ಬೆಂಗಳೂರು: ಪ್ರಪಂಚದಲ್ಲೇ ಅತ್ಯಂತ ವೈವಿಧ್ಯಮಯ ಪರಿಸರ ವ್ಯವಸ್ಥೆಗಳಲ್ಲೊಂದಾದ ಭಾರತದ ಉಷ್ಣವಲಯದ ಕಾಡುಗಳು ಬದಲಾಗುತ್ತಿರುವ ಭೂ ಬಳಕೆಯಿಂದ ಮತ್ತು ವಿಭಜನೆಯಿಂದಾಗಿ ಅಪಾಯಕ್ಕೆ ಸಿಲುಕಿವೆ. ಮೂಲಸೌಕರ್ಯ ವಿಸ್ತರಣೆಯಿಂದಾಗಿ ದೊಡ್ಡ ಅರಣ್ಯಪ್ರದೇಶಗಳ ಪ್ರಮಾಣ ಶೇ 71ರಷ್ಟು ಕ್ಷೀಣಿಸಿದೆ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಮೂಲಸೌಕರ್ಯ ಕಲ್ಪಿಸುವ ಸಲುವಾಗಿ ಕಾಡುಗಳು ಛಿದ್ರಗೊಳ್ಳುವುದು ಕೋವಿಡ್-19ನಂತಹ ರೋಗಗಳು ಕಾಣಿಸಿಕೊಳ್ಳಲು ಕಾರಣವಾಗಲೂಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಮೂಲಸೌಕರ್ಯ ಅಭಿವೃದ್ಧಿಗೆ ಪರಿಸರ-ಸ್ನೇಹಿ ದಾರಿಗಳನ್ನು ಕಂಡುಕೊಳ್ಳಬೇಕು ಎಂದು ಸಲಹೆಗಳನ್ನು ನೀಡಿದ್ದಾರೆ.
ರಸ್ತೆ, ರೈಲು, ವಿದ್ಯುತ್ ಪ್ರಸರಣ ಮಾರ್ಗ, ಕಾಲುವೆ, ಮತ್ತು ಕೊಳವೆಮಾರ್ಗಗಳಂತಹ ರೇಖೀಯ ಮೂಲಸೌಕರ್ಯಗಳು ಪರಸ್ಪರ ತಾಗಿಕೊಂಡಿರುವ ವಿಸ್ತಾರವಾದ ಕಾಡುಪ್ರದೇಶಗಳನ್ನು ಸಣ್ಣ ತುಂಡು ಅರಣ್ಯ ಪ್ರದೇಶಗಳನ್ನಾಗಿ ಪ್ರತ್ಯೇಕಿಸುತ್ತವೆ. ಇದರಿಂದ ಕಾಡುಪ್ರಾಣಿಗಳ ಆವಾಸ ಸ್ಥಳ ಮತ್ತು ಜೀವ ವೈವಿಧ್ಯ ನಷ್ಟ ಉಂಟಾಗುತ್ತಿದೆ. ಪರಿಸರ ವ್ಯವಸ್ಥೆಯ ಮಹತ್ವದ ಪ್ರಕ್ರಿಯೆಗಳಿಗೂ ಅಡ್ಡಿ ಉಂಟಾಗುತ್ತಿದೆ ಎಂದುಫೌಂಡೇಷನ್ ಫಾರ್ ಇಕಾಲಾಜಿಕಲ್ ರಿಸರ್ಚ್, ಅಡ್ವೊಕಸಿ ಆ್ಯಂಡ್ ಲರ್ನಿಂಗ್ (ಫೆರಲ್ ಇಂಡಿಯಾ), ಸೆಂಟರ್ ಫಾರ್ ವೈಲ್ಡ್ ಲೈಫ್ ಸ್ವಡೀಸ್ (ಸಿಡಬ್ಲ್ಯುಎಸ್ ಇಂಡಿಯಾ), ಜರ್ಮನಿಯ ಗೋಟಿಂಗನ್ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯ ವಿಜ್ಞಾನಿಗಳು ವಿವರಿಸಿದ್ದಾರೆ.
ಭಾರತದಲ್ಲಿ ಮೂಲಸೌಕರ್ಯಗಳು ಕಾಡುಗಳನ್ನು ಹೇಗೆ ವಿಭಜಿಸಿವೆ. ಮತ್ತು ಇದು ಹೇಗೆ ಕಾಡುಪ್ರಾಣಿಗಳಿಗೆಮಾರಕವಾಗಿವೆ ಎಂಬ ಕುರಿತು 'ಲ್ಯಾಂಡ್ ಯೂಸ್ ಪಾಲಿಸಿ' ಎಂಬ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಸಂಶೋಧನಾ ಪ್ರಬಂಧದಲ್ಲಿ ವಿಜ್ಞಾನಿಗಳಾದ ರಜತ್ ನಾಯಕ್, ಡಾ. ಕೃತಿ ಕೆ. ಕಾರಂತ್, ಡಾ.ತ್ರಿಶ್ನಾ ದತ್ತ, ಡಾ. ರೂಥ್ ಡೆಫ್ಟೈಸ್, ಡಾ.ಕೆ. ಉಲ್ಲಾಸ ಕಾರಂತ ಮತ್ತು ಶ್ರೀನಿವಾಸ ವೈದ್ಯನಾಥನ್ ಅವರು ವಿಶ್ಲೇಷಿಸಿದ್ದಾರೆ.
‘ರೇಖೀಯ ಮೂಲಸೌಕರ್ಯಗಳಿಂದ ಕಾಡುಗಳ ರಚನೆ-ಸಂಪರ್ಕಗಳ ಮೇಲಾಗುವ ಪ್ರಭಾವಗಳನ್ನು ಮೊದಲ ಬಾರಿಗೆ ಅಧ್ಯಯನ ಮಾಡಿರುವ ಸಂಶೋಧನೆಯಿದು. ‘ಭಾರತದಂತಹ ಜೀವ ವೈವಿಧ್ಯವಿರುವ ದೇಶದಲ್ಲಿ, ಅಭಿವೃದ್ಧಿ ಯೋಜನೆಗಳನ್ನು ಸಂರಕ್ಷಣೆಯ ಕಾಳಜಿ ಜೊತೆ ಬೆಸೆಯುವ ತುರ್ತು ಅಗತ್ಯವಿದೆ. ಯಾವುದೇ ಮೂಲಸೌಕರ್ಯವನ್ನು, ದೊಡ್ಡ ಕಾಡು ಪ್ರದೇಶಗಳ ಮೂಲಕ ಒಯ್ಯುವ ಬದಲು ಬೇರೆ ಮಾರ್ಗ ಹುಡುಕಿದರೆ ಕಾಡುಗಳ ವಿಭಜನೆಯನ್ನು ಕನಿಷ್ಠಮಟ್ಟಕ್ಕಿಳಿಸಬಹುದು’ ಎನ್ನುತ್ತಾರೆ ಪಶ್ಚಿಮ ಘಟ್ಟಗಳು ಮತ್ತು ಮಧ್ಯ ಭಾರತದಲ್ಲಿ ಅಧ್ಯಯನದ ಮುಂದಾಳತ್ವ ವಹಿಸಿದರಜತ್ ನಾಯಕ್.
ಅತ್ಯಂತ ಕ್ಷಿಪ್ರಗತಿಯಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಭಾರತವೂ ಒಂದು. ಇಲ್ಲಿ ಮೂಲಸೌಕರ್ಯ ಜಾಲ ವಿಸ್ತರಿಸುತ್ತಿದೆ ಮತ್ತು ತಾಂತ್ರಿಕವಾಗಿ ಸುಧಾರಿಸುತ್ತಿದೆ. ಈ ನಿಟ್ಟಿನಲ್ಲಿ ಈ ಅಭಿವೃದ್ಧಿಯ ನೇರ ಪರಿಣಾಮ ಉಷ್ಣವಲಯದ ಕಾಡುಗಳ ಮೇಲೆ ದಿನೇ-ದಿನೇ ಹೆಚ್ಚಾಗುತ್ತಿದೆ. ಕಾಡುಗಳು ವಿಭಜನೆಗೊಂಡಾಗ ಅವುಗಳಆವಾಸಸ್ಥಾನಗಳ ವ್ಯಾಪ್ತಿ ಕುಗ್ಗುತ್ತದೆ. ಕಾಡುಪ್ರಾಣಿಗಳ ಚಲನೆ ಕಡಿಮೆಯಾಗುತ್ತದೆ ಮತ್ತು ಇದರಿಂದ ಇಡೀ ಪರಿಸರ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ. ಪ್ರತ್ಯೇಕಗೊಂಡ ಅರಣ್ಯ ಪ್ರದೇಶಗಳ ನಡುವೆ ಕಾಡುಪ್ರಾಣಿಗಳ ವಂಶವಾಹಿ ಹರಿವು (ಜೀನ್ ಫ್ಲೋ) ಕೂಡಾ ಕಡಿಮೆಯಾಗುತ್ತದೆ.
ಈ ಅಧ್ಯಯನದಲ್ಲಿ ವಿಜ್ಞಾನಿಗಳು ವಿಭಜಿತ ಅರಣ್ಯ ಪ್ರದೇಶಗಳ ಗಾತ್ರ, ರಚನೆ ಮತ್ತು ಗುಣಲಕ್ಷಣಗಳನ್ನುಪರಿಶೀಲಿಸಿದ್ದಾರೆ. ಎನ್ಆರ್‌ಎಸ್ಎ ಭುವನ್ ಭೂ–ಬಳಕೆ, ಭೂ-ವಿಸ್ತಾರ (ಲ್ಯಾಂಡ್ ಕವರ್) ನಕ್ಷೆ ಬಳಸಿ ಅರಣ್ಯವಿಸ್ತಾರದ ಪದರ ರಚಿಸಿ, ಅದರ ಜೊತೆ ಮೂಲಸೌಕರ್ಯ ಪದರಗಳನ್ನು (ರಸ್ತೆ, ರೈಲುಮಾರ್ಗ, ವಿದ್ಯುತ್ ತಂತಿ ಮಾರ್ಗ, ಕಾಲುವೆ, ಗಣಿಗಳು ಮತ್ತು ಜಲಾಶಯ) ತಾಳೆ ಮಾಡಿ ನೋಡಿದ್ದಾರೆ. ವಿಭಜಿತ ಅರಣ್ಯ ಪ್ರದೇಶಗಳಗಾತ್ರವನ್ನು, ಈ ಪ್ರದೇಶಗಳ ಒಳಗೆ ಎಷ್ಟು ರಂಧ್ರೀಕರಣ ಆಗಿದೆ ಎಂದು ಮತ್ತು ಆಸುಪಾಸಿನಲ್ಲಿರುವ ವಿಭಜಿತಅರಣ್ಯಪ್ರದೇಶಗಳ ನಡುವೆ ಎಷ್ಟು ಅಂತರವಿದೆ ಎಂದೂ ಅಧ್ಯಯನ ನಡೆಸಿದ್ದಾರೆ.
ಈ ಮಾಹಿತಿ ಬಳಸಿ ಪ್ರತಿಯೊಂದು ವಿಭಜಿತ ಅರಣ್ಯಪ್ರದೇಶಗಳನ್ನು ದೊಡ್ಡ ಮತ್ತು ಕಡಿಮೆ ಪ್ರಮಾಣದಲ್ಲಿ ಪ್ರತ್ಯೇಕಗೊಂಡ ಕಾಡುಗಳು, ಮಧ್ಯಮ ಗಾತ್ರದ ಮತ್ತು ಕಡಿಮೆ ಪ್ರತ್ಯೇಕಗೊಂಡ ಕಾಡುಗಳು, ಹಾಗೂ ಸಣ್ಣ ಮತ್ತು ಪ್ರತ್ಯೇಕಗೊಂಡ ಕಾಡುಗಳು ಎಂದುಮೂರು ರೀತಿಯ ಗುಂಪುಗಳಲ್ಲಿ ವರ್ಗೀಕರಿಸಿದ್ದಾರೆ. ಹೀಗೆ ಕಾಡಿನ ಆವಾಸಸ್ಥಾನಗಳ ಮೇಲೆ ಈಗಾಗಲೇ ಆಗಿರುವ ಮೂಲಸೌಕರ್ಯಗಳ ಪ್ರಭಾವ ಗ್ರಹಿಸಲು ಇದು ನೆರವಾಗಿದೆ. ದೊಡ್ಡ ಮತ್ತು ತುಂಡಾಗದ /ಕಡಿಮೆ ಪ್ರತ್ಯೇಕಗೊಂಡ ಕಾಡುಗಳು ಅತೀ ಹೆಚ್ಚು ಜೀವ ವೈವಿಧ್ಯವನ್ನು, ವಂಶವಾಹಿ ರಾಶಿ (ಜೀನ್ ಪೂಲ್) ಪೋಷಿಸುತ್ತವೆ ಮತ್ತು ಕಾಡುಪ್ರಾಣಿಗಳ ಅತೀ ಹೆಚ್ಚು ಚಲನೆಗೆ ಅನುವು ಮಾಡಿಕೊಡುತ್ತವೆ. ಹೀಗಾಗಿ ಇವುಗಳನ್ನು ಅತ್ಯಂತ ಕಾಳಜಿಯಿಂದ ರಕ್ಷಿಸಬೇಕಿದೆ. ಭವಿಷ್ಯದಲ್ಲಿ ಯಾವುದೇ ಯೋಜನೆ ಈ ಕಾಡುಗಳ ಮೂಲಕ ಹಾದುಹೋಗದಂತೆ ತಡೆಗಟ್ಟಬೇಕಿದೆ ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
ಈ ಅಧ್ಯಯನದಲ್ಲಿ ಪರಿಗಣಿಸಲಾದ ಸಂರಕ್ಷಿತ ಪ್ರದೇಶಗಳಲ್ಲಿ ಶೇ 70ರಷ್ಟು ಕಾಡುಗಳ ಮೂಲಕ ರೇಖೀಯಮೂಲಸೌಕರ್ಯಗಳು ಹಾದುಹೋಗುತ್ತಿವೆ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಇವುಗಳಲ್ಲಿ ವಿದ್ಯುತ್ ಪ್ರಸರಣತಂತಿಗಳು ಮತ್ತು ರಸ್ತೆಗಳು ಸಾಮಾನ್ಯವಾಗಿ ಕಂಡುಬರುವ ಮೂಲಸೌಕರ್ಯಗಳು. ದೊಡ್ಡ ಅರಣ್ಯ ಪ್ರದೇಶಗಳ ಪ್ರಮಾಣ ಶೇ 71.5ರಷ್ಟು ಇಳಿಮುಖವಾಗಿದೆ ಎಂದು ಈ ಅಧ್ಯಯನ ತೋರಿಸುತ್ತದೆ. ಪ್ರಾಕೃತಿಕವಾಗಿಅತ್ಯಮೂಲ್ಯ ಪ್ರದೇಶಗಳಾದ ಮಧ್ಯ ಭಾರತ ಮತ್ತು ಪಶ್ಚಿಮ ಘಟ್ಟಗಳನ್ನು ಹೋಲಿಸಿದರೆ, ಮಧ್ಯ ಭಾರತದಲ್ಲಿ ಪಶ್ಚಿಮಘಟ್ಟಗಳಿಗಿಂತ ಅತೀ ಹೆಚ್ಚು ದೊಡ್ಡ (1 ಸಾವಿರ ಚ.ಕಿ.ಮೀ ಗಿಂತ ಹೆಚ್ಚು ವಿಸ್ತೀರ್ಣ) ಕಾಡುಗಳಿವೆ. ಆದರೂ, ಮಧ್ಯ ಭಾರತದಲ್ಲಿರುವ ವಿಭಜಿತ ಪ್ರದೇಶಗಳು ಪಶ್ಚಿಮ ಘಟ್ಟಗಳ ವಿಭಜಿತ ಪ್ರದೇಶಗಳಿಗಿಂತ ಹೆಚ್ಚು
ಪ್ರತ್ಯೇಕವಾಗಿವೆ ಎಂದು ವಿವರಿಸಿದ್ದಾರೆ.
‘ಸೈನ್ಸ್ ಫಾರ್ ನೇಚರ್ ಆ್ಯಂಡ್ ಪೀಪಲ್ ಪಾರ್ಟ್ನರ್‌ಶಿಪ್ (https://snappartnership.net/) ಸಹಯೋಗದಲ್ಲಿ ನಡೆಸುತ್ತಿರುವ ಅಧ್ಯಯನ ಸರಣಿಯಲ್ಲಿ ಇದು ಮೊದಲನೆಯದು. ನಮ್ಮ ಸಂಶೋಧನೆಯ ಫಲಿತಾಂಶಗಳು ಕಳವಳ ಮೂಡಿಸುವಂತಹವು. ಭಾರತದ ಬಹುತೇಕ ಅರಣ್ಯ ಪ್ರದೇಶಗಳು ಮೂಲಸೌಕರ್ಯಗಳ ಪ್ರಭಾವದಿಂದ ಚಿಕ್ಕ ಚಿಕ್ಕ ಕಾಡುಪ್ರದೇಶಗಳಾಗಿ ವಿಭಜನೆಗೊಂಡು ಕಾಡುಪ್ರಾಣಿಗಳ ಚಲನೆಗೆ ತೊಡಕು ಉಂಟುಮಾಡಿವೆ. ಇದರಿಂದ ಜೀವ ವೈವಿಧ್ಯ ಸಂರಕ್ಷಣೆಗೆ ಸವಾಲಾಗಿದೆ. ಅಷ್ಟೇ ಅಲ್ಲ, ಇಂತಹ ಛಿದ್ರಗೊಂಡ ವಿಭಜಿತ ಪ್ರತ್ಯೇಕ ಕಾಡುಗಳೇ ಕೋವಿಡ್-19ನಂತಹ ರೋಗಗಳು ಶುರುವಾಗಿ, ಕಾಡುಪ್ರಾಣಿಗಳು ಮತ್ತು ಮನುಷ್ಯರ
ನಡುವೆ ಸಂಪರ್ಕ ಹೆಚ್ಚಿ ಮತ್ತಷ್ಟು ಹರಡುವುದಕ್ಕೆ ಕಾರಣವಾಗುತ್ತವೆ. ನಾವು ಪಶ್ಚಿಮ ಘಟ್ಟ ಮತ್ತು ಮಧ್ಯ ಭಾರತದಲ್ಲಿ ನಡೆಸಿರುವ ವಿಶ್ಲೇಷಣೆಗಳನ್ನು ಭಾರತದ ಇತರ ಅತ್ಯಮೂಲ್ಯ ಪ್ರಾಕೃತಿಕ ಪ್ರದೇಶಗಳಲ್ಲೂ ನಡೆಸುವ ತುರ್ತು ಅಗತ್ಯವಿದೆ’ ಎನ್ನುತ್ತಾರೆ ಸಿಡಬ್ಲ್ಯುಎಸ್‌ನ ಮುಖ್ಯ ಸಂರಕ್ಷಣಾ ವಿಜ್ಞಾನಿ ಡಾ. ಕೃತಿ ಕೆ. ಕಾರಂತ್.
ಅಧ್ಯಯನದ ಫಲಿತಾಂಶಗಳಿಗೆ ಈ ಜಾಲತಾಣ ನೋಡಿ: https://indiaunderconstruction.com.
ಭವಿಷ್ಯದಲ್ಲಿ ರೂಪಿಸುವ ಮೂಲಸೌಕರ್ಯ ಯೋಜನೆಗಳನ್ನು 'ಎಲ್ಲಿ' ಮತ್ತು 'ಹೇಗೆ' ಕಾರ್ಯಗತಗೊಳಿಸಿದರೆ
ಜೀವವೈವಿಧ್ಯತೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗಳ ನಡುವೆ ಸಮತೋಲನ ಕಾಪಾಡಿಕೊಳ್ಳಬಹುದು ಎಂಬುದಕ್ಕೆ ಬೇಕಾದ ಅತ್ಯಗತ್ಯ ಮಾಹಿತಿಯನ್ನು ಈ ಅಧ್ಯಯನದ ನೀಡುತ್ತದೆ. ಈ ಸೂಚನೆಗಳು ಕೇವಲ ಭಾರತಕ್ಕೆ ಮಾತ್ರವಲ್ಲದೇ, ಇತರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೂ ಸಹಾಯ ಮಾಡುತ್ತವೆ ಎಂದು ಈ ವಿಜ್ಞಾನಿಗಳು ನಂಬಿದ್ದಾರೆ. ಅಧ್ಯಯನದ ಫಲಿತಾಂಶ ಕಾರ್ಯನೀತಿ, ಯೋಜಕರು, ಸ್ಥಳೀಯ ವಿಜ್ಞಾನಿಗಳು, ಸಂರಕ್ಷಣಾವಾದಿಗಳು, ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು, ಎಲ್ಲರಿಗೂ ಜಾಲತಾಣದಲ್ಲಿ ಲಭ್ಯವಿದ್ದು, ಮುಂದೆ ಬರುವ ಯೋಜನೆಗಳು ವಿಭಜಿತ ಅರಣ್ಯಪ್ರದೇಶಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂದು ಅರ್ಥೈಸಿಕೊಳ್ಳಲು ನೆರವಾಗುತ್ತದೆ.
(ರಜತ್ ನಾಯಕ್, ಡಾ.ಕೃತಿ ಕೆ. ಕಾರಂತ್, ಡಾ.ತ್ರಿಶ್ನಾ ದತ್ತ, ಡಾ.ರೂಥ್ ಡೆಫ್ಟೈಸ್, ಡಾ.ಕೆ.ಉಲ್ಲಾಸ ಕಾರಂತ ಮತ್ತು ಶ್ರೀನಿವಾಸ ವೈದ್ಯನಾಥನ್ ಅವರು ನಡೆಸಿರುವ ‘ಬಿಟ್ಸ್ ಆ್ಯಂಡ್ ಪೀಸಸ್ ಫಾರೆಸ್ಟ್ ಫ್ರಾಗ್ಮೆಂಟೇಶನ್ ಬೈಲೀನಿಯರ್ ಇಂಟ್ರೂಷಸನ್ಸ್ ಇನ್ ಇಂಡಿಯಾ’ ಎಂಬ ಶೀರ್ಷಿಕೆಯ ಅಧ್ಯಯನ, ಲ್ಯಾಂಡ್ ಯೂಸ್ ಪಾಲಿಸಿ ಎಂಬ ನಿಯತಕಾಲಿಕದಲ್ಲಿ ಪ್ರಕಟವಾಗಿದೆ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.