ಮಂಗಳವಾರ, ಆಗಸ್ಟ್ 3, 2021
24 °C
ಮೆಲ್ಬರ್ನ್‌ ಕನ್ನಡಿಗರೊಂದಿಗೆ ವಿಡಿಯೊ ಸಂವಾದ

ಆರ್ಥಿಕ ಪುನಶ್ಚೇತನ ನಮ್ಮ ಮುಂದಿನ ಗುರಿ; ಡಾ. ಅಶ್ವತ್ಥ ನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕೊರೊನಾ ಪರಿಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಲಾಗುತ್ತಿದೆ. ಇದರೊಂದಿಗೆ ಆರ್ಥಿಕ ಪುನಶ್ಚೇತನಕ್ಕೂ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ. 

ಮೆಲ್ಬರ್ನ್ ಕನ್ನಡ ಸಂಘ ಶನಿವಾರ ಆಯೋಜಿಸಿದ್ದ ವಿಡಿಯೊ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೋವಿಡ್‌ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸಮಪರ್ಕವಾಗಿ ನಿಭಾಯಿಸಿದೆ. ಈ ಬಗ್ಗೆ ಚಿಂತೆ ಬೇಡ ಎಂದರು.  

ಲಾಕ್‌ಡೌನ್‌ ಸಡಿಲಿಕೆ ನಂತರ ಅಂತರ ರಾಜ್ಯ, ಅಂತರ ಜಿಲ್ಲೆಗಳ ನಡುವೆ ಸಂಚಾರ ಮುಕ್ತವಾಗಿರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದೇವೆ. ಇನ್ನು ಮುಂದೆ ಆರ್ಥಿಕ ಪುನಶ್ಚೇತನಕ್ಕೆ ಹೆಚ್ಚು ಆದ್ಯತೆ ನೀಡುತ್ತೇವೆ. ಈ ಹಾದಿಯಲ್ಲಿ ಸಾಕಷ್ಟು ಸವಾಲುಗಳಿದ್ದರೂ, ಅದನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ನಮಗಿದೆ. ಕೊರೊನಾ ಪರಿಸ್ಥಿತಿ ನಿರ್ವಹಣೆ, ಆರ್ಥಿಕ ಪುನಶ್ಚೇತನ ಸೇರಿದಂತೆ ಎಲ್ಲ ವಿಷಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ವಿವರಿಸಿದರು. 

"ಕೋವಿಡ್‌ ವಿರುದ್ಧದ ಹೋರಾಟಕ್ಕೆ 'ಆತ್ಮ ನಿರ್ಭರ ಭಾರತ' ಅಭಿಯಾನಕ್ಕೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ₹20 ಲಕ್ಷ ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಬದುಕು ಕಟ್ಟಿಕೊಳ್ಳಲು ಸಮಸ್ಯೆ ಆಗದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಎಲ್ಲ ನೆರವು ಒದಗಿಸುತ್ತಿವೆ. ಲಾಕ್‌ಡೌನ್‌ ಸಂದರ್ಭದಲ್ಲಿ ಅಗತ್ಯದ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿಲ್ಲ. ಮುಂದೆಯೂ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಲಾಗಿದೆ. ಗ್ರಾಮ, ತಾಲೂಕು, ಜಿಲ್ಲಾ ಮಟ್ಟದಲ್ಲೂ ಆರೋಗ್ಯ ಸಮೀಕ್ಷೆ ನಡೆಸಿ ಆ ಮಾಹಿತಿಯನ್ನು ಡಿಜಿಟಲೀಕರಣ ಮಾಡಲಾಗಿದೆ. ಜತೆಗೆ, ಉಚಿತವಾಗಿ ಕೊವಿಡ್‌ ಚಿಕಿತ್ಸೆ ಹಾಗೂ ಸಾಂಸ್ಥಿಕ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. 

ಇತರ ರಾಷ್ಟ್ರಗಳಿಗೆ ಭಾರತ ಪ್ರೇರಣೆ

ಲಾಕ್‌ಡೌನ್‌ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಕಲ್ಪಿಸಲಾಗಿದೆ.  ವೈರಾಣು ಪತ್ತೆ ಪ್ರಯೋಗಾಲಯದ ಸಂಖ್ಯೆ ಹೆಚ್ಚಿಸಲಾಗಿದೆ. ಪಿಪಿಇ ಕಿಟ್‌, ಎನ್‌ 95 ಮಾಸ್ಕ್‌, ವೆಂಟಿಲೇಟರ್‌ಗಳ ತಯಾರಿಕೆಯಲ್ಲಿ ಸ್ವಾಲಂಬನೆ ಸಾಧಿಸಿ, ಬೇರೆ ದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆ ಬೆಳೆದಿದ್ದೇವೆ. ತಂತ್ರಜ್ಞಾನ ಬಳಸಿಕೊಂಡು ಆರೋಗ್ಯ ಸಿಬ್ಬಂದಿ ಕೊರತೆ ನೀಗಿಸಲಾಗಿದೆ. ಟೆಲಿ ಮೆಡಿಸಿನ್‌, ಟೆಲಿಕನ್ಸಲ್ಟೇಷನ್‌ ಮೂಲಕ ವೈದ್ಯಕೀಯ ಸಲಹೆ ನೀಡಲಾಗುತ್ತಿದೆ. ರಿಮೋಟ್‌ ಐಸಿಯು ವ್ಯವಸ್ಥೆ ಇದೆ. ಜತೆಗೆ ಹೊಸ ಟೆಸ್ಟಿಂಗ್ ವಿಧಾನ, ಹೊಸ ಉಪಕರಣಗಳ ಸಂಶೋಧನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ.  ಮೂಲಸೌಕರ್ಯದ ಕೊರತೆಯನ್ನು ಹಿಮ್ಮೆಟ್ಟಿ ಇಡೀ ವಿಶ್ವದ ಗಮನ ಸೆಳೆದಿರುವ ಭಾರತ, ಇಂದು ಇತರ ರಾಷ್ಟ್ರಗಳಿಗೆ ಪ್ರೇರಣೆ ನೀಡುವಂತಾಗಿದೆ ಎಂದರು. 

ವೈದ್ಯ ನಮಸ್ಕಾರ ಥ್ರೂ ಸೂರ್ಯ ನಮಸ್ಕಾರ

'ವೈದ್ಯ ನಮಸ್ಕಾರ ಥ್ರೂ ಸೂರ್ಯ ನಮಸ್ಕಾರ' ಪರಿಕಲ್ಪನೆಯಲ್ಲಿ ಇದೇ 21ರಂದು ಆಸ್ಟ್ರೇಲಿಯಾದಲ್ಲಿ ಆಯೋಜಿಸಿರುವ ವಿಶ್ವ ಯೋಗ ದಿನಾಚರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾ. ಅಶ್ವತ್ಥ ನಾರಾಯಣ, ದೂರದ ದೇಶದಲ್ಲಿ ಕನ್ನಡದ ಕಂಪು ಪಸರಿಸುವ ಜತೆಗೆ ದೇಶದ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುತ್ತಿರುವ ಕನ್ನಡ ಬಂಧುಗಳ ಸಾಧನೆ ಶ್ಲಾಘನಾರ್ಹ ಎಂದರು .

ಆಸ್ಟ್ರೇಲಿಯಾದ ಕನ್ನಡ ಶಾಲೆಯಲ್ಲಿ 11 ಮತ್ತು 12 ತರಗತಿವರೆಗೂ ವಿಸ್ತರಿಸಲು ಕರ್ನಾಟಕ ಸರ್ಕಾರ ನೆರವು ನೀಡುವ ಜತೆಗೆ, ಕನ್ನಡ ಶಿಕ್ಷಕರ ಕೊರತೆ ನೀಗಿಸಬೇಕು ಎಂಬ ಅಲ್ಲಿನ ಕನ್ನಡಿಗರ ಮನವಿಗೆ ಸ್ಪಂದಿಸಿ, ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು