ಭಾನುವಾರ, ಸೆಪ್ಟೆಂಬರ್ 20, 2020
25 °C
ಬಿ.ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಬೆಂಗಳೂರಿನಲ್ಲೇ ಚಿತ್ರನಗರಿ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರಿನಲ್ಲೇ ಚಿತ್ರನಗರಿ ನಿರ್ಮಿಸಲಾಗುವುದು, ಇದಕ್ಕಾಗಿ ನಿವೇಶನದ ಹುಡುಕಾಟ ನಡೆಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

ನಗರದ ಭಾರತೀಯ ವಿದ್ಯಾಭವನದಲ್ಲಿ ಭಾನುವಾರ ನಟ ಅಂಬರೀಷ್‌ ಅವರಿಗೆ ಮರಣೋತ್ತರವಾಗಿ  ಡಾ.ಬಿ.ಸರೋಜಾ ದೇವಿ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದರು. 

‘ಮುಖ್ಯಮಂತ್ರಿಗಳಾದವರು ತಮ್ಮ ಊರಲ್ಲೇ ಚಿತ್ರನಗರಿ ನಿರ್ಮಿಸಬೇಕೆಂದು ಬಯಸುವುದು ತಪ್ಪೇನಲ್ಲ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಂಗಳೂರಿನಲ್ಲೇ ಚಿತ್ರನಗರಿ ನಿರ್ಮಿಸುವ ಪ್ರಬಲ ಆಕಾಂಕ್ಷೆ ಹೊಂದಿದ್ದು, ಅದನ್ನು ಪೂರ್ಣಗೊಳಿಸಲು ನನಗೆ ಸೂಚಿಸಿದ್ದಾರೆ. ಮೂರ್ನಾಲ್ಕು ಸ್ಥಳಗಳನ್ನೂ ನೋಡಿದ್ದು, ಶೀಘ್ರ ಸೂಕ್ತ ಸ್ಥಳ ಗುರುತಿಸಲಾಗುವುದು’ ಎಂದರು.

ಚೌಡಯ್ಯ ಸ್ಮಾರಕದಲ್ಲಿ ವರ್ಷವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ನಗರದಲ್ಲಿ ಅದರಂತಹ ಇನ್ನೊಂದು ಭವ್ಯ ರಂಗಮಂದಿರವನ್ನು ನಿರ್ಮಿಸುವ ಯೋಚನೆ ಇದೆ ಎಂದರು.

‘ಅಂಬರೀಷ್–ನನ್ನ ಪರಿಚಯ 34 ವರ್ಷದ ಹಿಂದಿನದು. ನಾನು 27 ವರ್ಷ ಅವರೊಂದಿಗೆ ಸಂಸಾರ ನಡೆಸಿದೆ. ಅವರಂತಹ ಪರೋಪಕಾರಿಯನ್ನು ನಾನು ನೋಡಿಲ್ಲ. ಅಂಬರೀಷ್‌ ಅವರಿಂದಾಗಿಯೇ ನಾನು ಸಂಸದೆಯಾದೆ. ಚಿತ್ರರಂಗದ ಎಲ್ಲಾ ಕಲಾವಿದರಿಗೆ ಒಂದು ಸ್ಥಳ ಇರಬೇಕು ಎಂಬ ಚಿಂತನೆಯಲ್ಲಿ ಕಲಾವಿದರ ಭವನ ನಿರ್ಮಾಣವಾಗಿದ್ದರ ಹಿಂದಿನ ಶಕ್ತಿ ಅವರೇ ಆಗಿದ್ದರು’ ಎಂದು ಪ್ರಶಸ್ತಿ ಸ್ವೀಕರಿಸಿದ ಸುಮಲತಾ ಅಂಬರೀಷ್‌ ನೆನಪಿಸಿಕೊಂಡರು.

ಅಂಬರೀಷ್‌ ಪುತ್ರ, ನಟ ಅಭಿಷೇಕ್‌, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್‌.ಸುರೇಶ್‌ ಇದ್ದರು. ಪ್ರಶಸ್ತಿ ₹ 1 ಲಕ್ಷ ನಗದು ಒಳಗೊಂಡಿದೆ.

‘ನಾನೊಬ್ಬಳೇ ಅವನಿಗೆ ಅಕ್ಕ’

‘ಅಂಬರೀಷ್‌ ನನ್ನೊಬ್ಬಳನ್ನು ಮಾತ್ರ ಅಕ್ಕ ಎಂದು ಕರೆಯುತ್ತಿದ್ದ. ಕಳೆದ 10 ವರ್ಷಗಳಿಂದ ಒಂದು ವರ್ಷವೂ ಈ ಪ್ರಶಸ್ತಿ ಪ್ರದಾನ ಸಮಾರಂಭ ಅವನಿಲ್ಲದೆ ಆಗಿಯೇ ಇಲ್ಲ, ಈ ಬಾರಿ ಅವನ ಅನುಪಸ್ಥಿತಿಯಲ್ಲಿ ಅವನಿಗೇ ಪ್ರಶಸ್ತಿ ಕೊಡುವ ದೌರ್ಬಾಗ್ಯ ಎದುರಾಯಿತು. ಉದ್ಯಮದಲ್ಲಿ ಇಂದು ಕಷ್ಟ ಹೇಳಿಕೊಳ್ಳಲು ಅಂಬರೀಷ್ ಅವರಂತಹ ವ್ಯಕ್ತಿಗಳಿಲ್ಲವಲ್ಲ’ ಎಂದು ಹಿರಿಯ ನಟಿ ಬಿ.ಸರೋಜಾ ದೇವಿ ಬೇಸರಪಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು