ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ತಿಂಗಳಾದರೂ ಸಿಗದ ಪರಿಹಾರ

ಬೆಳಗಾವಿ: ಮನೆಯಿಂದ ದೂರ ಉಳಿದ ಸಂತ್ರಸ್ತರು l ಪುನರ್ವಸತಿ ಕೇಂದ್ರದಲ್ಲಿಯೇ 20 ಕುಟುಂಬಗಳ ವಾಸ
Last Updated 15 ಡಿಸೆಂಬರ್ 2019, 19:52 IST
ಅಕ್ಷರ ಗಾತ್ರ

ಬೆಳಗಾವಿ: ಕೃಷ್ಣಾ ನದಿ ‍‍ಪ್ರವಾಹ ಬಂದು ನಾಲ್ಕೂವರೆ ತಿಂಗಳುಗಳೇ ಕಳೆದಿದ್ದರೂ ಮನೆಗಳ ದುರಸ್ತಿ ಅಥವಾ ಮರುನಿರ್ಮಾಣಕ್ಕೆ ಸರ್ಕಾರದಿಂದ ಪರಿಹಾರದ ಹಣ ಸಿಗದಿರುವುದರಿಂದ ಅಥಣಿ ತಾಲ್ಲೂಕಿನ ನಾಗನೂರು ಪಿ.ಕೆ. ಗ್ರಾಮದ ಸಂತ್ರಸ್ತ 20 ಕುಟುಂಬಗಳು ರಡ್ಡೇರಹಟ್ಟಿ ಗ್ರಾಮದಲ್ಲಿರುವ ಪುನರ್ವಸತಿ ಕೇಂದ್ರದ ಕಟ್ಟಡದಲ್ಲೇ ಜೀವನ ನಡೆಸುತ್ತಿವೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತವರಲ್ಲೇ ಈ ದುಃಸ್ಥಿತಿ ಇದೆ.

ಪ್ರವಾಹದಲ್ಲಿ ಇಡೀ ಊರೇ ಮುಳುಗಿತ್ತು. ಮನೆ, ಬೆಳೆ ಆಸ್ತಿಪಾಸ್ತಿ ಕಳೆದುಕೊಂಡಿರುವ ರೈತ ಕುಟುಂಬಗಳನ್ನು ಅದೇ ತಾಲ್ಲೂಕಿನಲ್ಲಿ ಗ್ರಾಮದಿಂದ 7 ಕಿ.ಮೀ. ದೂರದ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಜಾನುವಾರುಗಳೊಂದಿಗೆ ಇಲ್ಲಿಗೆ ಬಂದಿರುವ ಕುಟುಂಬಗಳು ಹಣಕಾಸಿನ ಸಮಸ್ಯೆಯಿಂದ ಮನೆಗಳ ದುರಸ್ತಿಗೆ ಮುಂದಾಗಿಲ್ಲ.

ಸಂಪೂರ್ಣ ಮನೆ ಕಳೆದುಕೊಂಡವರಿಗೆ ₹ 5 ಲಕ್ಷ ಪರಿಹಾರ ಘೋಷಿಸಿರುವ ಸರ್ಕಾರ, ಅದರಲ್ಲಿ ₹ 1 ಲಕ್ಷವನ್ನು ಸಂತ್ರಸ್ತರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ತಿಳಿಸಿದೆ. ಆದರೆ, ಇಲ್ಲಿರುವ ಸಂತ್ರಸ್ತರು ತಮಗೆ ಹಣ ಬಂದಿಲ್ಲ ಎಂದು ಹೇಳುತ್ತಿದ್ದಾರೆ.

ಜಾನುವಾರುಗಳಿಗೆ ಮೇವು ತರಲು ಊರಿಗೇ ಹೋಗಬೇಕಾದ ಸ್ಥಿತಿ ಇದೆ. ಇನ್ನೂ ಹಲವು ಗದ್ದೆಗಳಲ್ಲಿ ಪ್ರವಾಹದ ನೀರು ಇಂಗಿಲ್ಲ. ಮೇವಿಗೂ ಕೊರತೆ ಉಂಟಾಗಿದೆ. ಸಮರ್ಪಕ ಶೌಚಾಲಯ, ಕುಡಿಯುವ ನೀರು ಮೊದಲಾದ ಮೂಲಸೌಲಭ್ಯಗಳಿಲ್ಲದೇ ಪರದಾಡುತ್ತಿದ್ದಾರೆ. ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ.

‘ಸರ್ಕಾರದಿಂದ ಆರಂಭದಲ್ಲಿ ತಾತ್ಕಾಲಿಕವಾಗಿ ₹ 10 ಸಾವಿರ ಪರಿಹಾರ, ಬಳಿಕ ಪಡಿತರ ಕಿಟ್‌ ಕೊಟ್ಟಿದ್ದು ಬಿಟ್ಟರೆ ಬೇರೆ ಯಾವುದೇ ಪರಿಹಾರ ಸಿಕ್ಕಿಲ್ಲ. ಊರಿನಲ್ಲಿರುವ (ನಾಗನೂರು ಪಿ.ಕೆ.) ಮನೆಗಳು ಸಂಪೂರ್ಣ ಬಿದ್ದು ಹೋಗಿವೆ. ಅವುಗಳ ದುರಸ್ತಿಗೆ ಹಣ ಬಂದಿಲ್ಲ. ಈ ಹಿಂದೆ ಸಮೀಕ್ಷೆ ನಡೆಸಿದ್ದರು. ಆದರೆ, ಹಣ ಬಂದಿರಲಿಲ್ಲ. ಇತ್ತೀಚೆಗೆ, ಪಟ್ಟಿಯನ್ನು ಹೊಸದಾಗಿ ಸಿದ್ಧಪಡಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ’ ಎಂದು ನೆರೆ ಸಂತ್ರಸ್ತರಾದ ಆನಂದ ಕಾಂಬಳೆ, ರಮೇಶ ಕಾಂಬಳೆ ತಿಳಿಸಿದರು.

‘ಮಕ್ಕಳು 7 ಕಿ.ಮೀ. ದೂರದಲ್ಲಿಇರುವ ಊರಿನ ಶಾಲೆಗೆ ನಿತ್ಯವೂ ಬಸ್‌ನಲ್ಲಿ ಹೋಗುತ್ತಾರೆ. ದಿನಕ್ಕೆ ಒಬ್ಬರಿಗೆ ₹ 20 ಬೇಕು. ಅದಕ್ಕಾಗಿ ಹಣ ಹೊಂದಿಸಲೂ ಕಷ್ಟವಾಗಿದೆ. ಬಸ್‌ ನಿಲ್ದಾಣಕ್ಕೆ ಹೋಗಲು, ಮನೆ ತಲುಪಲು ನಿತ್ಯವೂ 2 ಕಿ.ಮೀ. ನಡೆಯಬೇಕು. ಪ್ರತಿದಿನವೂ ಪ್ರತಿಯೊಂದಕ್ಕೂ ಪರದಾಡಬೇಕಿದೆ’ ಎಂದು ಅಳಲು ತೋಡಿಕೊಂಡರು.

ಅಧಿಕಾರಿಗಳು ಕೂಡಲೇ ಪರಿಹಾರ ಕಲ್ಪಿಸಿದರೆ, ಮನೆ ದುರಸ್ತಿ ಮಾಡಿಸಿಕೊಂಡು ನಮ್ಮೂರಿಗೆ ನಾವು ಹೋಗುತ್ತೇವೆ. ಏನೇ ಆದರೂ ನಮ್ಮ ಮನೆಯಲ್ಲಿ ಇದ್ದರೇನೇ ನೆಮ್ಮದಿ.
-ಆನಂದ ಕಾಂಬಳೆ
ಪ್ರವಾಹ ಸಂತ್ರಸ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT