ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಜಪೇಟೆ: ದಿಡ್ಡಳ್ಳಿ ಮಾದರಿ ಹೋರಾಟಕ್ಕೆ ಸಿದ್ಧತೆ

ಶಾಶ್ವತ ಸೂರಿಗಾಗಿ ಆದಿವಾಸಿಗಳ ಮತ್ತೊಂದು ಪ್ರತಿಭಟನೆ ಆರಂಭ
Last Updated 9 ಜನವರಿ 2020, 19:45 IST
ಅಕ್ಷರ ಗಾತ್ರ

ವಿರಾಜಪೇಟೆ (ಕೊಡಗು): ಶಾಶ್ವತ ಸೂರು ಹಾಗೂ ಕೃಷಿ ಜಮೀನು ನೀಡುವಂತೆ ಆಗ್ರಹಿಸಿ, ಸಮೀಪದ ಬಾಳುಗೋಡು ಗ್ರಾಮದಲ್ಲಿ ‘ದಿಡ್ಡಳ್ಳಿ ಮಾದರಿ’ಯ ಹೋರಾಟಕ್ಕೆ ಸದ್ದಿಲ್ಲದೆ ಸಿದ್ಧತೆ ನಡೆಯುತ್ತಿದೆ.

2016ರಲ್ಲಿ ಕೊಡಗು ಜಿಲ್ಲೆಯ ದಿಡ್ಡಳ್ಳಿಯಲ್ಲಿ ಆದಿವಾಸಿಗಳು ಸೂರಿಗಾಗಿ ದೊಡ್ಡಮಟ್ಟದ ಹೋರಾಟ ನಡೆಸಿದ್ದರು. ಈ ಹೋರಾಟ ರಾಷ್ಟ್ರದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಹೋರಾಟ ಯಶಸ್ವಿಯಾಗಿ 500 ಆದಿವಾಸಿ ಕುಟುಂಬಕ್ಕೆ ಕುಶಾಲನಗರ ಸಮೀಪದ ಮೂರು ಸ್ಥಳಗಳಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಅದೇ ಮಾದರಿಯ ಹೋರಾಟ ನಡೆಸಲು ಆದಿವಾಸಿಗಳು ಮುಂದಾಗಿದ್ದಾರೆ.

‘ಕಾಫಿ ತೋಟದ ಲೈನ್‌ಮನೆಯಲ್ಲಿ ವಾಸವಿದ್ದೆವು. ಅಲ್ಲಿ ಸಾಕಷ್ಟು ಕಿರುಕುಳ ಅನುಭವಿಸುತ್ತಿದ್ದೇವೆ. ಅಲ್ಲಿಂದ ಹೊರಬರಬೇಕು. ಸೂರಿಗಾಗಿ ಅನೇಕ ವರ್ಷಗಳಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಸರ್ಕಾರ ಸೂರು ಒದಗಿಸುವ ತನಕ ಈ ಜಾಗ ಬಿಡುವುದಿಲ್ಲ’ ಎಂದು ಪ್ರತಿಭಟನಕಾರರು ಪಟ್ಟು ಹಿಡಿದಿದ್ದಾರೆ. ಎರಡು ದಿನಗಳಿಂದ ಅದೇ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

‘ವಿರಾಜಪೇಟೆ ಪಟ್ಟಣ ಸೇರಿದಂತೆ ಆರ್ಜಿ, ಬಾಳುಗೋಡು ಹಾಗೂ ಪೆರುಂಬಾಡಿ ವ್ಯಾಪ್ತಿಯ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ಸ್ವಂತ ಸೂರಿಗಾಗಿ ಪ್ರತಿಭಟನೆ ಆರಂಭಿಸಿವೆ. ಇವರಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡ, ಆದಿವಾಸಿ ಸಮುದಾಯದವರು ಇದ್ದಾರೆ’ ಎಂದುಪರಿಶಿಷ್ಟ ಜಾತಿ ಹಾಗೂ ಪಂಗಡದ ಜಿಲ್ಲಾ ಉಸ್ತುವಾರಿ ಸಮಿತಿ ಸದಸ್ಯ ಪಳನಿ ಪ್ರಕಾಶ್ ಹೇಳಿದರು.

‘ಸರ್ವೆ ನಂ.: 337/1ರಲ್ಲಿ ಸುಮಾರು 37 ಎಕರೆಯಷ್ಟು ಸರ್ಕಾರಿ ಭೂಮಿಯಿದೆ. ಉಳ್ಳವರು ಒತ್ತುವರಿ ಮಾಡಿಕೊಂಡಿದ್ದು 2 ಎಕರೆಯಷ್ಟು ಮಾತ್ರ ಉಳಿದಿದೆ. ಶ್ರೀಮಂತರು ಒತ್ತುವರಿ ಮಾಡುವಾಗ ಮೌನವಹಿಸಿದ್ದ ಅಧಿಕಾರಿಗಳು, ಬಡವರು ಗುಡಿಸಲು ಕಟ್ಟಿಕೊಳ್ಳುಲು ಬಂದಾಗ ತಡೆ ಒಡ್ಡುತ್ತಿದ್ದಾರೆ. ಈ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಪ್ರಕಾಶ್ ಎಚ್ಚರಿಸಿದರು.

ಸರ್ಕಾರಿ ಭೂಮಿಯಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದೆ ಗುಡಿಸಲುಗಳು ತಲೆಯೆತ್ತಲು ಆರಂಭವಾಗಿದ್ದವು. ಮಾಹಿತಿ ಪಡೆದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇವೆ. ಸರ್ಕಾರಿ ಜಾಗ ಒತ್ತುವರಿ ಮಾಡಿಕೊಳ್ಳುವುದು ಸರಿಯಲ್ಲ. ಈ ಜಾಗವನ್ನು ಬೇರೆ ಉದ್ದೇಶಕ್ಕೆ ಮೀಸಲು ಇರಿಸಲಾಗಿದೆಯೆಂದು ಪ್ರತಿಭಟನಕಾರರಿಗೆ ತಿಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಆದರೂ, ಪ್ರತಿಭಟನಕಾರರು ಸ್ಥಳ ಬಿಟ್ಟು ಕದಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT