ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐನಲ್ಲೇ ಪ್ರಶ್ನಿಸಲು ಹೈಕೋರ್ಟ್‌ ನಿರ್ದೇಶನ

₹ 190 ಕೋಟಿ ಸಾಲ: ಲುಕ್‌ಔಟ್‌ ನೋಟಿಸ್‌
Last Updated 17 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘₹ 190 ಕೋಟಿ ಬ್ಯಾಂಕ್‌ ಸಾಲ ಮರುಪಾವತಿ ಮಾಡಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧದ ಲುಕ್‌ಔಟ್‌ ನೋಟಿಸ್‌ ಹಿಂಪಡೆಯಲು ಸಿಬಿಐಗೆ ನಿರ್ದೇಶಿಸಬೇಕು’ ಎಂದು ಕ್ರೇನ್ಸ್‌ ಸಾಫ್ಟ್‌ವೇರ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ನ ನಿರ್ದೇಶಕ ಆಸೀಫ್‌ ಖಾದರ್‌ ಕೋರಿಕೆಯನ್ನು ಹೈಕೋರ್ಟ್‌ ತಳ್ಳಿ ಹಾಕಿದೆ.

ಈ ಕುರಿತಂತೆ ಆಸೀಫ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್‌ ಅರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಲೇವಾರಿ ಮಾಡಿದೆ.

‘ಅರ್ಜಿದಾರರು ಈ ಕುರಿತಂತೆ, ಸಿಬಿಐನ ಬ್ಯಾಂಕ್‌ ಸೆಕ್ಯುರಿಟೀಸ್‌ ಅಂಡ್‌ ಫ್ರಾಡ್‌ ಸೆಲ್‌ (ಬಿಎಸ್‌ ಅಂಡ್‌ ಎಫ್‌ಸಿ) ವಿಭಾಗದ ಎಸ್‌.ಪಿಗೆ ಮನವಿ ಸಲ್ಲಿಸಬೇಕು ಮತ್ತು ಈ ಮನವಿಯನ್ನು ಆರು ವಾರಗಳಲ್ಲಿ ಪರಿಗಣಿಸಿ ಸೂಕ್ತ ಆದೇಶ ನೀಡಬೇಕು. ಸಿಬಿಐ ಆದೇಶ ತೃಪ್ತಿಕರ ಎನಿಸದಿದ್ದರೆ ಅದನ್ನು ಅಧೀನ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು’ ಎಂದಿದೆ.‌

ಪ್ರಕರಣವೇನು?: ಮೆಸರ್ಸ್ ಕ್ರೇನ್ಸ್‌ ಸಾಫ್ಟ್‌ವೇರ್‌ ಇಂಟರ್‌ ನ್ಯಾಷನಲ್‌ ಲಿಮಿ ಟೆಡ್‌ ಕಂಪನಿಯು ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ, ವ್ಯಾಪಾರ ಮತ್ತು ವಿತರಣೆಯ ವಹಿವಾಟು ಹೊಂದಿದೆ.

‘ಕಂಪನಿಯು ನಗರದ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯಿಂದ ₹ 170 ಕೋಟಿ, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್‌ನಿಂದ ₹ 20 ಕೋಟಿಯನ್ನು 2006ರ ಜೂನ್‌ನಿಂದ 2008ರ ನಡುವೆ ವಿವಿಧ ಕಂತುಗಳಲ್ಲಿ ಸಾಲ ಪಡೆದಿದೆ. ಇದನ್ನು ಹಿಂದಿರುಗಿಸಿಲ್ಲ’ ಎಂದು ಆರೋಪಿಸಿ ಬ್ಯಾಂಕ್ ಆಫ್ ಇಂಡಿಯಾದ ವಲಯ ಮ್ಯಾನೇಜರ್ 2017ರ ಮೇ 17ರಂದು ಸಿಬಿಐಗೆ ಮಾಹಿತಿ ನೀಡಿದ್ದರು.

ಇದರನ್ವಯ ಕಂಪನಿಯ ನಿರ್ದೇಶಕರಾದ ಆಸಿಫ್‌ ಖಾದರ್‌, ಮುಕ್ರಂ ಜಾನ್‌ ಮತ್ತು ಮುಯೀದ್ ಖಾದರ್‌ ಸೇರಿದಂತೆ ಕೆಲವು ಅಧಿಕಾರಿಗಳ ವಿರುದ್ಧ ಸಿಬಿಐ ದೂರು ದಾಖಲಿಸಿತ್ತು. ತನಿಖೆಯ ವೇಳೆ, ‘ಕಂಪನಿಯು, ಹಾಂಕಾಂಗ್ ಮತ್ತು ಶಾಂಘೈ ಬ್ಯಾಂಕಿಂಗ್‌ ಕಾರ್ಪೋರೇಷನ್‌ (ಎಚ್‌ಎಸ್‌ಬಿಸಿ) ನಿಂದಲೂ ಸಾಲ ಪಡೆದಿದೆ ಮತ್ತು ಈ ವಿಷಯವನ್ನು ಬ್ಯಾಂಕ್ ಆಫ್‌ ಇಂಡಿಯಾದ ಗಮನಕ್ಕೆ ತಂದಿರಲಿಲ್ಲ’ ಎಂಬ ಅಂಶ ಬಯಲಾಗಿತ್ತು.

ಏತನ್ಮಧ್ಯೆ ಆಸೀಫ್‌ ಖಾದರ್‌ ದುಬೈಗೆ ತೆರಳಿದ್ದಾರೆ ಎಂಬ ಮಾಹಿತಿ ಮೇರೆಗೆ ಲುಕ್ಔಟ್‌ ನೋಟಿಸ್ ಹೊರಡಿಸಲಾಗಿತ್ತು. ಆಸೀಫ್‌ 2017ರ ಡಿ 27ರಂದು ಭಾರತಕ್ಕೆ ಬಂದಿಳಿಯುತ್ತಿದ್ದಂತೆ ಪೊಲೀಸರು ವಿಮಾನ ನಿಲ್ದಾಣದಲ್ಲಿ ಅವರನ್ನು ವಶಕ್ಕೆ ಪಡೆದಿದ್ದರು ಹಾಗೂ ಸಿಬಿಐ ಲುಕ್‌ಔಟ್‌ ನೋಟಿಸ್‌ ಜಾರಿಗೊಳಿಸಿರುವ ವಿಷಯ
ವನ್ನು ತಿಳಿಸಿದ್ದರು.

‘10 ಬ್ಯಾಂಕುಗಳಲ್ಲಿ ₹ 861 ಕೋಟಿ ಸಾಲ’
ವಿಚಾರಣೆ ವೇಳೆ ಅಸೀಫ್‌ ಪರ ಹಿರಿಯ ವಕೀಲ ಸಂದೇಶ್ ಜೆ.ಚೌಟ, ‘ಕಂಪನಿ ಹತ್ತು ಬ್ಯಾಂಕುಗಳಿಂದ ಒಟ್ಟು ₹ 861 ಕೋಟಿ ಸಾಲ ಪಡೆದಿದೆ. ಇದರಲ್ಲಿ ಈಗಾಗಲೇ ₹ 614 ಕೋಟಿ ಮರು ಪಾವತಿ ಮಾಡಿದೆ. ಸರಿಸುಮಾರು ₹ 250 ಕೋಟಿಯಷ್ಟು ಬಾಕಿ ಇದೆ’ ಎಂದು ತಿಳಿಸಿದ್ದರು.

ಇದಕ್ಕೆ ಪ್ರತಿಯಾಗಿ ಸಿಬಿಐ ಪರ ವಕೀಲ ಪಿ.ಪ್ರಸನ್ನಕುಮಾರ್‌, ‘ಅರ್ಜಿದಾರರು ಲುಕ್‌ಔಟ್‌ ನೋಟಿಸ್‌ ಹಿಂಪಡೆಯಲು ವಿಚಾರಣಾ ನ್ಯಾಯಾಲಯದಲ್ಲಿಯೇ ಮನವಿ ಸಲ್ಲಿಸಬೇಕು. ಅಷ್ಟಕ್ಕೂ ಈಗಾಗಲೇ ಆಸೀಫ್‌ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ನಿರಾಕರಿಸಿದೆ. ಹೀಗಾಗಿ ಈ ಅರ್ಜಿ ಮಾನ್ಯ ಮಾಡಬಾರದು’ ಎಂದು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT