನವೂ ಹೈಜಾಕ್ ಆಗಲಿಲ್ಲ. ಯಾವೊಬ್ಬ ಯೋಧನೂ ಸಾಯಲಿಲ್ಲ. ಹಿಂದಿನ ಪ್ರಧಾನಿಗಳು ಪ್ರಾಣಕ್ಕೆ ಅಪಾಯ ಇದೆ ಎಂದು 10 ವರ್ಷ ಕಾಶ್ಮೀರಕ್ಕೆ ಭೇಟಿ ನೀಡಿರಲಿಲ್ಲ. ಆದರೆ, ನನ್ನ ಪ್ರಾಣವನ್ನು ಲೆಕ್ಕಿಸದೆ ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದೆ. ನನಗೆ ಅಧಿಕಾರದ ವ್ಯಾಮೋಹ ಇದ್ದಿದ್ದರೆ ಬೇರೆ ರೀತಿಯ ರಾಜಕಾರಣ ಮಾಡುತ್ತಿದ್ದೆ. ಆದರೆ ಯುದ್ಧದಿಂದ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ನೆರೆಯ ರಾಷ್ಟ್ರಗಳೊಡನೆ ಸೌಹಾರ್ದ ಸಂಬಂಧ ಬೆಳೆಸಿದ್ದೆ. ಈಗಿನ ಪ್ರಧಾನಿ ದೇಶವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂಬುದನ್ನು ಪ್ರತಿಯೊಬ್ಬರೂ ಯೋಚಿಸಬೇಕು’ ಎಂದರು.

ನಾವೆಲ್ಲರೂ ಭಾರತಾಂಬೆಯ ಮಕ್ಕಳಲ್ವಾ?: ‘ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರ ಮೇಲೆ ದೌರ್ಜನ್ಯ ನಡೆಸಿದೆ. ನಾವೆಲ್ಲರೂ ಭಾರತಾಂಬೆಯ ಮಕ್ಕಳು ಎಂಬುದನ್ನೇ ಮರೆತಿದೆ. ಈ ಹಿಂದೆ 282 ಸ್ಥಾನ ಪಡೆದರೂ ಜನರ ಇಚ್ಛಾನುಸಾರವಾಗಿ ಅಧಿಕಾರ ನಡೆಸದ ಕೇಂದ್ರ ಬಿಜೆಪಿ ಸರ್ಕಾರ ಇದೀಗ ಮತ್ತೊಮ್ಮೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದನ್ನು ಮನಗಂಡು ತಮಿಳುನಾಡು, ಆಂಧ್ರ, ಮಹಾರಾಷ್ಟ್ರಕ್ಕೆ ಹೋಗಿ ಮೈತ್ರಿಗೆ ಹಾತೊರೆಯುತ್ತಿದೆ’ ಎಂದು ಟೀಕಿಸಿದರು.

ಮೊಮ್ಮಕ್ಕಳನ್ನು ಗೆಲ್ಲಿಸುವಂತೆ ಮಧು ಬಂಗಾರಪ್ಪನ ಗೆಲ್ಲಿಸುವೆ: ‘ನಾನು ಸಾಕಷ್ಟು ನೊಂದಿದ್ದೇನೆ. ಇಳಿವಯಸ್ಸಿನಲ್ಲಿ ನಾನೇಕೆ ಪ್ರಚಾರ ಮಾಡುತ್ತಿದ್ದೇನೆ ಎಂಬ ಅನಿವಾರ್ಯತೆಯನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ದೇಶದಲ್ಲಿ ಆಗುತ್ತಿರುವ ಅನಾಹುತ ತಪ್ಪಿಸಲಿಕ್ಕೆ ನಾವೆಲ್ಲರೂ ಹೋರಾಡಲೇಬೇಕು. ಶಿವಮೊಗ್ಗದಲ್ಲಿ ಮಧು ಬಂಗಾ ರಪ್ಪಗೆಲುವಿಗೆ‌ ಶಕ್ತಿ‌ ಮೀರಿ ಪ್ರಯತ್ನ ಮಾಡುತ್ತೇನೆ ಎಂದರು.

ನಿಗೂಢವಾಗಿಯೇ ಉಳಿದ ಗೌಡರ ಸ್ಪರ್ಧೆ

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬ ವಿಷಯ ಇಂದಿಗೂ ನಿಗೂಢವಾಗಿಯೇ ಮುಂದುವರಿದಿದೆ.

ದೇವೇಗೌಡ ಅವರು ಬೆಂಗಳೂರು ಉತ್ತರದಿಂದ ಸ್ಪರ್ಧಿಸುತ್ತಾರೆ ಎಂಬ ಮಾತು ಈಗಾಗಲೇ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಅವರು ಈವರೆಗೆ ಸ್ಪಷ್ಟಪಡಿಸಿಲ್ಲ. ಭಾನುವಾರಜಿಲ್ಲಾ ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರ ಸಭೆಗೆಂದುಶಿವಮೊಗ್ಗಕ್ಕೆ ಬಂದಿದ್ದ ಸಂದರ್ಭದಲ್ಲೂ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸದೇ ರಹಸ್ಯವನ್ನು ಹಾಗೆಯೇ ಉಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT