ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗು ಮಾರಾಟ ಮಾಡಿದರೇ ವೈದ್ಯ ದಂಪತಿ?

ವೈದ್ಯರು, ನರ್ಸ್‌ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು
Last Updated 7 ಜನವರಿ 2020, 19:31 IST
ಅಕ್ಷರ ಗಾತ್ರ

ಮಡಿಕೇರಿ: ‘ಅಪ್ರಾಪ್ತೆಯ ಹೆರಿಗೆ ಮಾಡಿಸಿದ್ದ ವೈದ್ಯ ದಂಪತಿ, ನವಜಾತ ಶಿಶುವನ್ನು ಮಾರಾಟ ಮಾಡಿದ್ದಾರೆ’ ಎಂಬ ಆರೋಪ ಕೇಳಿಬಂದಿದ್ದು ಜಿಲ್ಲಾ ಆಸ್ಪತ್ರೆಯ ವೈದ್ಯರ ವಿರುದ್ಧ ದೂರು ದಾಖಲಾಗಿದೆ.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಟಿ.ಎಸ್‌.ಅರುಂಧತಿ ಅವರು ನಗರ ಠಾಣೆಗೆ ದೂರು ನೀಡಿದ್ದು ವೈದ್ಯರಾದ ಎನ್.ಎಸ್.ನವೀನ್‌, ರಾಜೇಶ್ವರಿ, ಮಗು ಪಡೆದ ಆರೋಪ ಎದುರಿಸುತ್ತಿರುವ ಸಲಿನಾ, ರಾಬಿನ್‌ ಹಾಗೂ ಸರಳಾ ಮೇರಿ, ನರ್ಸ್‌ಗಳಾದ ರಮ್ಯಾ, ಕವಿತಾ ವಿರುದ್ಧ ಜ.3ರಂದು ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಾದ ಮೇಲೆ ನಗರದ ಹೊಸ ಬಡಾವಣೆ ನಿವಾಸಿಗಳೂ ಆಗಿರುವ ವೈದ್ಯರು ತಲೆಮರೆಸಿಕೊಂಡಿದ್ದಾರೆ.

ಏನಿದು ಪ್ರಕರಣ?:ನವೀನ್ ಹಾಗೂ ರಾಜೇಶ್ವರಿ ಅವರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಆಗಸ್ಟ್ 22ರಂದು ಅಪ್ರಾಪ್ತೆಯೊಬ್ಬಳು ತನ್ನ ತಾಯಿಯೊಂದಿಗೆ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆ ಬಂದಿದ್ದಳು. ಈ ಅಪ್ರಾಪ್ತೆಯನ್ನು ನಗರದ ಅಶ್ವಿನಿ ಆಸ್ಪತ್ರೆಗೆ ಕರೆದೊಯ್ದು, ಹೆರಿಗೆ ಮಾಡಿಸಿದ್ದಾರೆ. ನಂತರ, ಮಗುವನ್ನು ಅದೇ ಆಸ್ಪತ್ರೆಯಲ್ಲಿ ಗ್ರೂಪ್ ‘ಡಿ’ ದರ್ಜೆಯ ಸಿಬ್ಬಂದಿ ಸಲೀನಾ ಅವರ ಪುತ್ರ ರಾಬಿನ್‌ಗೆ ₹ 1.50 ಲಕ್ಷ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಲಿನಾ ಪುತ್ರ ರಾಬಿನ್ ಹಾಗೂ ಸೊಸೆ ಸರಳಾ ಮೇರಿಗೆ ಮಗು ಜನಿಸಿದೆ ಎನ್ನುವಂತೆ ನಗರಸಭೆಯಲ್ಲಿ ನಕಲಿ ಜನನ ಪ್ರಮಾಣ ಪತ್ರವನ್ನೂ ಸೃಷ್ಟಿಸಿದ್ದಾರೆ. ಅಲ್ಲದೇ ಆಸ್ಪತ್ರೆಯಲ್ಲಿ ಮಗುವಿನ ತಂದೆ– ತಾಯಿ ರಾಬಿನ್‌ ಹಾಗೂ ಸರಳಾ ಎಂದೂ ದಾಖಲು ಮಾಡಲಾಗಿದೆ ಎಂದು ಆರೋಪ ಕೇಳಿಬಂದಿದೆ.

ಆಗಸ್ಟ್‌ 22ರಂದು ಪ್ರಕರಣ ನಡೆದಿದ್ದರೂ ತಡವಾಗಿ ಬೆಳಕಿಗೆ ಬಂದಿದ್ದ ಕಾರಣ ಡಿ.27ರಂದು ಅರುಂಧತಿ ಅವರು ಮಕ್ಕಳ ರಕ್ಷಣಾಧಿಕಾರಿಗೆ ಪರಿಶೀಲನೆ ನಡೆಸುವಂತೆ ಸೂಚಿಸಿದ್ದರು. ರಾಬಿನ್‌ ಅವರ ಮನೆಗೆ ತೆರಳಿದ್ದ ಅಧಿಕಾರಿಗಳು ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ದಾರೆ. ವರದಿ ಆಧರಿಸಿ ಅರುಂಧತಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಮಗುವಿನ ಜೈವಿಕ ತಂದೆ– ತಾಯಿ ಯಾರೆಂದು ಪತ್ತೆ ಮಾಡಬೇಕಿದೆ. ಹೆರಿಗೆ ಮಾಡಿಸಿದ ವೈದ್ಯರು ಜೈವಿಕ ತಂದೆ– ತಾಯಿ ಹೆಸರು ಮರೆಮಾಚಿದ್ದಾರೆ. ಆಸ್ಪತ್ರೆಯ ದಾಖಲಾತಿಯಲ್ಲಿ ಬೇರೊಬ್ಬರ ಹೆಸರು ಬರೆದಿರುವ ಸಂಶಯವಿದೆ. ಮಗುವನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿರುವ ಶಂಕೆಯಿದೆ. ಪ್ರಕರಣದ ತನಿಖೆ ನಡೆಸುವಂತೆ ಅರುಂಧತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ರಾಜೇಶ್ವರಿ ಆಸ್ಪತ್ರೆಯ ಸ್ಪಷ್ಟನೆ:ನವಜಾತ ಶಿಶು ಮಾರಾಟ ಪ್ರಕರಣದಲ್ಲಿ ಭಾಗಿಯಾಗಿರುವ ವೈದ್ಯ ದಂಪತಿಗೂ, ಮಡಿಕೇರಿಯ ಕೈಗಾರಿಕಾ ಬಡಾವಣೆಯ ರಾಜರಾಜೇಶ್ವರಿ ಖಾಸಗಿ ಆಸ್ಪತ್ರೆಗೂ ಯಾವುದೇ ಸಂಬಂಧವಿಲ್ಲ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಜನ್ ಆಗಿ ಡಾ.ಎನ್.ಎಸ್. ನವೀನ್ ಹಾಗೂ ಪ್ರಸೂತಿ ತಜ್ಞೆಯಾಗಿ ಡಾ.ರಾಜೇಶ್ವರಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜರಾಜೇಶ್ವರಿ ಆಸ್ಪತ್ರೆಯಲ್ಲೂ ಅದೇ ಹೆಸರಿನ ಮಕ್ಕಳ ತಜ್ಞರಾಗಿ ಡಾ.ಬಿ.ಸಿ.ನವೀನ್ ಕುಮಾರ್ ಮತ್ತು ಪ್ರಸೂತಿ ತಜ್ಞೆಯಾಗಿ ಡಾ.ರಾಜೇಶ್ವರಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT