ಅನರ್ಹರಿಗೂ ಶಿಕ್ಷಕ ಭಾಗ್ಯ!

ಸೋಮವಾರ, ಮೇ 27, 2019
23 °C
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಂಡುಬಂದ ದಂಧೆ

ಅನರ್ಹರಿಗೂ ಶಿಕ್ಷಕ ಭಾಗ್ಯ!

Published:
Updated:

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳ ಖಾಸಗಿ ಪ್ರಾಥಮಿಕ ಶಾಲೆಗಳಲ್ಲಿ ಬೋಧನೆಗೆ ಅಗತ್ಯವಿರುವ ಶೈಕ್ಷಣಿಕ ವಿದ್ಯಾರ್ಹತೆ ಇಲ್ಲದವರನ್ನೂ ಶಿಕ್ಷಕರನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಪ್ರಾಥಮಿಕ ಶಾಲೆಗಳಲ್ಲಿ ಬೋಧನೆಗೆ ಡಿಇಡಿ ಪದವಿ ಕಡ್ಡಾಯ. ಆದರೆ ಪಿಯುಸಿ ಇಲ್ಲವೇ ಪದವಿ ಮಾಡಿದವರನ್ನು ಶಿಕ್ಷಕರನ್ನಾಗಿ ನೇಮಿಸಿಕೊಳ್ಳಲಾಗುತ್ತಿದೆ ಎಂದು ಉತ್ತರ ಕರ್ನಾಟಕ ಭಾಗದ ಹಲವು ಪೋಷಕರು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ಬಳ್ಳಾರಿ, ಕೊಪ್ಪಳ, ರಾಯಚೂರು, ದಾವಣಗೆರೆ, ಗದಗ ಜಿಲ್ಲೆಗಳಲ್ಲಿ ಇಂತಹ ದಂಧೆ ನಡೆದಿರುವುದು ಗೊತ್ತಾಗಿದೆ. ಡಿಇಡಿ–ಟಿಇಟಿ ಪಾಸಾದವರಷ್ಟೇ ಶಿಕ್ಷಕರಾಗಿ ನೇಮಕವಾಗಬೇಕು. ಆದರೆ, ಪಿಯುಸಿ, ಪದವಿ ಪಡೆದವರು 4–5 ಸಾವಿರ ರೂಪಾಯಿ ಸಂಬಳಕ್ಕೆ ಶಿಕ್ಷಕರಾಗಿದ್ದಾರೆ. ತಪಾಸಣೆಗೆ ಬಂದರೆ, ಈ ಮೊದಲು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿ ಕೆಲಸಕ್ಕೆ ಬಾರದ ಡಿಇಡಿ–ಟಿಇಟಿ ಪದವೀಧರರ ವೈಯಕ್ತಿಕ ವಿವರವನ್ನು ತೋರಿಸಿ ದಂಧೆಯನ್ನು ಮುಚ್ಚಿಹಾಕಲಾಗುತ್ತಿದೆ. ಸಾವಿರಾರು ರೂಪಾಯಿ ಹಣ ತೆರುವ ಮಕ್ಕಳು ಮತ್ತು ಅವರ ಪೋಷಕರಿಗೆ ದೊಡ್ಡ ರೀತಿಯ ವಂಚನೆ ನಡೆಯುತ್ತಿದೆ ಎಂಬ ಅಳಲು ಕೇಳಿಬಂದಿದೆ.

ದಂಧೆ ಹೇಗೆ: ಅನುಭವಿ ಶಿಕ್ಷಕರಿಂದಲೇ ಪಾಠ ಎಂದು ಹೇಳಿ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಲಾಗುತ್ತದೆ. ಆದರೆ ಅನುಭವಿ ಶಿಕ್ಷಕರ ಸ್ಥಾನದಲ್ಲಿ ಅನನುಭವಿ ಶಿಕ್ಷಕರು ಸ್ಥಾನ ಪಡೆದಿರುತ್ತಾರೆ. ₹ 15ರಿಂದ 20 ಸಾವಿರ ಸಂಬಳದ ಬದಲಿಗೆ ₹ 4ರಿಂದ 6 ಸಾವಿರದೊಳಗೆ ದುಡಿಯುವ ಅನನುಭವಿ ಶಿಕ್ಷಕರನ್ನು ನೇಮಿಸಿಕೊಂಡಿರುತ್ತಾರೆ. ತನಿಖೆಗೆ ಅಧಿಕಾರಿಗಳು ಶಾಲೆಗೆ ಬಂದಾಗ ಮಾತ್ರ ಅನುಭವಿ ಶಿಕ್ಷಕರ ಅರ್ಜಿಯೇ ಅಲ್ಲಿರುತ್ತದೆ.

ಶಿಕ್ಷಕರ ಹೆಸರು, ಅವರು ಪಡೆಯುತ್ತಿರುವ ವೇತನದ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿದರೆ ದಂಧೆ ಬಯಲಿಗೆ ಬರುವುದು ನಿಶ್ಚಿತ. ಆದರೆ ಆ ಕೆಲಸ ಆಗುತ್ತಿಲ್ಲ. ಇದರಿಂದ ಮಕ್ಕಳು, ಪೋಷಕರು ಭಾರಿ ಪ್ರಮಾಣದಲ್ಲಿ ಮೋಸ ಹೋಗುವಂತಾಗಿದೆ ಎಂದು ಪೋಷಕರು ಹೇಳುತ್ತಿದ್ದಾರೆ.

ಅವಕಾಶವೇ ಇಲ್ಲ: ಆರ್‌ಟಿಇ ಸೆಕ್ಷನ್‌ 23ರಂತೆ ಯಾವುದೇ ಶಾಲೆಯಲ್ಲಿ ತರಬೇತಿ ಇಲ್ಲದ ಶಿಕ್ಷಕರನ್ನು ನಿಯೋಜಿಸುವಂತಿಲ್ಲ. ಒಂದು ವೇಳೆ ಇದು ಸಾಬೀತಾದರೆ ಅಂತಹ ಶಾಲೆಗಳ ಮಾನ್ಯತೆ ರದ್ದಾಗುತ್ತದೆ. ಇಂತಹ ದಂಧೆ ನಡೆಯುತ್ತಿರುವುದು ಇದುವರೆಗೆ ಇಲಾಖೆಯ ಗಮನಕ್ಕೆ ಬಂದಿಲ್ಲ. ಆದರೂ ಇದರ ಬಗ್ಗೆ ಪರಿಶೀಲನೆ ನಡೆಸಲಾಗುವುದು. ತಪ್ಪೆಸಗಿದ್ದು ಕಂಡುಬಂದರೆ ತಕ್ಕ ಕ್ರಮ ನಿಶ್ಚಿತ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎಸ್‌.ಜಯಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

**

ಮಕ್ಕಳು, ಪೋಷಕರನ್ನು ವಂಚಿಸುವ ಇಂತಹ ದಂಧೆ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಇನ್ನಷ್ಟು ವಂಚನೆಗೆ ಅವಕಾಶ ಕೊಡುವುದಿಲ್ಲ
-ಎಸ್‌.ಜಯಕುಮಾರ್‌, ಪ್ರಾಥಮಿಕ ಶಿಕ್ಷಣ ಇಲಾಖೆಯ ನಿರ್ದೇಶಕರು

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !