ಭಾನುವಾರ, ಮಾರ್ಚ್ 29, 2020
19 °C

ಸ್ಟಾರ್‌ ನಟರು ಸಿನಿಮೋತ್ಸವದತ್ತ ವಿಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕನ್ನಡದ ಸ್ಟಾರ್‌ ನಟ, ನಟಿಯರು 11ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಿಂದ ದೂರ ಉಳಿದಿರುವುದು ಸಂಘಟಕರು ಮತ್ತು ವೀಕ್ಷಕರಲ್ಲಿ ಬೇಸರ ಮೂಡಿಸಿದೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಿರುವ ಚಲನಚಿತ್ರೋತ್ಸವವು ಇದೇ 28ರವರೆಗೆ ನಡೆಯಲಿದೆ. ಗುರುವಾರ ಕೂಡ ಪ್ರೇಕ್ಷಕರು ಒರಾಯನ್‌ ಮಾಲ್‌ನ ಬಹುಪರದೆಗಳ ಮುಂದೆ ಸಾಲುಗಟ್ಟಿ ನಿಂತು ದೇಶ, ವಿದೇಶಗಳ ಸಿನಿಮಾ ವೀಕ್ಷಿಸಿದರು.

ಚಿತ್ರೋತ್ಸವದ ಜನಪ್ರಿಯ ಮನರಂಜನಾ ಸಿನಿಮಾಗಳ(ಕನ್ನಡ ವಿಭಾಗ) ಸ್ಪರ್ಧೆಯಲ್ಲಿ ‘ಅಯೋಗ್ಯ’, ‘ಹಂಬಲ್‌ ಪೊಲಿಟಿಷಿಯನ್‌ ನೋಗ್‌ರಾಜ್’, ‘ಕೆಜಿಎಫ್‌ ಚಾಪ್ಟರ್‌ 1’, ‘ರಾಜು ಕನ್ನಡ ಮೀಡಿಯಂ’, ‘ರ‍್ಯಾಂಬೋ 2’, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕೊಡುಗೆ– ರಾಮಣ್ಣ ರೈ’, ‘ಟಗರು’, ‘ದಿ ವಿಲನ್’ ಚಿತ್ರಗಳಿವೆ. ಆದರೆ, ಈ ಚಿತ್ರಗಳ ಯಾವೊಬ್ಬ ನಟ, ನಟಿಯೂ ಚಿತ್ರೋತ್ಸವಕ್ಕೆ ಇಲ್ಲಿಯವರೆಗೆ ಭೇಟಿ ನೀಡಿಲ್ಲ.

‘ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವಂತೆ ಎಲ್ಲ ಸ್ಟಾರ್‌ ನಟ, ನಟಿಯರಿಗೆ ಆಹ್ವಾನ ನೀಡಲಾಗಿದೆ. ಅವರು ಭೇಟಿ ನೀಡಿದರೆ ಅಭಿಮಾನಿಗಳನ್ನು ಸಂಭಾಳಿಸುವುದು ಕಷ್ಟ. ಜೊತೆಗೆ, ಅವರಿಗೆ ರಕ್ಷಣೆ ನೀಡುವುದು ಕಷ್ಟವಾಗಲಿದೆ. ಹಾಗಾಗಿ, ಅವರು ಭೇಟಿ ನೀಡಿಲ್ಲ. ಚಿತ್ರೋತ್ಸವದ ಸಮಾರೋಪಕ್ಕೆ ಇನ್ನೂ ಐದು ದಿನಗಳಿವೆ. ಈ ಅವಧಿಯಲ್ಲಿ ಭೇಟಿ ನೀಡಬಹುದು’ ಎನ್ನುವುದು ಚಲನಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್‌. ವಿದ್ಯಾಶಂಕರ್‌ ಅವರ ವಿಶ್ವಾಸ.

ಶೂಟಿಂಗ್‌ನಲ್ಲಿ ಬ್ಯುಸಿ: ನಟರಾದ ಪುನೀತ್‌ ರಾಜ್‌ಕುಮಾರ್, ದರ್ಶನ್‌, ಸುದೀಪ್, ಶಿವರಾಜ್‌ಕುಮಾರ್, ಶ್ರೀಮುರಳಿ ನಟನೆಯ ಚಿತ್ರಗಳ ಶೂಟಿಂಗ್‌ ನಡೆಯುತ್ತಿದೆ. ನಟ ಯಶ್‌ ‘ಕೆಜಿಎಫ್‌ ಚಾಪ್ಟರ್‌ 2’ ಚಿತ್ರದ ಶೂಟಿಂಗ್‌ಗೆ ತಯಾರಿ ನಡೆಸಿದ್ದಾರೆ. ಹಾಗಾಗಿ, ಈ ನಟರು ಸಿನಿಮೋತ್ಸವಕ್ಕೆ ಬರಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಕಿರುತೆರೆಯ ಬೆರಳೆಣಿಕೆಯಷ್ಟು ಕಲಾವಿದರು, ಬೆಳ್ಳಿತೆರೆಯ ಕೆಲವು ಹಿರಿಯ ಕಲಾವಿದರನ್ನು ಹೊರತುಪಡಿಸಿದರೆ ಇಡೀ ಚಿತ್ರರಂಗ ಸಿನಿಮೋತ್ಸವದಿಂದ ದೂರ ಸರಿದಂತೆ ಭಾಸವಾಗುತ್ತಿದೆ ಎನ್ನುವುದು ಪ್ರೇಕ್ಷಕರ ಅಭಿಪ್ರಾಯ.

‘ತಮಿಳಿನಲ್ಲಿ ನಿರ್ಮಾಣವಾಗುತ್ತಿರುವ ಪ್ಯಾರಿಸ್‌ ಪ್ಯಾರಿಸ್‌ ಚಿತ್ರದ ಡಬ್ಬಿಂಗ್‌ ನಡೆಯುತ್ತಿದ್ದು, ಚೆನ್ನೈಗೆ ಹೋಗಿದ್ದೇನೆ. ಹಾಗಾಗಿ, ಸಿನಿಮೋತ್ಸವಕ್ಕೆ ಬರಲು ಸಾಧ್ಯವಾಗಿಲ್ಲ. ಒಂದು ದಿನ ಭೇಟಿ ನೀಡುತ್ತೇನೆ’ ಎಂದು ನಟ ರಮೇಶ್‌ ಅರವಿಂದ್ ಪ್ರತಿಕ್ರಿಯಿಸಿದರು.

ಎಲ್ಲ ಸಿನಿಮಾಗಳು ಇಷ್ಟ: ‘ಅಂತರರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ದೇಶ, ವಿದೇಶಗಳ ಸಿನಿಮಾ ನೋಡಬಹುದು. ಅಲ್ಲಿನ ಸಂಸ್ಕೃತಿ, ಕಲೆಯ ಬಗ್ಗೆ ಅರಿವು ಹೊಂದಬಹುದು. ನಾನು ಇಂತಹ ಭಾಷೆಯದ್ದೇ ಸಿನಿಮಾ ನೋಡಬೇಕೆಂದು ಇಷ್ಟಪಡುವುದಿಲ್ಲ. ಎಲ್ಲಾ ದೇಶಗಳ ಸಿನಿಮಾಗಳನ್ನೂ ನೋಡುತ್ತೇನೆ’ ಎಂದರು ಪೋಷಕ ನಟ ರಮೇಶ್‌ ಭಟ್‌. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು