ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ವಿವಿಧೆಡೆ ಸಂಭ್ರಮದ ಈದ್‌ ಮಿಲಾದ್‌ ಆಚರಣೆ

Last Updated 10 ನವೆಂಬರ್ 2019, 9:23 IST
ಅಕ್ಷರ ಗಾತ್ರ

ಮುಸ್ಲಿಂ ಬಾಂಧವರಪವಿತ್ರ ಹಬ್ಬವಾದ ಈದ್‌ ಮಿಲಾದ್‌ ಅನ್ನು ರಾಜ್ಯಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಕೆಲವೆಡೆ ಮುಸ್ಲಿಂ ಸಮುದಾಯದ ಆಚರಣೆಯಲ್ಲಿ ಹಿಂದೂಗಳು ಭಾಗವಹಿಸಿ ಸಾಮರಸ್ಯ ಮೆರೆದರು.

ಬೆಳಗಾವಿ: ನಗರದಲ್ಲಿ ಈದ್ ಮಿಲಾದ್ ಅಂಗವಾಗಿ ಮುಸ್ಲಿಂ ಬಾಂಧವರು ಸಂಭ್ರಮದಿಂದ ಮೆರವಣಿಗೆ ನಡೆಸಿದರು. ನಗರದ ಹಳೆಯ ಪಿಬಿ ರಸ್ತೆಯ ಜಿನಾ ಚೌಕ್‌ನಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿದ ಕಾಂಗ್ರೆಸ್‌ ಮುಖಂಡ ಫಿರೋಜ್ ಸೇಠ್, ‘ಭಾವೈಕ್ಯದಿಂದ ಕೂಡಿದ ರಾಷ್ಟ್ರ ಭಾರತ. ನಾವೆಲ್ಲರೂ ಭಿನ್ನಾಭಿಪ್ರಾಯ ಮರೆತು, ಸಹಬಾಳ್ವೆಯಿಂದ ಬದುಕಬೇಕು,’ ಎಂದು ಹೇಳಿದರು.

‘ಪ್ರವಾದಿ ಮಹಮ್ಮದ್ ಪೈಗಂಬರ್ ಸಂದೇಶಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಶಾಂತಿಯ ಹಾದಿಯಲ್ಲಿ ಸಾಗಬೇಕು. ಆಗ ಬದುಕು ಸಾರ್ಥಕವಾಗುತ್ತದೆ. ಹಿಂದೂಗಳು, ಮುಸ್ಲಿಮರು ಸಹೋದರರಿದ್ದಂತೆ. ನಾವೆಲ್ಲರೂ ಒಂದಾಗಿ ಬಾಳಬೇಕು. ಅರ್ಥಪೂರ್ಣವಾಗಿ ಹಬ್ಬ ಆಚರಿಸಬೇಕು,’ ಎಂದು ತಿಳಿಸಿದರು.

ಧರ್ಮಗುರು ಮುಫ್ತಿ ಮಂಜೂರ್ ಅಹ್ಮದ್ ಮಿಸ್ಬಾಯಿ, ಶಾಂತಿಯೇ ನಮ್ಮ ಉಸಿರಾಗಲಿ. ‘ಅಲ್ಲಾಹ್’ ಸಕಲ ಜೀವರಾಶಿಗೆ ಒಳಿತನ್ನು ಮಾಡಲಿ ಎಂದು ಆಶಿಸಿದರು.

ಮೆರವಣಿಗೆಯಲ್ಲಿ ಹಜರತ್ ಸೈಯ್ಯದ್ ತಲ್ಹಾ ಅಶ್ರಫಿ ಜಿಲ್ಹಾನಿ , ತಂಜೀಮ್ ಕಮಿಟಿ ಅಧ್ಯಕ್ಷ ಮಹಮ್ಮದ್ ಗೌಸ್ ಪೀರಜಾದೆ, ಉಪಾಧ್ಯಕ್ಷ ಎಂ.ಎನ್. ಶೇಖ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರಾಜು ಸೇಠ್, ಮಾರ್ಕೆಟ್ ಎಸಿಪಿ ಎನ್.ವಿ. ಭರಮನಿ, ಮಹಾಂತೇಶ್ವರ ಜಿದ್ದಿ, ಫೈಜಾನ್ ಸೇಠ್ ಹಾಜರಿದ್ದರು.

ಮೆರವಣಿಗೆಯು ಕೇಂದ್ರ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ ಮಾರ್ಗವಾಗಿ ಸಂಚರಿಸಿ ಕ್ಯಾಂಪ್ ಪ್ರದೇಶದ ಅಸದ್ ಖಾನ್ ದರ್ಗಾ ಆವರಣದಲ್ಲಿ ಮುಕ್ತಾಯಗೊಂಡಿತು.

ಹೊಸಪೇಟೆ: ನಗರದಲ್ಲಿ ಸಂಭ್ರಮ, ಸಡಗರದಿಂದ ಈದ್‌ ಮಿಲಾದ್‌ ಹಬ್ಬವನ್ನು ಆಚರಿಸಲಾಯಿತು. ಮುಸ್ಲಿಂ ಬಾಂಧವರು ಮಸೀದಿಗೆ ತೆರಳಿ ನಮಾಜ್‌ನಲ್ಲಿ ಪಾಲ್ಗೊಂಡ ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಈದ್‌ ಮಿಲಾದ್‌ನ ಭವ್ಯ ಮೆರವಣಿಗೆಗೆ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಿಂದ ಬಂದಿದ್ದ ಸಾವಿರಾರು ಜನ ಸಾಕ್ಷಿಯಾದರು. ಹಸಿರು ವರ್ಣದ ಧ್ವಜಗಳು ಮೆರವಣಿಗೆಯಲ್ಲಿ ರಾರಾಜಿಸಿದವು. ಮೆಕ್ಕಾ ಮದೀನಾ, ಜಾಮೀಯಾ ಮಸೀದಿ, ಕುತುಬ್‌ ಮಿನಾರ್‌ನ ಪ್ರತಿಕೃತಿಗಳು ಗಮನ ಸೆಳೆದವು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಿಂದ ಆರಂಭಗೊಂಡ ಮೆರವಣಿಗೆಯು ಚಿತ್ತವಾಡ್ಗಿ ರಸ್ತೆ, ಶ್ರಮಿಕ ಭವನ, ರಾಮ ಟಾಕೀಸ್‌, ಮೂರಂಗಡಿ ವೃತ್ತ, ಬಸ್‌ ನಿಲ್ದಾಣ, ರೋಟರಿ ವೃತ್ತದ ಮೂಲಕ ಸಾಗಿತು. ಸಾವಿರಾರು ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರಿಂದ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.

ಮೆರವಣಿಗೆಯು ಪಟ್ಟಣ ಪೊಲೀಸ್‌ ಠಾಣೆ ಬಳಿ ಸಾಗುವಾಗ ಹಿಂದೂ ಧರ್ಮೀಯರು ಬರಮಾಡಿಕೊಂಡು ಶುಭ ಕೋರಿದರು. ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಡಿವೈಎಸ್‌ಪಿ ರಘುಕುಮಾರ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT