ಶನಿವಾರ, ಸೆಪ್ಟೆಂಬರ್ 25, 2021
22 °C
ನೆಚ್ಚಿನ ನಾಯಕನನ್ನು ಕೊನೆ ಬಾರಿ ಕಣ್ತುಂಬಿಕೊಂಡ ಅಭಿಮಾನಿಗಳು

ಜನಸಾಗರದಲ್ಲಿ ‘ಅಂಬಿ’ಗನ ಯಾತ್ರೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರೆಬೆಲ್ ಸ್ಟಾರ್ ‘ಅಂಬಿ’ಯ ಅಂತಿಮ ಯಾತ್ರೆಗೆ ಜನಸಾಗರವೇ ಹರಿದುಬಂತು. ಕಂಠೀರವ ಕ್ರೀಡಾಂಗಣದಿಂದ ಕಂಠೀರವ ಸ್ಟುಡಿಯೊವರೆಗೂ ಸಾಗಿದ ಮೆರವಣಿಗೆಯಲ್ಲಿ ಅಂಬರೀಷ್ ಪರ ಜೈಕಾರ, ಘೋಷಣೆಗಳು ಮೊಳಗಿದವು. ರಸ್ತೆಯುದ್ದಕ್ಕೂ ನೆರೆದಿದ್ದ ಅಭಿಮಾನಿಗಳು, ದೂರದಿಂದಲೇ ನಮಸ್ಕರಿಸಿ ನೆಚ್ಚಿನ ನಟನನ್ನು ಕಣ್ತುಂಬಿಕೊಂಡರು.

1,800 ಕೆ.ಜಿ ಹೂವಿನಿಂದ ಅಲಂಕರಿಸಿದ್ದ ತೆರೆದ ವಾಹನದಲ್ಲಿ ಅಂಬರೀಷ್ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ಪಕ್ಕದಲ್ಲೇ ಪತ್ನಿ ಸುಮಲತಾ ಹಾಗೂ ಪುತ್ರ ಅಭಿಷೇಕ್ ಗೌಡ ಕುಳಿತುಕೊಂಡಿದ್ದರು. ಕ್ರೀಡಾಂಗಣದಿಂದ ಮೈಸೂರು ಬ್ಯಾಂಕ್ ವೃತ್ತ, ಚಾಲುಕ್ಯ ವೃತ್ತ, ಕಾವೇರಿ ಜಂಕ್ಷನ್, ಯಶವಂತಪುರ ಮೇಲ್ಸೇತುವೆ ಹಾಗೂ ಗೊರಗುಂಟೆಪಾಳ್ಯ ಮಾರ್ಗವಾಗಿ ಸಾಗಿದ ಮೆರವಣಿಗೆ, ಮಧ್ಯಾಹ್ನ 3.47ಕ್ಕೆ ಸ್ಟುಡಿಯೊ ತಲುಪಿತು. ಮೆರವಣಿಗೆ ಸಾಗಿದ ರಸ್ತೆಗಳಲ್ಲಿ ಕಣ್ಣು ಹಾಯಿಸಿದ ಕಡೆಗಳಲ್ಲೆಲ್ಲ ಜನಸ್ತೋಮವೇ ಕಾಣಿಸುತ್ತಿತ್ತು. ಕೆಲವರು ಮರಗಳನ್ನೇರಿ ಕುಳಿತಿದ್ದರೆ, ಕಟ್ಟಡಗಳ ಮೇಲೆಲ್ಲ ನಿಂತು ಅಭಿಮಾನಿಗಳು  ಜೈಕಾರ ಕೂಗಿದರು. ಕಣ್ಣೀರು ಸುರಿಸಿದರು. ‘ಕಲಿಯುಗದ ಕರ್ಣ’ನ ಮೇಲೆ ಜನ ಇಟ್ಟಿದ್ದ ಪ್ರೀತಿಯನ್ನು ಈ ಯಾತ್ರೆ ಸಾರಿ ಸಾರಿ ಹೇಳುತ್ತಿತ್ತು.

‘ಅಣ್ಣನನ್ನು ನೋಡಬೇಕು ಬಿಡಿ’: ಮಂಡ್ಯದ ಜನ ಅಂತಿಮ ದರ್ಶನ ಪಡೆಯಲೆಂದು ಪಾರ್ಥಿವ ಶರೀರವನ್ನು ಭಾನುವಾರ ಸಂಜೆ ಅಲ್ಲಿಗೆ ಕಳುಹಿಸಲಾಗಿತ್ತು. ಸೋಮವಾರ ಬೆಳಿಗ್ಗೆ ಮಂಡ್ಯದಿಂದ ಹೆಲಿಕಾಪ್ಟರ್‌ನಲ್ಲಿ ಶರೀರವನ್ನು ವಾಪಸ್ ಬೆಂಗಳೂರಿನ ಕಂಠೀರವ ಕ್ರೀಡಾಂಗಣಕ್ಕೆ ತರಲಾಯಿತು.

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌, ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹಾಗೂ ನಟ ದರ್ಶನ್ ಆಂಬುಲೆನ್ಸ್‌ನಲ್ಲೇ ಅಂತಿಮ ದರ್ಶನ ಪಡೆದುಕೊಂಡರು. ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸ್ಥಳಕ್ಕೆ ಬಂದ ನಂತರ, ಮಧ್ಯಾಹ್ನ 12.25ಕ್ಕೆ ಶರೀರವನ್ನು ವಿಶೇಷ ವಾಹನದೊಳಗೆ ಇರಿಸಲಾಯಿತು. ಆ ನಂತರ ಯಾತ್ರೆ ಆರಂಭವಾಯಿತು.

ವಾಹನ ಕ್ರೀಡಾಂಗಣದಿಂದ ಹೊರಗೆ ಬರುತ್ತಿದ್ದಂತೆಯೇ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತು. ‘ಅಣ್ಣನನ್ನು ನೋಡಬೇಕು ಬಿಡಿ’ ಎಂದು ಕೆಲವರು ವಾಹನದ ಮುಂದೆ ಬಿದ್ದರು. ಪೊಲೀಸರು ಅವರನ್ನೆಲ್ಲ ಪಕ್ಕಕ್ಕೆ ಎಳೆದು ಹಾಕಿದರು. ದಾರಿಯುದ್ದಕ್ಕೂ ಇದೇ ಪ್ರಕ್ರಿಯೆ ನಡೆಯುತ್ತಿತ್ತು.

ಸ್ಟುಡಿಯೊ ಬಳಿ...: ಅಂಬರೀಷ್ ಅಂತ್ಯಕ್ರಿಯೆ ನೋಡಲು ಅಭಿಮಾನಿಗಳು ಬೆಳಿಗ್ಗೆ 5 ಗಂಟೆಯಿಂದಲೇ ಕಂಠೀರವ ಸ್ಟುಡಿಯೊದತ್ತ ಹೆಜ್ಜೆ ಹಾಕಿದ್ದರು. 9 ಗಂಟೆ ವೇಳೆಗಾಗಲೇ ಸ್ಟುಡಿಯೊ ರಸ್ತೆ ಹಾಗೂ ಅದಕ್ಕೆ ಹೊಂದಿಕೊಂಡಿರುವ ಹೊರ ವರ್ತುಲ ರಸ್ತೆಗಳೆಲ್ಲ ಜನರಿಂದ ತುಂಬಿ ಹೋಗಿದ್ದವು. ಡಾ. ರಾಜ್‌ಕುಮಾರ್ ಸಮಾಧಿ ಗೇಟು ಏರಿ ಕೆಲವು ಅಭಿಮಾನಿಗಳು, ಅಕ್ರಮವಾಗಿ ಸ್ಟುಡಿಯೊ ಒಳಗೆ ಹೋಗಲು ಪ್ರಯತ್ನಿಸಿದರು. ಅವರನ್ನೆಲ್ಲ ಪೊಲೀಸರು, ಚದುರಿಸಿ ಹೊರಗೆ ಕಳುಹಿಸಿದರು.

 ಎಲ್ಲರೂ ಅಂತ್ಯಕ್ರಿಯೆ ನೋಡಲೆಂದು ಸ್ಟುಡಿಯೊ ಹೊರಗೆ ಎಲ್‌ಇಡಿ ಪರದೆಗಳನ್ನು ಹಾಕಲಾಗಿತ್ತು. ಸಮೀಪದ ಜಂಕ್ಷನ್‌ಗಳಲ್ಲಿ ಅಂಬರೀಷ್ ಅಭಿನಯದ ಹಾಡುಗಳು ಮೊಳಗುತ್ತಲೇ ಇದ್ದವು. ಸೂರ್ಯ ಮುಳುಗುವ ವೇಳೆಗೆ ಅಂಬರೀಷ್ ಚಿತೆಗೆ ಅವರ ಮಗ ಅಭಿಷೇಕ್ ಅಗ್ನಿಸ್ಪರ್ಶ ಮಾಡಿದರು. ಆಗ ಎಲ್ಲರೂ, ‘ಮತ್ತೆ ಹುಟ್ಟಿ ಬಾ ಅಣ್ಣಾ....’ ಎಂದು ಘೋಷಣೆ ಕೂಗುತ್ತಿದ್ದರು. ಅದೇ ಘೋಷಣೆ ಹೇಳಿಕೊಂಡೇ ಮನೆಯತ್ತ ಹೆಜ್ಜೆ ಹಾಕಿದರು.

ಎಚ್‌ಡಿಕೆ ಉಸ್ತುವಾರಿ
ಡಾ.ರಾಜ್‌ಕುಮಾರ್ ಅಂತ್ಯಕ್ರಿಯೆ ವೇಳೆ ಸೃಷ್ಟಿಯಾಗಿದ್ದ ಅವಾಂತರದಿಂದ ಎಚ್ಚೆತ್ತುಕೊಂಡಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಅಂಬರೀಷ್ ನಿಧನರಾದ ದಿನವೇ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆದು ಯಾವುದೇ ಲೋಪಗಳಾಗದಂತೆ ಬಂದೋಬಸ್ತ್ ಒದಗಿಸುವಂತೆ ಸೂಚಿಸಿದ್ದರು.

ಅಂಬಿ ನಿಧನರಾದ ಕ್ಷಣದಿಂದ ಅಂತ್ಯಕ್ರಿಯೆ ಮುಗಿಯುವವರೆಗಿನ ಪ್ರತಿಹಂತದಲ್ಲೂ ಮುಖ್ಯಮಂತ್ರಿಯವರೇ ನಿಂತುಕೊಂಡು ಮೇಲುಸ್ತುವಾರಿ ವಹಿಸಿದ್ದು ವಿಶೇಷವಾಗಿತ್ತು.

ರಾಜ್‌ಕುಮಾರ್ ನಿಧನ ಹೊಂದಿದಾಗಲೂ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗಿದ್ದರು. ಆಗಷ್ಟೇ ಅಧಿಕಾರ ಸ್ವೀಕರಿಸಿ, ಅನನುಭವಿಯಾಗಿದ್ದ ಅವರಿಗೆ ಅಧಿಕಾರಿಗಳ ನೆರವು ಸಿಕ್ಕಿರಲಿಲ್ಲ. ಮುನ್ನೆಚ್ಚರಿಕೆ ವಹಿಸದೇ ಇದ್ದುದರಿಂದ ರಾಜ್ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಅಭಿಮಾನಿಗಳು ಅವರ ಕಳೇಬರವನ್ನೇ ತೆಗೆದುಕೊಂಡು ಹೋಗಿದ್ದರು. ದೊಂಬಿ, ಘರ್ಷಣೆ, ಪ್ರಾಣಹಾನಿ ಕೂಡ ನಡೆದಿತ್ತು. ಪಾರ್ಥಿವ ಶರೀರ ನೋಡಲು ಕುಟಂಬದವರಿಗೂ ಸಾಧ್ಯವಾಗಿರಲಿಲ್ಲ.

ಕಲಾವಿದರ ಚಿತ್ರ ನಮನ

ಕರ್ನಾಟಕ ರಾಜ್ಯ ನಾಮಫಲಕ ಕಲಾವಿದರ ಸಂಘದ ಸದಸ್ಯರು ಅಂಬರೀಷ್‌ಗೆ ಚಿತ್ರದ ಮೂಲಕ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು.

‘ಕಲಿಯುಗದ ಕರ್ಣ ಕಾಲದಲ್ಲಿ ಕರಗಿ ಹೋದೆಯಾ...’ ಎಂಬ ಬರಹ ನೆರೆದಿದ್ದವರ ಮನಕಲಕಿತು.

ಸಂಘದ ಕಲಾವಿದರಾದ ವಿಕ್ಕಿ, ಮುರುಗೇಶನ್‌, ಜಿ.ಎಸ್. ಚೆಲುವರಾಜ್, ರವಿ ಹುನಗುಂದ ಮೂರು ಗಂಟೆಗಳ ಕಾಲ ಶ್ರಮವಹಿಸಿ ಆ ಚಿತ್ರಗಳನ್ನು ಬಿಡಿಸಿದ್ದರು. ‘ನಿನ್ನೆಯೂ ಮೂಡಲಪಾಳ್ಯದ ವೃತ್ತದ ಬಳಿ ಹತ್ತು ನಿಮಿಷದಲ್ಲಿ ಅಂಬಿಯಣ್ಣನ ಚಿತ್ರ ಬಿಡಿಸಿ ನಮನ ಸಲ್ಲಿಸಿದೆವು. ಅವರು ನಮ್ಮನ್ನು ಅಗಲಿದ್ದಾರೆಂದು 
ಸ್ಮರಿಸಿಕೊಳ್ಳಲು ನೋವಾಗುತ್ತದೆ ಎಂದರು ಕಲಾವಿದ ಮುರುಗೇಶನ್.

ಸಿಗರೇಟ್‌ ತಂದಿದ್ದ ಅಭಿಮಾನಿ
ಕಂಠೀರವ ಸ್ಟುಡಿಯೊದ ಒಳಗೆ ಹೋಗಲು ಸರದಿ ಸಾಲಿನಲ್ಲಿ ನಿಂತಿದ್ದ ಅಂಬರೀಷ್‌ ಅಭಿಮಾನಿಗಳ ಮನದಲ್ಲಿ ಕಲಿಯುಗದ ಕರ್ಣನದ್ದೇ ಧ್ಯಾನ. ಅಂಬಿಗೆ ಇಷ್ಟವೆಂದು ಕೆಲವರು ಸೋಮವಾರವೂ ಮುದ್ದೆ–ಕೋಳಿಸಾರು ಪಾರ್ಸಲ್ ತಂದಿದ್ದರು. ಮತ್ತೊಬ್ಬ ಅಭಿಮಾನಿ ಸಿಗರೇಟ್ ಪ್ಯಾಕ್‌ಗಳೊಂದಿಗ ಪ್ರತ್ಯಕ್ಷನಾದ.

‘ಅಣ್ಣಂಗೆ ಸಿಗರೇಟ್‌ ಅಂದ್ರೆ ಪ್ರಾಣ. ಎರಡು ಪ್ಯಾಕ್‌ ತಂದಿದ್ದೇನೆ. ಅವುಗಳನ್ನು ಚಿತೆಗೆ ಹಾಕಬೇಕು’ ಎಂದು ಹೇಳಿದ. ತನ್ನ ದೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಕಷ್ಟಪಡುತ್ತಿದ್ದ ಆತನ ಸ್ಥಿತಿ ಪೊಲೀಸರಿಗೆ ಕ್ಷಣಾರ್ಧದಲ್ಲಿ ಅರ್ಥವಾಯಿತು. ಪ್ಯಾಂಟ್ ಜೇಬು ಪರಿಶೀಲಿಸಿದಾಗ ಮದ್ಯದ ಬಾಟಲಿಯೂ ಪತ್ತೆಯಾಯಿತು. ‘ಸಿಗರೇಟ್‌ ಮತ್ತು ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ’ ಎಂದು ಬುದ್ಧಿಮಾತು ಹೇಳಿ ಆ ಅಭಿಮಾನಿಯನ್ನು ಪೊಲೀಸರು ಸಾಗಹಾಕಿದರು.

ಮೈಕ್‌ ಹಿಡಿದ ಶಿವಕುಮಾರ್‌
ಅಂತ್ಯಸಂಸ್ಕಾರ ನಿಗದಿಯಾಗಿದ್ದ ಸ್ಥಳಕ್ಕೆ ಕೆಲ ಸರ್ಕಾರಿ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸ್ಥಳೀಯ ಜನಪ್ರತಿನಿಧಿಗಳೂ ಒಳಪ್ರವೇಶಿಸಲು ಯತ್ನಿಸುತ್ತಿದ್ದರು. ಇದರಿಂದ ಹೊರರಾಜ್ಯ ಹಾಗೂ ವಿದೇಶಗಳಿಂದ ಬಂದಿದ್ದ ಅಂಬಿಯ ಆಪ್ತರಿಗೆ, ಚಿತ್ರರಂಗದ ಗಣ್ಯರಿಗೆ ಸ್ಥಳಾವಕಾಶದ ತೊಂದರೆ ಆಯಿತು. ಆಗ ಮೈಕ್ ಹಿಡಿದು ಪರಿಸ್ಥಿತಿ ನಿಯಂತ್ರಿಸಲು ಶುರು ಮಾಡಿದ ಸಚಿವ ಡಿ.ಕೆ.ಶಿವಕುಮಾರ್, ‘ಎಲ್ಲರೂ ಅಂಬರೀಷ್ ಅವರನ್ನು ನೋಡಿ ಆಗಿದೆ. ಮತ್ತೆ ಮತ್ತೆ ಒಳಗೆ ಬಿಡಬೇಡಿ’ ಎಂದು ಪೊಲೀಸರಿಗೆ ಸೂಚಿಸಿದರು.

ಕಲಾವಿದರ ತಂಡ ಅಂತಿಮ ದರ್ಶನ ಪಡೆಯುವಷ್ಟರಲ್ಲಿ ಸಮಯ ಸಂಜೆ 5.30 ಆಯಿತು. ಆಗ ಪುನಃ ಮೈಕ್ ತೆಗೆದುಕೊಂಡ ಸಚಿವರು, ‘ಅಂಬರೀಷ್‌ ಕುಟುಂಬ ಸದಸ್ಯರಿಗೆ ವಿಧಿವಿಧಾನದಲ್ಲಿ ನೆರವೇರಿಸಲು ಅವಕಾಶ ಕಲ್ಪಿಸಬೇಕಿದೆ. ಪೊಲೀಸ್‌ ಕಮಿಷನರ್ ಅವರನ್ನು ಹೊರತುಪಡಿಸಿ ಉಳಿದ ಅಧಿಕಾರಿಗಳೂ ಹೊರಗೆ ಹೋಗಬೇಕು‌. ಇನ್ನು ಯಾರನ್ನೂ ಒಳಗೆ ಬಿಡಬಾರದು’ ಎಂದು ಖಡಕ್ ಆಗಿಯೇ ಹೇಳಿದರು. ಆಗ ಪೊಲೀಸರು ಎಲ್ಲರನ್ನೂ ದೂರಕ್ಕೆ ಕಳುಹಿಸಿ, ತಾವೂ ಹಿಂದೆ ಸರಿದರು. 


ಚಿತ್ರನಟ ಮತ್ತು ಮಾಜಿ ಸಚಿವ ಅಂಬರೀಷ್ ಅವರ ಅಂತಿಮ ಯಾತ್ರೆ ಸೋಮವಾರ ಬೆಂಗಳೂರಿನಲ್ಲಿ ಯಶವಂತಪುರ ಮೇಲುಸೇತುವೆ ಮೂಲಕ ಹಾದು ಹೋಯಿತು -ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್‌ ಪಿ.ಎಸ್.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು