ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲಾಯ್ತು ದಕ್ಷಿಣ, ಜನ ಹೈರಾಣ

17 ಜಿಲ್ಲೆಗಳ 80 ತಾಲ್ಲೂಕುಗಳು ಪ್ರವಾಹ ಪೀಡಿತ: ಒಂದೇ ದಿನ 17 ಸಾವು
Last Updated 10 ಆಗಸ್ಟ್ 2019, 19:34 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರ ಕರ್ನಾಟಕದ ಜನರನ್ನು ಸಂಕಷ್ಟಕ್ಕೆ ದೂಡಿದ್ದ ಮಳೆ–ಪ್ರವಾಹದ ಭೀಕರತೆ, ಶುಕ್ರವಾರ ರಾತ್ರಿಯಿಂದಲೇ ದಕ್ಷಿಣದ ದಿಕ್ಕಿನಲ್ಲಿ ತನ್ನ ಪ್ರತಾಪ ತೋರಿಸಲಾರಂಭಿಸಿದೆ.

ಅಹೋರಾತ್ರಿ ಸುರಿಯುತ್ತಿರುವ ಮಳೆ, ಉಕ್ಕೇರುತ್ತಿರುವ ನದಿ–ಕೊಳ್ಳಗಳಿಂದಾಗಿ ಮಲೆನಾಡು, ಕರಾವಳಿ ಭಾಗಗಳು ಕಡಲಾಗಿ ಪರಿವರ್ತನೆಗೊಂಡಿವೆ. ಪ್ರವಾಹದಿಂದ ₹ 6 ಸಾವಿರ ಕೋಟಿಗೂ ಅಧಿಕ ನಷ್ಟವಾಗಿರುವ ಪ್ರಾಥಮಿಕ ಅಂದಾಜು ಮಾಡಲಾಗಿದ್ದು, ಶನಿವಾರ ಒಂದೇ ದಿನ 17 ಮಂದಿ ಮೃತಪಟ್ಟಿದ್ದಾರೆ. ಮಳೆ–ಪ್ರವಾಹದಿಂದಾಗಿ ಒಟ್ಟಾರೆ ಮೃತಪಟ್ಟವರು ಸಂಖ್ಯೆ 43ಕ್ಕೆ ಏರಿದೆ.

ನಾರಾಯಣಪುರ ಜಲಾಶಯದಿಂದ ದಾಖಲೆಯ 6.50 ಲಕ್ಷ ಕ್ಯುಸೆಕ್‌ ನೀರು ಬಿಟ್ಟಿದ್ದರಿಂದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಪ್ರವಾಹ ಮತ್ತಷ್ಟು ಹೆಚ್ಚಿದೆ. ಇದರಿಂದಾಗಿ ನದಿ ಹಾಗೂ ನಾಲಾ ಪ್ರದೇಶಗಳಲ್ಲಿನ ಗ್ರಾಮಗಳು ಜಲಾವೃತವಾಗುವ ಭೀತಿ ಎದುರಾಗಿದೆ. 2009ರಲ್ಲಿಯೂ ಕೃಷ್ಣಾ ನದಿಗೆ ಮಹಾಪೂರ ಬಂದಿತ್ತು. ಆಗ ನಾರಾಯಣಪುರ ಜಲಾಶಯದಿಂದ ಗರಿಷ್ಠ 5.5 ಲಕ್ಷ ಕ್ಯುಸೆಕ್‌ ನೀರು ಹೊರಬಿಡಲಾಗಿತ್ತು. ಆದರೆ, ಈ ವರ್ಷ ಅತಿ ಹೆಚ್ಚು ನೀರು ಬಿಡಲಾಗಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ತಕ್ಷಣದ ಪರಿಹಾರಕ್ಕಾಗಿ ₹3 ಸಾವಿರ ಕೋಟಿ ನೀಡಬೇಕೆಂದು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲೇ, ನೆರೆಪೀಡಿತ 17 ಜಿಲ್ಲೆಗಳಲ್ಲಿನ ಪರಿಹಾರ ಉಸ್ತುವಾರಿಗಾಗಿ 59 ಐಎಎಸ್‌ ಮತ್ತು ಕೆಎಎಸ್‌ ಅಧಿಕಾರಿಗಳನ್ನು ಒಳಗೊಂಡ ವಿವಿಧ ತಂಡಗಳನ್ನು ರಚಿಸಲಾಗಿದೆ. ಆಯಾ ಜಿಲ್ಲಾಧಿಕಾರಿಗಳಿಗೆ ಇವರು 10 ದಿನಗಳ ವಿಶೇಷ ಕರ್ತವ್ಯ ಅಧಿಕಾರಿಗಳಾಗಿ ನೆರವಾಗಲಿದ್ದಾರೆ.

ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬೆಳಗಾವಿ, ಬಾಗಲಕೋಟೆಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರೂ ಬೆಳಗಾವಿಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹುಬ್ಬಳ್ಳಿಯಲ್ಲಿ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ವಿತರಿಸಿದ್ದಾರೆ.

ಸಂಪರ್ಕ ಕಡಿತ: ಕೊಡಗು ಜಿಲ್ಲೆಯ ತೋರ ಗ್ರಾಮದಲ್ಲಿ ಭೂಕುಸಿತದಿಂದ ಕಣ್ಮರೆಯಾದ 8 ಮಂದಿ ಶೋಧಕ್ಕೆ ಭಾರಿ ಮಳೆ ಹಾಗೂ ಮತ್ತೆ ಭೂಕುಸಿತದಿಂದ ಅಡ್ಡಿಯಾಗಿದೆ. ಅದು ಅತ್ಯಂತ ಅಪಾಯಕಾರಿ ಸ್ಥಳವಾಗಿದ್ದು, ಮಣ್ಣು ಕುಸಿತ ಶುರುವಾಗಿದೆ. ಹೀಗಾಗಿ, ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ. ಇಡೀ ತೋರ ಗ್ರಾಮವೇ ಭೂಕುಸಿತಕ್ಕೆ ಸಿಲುಕಿ ಖಾಲಿಯಾಗಿದೆ.

ಕಾವೇರಿ ಪ್ರವಾಹಕ್ಕೆ ಕುಶಾಲನಗರ ಪಟ್ಟಣ ಭಾಗಶಃ ಮುಳುಗಡೆಯಾಗಿದೆ. ಮಡಿಕೇರಿ – ಮೈಸೂರು ರಸ್ತೆ, ವಿರಾಜಪೇಟೆ– ಮಡಿಕೇರಿ ರಸ್ತೆ ಸಂಪರ್ಕ ಕಡಿತವಾಗಿದೆ. 14 ಗ್ರಾಮೀಣ ರಸ್ತೆಗಳು ಬಂದ್ ಆಗಿವೆ.

ಕೆಆರ್‌ಎಸ್‌ಗೆ 1.30 ಲಕ್ಷ ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, 50 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ. ಕಬಿನಿ ನದಿ ಉಕ್ಕಿ ಹರಿಯುತ್ತಿರುವುದರಿಂದ ನಂಜನಗೂಡಿನ 9 ಬಡಾವಣೆಗಳು ಜಲಾವೃತಗೊಂಡಿವೆ.

ತುಂಗಾ ಜಲಾಶಯದಿಂದ 1.15 ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಬಿಟ್ಟಿದ್ದರಿಂದ ಶಿವಮೊಗ್ಗ ನಗರದ ಏಳು ಬಡಾವಣೆಗಳು ಜಲಾವೃತವಾಗಿವೆ. ಜಿಲ್ಲೆಯಲ್ಲಿ 2,150 ಜನರು ನೆರೆ ನೀರಿನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇತ್ರಾವತಿ ನದಿ ರೌದ್ರಾವತಾರ ತಾಳಿದ್ದು, ಬಂಟ್ವಾಳ ತಾಲ್ಲೂಕಿನ ಬಹುತೇಕ ಗ್ರಾಮಗಳು ಜಲಾವೃತಗೊಂಡಿವೆ. ಕುಮಾರಧಾರಾ, ಫಲ್ಗುಣಿ ನದಿಗಳು ಉಕ್ಕಿ ಹರಿಯುತ್ತಿವೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಿಂದಾಗಿ ಶನಿವಾರ ನಾಲ್ವರು ಮೃತಪಟ್ಟಿದ್ದಾರೆ. ಕಳಸ ಬಳಿಯ ಇಡಕಣಿ ಬಳಿ ಗುಡ್ಡಕುಸಿದು 30ಕ್ಕೂ ಹೆಚ್ಚು ಮಂದಿ ಮಲ್ಲೇಶನಗುಡ್ಡದ ಶೆಡ್‌ನಲ್ಲಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆಗೆ ಸೇನಾ ತಂಡ ಕರೆಸಲಾಗಿದೆ.

ಹುಬ್ಬಳ್ಳಿ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಗದಗ ಭಾಗದಲ್ಲಿ ಪ್ರವಾಹ ಸ್ವಲ್ಪ ಇಳಿಮುಖವಾಗಿದ್ದು, ಚಳಿ, ಹಾವು ಕಡಿತ ಸಹಿತ ನೆರೆ ಸಂಬಂಧಿತ ದುರಂತಗಳಿಗೆ 9 ಮಂದಿ ಬಲಿ
ಯಾಗಿದ್ದಾರೆ.ಆಲಮಟ್ಟಿಯ ಒಳಹರಿವು 6.38 ಲಕ್ಷ ಕ್ಯುಸೆಕ್‌ ಇದ್ದು, ಹೊರ ಹರಿವು 5.57 ಲಕ್ಷ ಕ್ಯುಸೆಕ್‌ ಇದೆ. ತುಂಗಭದ್ರಾ ನದಿ ತುಂಬಿ ಹರಿಯು
ತ್ತಿರುವುದರಿಂದ ಗದಗ ಜಿಲ್ಲೆಯಹಳೆ ಸಿಂಗಟಾಲೂರಹಾಗೂ ವಿಠಲಾಪುರ ಗ್ರಾಮಗಳು ಜಲಾವೃತವಾಗಿವೆ.

₹ 6 ಸಾವಿರ ಕೋಟಿ ನಷ್ಟ

ನೆರೆ ಹಾವಳಿಯಿಂದ ₹ 6 ಸಾವಿರ ಕೋಟಿಗೂ ಅಧಿಕ ನಷ್ಟ ಆಗಿರುವ ಪ್ರಾಥಮಿಕ ಅಂದಾಜು ಮಾಡಲಾಗಿದೆ ಎಂದು ಯಡಿಯೂರಪ್ಪ ಹೇಳಿದರು. ನಷ್ಟದ ಪ್ರಮಾಣ ಇನ್ನಷ್ಟು ಹೆಚ್ಚುವುದು ನಿಶ್ಚಿತ. ಇದನ್ನು ಅಂದಾಜಿಸಲು ಸುಮಾರು ಒಂದು ತಿಂಗಳು ಬೇಕಾಗಬಹುದು ಎಂದು ಅವರು ತಿಳಿಸಿದರು.

ಬಿಎಸ್‌ಎನ್‌ಎಲ್‌ನಿಂದ ಉಚಿತ ಕೊಡುಗೆ

ಪ್ರವಾಹ ಪೀಡಿತ ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಬೆಳಗಾವಿ, ಯಾದಗಿರಿ, ಬಾಗಲ
ಕೋಟೆ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಬಿಎಸ್‌ಎನ್‌
ಎಲ್‌ ತನ್ನ ಗ್ರಾಹಕರಿಗೆ ಒಂದು ವಾರ ಉಚಿತ ಮಿತಿರಹಿತ ಕರೆಗಳ ಕೊಡುಗೆ ನೀಡಿದೆ. ಇತರ ಮೊಬೈಲ್‌ ನಂಬರ್‌ಗೆ ಪ್ರತಿ ದಿನ 20 ನಿಮಿಷ ಉಚಿತ ಕರೆ ಸೌಲಭ್ಯವನ್ನೂ ನೀಡಲಾಗಿದೆ. ಪ್ರತಿ ದಿನ 100 ಉಚಿತ ಎಸ್‌ಎಂಎಸ್‌, 1 ಜಿಬಿ ಉಚಿತ ಡೇಟಾ ಒದಗಿಸಲಾಗುತ್ತದೆ. ಹಾನಿಗೊಂಡ ಪ್ರದೇಶಗಳಲ್ಲಿಶೀಘ್ರ ದುರಸ್ತಿ ಕಾರ್ಯ ನಡೆಯಲಿದೆ .

ಇಂದು ಅಮಿತ್‌ ಶಾ ಭೇಟಿ

ಪ್ರವಾಹ ಪರಿಸ್ಥಿತಿ ವೀಕ್ಷಿಸಲು ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಭಾನುವಾರಮಧ್ಯಾಹ್ನ ಬೆಳಗಾವಿಗೆ ಆಗಮಿಸಲಿರುವ ಅಮಿತ್ ಷಾ ಜೊತೆ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಹೀಗಾಗಿದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪ್ರವಾಸವನ್ನು ಯಡಿಯೂರಪ್ಪ ಅವರು ರದ್ದುಗೊಳಿಸಿದ್ದಾರೆ.

***

ನೆರೆ ಪೀಡಿತ ಪ್ರದೇಶಗಳಲ್ಲಿ ತುರ್ತು ಪರಿಹಾರ ಕಾರ್ಯಗಳಿಗಾಗಿ ತಕ್ಷಣ ₹ 3 ಸಾವಿರ ಕೋಟಿ ನೆರವು ನೀಡಬೇಕೆಂದು ಕೇಂದ್ರಕ್ಕೆ ಪತ್ರ ಬರೆದು ಕೋರಲಾಗಿದೆ.

- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT