ಶುಕ್ರವಾರ, ಫೆಬ್ರವರಿ 26, 2021
20 °C

ಪ್ರವಾಹ, ಭೂಕುಸಿತದ ನಷ್ಟ ಅಂದಾಜು: ಭಾರತದ ನೆರವಿಗೆ ವಿದೇಶಿ ಉಪಗ್ರಹಗಳು!

ಎಸ್‌.ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಕೊಡಗು ಮತ್ತು ಕೇರಳದಲ್ಲಿ ಸಂಭವಿಸಿದ ಪ್ರವಾಹ, ಭೂಕುಸಿತದ ಪರಿಹಾರ ಕಾರ್ಯ ಮತ್ತು ನಷ್ಟದ ಅಂದಾಜಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ವಿದೇಶಿ ಉಪಗ್ರಹಗಳ ನೆರವು ಪಡೆದಿದೆ.

ಮಹಾ ಪ್ರವಾಹದ ವೇಳೆಗೆ ಭಾರತೀಯ ಉಪಗ್ರಹಗಳು ಭಾರತದ ಮೇಲೆ ನಿಗಾ ವಹಿಸಲು ಸಾಧ್ಯವಾಗದ ರೀತಿಯಲ್ಲಿ ದೂರದಲ್ಲಿ ಇದ್ದವು. ಯಾವುದೇ ರೀತಿಯಲ್ಲಿ ಇವು ಪರಿಹಾರ ಕಾರ್ಯಕ್ಕೆ ನೆರವು ನೀಡುವ ಸ್ಥಿತಿಯಲ್ಲೂ ಇರಲಿಲ್ಲ. ಆಗ ನೆರವಿಗೆ ಬಂದಿದ್ದು ಜಪಾನ್‌, ಕೆನಡಾ, ಜರ್ಮನಿ ಮತ್ತು ಯುರೋಪ್‌ ಬಾಹ್ಯಾಕಾಶ ಸಂಸ್ಥೆಗಳ ಉಪಗ್ರಹಗಳು ಎಂದು ಇಸ್ರೊ ಮೂಲಗಳು ತಿಳಿಸಿವೆ.

ದಟ್ಟವಾದ ಮೋಡ ಹರಡಿರುವುದು ಮತ್ತು ಮಳೆಯಿಂದಾಗಿ ಭಾರತೀಯ ಉಪಗ್ರಹಗಳಿಗೆ ಸ್ಪಷ್ಟ ಚಿತ್ರಗಳನ್ನು ಸೆರೆ ಹಿಡಿಯಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ವಿದ್ಯುತ್‌ಕಾಂತ ಹರಿಸಿ ಚಿತ್ರ ಸೆರೆ ಹಿಡಿಯುವ ರೆಡಾರ್‌ ಹೊಂದಿದ್ದ ಆರ್‌ಐ ಸ್ಯಾಟ್‌–1 ಉಪಗ್ರಹ ಈಗ ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ, ಅನ್ಯ ದೇಶಗಳ ಉಪಗ್ರಹಗಳನ್ನು ಅವಲಂಬಿಸಬೇಕಾಗಿದೆ ಎಂದು ಇಸ್ರೊದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ದುರಂತದ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಹಕಾರಕ್ಕೆ ಇಂಟರ್‌ನ್ಯಾಷನಲ್‌ ಚಾರ್ಟರ್‌ ಆಫ್‌ ಮೇಜರ್‌ ಡಿಸಾಸ್ಟರ್‌ ಒಪ್ಪಂದ ಮತ್ತು ಸೆಂಟಿನಲ್‌ ಏಷ್ಯಾ ಒಪ್ಪಂದದಲ್ಲಿ ಭಾರತ ಭಾಗಿಯಾಗಿದೆ. ಇದರಿಂದಾಗಿ ನಮ್ಮ ಕೋರಿಕೆಯ ಮೇರೆಗೆ ಆ ರಾಷ್ಟ್ರಗಳ ಉಪಗ್ರಹಗಳು ನೆರವು ನೀಡುತ್ತಿವೆ’ ಎಂದು ಅವರು ವಿವರಿಸಿದರು.

ದುರಂತದ ಸಂದರ್ಭದಲ್ಲಿ ಮಾಹಿತಿ, ಚಿತ್ರಗಳನ್ನು ಪಡೆಯಲು ನಮ್ಮದೇ ಆದ ರಿಸೋರ್ಸ್‌ 2 ಸ್ಯಾಟ್‌, ಕಾರ್ಟೋ ಸ್ಯಾಟ್‌ ಮತ್ತು ಓಷನ್‌ ಸ್ಯಾಟ್‌ ಉಪಗ್ರಹಗಳಿವೆ. ಇವು ಅತ್ಯಂತ ದೂರದ ಕಕ್ಷೆಯಲ್ಲಿವೆ.  ಭಾರತದ ಮೇಲೆ ಮೋಡ ಕವಿದಿರುವುದರ ಜೊತೆಗೆ ಮಳೆಯೂ ಬೀಳುತ್ತಿರುವುದರಿಂದ ಚಿತ್ರ ತೆಗೆಯಲು ಸಾಧ್ಯವಾಗಿಲ್ಲ ಎಂದರು.

ಯಾವ್ಯಾವ ರೀತಿಯ ಸಹಕಾರ
ಪ್ರವಾಹದಿಂದ ಜಲಾವೃತ ಮತ್ತು ಭೂಕುಸಿತದ ಪ್ರದೇಶಗಳನ್ನು ಉಪಗ್ರಹಗಳು ನಿಖರವಾಗಿ ಚಿತ್ರಗಳನ್ನು ಸೆರೆ ಹಿಡಿಯಬಲ್ಲವು. ಇದರ ನೆರವಿನಿಂದ ರಕ್ಷಣೆ ಮತ್ತು ಪರಿಹಾರ ಕಾರ್ಯ ಕೈಗೊಳ್ಳಲಾಗುತ್ತದೆ. ಆರ್ಥಿಕ ನಷ್ಟದ ಅಂದಾಜು ಮಾಡಲು ಉಪಗ್ರಹ ಚಿತ್ರಗಳನ್ನು ಬಳಸಿಕೊಳ್ಳಲಾಗುತ್ತದೆ. ಬೆಳೆ ನಷ್ಟ ಪರಿಹಾರ ನೀಡಲು ಅಧಿಕಾರಿಗಳು ಸ್ಥಳ ಪರಿಶೀಲನೆ ಜೊತೆಗೆ ಉಪಗ್ರಹ ಮಾಹಿತಿಯನ್ನೂ ಬಳಸಿಕೊಳ್ಳುತ್ತಾರೆ.

ಮುಖ್ಯಾಂಶಗಳು
* ಇಸ್ರೊ ಉಪಗ್ರಹಗಳು ದೂರ ಇರುವುದರಿಂದ ಚಿತ್ರ ಸೆರೆ ಹಿಡಿಯಲು ತೊಡಕು
* ಸೇವೆಯಲ್ಲಿರುವ ಉಪಗ್ರಹಗಳು ಹವಾಮಾನ ಮುನ್ಸೂಚನೆಗೆ ಮಾತ್ರ ಬಳಕೆ
* ಜರ್ಮನಿ, ಜಪಾನ್‌, ಕೆನಡಾ ಸ್ಪೇಸ್‌ ಏಜೆನ್ಸಿಗಳ ಉಪಗ್ರಹಗಳು ರೆಡಾರ್‌ಗಳನ್ನು ಹೊಂದಿವೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು