ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ ಇಲ್ಲದಿದ್ದರೆ ಬಂದೀತು ಕೊರೊನಾ ಸಂಕಟ

ಲಾಕ್‌ ಡೌನ್‌ ಸಡಿಲಿಕೆ ಬಳಿಕ ಹೆಚ್ಚಿದ ಜನದಟ್ಟಣೆ *ಸೋಂಕು ಸಮುದಾಯಕ್ಕೆ ಹರಡುವ ಭೀತಿ
Last Updated 23 ಮೇ 2020, 19:58 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು:ಲಾಕ್‌ಡೌನ್‌ ನಿಯಮ ಸಡಿಲಿಸಿದ ಬಳಿಕ ಕೇವಲ ಆರುದಿನಗಳಲ್ಲಿ ರಾಜ್ಯದಲ್ಲಿ 812 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಸಾರ್ವಜನಿಕ ಸ್ಥಳಗಳಲ್ಲಿ ಆರು ಅಡಿ ಅಂತರವನ್ನು ಕಾಯ್ದುಕೊಳ್ಳದಿದ್ದಲ್ಲಿ ಪ್ರಕರಣಗಳ ಸಂಖ್ಯ ಹೆಚ್ಚಿ, ಸೋಂಕು ಸಮುದಾಯಕ್ಕೆ ಹರಡುವ ಸಾಧ್ಯತೆ ಇದೆ ಎಂದು ಆರೋಗ್ಯ ಕ್ಷೇತ್ರದ ತಜ್ಞರು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ಮೂರನೇ ಹಂತದ ಲಾಕ್‌ ಡೌನ್‌ ಅಂತ್ಯವಾದ ಬಳಿಕ ಬಹುತೇಕ ಎಲ್ಲ ಚಟುವಟಿಕೆಗಳು ಪುನರಾರಂಭವಾಗಿವೆ. ಇದರ ಬೆನ್ನಲ್ಲೇ ಜನರು ಎಲ್ಲೆಂದರೆಲ್ಲಿ ಗುಂಪು ಸೇರುತ್ತಿದ್ದು, ಅಂತರ ಕಾಯ್ದುಕೊಳ್ಳಲು ಲಕ್ಷ್ಯ ವಹಿಸಿಲ್ಲ. ಇದರಿಂದಾಗಿ ರಾಜ್ಯದಲ್ಲಿ ಒಂದೇ ಸಮನೇ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ.ರಾಜ್ಯದಲ್ಲಿ ಮಾ.8ರಂದು ಕಾಣಿಸಿಕೊಂಡಿದ್ದ ಸೋಂಕು, ಈಗ ರಾಜ್ಯದ 28 ಜಿಲ್ಲೆಗಳನ್ನು ವ್ಯಾಪಿಸಿಕೊಂಡಿದೆ. ಒಂದೇ ದಿನ ನೂರಕ್ಕೂ ಅಧಿಕ ಮಂದಿ ಸೋಂಕಿತರಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಏ.30ರ ವರೆಗೂ ರಾಜ್ಯದಲ್ಲಿ ಕೋವಿಡ್‌ ತಕ್ಕ ಮಟ್ಟಿಗೆ ನಿಯಂತ್ರಣವಿತ್ತು. ಆ ವೇಳೆಗೆ 556 ಪ್ರಕರಣಗಳು ವರದಿಯಾಗಿದ್ದು, 21 ಮಂದಿ ಮೃತಪಟ್ಟಿದ್ದರು. ಮುಂದಿನ 23 ದಿನಗಳಲ್ಲಿ 1,403 ಮಂದಿ ಸೋಂಕಿತರಾಗಿದ್ದಾರೆ. ಅಷ್ಟೇ ಅಲ್ಲ, ಈ ಅವಧಿಯಲ್ಲಿ 21 ಮಂದಿ ಕೊನೆಯುಸಿರೆಳೆದಿದ್ದಾರೆ.ಐಪಿಸಿ ಸೆಕ್ಷನ್ 188ರ ಅಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸು ಧರಿಸದಿರುವುದು, ಅಂತರ ಕಾಯ್ದುಕೊಳ್ಳದಿರುವುದು ಹಾಗೂ ಉಗುಳುವುದು ಶಿಕ್ಷಾರ್ಹ ಅಪರಾಧ. ಆದರೆ, ಸರ್ಕಾರದ ಈ ನಿಯಮ ಕೂಡ ಕಟ್ಟುನಿಟ್ಟಾಗಿ ಪಾಲನೆಯಾಗದಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಸಮುದಾಯಕ್ಕೆ ಹರಡಿಲ್ಲ: ‘ಕೊರೊನಾ ಸೋಂಕು ಸಮುದಾಯಕ್ಕೆ ಹರಡಿದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಲಿದೆ. ರ್‍ಯಾಂಡಮ್ ಪರೀಕ್ಷೆಯಲ್ಲಿ ಎಲ್ಲೆಡೆ ಸೋಂಕಿತರು ಪತ್ತೆಯಾದಲ್ಲಿ ಸೋಂಕು ಸಮುದಾಯಕ್ಕೆ ಹರಡಿದೆ ಎಂದು ನಿರ್ಧರಿಸಬಹುದು. ಈ ಸೋಂಕಿಗೆ ಔಷಧಿ ಕಂಡುಹಿಡಿಯುವವರೆಗೂ ಪರಸ್ಪರ ಅಂತರ ಸೇರಿದಂತೆ ವಿವಿಧ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ಸಿ. ನಾಗರಾಜ್ ತಿಳಿಸಿದರು.

ವಾಣಿಜ್ಯ ಚಟುವಟಿಕೆಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಸರ್ಕಾರ ಅಂತರ ರಾಜ್ಯ ಪ್ರಯಾಣದ ನಿಯಮವನ್ನೂ ಸಡಿಲಿಸಿದೆ. ಇದರಿಂದಾಗಿ ವಾಣಿಜ್ಯೋದ್ಯಮಿಗಳು ರಾಜ್ಯಕ್ಕೆ ಬಂದು ವಾಪಸ್ ತೆರಳಲು ಅವಕಾಶ ನೀಡಲಾಗಿದೆ. ಇನ್ನೊಂದೆಡೆ ಕ್ವಾರಂಟೈನ್‌ ಕೇಂದ್ರಗಳಲ್ಲಿ ಬಂದವರಿಗೆ ಸ್ಥಳ ಒದಗಿಸುವುದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಪ್ರಕರಣಗಳ ಸಂಖ್ಯೆ ಹೀಗೆ ಏರುಗತಿಯಲ್ಲಿ ಸಾಗಿದಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಯ ಸಮಸ್ಯೆ ಕೂಡ ಉಂಟಾಗುವ ಸಾಧ್ಯತೆಯಿದೆ. ಸದ್ಯ ಸರ್ಕಾರ 8 ಸಾವಿರ ಹಾಸಿಗೆಗಳನ್ನು ಸಿದ್ಧಪಡಿಸಿಕೊಂಡಿದೆ.

ಅಂತರ ಕಾಪಾಡಿಕೊಳ್ಳದಿದ್ದಲ್ಲಿ ಭವಿಷ್ಯದಲ್ಲಿ ತಕ್ಕ ಬೆಲೆ ಕಟ್ಟಬೇಕಾಗುತ್ತದೆ. ಸರ್ಕಾರದ ಸೂಚನೆಗಳನ್ನು ಅನುಸರಿಸಿದಲ್ಲಿ ಸೋಂಕನ್ನು ಹೊಡೆದೋಡಿಸಲು ಸಾಧ್ಯ ಎಂದುರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕಡಾ.ಸಿ.ನಾಗರಾಜ್ ಹೇಳಿದರು.

ಕೊರೊನಾ ಸೋಂಕು ಸಮಾಜದಲ್ಲಿ ತಂದ ಬದಾಲವಣೆಯನ್ನು ಸ್ವೀಕಾರ ಮಾಡಿ, ಅದಕ್ಕೆ ಹೊಂದಿಕೊಳ್ಳಬೇಕಾಗಿದೆ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಫೋರ್ಟಿಸ್ ಆಸ್ಪತ್ರೆಯಡಾ. ಮುರಳೀಧರ ಚಕ್ರವರ್ತಿಪ್ರತಿಕ್ರಿಯಿಸಿದರು.

ಫೋರ್ಟಿಸ್ ಆಸ್ಪತ್ರೆಯಡಾ. ಮುರಳೀಧರ ಚಕ್ರವರ್ತಿ

ಅಂತರ ಕಾಯ್ದುಕೊಂಡಷ್ಟು ಸುರಕ್ಷಿತ

* ಕೆಮ್ಮು, ನೆಗಡಿ, ಜ್ವರ ಇರುವ ವ್ಯಕ್ತಿಗಳಿಂದ ದೂರವಿರಿ

* ಸ್ನೇಹಿತರು, ಸಂಬಂಧಿಕರನ್ನು ಕೂಡ ಕೈಕುಲುಕಬೇಡಿ, ತಬ್ಬಿಕೊಳ್ಳಬೇಡಿ

* ಜನಸಂದಣಿ ಇರುವ ಮಾರುಕಟ್ಟೆ, ಧಾರ್ಮಿಕ ಸ್ಥಳಗಳಿಗೆ ಹೋಗಬೇಡಿ

* ಪದೇ ಪದೇ ಮೂಗು, ಕಣ್ಣು, ಬಾಯಿಯನ್ನು ಮುಟ್ಟಿಕೊಳ್ಳಬೇಡಿ

* ತುರ್ತಾಗಿ ಹೊರಗಡೆ ಹೋಗಬೇಕಾದರೆ ಮುಖಗವಸು ಧರಿಸಿ

* ಸೀನುವಾಗ, ಕೆಮ್ಮುವಾಗ ಕರವಸ್ತ್ರ ಅಥವಾ ಟಿಶ್ಯೂ ಪೇಪರ್ ಬಳಸಿ

* ಮದುವೆ ಹಾಗೂ ಕೆಲವು ವಿಶೇಷ ಕಾರ್ಯಕ್ರಮಗಳಲ್ಲಿ ಗರಿಷ್ಠ 50 ಮಂದಿ ಮಾತ್ರ ಭಾಗವಹಿಸಬಹುದಾಗಿದ್ದು, ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳಬೇಕು

* ಅಂತ್ಯಸಂಸ್ಕಾರದಂತಹ ಕಾರ್ಯಕ್ರಮದಲ್ಲಿ 20ಕ್ಕೂ ಅಧಿಕ ಮಂದಿ ಭಾಗವಹಿಸಬಾರದು

* ಉದ್ಯಾನಗಳಲ್ಲಿರುವ ಬಯಲು ವ್ಯಾಯಾಮಶಾಲೆಗಳ (ಓಪನ್‌ ಜಿಮ್‌) ಪರಿಕರಗಳನ್ನು ಬಳಸದಿರಿ

* ಕೆಲಸದ ಸ್ಥಳದಲ್ಲಿ ಸಭೆ ನಡೆಸುವಾಗ 10ಕ್ಕೂ ಅಧಿಕ ಮಂದಿ ಸೇರಬಾರದು

* ಲಿಫ್ಟ್‌ಗಳಲ್ಲಿ 2ರಿಂದ 4 ಮಂದಿ ಮಾತ್ರ ಹೋಗಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT