ಮಂಗಳವಾರ, ಆಗಸ್ಟ್ 3, 2021
22 °C

ಕೋವಿಡ್-19 ಸಮರ್ಥ ನಿರ್ವಹಣೆ: ಬೆಂಗಳೂರು ಬಿಟ್ವು ಹೋಗಬೇಡಿ ಎಂದ ಡಿಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೋವಿಡ್-19 ಬಿಕ್ಕಟ್ಟನ್ನು ರಾಜ್ಯದಲ್ಲಿ ಸಮರ್ಥವಾಗಿ ಎದುರಿಸುತ್ತಿದ್ದೇವೆ. ಅಧಿಕಾರಿಗಳು ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಎಂತಹುದೇ ಪರಿಸ್ಥಿತಿ ಎದುರಾದರೂ ಎದುರಿಸಲು ನಾವು ಸಂಪೂರ್ಣವಾಗಿ ತಯಾರಿದ್ದೇವೆ’ ಎಂದು ಕೋವಿಡ್ ಕೇರ್ ಕೇಂದ್ರಗಳ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಇಲ್ಲಿ ಬುಧವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಮ್ಮಲ್ಲಿ ಅನುಭವಿ, ದಕ್ಷ, ದೂರದೃಷ್ಟಿಯುಳ್ಳ ಅಧಿಕಾರಿಗಳಿದ್ದಾರೆ. ಹೀಗಾಗಿ ಕೋವಿಡ್ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿರ್ವಹಿಸಲು ಸಾಧ್ಯವಾಗಿದೆ. ಎಲ್ಲ ಹಂತಗಳಲ್ಲೂ ಕೆಲಸ ಸುಸೂತ್ರವಾಗಿ ಸಾಗಿದೆ. ಜನರು ಸೋಂಕಿನ ಬಗ್ಗೆ ಆತಂಕಕ್ಕೊಳಗಾಗಬೇಕಾದ ಅಗತ್ಯವಿಲ್ಲ’ ಎಂದು ತಿಳಿಸಿದರು.

‘ನೆರೆ ರಾಜ್ಯಗಳ ಹೈದರಾಬಾದ್, ಚೆನ್ನೈ, ಮುಂಬೈ ಮತ್ತಿತರ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಹೀಗಾಗಿ ಯಾರೂ ಆಧೈರ್ಯದಿಂದ ನಗರ ಬಿಟ್ಟು ತಮ್ಮ ಊರುಗಳ ಕಡೆ ಹೋಗುವುದು ಬೇಡ. ಸೋಂಕಿತರಿಗೆ ಅತ್ಯುತ್ತಮ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ಈ ನಡುವೆ ಒಂದೆರಡು ದಿನ ಇದ್ದಕ್ಕಿದ್ದ ಹಾಗೆ ಸೋಂಕಿತರ ಪ್ರಮಾಣ ಹೆಚ್ಚಾಯಿತು, ಆಗ ಮಾತ್ರ ಕೊಂಚ ಗೊಂದಲವಾಗಿದ್ದು ಬಿಟ್ಟರೆ ಉಳಿದಂತೆ ಎಲ್ಲವೂ ನಮ್ಮ ನಿಯಂತ್ರಣದಲ್ಲಿದೆ’ ಎಂದು ತಿಳಿಸಿದರು.

ಅಕ್ಟೋಬರ್‌ಗೆ ಸಿದ್ಧರಿದ್ದೇವೆ: ‘ಕೋವಿಡ್-19 ಅಕ್ಟೋಬರ್ ತಿಂಗಳಿಗೆ ಪರಾಕಾಷ್ಠೆ ಮುಟ್ಟಲಿದೆ ಎಂದು ಐಸಿಎಂಆರ್ ಈಗಾಗಲೇ ಎಚ್ಚರಿಸಿದೆ. ಅದಕ್ಕೆ ತಕ್ಕಹಾಗೆ ಸರ್ಕಾರ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮುಖ್ಯವಾಗಿ ಜನರು ವೈಯಕ್ತಿಕ ಸುರಕ್ಷತೆ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಜತೆಗೆ ಸೋಂಕು ಹರಡದಂತೆ ತಡೆಗಟ್ಟಲು ಸರಕಾರ ನಡೆಸುತ್ತಿರುವ ಪ್ರಯತ್ನಕ್ಕೆ ಸಾರ್ವಜನಿಕರು ಕೂಡ ಕಾಣಿಕೆ ನೀಡಬೇಕು. ಹಾಗೆ ಮಾಡುವ ಮೂಲಕ ಸೋಂಕಿತರ ಸಂಖ್ಯೆ ಜಾಸ್ತಿಯಾಗದಂತೆ ನೋಡಿಕೊಳ್ಳಬಹುದು. ನಮ್ಮೆಲ್ಲರ ನಡುವೆ ವೈರಸ್ ಕೂಡ ಓಡಾಡುತ್ತಿದೆ ಎಂಬುದನ್ನು ಮರೆಯಬಾರದು’ ಎಂದು ಡಿಸಿಎಂ ಹೇಳಿದರು.

‘ಸದ್ಯಕ್ಕೆ ನಮ್ಮಲ್ಲಿ ಹಾಸಿಗೆಗಳ ಕೊರತೆ ಇಲ್ಲ. ಕೋವಿಡ್ ಕೇರ್ ಸೆಂಟರುಗಳನ್ನು ಸ್ಥಾಪನೆ ಮಾಡಿದ್ದೇವೆ. 30 ಸಾವಿರಕ್ಕೂ ಹೆಚ್ಚು ಹಾಸಿಗೆಗಳ ವ್ಯವಸ್ಥೆ ಮಾಡುವುದಕ್ಕೆ ನಾವು ಸಜ್ಜಾಗಿದ್ದೇವೆ. ವೈದ್ಯರು, ನರ್ಸ್‌ಗಳು ಹಾಗೂ ಪೂರಕ ಸಿಬ್ಬಂದಿಯ ಕೊರತೆಯಾಗದಂತೆ ನೋಡಿಕೊಂಡಿದ್ದೇವೆ. ಇನ್ನು ಕೋವಿಡ್ ಕೇರ್ ಕೇಂದ್ರಗಳು ಸಮರ್ಪಕವಾಗಿ ನಡೆಯುತ್ತಿವೆ. ಮತ್ತಷ್ಟು ಕೇಂದ್ರಗಳನ್ನು ಸ್ಥಾಪನೆ ಮಾಡುವವರಿದ್ದೇವೆ. ಬೆಂಗಳೂರು ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಎಸ್) 10 ಸಾವಿರಕ್ಕೂ ಹೆಚ್ಚು ಹಾಸಿಗೆಗಳ ಕೋವಿಡ್ ಕೇಂದ್ರವನ್ನು ತೆರೆದಿದ್ದೇವೆ. ಇದು ಜಗತ್ತಿನಲ್ಲಿ ಅತಿದೊಡ್ಡ ಕೋವಿಡ್ ಚಿಕಿತ್ಸಾ ಕೇಂದ್ರ. ಜತೆಗೆ ಹೋಮ್ ಕೇರ್ ವ್ಯವಸ್ಥೆ ಬಗ್ಗೆಯೂ ಹೆಚ್ಚು ಗಮನ ನೀಡುತ್ತಿದ್ದೇವೆ. ಹೀಗಾಗಿ ಯಾವುದೇ ಆತಂಕ ಬೇಡ’ ಎಂದು ತಿಳಿಸಿದರು.

ಸೋಂಕು ರಾಜ್ಯಕ್ಕೆ ಕಾಲಿಟ್ಟಾಗ ದಿನಕ್ಕೆ ನೂರಿನ್ನೂರು ಪರೀಕ್ಷೆಗಳಷ್ಟೇ ಆಗುತ್ತಿತ್ತು. ಈಗ ದಿನಕ್ಕೆ ಏನಿಲ್ಲವೆಂದರೂ 20 ಸಾವಿರಕ್ಕೂ ಹೆಚ್ಚು ಪರೀಕ್ಷೆಗಳು ನಡೆಯುತ್ತಿವೆ. ದಿನದಿಂದ ದಿನಕ್ಕೆ ನಮ್ಮ ವ್ಯವಸ್ಥೆ ಉತ್ತಮವಾಗುತ್ತಿದೆ. 2 ಇದ್ದ ಲ್ಯಾಬುಗಳು ಈಗ ನಗರವೊಂದರಲ್ಲೆ 100ರ ಸಂಖ್ಯೆ ದಾಟಿವೆ. ಇದರೊಂದಿಗೆ ಕೋವಿಡ್ ಕೇರ್ ಕೇಂದ್ರಗಳಲ್ಲಿಐಸಿಯು ಘಟಕಗಳನ್ನೂ ಮಾಡುತ್ತಿದ್ದೇವೆ ಎಂದವರು ಮಾಹಿತಿ ನೀಡಿದರು.

ಲಾಕ್‌ಡೌನ್ ಕಾಲದಲ್ಲಿಯೇ ಸರ್ಕಾರ ಸರಿಯಾಗಿ ಎಚ್ಚೆತ್ತುಕೊಳ್ಳಲಿಲ್ಲ ಎಂಬ ಪ್ರತಿಪಕ್ಷಗಳು ಆರೋಪದ ಬಗ್ಗೆ ಗಮನ ಸೆಳೆದಾಗ, ‘ಕೋವಿಡ್ ಬಂದ ಮೇಲೆ ಒಂದು ಕ್ಷಣವೂ ಸರ್ಕಾರ ಮೈಮರೆತಿಲ್ಲ. ಅದಕ್ಕೆ ಸಾಕ್ಷಿಯಾಗಿ ಇಂದು ಮಾಡಲಾಗಿರುವ ಎಲ್ಲ ಕೆಲಸಗಳೆ ಕಾಣುತ್ತಿವೆ. ಸೋಂಕು ಬಂದಾಗ ಅದನ್ನು ಎದುರಿಸುವ ಕನಿಷ್ಠ ಮೂಲಸೌಕರ್ಯಗಳೇ ನಮ್ಮಲ್ಲಿ ಇರಲಿಲ್ಲ. ಈಗ ಸರ್ವಸಿದ್ಧತೆ ಆಗಿದೆ. ಎಂತಹ ಪರಿಸ್ಥಿತಿ ಬಂದರೂ ಎದುರಿಸುತ್ತೇವೆ. ಹೀಗಾಗಿ ಇಂಥ ಅರೋಪದಲ್ಲಿ ಹುರುಳಿಲ್ಲ’ ಎಂದು ಸ್ಪಷ್ಪಡಿಸಿದರು.

ಸಮುದಾಯ ಹಂತಕ್ಕೆ ಬಂದಿಲ್ಲ: ಬೆಂಗಳೂರಿನಲ್ಲಿ ಪ್ರಸ್ತುತ ಕೋವಿಡ್ ನಿಖರವಾಗಿ ಯಾವ ಹಂತದಲ್ಲಿದೆ ಎಂಬ ಪ್ರಶ್ನೆಗೆ, 
ಕೋವಿಡ್ ಬೆಂಗಳೂರಿನಲ್ಲಿ ವ್ಯಾಪಕವಾಗಿ ವ್ಯಾಪಿಸುತ್ತಿದೆ. ಆದರೆ ಅದಿನ್ನೂ ಸಮುದಾಯ ಮಟ್ಟಕ್ಕೆ ಬಂದಿಲ್ಲ. ಈಗೇನು 2ನೇ ಹಂತದಲ್ಲಿದ್ದೇವೆ, ಅದೇ ಹಂತದಲ್ಲಿಯೇ ಪರಿಸ್ಥಿತಿ ಮುಂದುವರೆದಿದೆ. ಈ ಹಂತ ದಾಟದ ಹಾಗೆ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ. ಸರ್ಕಾರದ ಈ ಪ್ರಯತ್ನಕ್ಕೆ ಜನರ ಸಹಕಾರವೂ ಬಹಳ ಮುಖ್ಯವಾಗಿರುತ್ತದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು